ಟ್ರಂಪ್​ ನಿಲುವಿನತ್ತ ಜಗದ ಚಿತ್ತ

Donald Trump
Published on

ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಹುರಿಯಾಳು ಡೊನಾಲ್ಡ್ ಟ್ರಂಪ್ ಅವರು ಭಾರಿ ಬಹುಮತದಿಂದ ಆಯ್ಕೆಯಾಗಿದ್ದಾರೆ. ಆ ಮೂಲಕ ಎರಡನೇ ಸಲ ಶ್ವೇತಭವನ ಪ್ರವೇಶಿಸಲಿದ್ದಾರೆ. 2025ರ ಜನವರಿ 20ರಂದು ಅವರು ಅಧಿಕಾರ ಸ್ವೀಕರಿಸಲಿದ್ದು, ಸುಂಕ ನೀತಿ, ಸಾಮಾಜಿಕ ಭದ್ರತಾ ಯೋಜನೆ, ತೆರಿಗೆ, ರಕ್ಷಣಾ ನೀತಿ ಇತ್ಯಾದಿ ವಿಷಯಗಳು ಅವರ ಆದ್ಯತಾ ಪಟ್ಟಿಯಲ್ಲಿವೆ. ಅದರಿಂದ ಜಾಗತಿಕವಾಗಿ, ವಿಶೇಷವಾಗಿ ಭಾರತದ ಮೇಲೆ ಆಗಬಹುದಾದ ಪರಿಣಾಮಗಳು ಏನಿರಬಹುದು ಎಂಬುದು ಕುತೂಹಲ ಕೆರಳಿಸಿದೆ. ಡೊನಾಲ್ಡ್ ಟ್ರಂಪ್ ಅವರು ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವರಾದರೂ, ಅವರು ಅಧಿಕಾರ ಸ್ವೀಕರಿಸುವುದು ಬರುವ ಜನವರಿ 20ರಂದು. ಅಲ್ಲಿವರೆಗೆ ಹಾಲಿ ಅಧ್ಯಕ್ಷ ಜೋ ಬೈಡೆನ್ ಅವರೇ ದೈನಂದಿನ ಆಡಳಿತ ನೋಡಿಕೊಳ್ಳಲಿದ್ದಾರೆ.

ಮುಂದಿನ ಹಾದಿ

ಡೊನಾಲ್ಡ್ ಟ್ರಂಪ್ ಅವರು ಆಯ್ಕೆ ಅಧಿಕೃತವಾಗಲು ಇನ್ನೂ ಕೆಲವು ದಿನ ಬೇಕಿದೆ. ಏಕೆಂದರೆ ಅಲ್ಲಿನ ಪ್ರಕ್ರಿಯೆಯೇ ಹಾಗಿದೆ. ನವೆಂಬರ್ 5ರಂದು ಅಮೆರಿಕ ಮತದಾರರು ಎಲೆಕ್ಟರ್ಸ್​ಗಳನ್ನು ಆರಿಸಿದ್ದಾರೆ. ಅಂದರೆ ಇವರು ಆಯಾ ರಾಜ್ಯದ ಸೀಟುಗಳಲ್ಲಿ ಹೆಚ್ಚಿನ ಜನರ ಮತಗಳನ್ನು ಗಳಿಸಿದವರು. ಈ ಎಲೆಕ್ಟರ್ಸ್​ಗಳು ಡಿಸೆಂಬರ್ 17ರಂದು ತಂತಮ್ಮ ರಾಜ್ಯದ ರಾಜಧಾನಿಗೆ ತೆರಳಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಗೆ ಮತ ಚಲಾಯಿಸುತ್ತಾರೆ. ಈ ಮತಗಳನ್ನು ಜನವರಿ 6ರಂದು ಹೌಸ್ ಆಫ್ ರೆಪ್ರೆಸೆಂಟೆಟಿವ್​ನ ಚೇಂಬರ್​ನಲ್ಲಿ ಎಣಿಸಿ, ಸೆನೆಟ್​ನ ಅಧ್ಯಕ್ಷರು ಅಧಿಕೃತವಾಗಿ ನೂತನ ಅಧ್ಯಕ್ಷ-ಉಪಾಧ್ಯಕ್ಷರ ಹೆಸರನ್ನು ಘೋಷಿಸುತ್ತಾರೆ. ಅಂದಹಾಗೆ, ಸೆನೆಟ್​ನ ಅಧ್ಯಕ್ಷರು ಉಪಾಧ್ಯಕ್ಷರೇ ಆಗಿರುವುದರಿಂದ ಹಾಲಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ (ಈ ಚುನಾವಣೆಯಲ್ಲಿ ಟ್ರಂಪ್ ಎದುರು ಪರಾಭವಗೊಂಡವರು) ಅವರೇ ಟ್ರಂಪ್ ಹೆಸರನ್ನು ಘೋಷಿಸಬೇಕಾಗುತ್ತದೆ. ಸಾಮಾನ್ಯವಾಗಿ ಹೌಸ್ ಆಫ್ ರೆಪ್ರಸೆಂಟೆಟಿವ್​ಗೆ ಆರಿಸಿಹೋದವರು ಪಕ್ಷನಿಷ್ಠೆ ಬದಲಿಸುವುದಿಲ್ಲ (ಎಲ್ಲೋ ವಿರಳವಾಗಿ ಒಂದಿಬ್ಬರು ಹೀಗೆ ಮಾಡಿದ್ದಿದೆ). ಆದ್ದರಿಂದ ಜನರು ಮತದಾನ ಮಾಡಿದ ದಿನ ಅಥವಾ ಮರುದಿನವೇ ನೂತನ ಅಧ್ಯಕ್ಷ-ಉಪಾಧ್ಯಕ್ಷರು ಯಾರೆಂದು ತಿಳಿಯುತ್ತದೆ. ಅಧಿಕೃತ ಪ್ರಕಟಣೆ ಮಾತ್ರ ಬಾಕಿಯಿರುತ್ತದೆ. ಜನವರಿ 20ರಂದು ನೂತನ ಅಧ್ಯಕ್ಷರ ಅಧಿಕಾರಗ್ರಹಣ ನಡೆಯುತ್ತದೆ.

