

ಬೆಂಗಳೂರು: ಸನಾತನ ಧರ್ಮದಲ್ಲಿ ಸೂರ್ಯಗ್ರಹಣಕ್ಕೆ ವಿಶೇಷ ಮಹತ್ವವಿದೆ. ಈ ಗ್ರಹಣದ ಅವಧಿಯಲ್ಲಿ ಶುಭ ಕಾರ್ಯ ಮತ್ತು ಪೂಜೆ ನಿಷಿದ್ಧ. ಒಂದು ವೇಳೆ ಶಾಸ್ತ್ರಕ್ಕೆ ವಿರುದ್ಧವಾಗಿ ನಡೆದುಕೊಂಡರೆ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ನಂಬಲಾಗಿದೆ. ಆದರೆ ಈ ಬಾರಿ ಪೂರ್ವಜರಿಗೆ ಶ್ರದ್ಧಾ ಅರ್ಪಿಸುವ ದಿನವಾದ ಮಹಾಲಯ ಅಮಾವಾಸ್ಯೆಯಂದು (ಅ.2)(Mahalaya Amavasya)ವರ್ಷದ ಕೊನೆಯ ಸೂರ್ಯಗ್ರಹಣ ಸಮಭವಿಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ, ಈ ಗ್ರಹಣದ ಪರಿಣಾಮ ಎಲ್ಲಿ, ಯಾವಾಗ ಗೋಚರಿಸುತ್ತದೆ ಎಂಬುದನ್ನು ತಿಳಿಯೋಣ..
ಪಂಚಾಂಗದ ಪ್ರಕಾರ, ವರ್ಷದ ಕೊನೆಯ ಸೂರ್ಯಗ್ರಹಣವು ಮಹಾಲಯ ಅಮಾವಾಸ್ಯೆ ದಿನದಂದು ಅಂದರೆ ಅ.2 ರಂದು ಸಂಭವಿಸುತ್ತದೆ. ಹಿಂದೂ ಧರ್ಮಶಾಸ್ತ್ರದಲ್ಲಿ ಮಹಾಲಯ ಅಮಾವಾಸ್ಯೆ ಮತ್ತು ಸೂರ್ಯಗ್ರಹಣ ಎರಡಕ್ಕೂ ಮಹತ್ವವಿರುವುದರಿಂದ ಗ್ರಹಣದ ಛಾಯೆ ಹೇಗಿರುತ್ತದೆ ಎಂಬ ಕುತೂಹಲ ಪ್ರತಿಯೊಬ್ಬರಲ್ಲೂ ಮೂಡುತ್ತದೆ.
ಈ ಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ. ಆದರೂ ಶಾಸ್ತ್ರಗಳಲ್ಲಿ ಸೂರ್ಯದೇವತೆಗೆ ಪ್ರಮುಖ ಸ್ಥಾನವಿರುವುದರಿಂದ ಹಾಗೂ ಜಗತ್ತಿನ ಎಲ್ಲ ಚಟುವಟಿಕೆಗೆ ಈ ಆದಿತ್ಯ ದೇವತೆಯೇ ಕಾರಣರಾಗಿರುವುದರಿಂದ ವಿಶ್ವದ ಯಾವುದೇ ದೇಶದ ಮೇಲೆ ಗ್ರಹಣ ಛಾಯೆ ಇದ್ದರೂ ಕೆಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ.
ಪೆರು, ಫಿಜಿ, ಪೆಸಿಫಿಕ್ ಮಹಾಸಾಗರ, ಆರ್ಕ್ಟಿಕ್ ಮತ್ತು ದಕ್ಷಿಣ ಅಮೆರಿಕಾ ಮುಂತಾದ ದೇಶಗಳಲ್ಲಿ ಅ.2ರ ಸೂರ್ಯಗ್ರಹಣ ಗೋಚರಿಸುತ್ತದೆ. ಗ್ರಹಣದ ಸಮಯದಲ್ಲಿ ಪೂಜೆ ಮಾಡುವುದನ್ನು ನಿಷೇಧಿಸಲಾಗಿದೆ. ಆದರೆ, ಮನಸ್ಸಿನಲ್ಲಿ ಯಾವುದೇ ದೇವರ ಹೆಸರನ್ನು ಜಪಿಸಬಹುದು. ಈ ಅವಧಿಯಲ್ಲಿ, ಗಾಯತ್ರಿ ಮಂತ್ರ ಮತ್ತು ಮಹಾಮೃತ್ಯುಂಜಯ ಮಂತ್ರವನ್ನು ಪಠಿಸುವುದರಿಂದ ಫಲಪ್ರದವಾಗುತ್ತದೆ ಎಂಬ ನಂಬಿಕೆಯಿದೆ. ಇದನ್ನು ಮಾಡುವುದರಿಂದ ಗ್ರಹಣದ ಋಣಾತ್ಮಕ ಪರಿಣಾಮಗಳಿಂದ ರಕ್ಷಣೆ ಪಡೆಯಬಹುದು ಎಂದು ನಂಬಲಾಗಿದೆ.
ಇನ್ನು ಗ್ರಹಣದ ಸಮಯದಲ್ಲಿ, ತುಳಸಿ ಎಲೆಗಳು ಅಥವಾ ದರ್ಬೆಯನ್ನು ಆಹಾರ, ಹಾಲು, ನೀರು ಇತ್ಯಾದಿಗಳಿಗೆ ಸೇರಿಸಬೇಕು. ಹೀಗೆ ಮಾಡುವುದರಿಂದ ಈ ವಸ್ತುಗಳು ಸೂರ್ಯಗ್ರಹಣದ ಪ್ರಭಾವದಿಂದ ಮುಕ್ತವಾಗುತ್ತವೆ. ನಂತರ ಬಡವರಿಗೆ ಅನ್ನ, ಧನ, ವಸ್ತ್ರಗಳನ್ನು ದಾನ ಮಾಡಬಹುದು. ಇದರಿಂದ ನೆಮ್ಮದಿ ಮತ್ತು ಅದೃಷ್ಟ ಪ್ರಾಪ್ತವಾಗುತ್ತದೆ ಎನ್ನಲಾಗಿದೆ.