

ಬೆಂಗಳೂರು: ಸನಾತನ ಹಿಂದೂ ಧರ್ಮಶಾಸ್ತ್ರದ ಪ್ರಕಾರ ಪಿತೃ ಪಕ್ಷದ ಕೊನೆಯ ದಿನವಾದ ಮಹಾಲಯ ಅಮಾವಾಸ್ಯೆ(Mahalaya Amavasya) ಹಿರಿಯರಿಗೆ ಪ್ರಿಯವಾದದ್ದು. ಶ್ರಾದ್ಧ ತಿಥಿಗಳಲ್ಲಿ ವಿಶೇಷವಾಗಿ ಹಿರಿಯರಿಗೆ ಪಿಂಡ ಇಡದವರಿಗೆ ಮಹಾಲಯ ಅಮಾವಾಸ್ಯೆಯಂದು ನಮ್ಮನ್ನಗಲಿದ ಹಿರಿಯರ ಸ್ಮರಣಾರ್ಥ ತರ್ಪಣ ಅರ್ಪಿಸಿದರೆ ಅದು ಅತ್ಯಂತ ಶ್ರೇಯಸ್ಕರ ಎಂದು ಹೇಳಲಾಗಿದೆ.
ಭಾದ್ರಪದ ಮಾಸದ ಕೃಷ್ಣ ಪಕ್ಷವು ಹಿರಿಯರಿಗೆ ಅತ್ಯಂತ ಪ್ರಿಯವಾದ ಅವಧಿಯಾಗಿದೆ. ಈ ಹದಿನೈದು ದಿನಗಳಲ್ಲಿ ನಮ್ಮ ಹಿರಿಯರು ನಮ್ಮಿಂದ ಆಹಾರ ಬಯಸುತ್ತಾರೆ. ಈ ಸಂದರ್ಭದಲ್ಲಿ ಮಾಡುವ ಸ್ಮರಣೆ ಮತ್ತು ಪುಣ್ಯ ಕಾರ್ಯಗಳು ಅನಂತ ಫಲವನ್ನು ನೀಡುತ್ತವೆ. ಮಹಾಲಯ ಅಮಾವಾಸ್ಯೆ(Mahalaya Amavasya) ಎಂದು ಕರೆಯಲ್ಪಡುವ ಇದು ನಮ್ಮ ಪೂರ್ವಜರ ಸ್ಮರಣೆಗಾಗಿ ಕಾಯ್ದಿರಿಸಿದ ಪಿತೃಪಕ್ಷದ ಆ ಹದಿನೈದು ದಿನಗಳ ಅಂತ್ಯವನ್ನು ಸೂಚಿಸುತ್ತದೆ.
ಪೂರ್ವಜರು ಎಲ್ಲಾ ಕಾಲದಲ್ಲೂ ಭೂಮಿಗೆ ಬರುವುದಿಲ್ಲ. ಅವರು ಈ ಹದಿನೈದು ದಿನಗಳಲ್ಲಿ ಸೂಕ್ಷ್ಮ ದೇಹಗಳಲ್ಲಿ ಭೂಮಿಗೆ ಭೇಟಿ ನೀಡುತ್ತಾರೆ. ಅಷ್ಟೇ ಅಲ್ಲ, ನಮ್ಮ ಗಮನವನ್ನು ಪಡೆಯುತ್ತಾರೆ ಎಂದು ನಂಬಲಾಗಿದೆ. ಹೀಗಾಗಿ ಪಿತೃಪಕ್ಷವು ಅವರೊಂದಿಗೆ ಸಂಪರ್ಕ ಸಾಧಿಸಲು ಮತ್ತು ಅವರ ಆಶೀರ್ವಾದವನ್ನು ಪಡೆಯಲು ಬಹಳ ಮುಖ್ಯವಾದ ಸಮಯವಾಗಿದೆ.
ಪಿತೃಪಕ್ಷದ ಈ ಹದಿನೈದು ದಿನಗಳಲ್ಲಿ ಮನೆಯನ್ನು ಶುಚಿಯಾಗಿಟ್ಟುಕೊಳ್ಳುವುದು, ಶ್ರಾದ್ಧ ಮತ್ತು ತರ್ಪಣ ನೀಡುವ ಮೂಲಕ ಹಿರಿಯರನ್ನು ಸಮಾಧಾನಪಡಿಸುವುದು ಮತ್ತು ಅವರ ಆಶೀರ್ವಾದವನ್ನು ಪಡೆಯುವುದು ಒಳ್ಳೆಯದು.
ನಮ್ಮಲ್ಲಿ ಹೆಚ್ಚಿನವರು ತಂದೆ-ತಾಯಿ ಸೇರಿದಂತೆ ಹಿರಿಯರು ನಿಧನರಾಗಿ ಹಲವು ವರ್ಷಗಳು ಕಳೆದರೂ ನೆನಪಿಸಿಕೊಳ್ಳುವುದಿಲ್ಲ. ಇದು ನಾವು ಎಷ್ಟೇ ದೈವ ಕಾರ್ಯಗಳನ್ನು ಮಾಡಿದರೂ, ಪಿತೃಕಾರ್ಯಗಳನ್ನು ಮಾಡದವರು ಸಂಕಷ್ಟಕ್ಕೆ ಗುರಿಯಾಗುತ್ತಾರೆ ಎನ್ನಲಾಗುತ್ತದೆ.