ಕೇಸ್ ಕತೆ ಏನು?

ಟ್ರಂಪ್ ಈಗ ಅಧ್ಯಕ್ಷರಾಗಿ ಆಯ್ಕೆಯಾಗಿರುವುದರಿಂದಾಗಿ, ಅವರ ವಿರುದ್ಧ ಇರುವ ಪ್ರಕರಣಗಳಿಗೆ ಸಂಬಂಧಿಸಿ ಕನಿಷ್ಠ ಪಕ್ಷ ನಾಲ್ಕು ವರ್ಷ ಯಾವುದೇ ಬೆಳವಣಿಗೆ ನಡೆಯುವ ಸಾಧ್ಯತೆ ಕಡಿಮೆ. ತಮ್ಮ ವಿರುದ್ಧ ಇರುವ ನಾಲ್ಕು ಪ್ರಕರಣಗಳನ್ನು ಎದುರಿಸುವುದಕ್ಕಾಗಿಯೇ ಟ್ರಂಪ್ ಈ ವರ್ಷ ಬಹುಪಾಲು ಸಮಯ ವಿನಿಯೋಗಿಸಬೇಕಾಗಿ ಬಂತು. 2016ರ ಚುನಾವಣೆ ಸಮಯದಲ್ಲಿ, ನೀಲಿಚಿತ್ರ ನಟಿ ಸ್ಟಾರ್ವಿು ಡೇನಿಯಲ್ಸ್ ಎಂಬಾಕೆಗೆ ಹಷ್ ಮನಿ (ಹೆಸರು ಬಾಯ್ಬಿಡದಿರಲು ನೀಡುವ ಹಣ) ನೀಡಿದ ಪ್ರಕರಣಕ್ಕೆ ಸಂಬಂಧಿಸಿ, ಸುಳ್ಳು ವ್ಯವಹಾರ ದಾಖಲೆ ನೀಡಿದ ಕಾರಣಕ್ಕೆ ಟ್ರಂಪ್ ದೋಷಿ ಎಂದು ನ್ಯೂಯಾರ್ಕ್ ನ್ಯಾಯಾಧೀಶರೊಬ್ಬರು ಮೇ ತಿಂಗಳಲ್ಲಿ ತೀರ್ಪಿತ್ತಿದ್ದು, ಶಿಕ್ಷೆ ಪ್ರಮಾಣ ಪ್ರಕಟಿಸಲು ನವೆಂಬರ್ 26ನ್ನು ನಿಗದಿಪಡಿಸಲಾಗಿದೆ. ಈ ಪ್ರಕರಣದಲ್ಲಿ ನಾಲ್ಕು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸುವ ಅವಕಾಶವಿದೆ. ಆದರೆ, ಅಧಿಕಾರ ವಹಿಸಿಕೊಳ್ಳುವ ಕಾಲಘಟ್ಟದಲ್ಲಿ ನಿಯೋಜಿತ ಅಧ್ಯಕ್ಷರನ್ನು ಶಿಕ್ಷೆಗೊಳಪಡಿಸುವುದು ಅಮೆರಿಕ ಇತಿಹಾಸದಲ್ಲಿ ಕಂಡುಕೇಳರಿಯದ ವಿದ್ಯಮಾನ. ಹೀಗಾಗಿ ಶಿಕ್ಷೆ ಪ್ರಮಾಣ ಘೋಷಿಸುವುದನ್ನು ಮುಂದೂಡುವಂತೆ ಟ್ರಂಪ್ ಪರ ವಕೀಲರು ನ್ಯಾಯಾಲಯದಲ್ಲಿ ಮನವಿ ಮಾಡುವ ಸಾಧ್ಯತೆ ಇದೆ. ಅಧ್ಯಕ್ಷರಾಗಿ ಫೆಡರಲ್ ಕೇಸುಗಳನ್ನು ರದ್ದುಪಡಿಸುವ ಅಧಿಕಾರ ಇರುತ್ತದಾದರೂ, ಎಲ್ಲ ಪ್ರಕರಣಗಳನ್ನೂ ಹೀಗೆ ಮಾಡಲಾಗದು. ಅಧಿಕಾರದಲ್ಲಿರುವಾಗ ಅಧ್ಯಕ್ಷರಿಗೆ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ಹೊರೆ ಇರಬಾರದು ಎಂಬ ಕಾರಣಕ್ಕೆ, ಟ್ರಂಪ್ ವಿರುದ್ಧದ ಪ್ರಕರಣಗಳ ವಿಚಾರದಲ್ಲಿ ಯಾವುದೇ ಕ್ರಮವಾಗದಂತೆ ತಡೆ ನೀಡಬೇಕೆಂದು ನ್ಯಾಯಾಲಯಕ್ಕೆ ಮನವಿ ಮಾಡುವುದಾಗಿ ಟ್ರಂಪ್ ವಕೀಲರು ಹೇಳಿದ್ದಾರೆ.

ಭಾರತೀಯರ ಪಾತ್ರ

ಅಮೆರಿಕ ಭಾರತೀಯರು ವಲಸಿಗರ ಪರವಾಗಿರುವ ಹಾಗೂ ಮಾನವಹಕ್ಕು ಕುರಿತು ಒಲವಿರುವ ಡೆಮಾಕ್ರಟಿಕ್ ಪಕ್ಷವನ್ನು ಹೆಚ್ಚು ಬೆಂಬಲಿಸುತ್ತಾರೆ ಎಂಬ ಗ್ರಹಿಕೆ ಇದೆ. ಆದರೆ, ಈ ಸಲ ಟ್ರಂಪ್ ಪರ ಹೆಚ್ಚು ಒಲವು ಕಂಡುಬಂದಿದೆ ಎಂದು ವಿಶ್ಲೇಷಣೆಗಳು ತಿಳಿಸಿವೆ. ಕಮಲಾ ಹ್ಯಾರಿಸ್ ಭಾರತೀಯ ಮೂಲದವರಾದರೂ ಅದನ್ನವರು ಬಹಿರಂಗವಾಗಿ ಹೇಳುವ ಗೋಜಿಗೆ ಹೋಗುತ್ತಿರಲಿಲ್ಲ. ಅತ್ತ ಟ್ರಂಪ್, ಹಿಂದುಗಳ ಪರ ಧ್ವನಿ ಎತ್ತುವ ಮೂಲಕ ಪ್ರಚಾರಕಣಕ್ಕೆ ಹೊಸ ರಂಗು ತಂದರು.

ಟ್ರಂಪ್​ಗೊಲಿದ ನೇರಳೆ ರಾಜ್ಯ

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷವನ್ನು ಕೆಂಪು (ರೆಡ್), ಡೆಮಾಕ್ರಟಿಕ್ ಪಕ್ಷವನ್ನು ನೀಲಿ (ಬ್ಲ್ಯೂ) ಹಾಗೂ ಫಲಿತಾಂಶವನ್ನು ಅದಲುಬದಲು ಮಾಡುವ ಸಾಮರ್ಥ್ಯ ಹೊಂದಿರುವ ಏಳು ರಾಜ್ಯಗಳನ್ನು (ಠಡಿಜ್ಞಿಜ ಠಠಿಚಠಿಛಿಠ) ನೇರಳೆ (ಪರ್ಪಲ್) ಎಂದು ಗುರುತಿಸಲಾಗುತ್ತದೆ. ಅಂದರೆ, ಈ ರಾಜ್ಯಗಳು ಯಾರ ಕಡೆಗೆ ವಾಲುತ್ತವೆಯೋ ಅವರ ಗೆಲುವು ಖಾತ್ರಿ ಎಂಬ ಸನ್ನಿವೇಶ ಇರುತ್ತದೆ. ಈ ಬಾರಿ ಈ ಏಳೂ ರಾಜ್ಯಗಳು ರಿಪಬ್ಲಿಕನ್ ಪಕ್ಷದತ್ತ ಒಲಿದಿದ್ದು ವಿಶೇಷ.