ನಿಜ ಹೇಳಬೇಕೆಂದರೆ ಮರ್ಯಾದಾ ಪುರುಷೋತ್ತಮ ಶ್ರೀರಾಮ ಮತ್ತು ಜಗತ್ತಿಗೆ ಭಗವದ್ಗೀತೆ ಮೂಲಕ ಅರಿವು ಮೂಡಿಸಿದ ಶ್ರೀಕೃಷ್ಣ ಕೂಡ ಪಿತೃ ಕಾರ್ಯಗಳನ್ನು ನಿರ್ವಹಿಸಿದ್ದರು. ಅದೇ ರೀತಿ ಪ್ರತಿಯೊಬ್ಬ ಹಿಂದೂ ಸಹ ಶ್ರಾದ್ಧ ತಿಥಿಯಂದು ತರ್ಪಣ ನೀಡಬೇಕು.
ಪತೃಗಳ ಸ್ಮರಣೆಗೆ ಕೆಲವು ವಿಧಾನಗಳಿದ್ದು, ಯೋಗ್ಯ ಬ್ರಾಹ್ಮಣ ಭಕ್ತರನ್ನು ಆಹ್ವಾನಿಸಿ ಶ್ರಾದ್ಧ ಮಾಡಬೇಕು. ಇದಕ್ಕೆ ಕ್ಷಣ ಶ್ರಾದ್ಧಾ ಎನ್ನುತ್ತಾರೆ. ಅದೇ ರೀತಿ ಯೋಗ್ಯ ವ್ಯಕ್ತಿ ಸಿಗದಿದ್ದರೆ ದರ್ಭೆಗಳಲ್ಲಿ ಪಿತೃದೇವತೆ ಆಹ್ವಾನಿಸಿ ಶಾಸ್ತ್ರಾನುಸಾರ ಶಿಖಾ ಶ್ರಾದ್ಧ ಸಹ ಮಾಡಬಹುದು. ಇನ್ನು ಕ್ಷಣ ಮತ್ತು ಶಿಖಾ ಶ್ರಾದ್ಧಗಳೆರಡೂ ಸಾಧ್ಯವಾಗದಿದ್ದಾಗ ಸ್ವಯಂಪಕಂ ಮತ್ತು ದಕ್ಷಿಣೆಯೊಂದಿಗೆ ದಾನ ಮಾಡುವ ಮೂಲಕ ಅಮ ಶ್ರಾದ್ಧ ವಿಧಾನದಲ್ಲೂ ಹಿರಿಯರ ಸ್ಮರಣೆ ಮಾಡಬಹುದಾಗಿದೆ.
ಅದೇ ರೀತಿ ಹೇಮ ಶ್ರಾದ್ಧದ ಮೂಲಕ ಚಿನ್ನ, ಬೆಳ್ಳಿ ಅಥವಾ ಹಣವನ್ನು ದಾನ ಮಾಡುವುದು, ಸಮಯವಿಲ್ಲದಿದ್ದಾಗ ಅರ್ಘ್ಯ ಮತ್ತು ತರ್ಪಣ ನೀಡುವ ಮೂಲಕ ಸಂಕಲ್ಪ ತರ್ಪಣ ಮಾಡುವುದು. ಇದಾವುದೂ ಸಾಧ್ಯವಾಗದಿದ್ದರೆ, ಗೋಗ್ರಾಸ ಪ್ರಧಾನ ವಿಧಾನದಲ್ಲಿ ಗೋವಿಗೆ ಯಥಾಶಕ್ತಿ ಅನ್ನ ಅರ್ಪಿಸುವುದು, ಗೋವು ಮತ್ತು ಪಿತೃ ದೇವತೆಗಳಿಗೆ ನಮಸ್ಕರಿಸಬೇಕಾಗುತ್ತದೆ. ಇನ್ನು ಅದೂ ಸಾಧ್ಯವಾಗದಿದ್ದರೆ ಎರಡೂ ಕೈಗಳನ್ನು ಮೇಲೆತ್ತಿ ಆಕಾಶವನ್ನು ನೋಡುತ್ತಾ ಓ ಪಿತೃದೇವತೆಗಳೇ, ಮೇಲಿನ ಯಾವುದಕ್ಕೂ ಗಮನ ಕೊಡಲು ನಾನು ಅಸಮರ್ಥನಾಗಿದ್ದೇನೆ. ನನ್ನ ಬಳಿ ಹಣವಿಲ್ಲ, ಕನಿಷ್ಠ ಹಸುವಿಗೆ ಮೇವು ಕೊಡುವ ಸ್ಥಿತಿಯಲ್ಲಿ ನಾನಿಲ್ಲ. ದಯವಿಟ್ಟು ನನ್ನನ್ನು ಕ್ಷಮಿಸಿ ಎಂದು ಪಿತೃ ಪ್ರಾರ್ಥನೆ ಮಾಡಿದರೂ ಹಿರಿಯರ ಆಶೀರ್ವಾದ ಲಭಿಸುತ್ತದೆ ಎನ್ನುತ್ತವೆ ಧರ್ಮಶಾಸ್ತ್ರಗಳು.
ಅಂದರೆ ನಮಗೆ ಹಿರಿಯರಿಗಾಗಿ ಸಮಯ, ಹಣ, ದಾನ ನೀಡಲು ಅಸಾಧ್ಯವಾದರೆ ಕನಿಷ್ಟ ಅವರ ಶ್ರದ್ಧೆಯಿಂದ ಸ್ಮರಣೆ ಮಾಡಿದರೂ ನಮಗಾಗಿಯೇ ಜೀವ ಸವೆಸಿ ಹೋದ ನಮ್ಮ ಪೂರ್ವಜರ ಕೃಪರ ಲಭಿಸುತ್ತದೆ ಎಂದರೆ ತಪ್ಪಾಗಲಾರದು.