Donald Trump

ವಲಸೆ-ಪೌರತ್ವ ತಲೆಬಿಸಿ

ದಾಖಲೆಗಳಿಲ್ಲದ ವಲಸಿಗರನ್ನು ದೊಡ್ಡ ಪ್ರಮಾಣದಲ್ಲಿ ಗಡಿಪಾರು ಮಾಡಲಾಗುವುದು ಎಂದು ಡೊನಾಲ್ಡ್ ಟ್ರಂಪ್ ಅವರು ಚುನಾವಣಾ ಪ್ರಚಾರ ಸಂದರ್ಭದಲ್ಲಿ ಪದೇಪದೇ ಹೇಳುತ್ತಿದ್ದರು. ಇದೇನಾದರೂ ನಿಜವಾದಲ್ಲಿ ಅಮೆರಿಕದಲ್ಲಿನ ಸುಮಾರು 1.1 ಕೋಟಿ ವಲಸಿಗರು ಸಂಕಟಕ್ಕೆ ಸಿಲುಕಲಿದ್ದಾರೆ. ಇದರಲ್ಲಿ ದೊಡ್ಡ ಸಂಖ್ಯೆಯ ಭಾರತೀಯರೂ ಸೇರಿದ್ದಾರೆ. ಫ್ಯೂ ರಿಸರ್ಚ್ ಸೆಂಟರ್ ಪ್ರಕಾರ, 2021ರ ಹೊತ್ತಿಗೆ ಅಮೆರಿಕದಲ್ಲಿ ದಾಖಲೆಗಳಿಲ್ಲದ ಭಾರತೀಯರ ಸಂಖ್ಯೆ 7.25 ಲಕ್ಷದಷ್ಟಿತ್ತು. ಈ ಯಾದಿಯಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ. 2024 ನೇ ಆರ್ಥಿಕ ಸಾಲಿನಲ್ಲಿ, ಅಕ್ರಮವಾಗಿ ಅಮೆರಿಕ ಗಡಿಯೊಳಗೆ ಪ್ರವೇಶಿಸಲು ಯತ್ನಿಸಿದ ಭಾರತೀಯರನ್ನು ಪ್ರತಿ ತಾಸಿಗೆ ಸರಾಸರಿ ಹತ್ತು ಮಂದಿಯಂತೆ ಬಂಧಿಸಲಾಗಿದೆ ಎಂದು ಅಮೆರಿಕದ ಸುಂಕ ಮತ್ತು ಗಡಿ ರಕ್ಷಣಾ ವಿಭಾಗವು ತಿಳಿಸಿದೆ. ಇವರಲ್ಲಿ ಅನೇಕರು ಗುಜರಾತಿನವರು. ಪ್ರಧಾನಿ ನರೇಂದ್ರ ಮೋದಿ ಜೊತೆಗೆ ಟ್ರಂಪ್ ಉತ್ತಮ ಬಾಂಧವ್ಯ ಹೊಂದಿರುವುದರಿಂದ ತಮಗೆ ವಲಸೆ ನಿಯಮದಲ್ಲಿ ರಿಯಾಯಿತಿ ಸಿಗಬಹುದು ಎಂದು ಅನೇಕ ಗುಜರಾತಿಗಳು ಭಾವಿಸುತ್ತಿದ್ದಾರಂತೆ. ಪೌರತ್ವ ವಿಷಯದಲ್ಲಿ ಕೂಡ ಟ್ರಂಪ್ ನಿಲುವು ಕಳವಳ ಉಂಟುಮಾಡಿದೆ. ಅಮೆರಿಕದಲ್ಲಿ ಜನಿಸಿದ ಮಕ್ಕಳಿಗೆ ಸ್ವಯಂಚಾಲಿತವಾಗಿ ನಾಗರಿಕತ್ವ ದೊರಕುವ ನಿಯಮಕ್ಕೆ ಕೊಕ್ ನೀಡುವ ಸಂಭವವಿದೆ. ಪಾಲಕರಲ್ಲಿ ಕನಿಷ್ಠ ಒಬ್ಬರಾದರೂ ಅಮೆರಿಕ ನಾಗರಿಕರಾಗಿದ್ದರೆ ಅಥವಾ ಶಾಶ್ವತ ನಿವಾಸಿಯಾಗಿದ್ದರೆ (ಅಂದರೆ ಗ್ರೀನ್ ಕಾರ್ಡ್ ಹೊಂದಿದವರು) ಮಾತ್ರ ಅಂಥವರ ಮಕ್ಕಳಿಗೆ ಸ್ವಯಂಚಾಲಿತ ಪೌರತ್ವ ಸಿಗುತ್ತದೆ ಎಂಬ ನಿಯಮ ತರುವ ಪ್ರಸ್ತಾಪದ ಕರಡನ್ನು ಟ್ರಂಪ್ ಅವರ ಪ್ರಚಾರ ವೆಬ್​ಸೈಟಿನಲ್ಲಿ ಪ್ರಕಟಿಸಲಾಗಿದ್ದು ಇಲ್ಲಿ ಉಲ್ಲೇಖನೀಯ. ಅಮೆರಿಕದಲ್ಲಿರುವ ಭಾರತೀಯರ ಪೈಕಿ ಶೇ.36 ಮಂದಿ ಅಂದರೆ ಸುಮಾರು 16 ಲಕ್ಷ ಜನರು ಅಲ್ಲಿಯೇ ಜನಿಸಿದವರು. ಹೊಸ ನಿಯಮ ಏನಾದರೂ ಜಾರಿಗೆ ಬಂದಲ್ಲಿ, ನಾಗರಿಕತ್ವ ಅಥವಾ ಗ್ರೀನ್ ಕಾರ್ಡ್ ಇರದ ಪಾಲಕರ ಮಕ್ಕಳಿಗೆ ಸ್ವಯಂಚಾಲಿತವಾಗಿ ಅಮೆರಿಕ ಪೌರತ್ವ ದಕ್ಕದು. ಸೀಮಿತ ಪ್ರಮಾಣದಲ್ಲಿ ಗ್ರೀನ್ ಕಾರ್ಡ್ ಗಳನ್ನು ವಿತರಿಸಲಾಗುವುದರಿಂದ ಭಾರತೀಯರು ಶಾಶ್ವತ ನಿವಾಸಿ ಪ್ರಮಾಣಪತ್ರ ಪಡೆಯಲು ತೊಂದರೆ ಎದುರಿಸಬೇಕಾಗುತ್ತದೆ.

ಡೊನಾಲ್ಡ್ ಟ್ರಂಪ್ ಟೀಮಲ್ಲಿ ಯಾರು?

ಡೊನಾಲ್ಡ್ ಟ್ರಂಪ್ ಅವರು ಆಯ್ಕೆಯಾಗುತ್ತಿದ್ದಂತೆ, ಅವರ ಸರ್ಕಾರದ ಪ್ರಮುಖ ಹುದ್ದೆಗಳಿಗೆ ಯಾರ್ಯಾರು ನೇಮಕವಾಗಬಹುದು ಎಂಬ ಲೆಕ್ಕಾಚಾರ ಗರಿಗೆದರಿದೆ. ಸಂಭಾವ್ಯರು ಇವರು:

ಡೊನಾಲ್ಡ್ ಟ್ರಂಪ್ ಜ್ಯೂನಿಯರ್: ಇವರು ಟ್ರಂಪ್ ಪ್ರಚಾರದಲ್ಲಿ ಅಧಿಕೃತವಾಗಿ ಮುಂಚೂಣಿಯಲ್ಲಿ ಇರದಿದ್ದರೂ, ಕಾರ್ಯತಂತ್ರ ಹೊಸೆಯುವಲ್ಲಿ ಇದ್ದರು. ಟ್ರಂಪ್ ಆಡಳಿತದಲ್ಲಿ ಇವರು ತೆರೆಹಿಂದೆ ನಿಂತು ಕಾರ್ಯನಿರ್ವಹಿಸುವ ಸಾಧ್ಯತೆಯಿದೆ.

ವಿವೇಕ್ ರಾಮಸ್ವಾಮಿ: ಬಯೋಟೆಕ್ ಉದ್ಯಮಿಯಾದ ಇವರು, ಮುಂಚೆ ಅಧ್ಯಕ್ಷೀಯ ಹುರಿಯಾಳಾಗುವ ಬಯಕೆ ಹೊಂದಿದ್ದರು. ನಂತರ ಟ್ರಂಪ್​ರನ್ನು ಬೆಂಬಲಿಸಿದರು. ಮುಂದೆ ಇವರು ಸರ್ಕಾರದ ಪ್ರಮುಖ ಯೋಜನೆಗಳ ವಿಷಯದಲ್ಲಿ ಕೆಲಸ ಮಾಡುವ ಸಂಭವವಿದೆ.

ಮೈಕ್ ಪಾಂಪಿಯೊ: ಸಿಐಎ ಮಾಜಿ ನಿರ್ದೇಶಕ ಹಾಗೂ ವಿದೇಶಾಂಗ ಕಾರ್ಯದರ್ಶಿ. ಜಾಗತಿಕ ವಿದ್ಯಮಾನವನ್ನು ಚೆನ್ನಾಗಿ ಬಲ್ಲ ಇವರು ಟ್ರಂಪ್ ಆಡಳಿತದಲ್ಲಿ ಜಾಗತಿಕ ಸುರಕ್ಷತೆ ವಿಷಯದಲ್ಲಿ ಅಮೆರಿಕ ನೀತಿಗಳನ್ನು ನಿರ್ಧರಿಸುವ ಸಾಧ್ಯತೆಯಿದೆ.

ಕಶ್ಯಪ್ ಪಟೇಲ್: ಟ್ರಂಪ್ ಕಟ್ಟಾಬೆಂಬಲಿಗರಾದ ಇವರು, ಸಿಐಎ ನಿರ್ದೇಶಕ ಹುದ್ದೆಗೆ ಮುಂಚೂಣಿ ಸ್ಪರ್ಧೆಯಲ್ಲಿದ್ದಾರೆ.

ರಾಬರ್ಟ್ ಎಫ್. ಕೆನಡಿ ಜ್ಯೂನಿಯರ್: ನ್ಯಾಯವಾದಿಯಾದ ಇವರು ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿದ್ದರು. ರಾಬರ್ಟ್ ಎಫ್. ಕೆನಡಿಯವರ ಪುತ್ರ. ಇವರಿಗೆ ಮಹಿಳಾ ಆರೋಗ್ಯದ ವಿಷಯದಲ್ಲಿ ಮುಖ್ಯ ಜವಾಬ್ದಾರಿ ನೀಡುವ ಬಗ್ಗೆ ಟ್ರಂಪ್ ಆಸಕ್ತಿ ಹೊಂದಿದ್ದಾರಂತೆ.

ದೇಣಿಗೆ ಎಷ್ಟು?

ಈ ಸಲದ ಚುನಾವಣೆಯಲ್ಲಿ ಡೆಮಾಕ್ರಟಿಕ್ ಅಭ್ಯರ್ಥಿ ಕಮಲಾ ಹ್ಯಾರಿಸ್ ಸಂಗ್ರಹಿಸಿದ ದೇಣಿಗೆ ರಿಪಬ್ಲಿಕನ್ ಹುರಿಯಾಳು ಟ್ರಂಪ್ ಅವರಿಗಿಂತ ಹೆಚ್ಚಿತ್ತು.

ಡೆಮಾಕ್ರಟಿಕ್ ಪಕ್ಷ 1.5 ಶತಕೋಟಿ ಡಾಲರ್

ರಿಪಬ್ಲಿಕನ್ ಪಕ್ಷ 1.2 ಶತಕೋಟಿ ಡಾಲರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net