

ನವದೆಹಲಿ: ಲಾಕ್ಡೌನ್ ಮೂರನೇ ಹಂತದ ಅವಧಿ ಮೇ 17ಕ್ಕೆ (ಇಂದು) ಮುಕ್ತಾಯವಾಗಬೇಕಿತ್ತು. ಹಾಗೇ ಮೇ 18ರಿಂದ ಲಾಕ್ಡೌನ್ 4.0 ಜಾರಿಯಾಗಲಿದೆ. ಅದು ಹೊಸ ಸ್ವರೂಪ, ನಿಯಮಗಳೊಂದಿಗೆ ಜಾರಿಯಾಗಲಿದೆ
ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮೇ 12ರಂದು ದೇಶವನ್ನುದ್ದೇಶಿಸಿ ಮಾತನಾಡುವ ಸಂದರ್ಭದಲ್ಲಿ ತಿಳಿಸಿದ್ದರು. ಹಾಗೇ ಲಾಕ್ಡೌನ್ ನಾಲ್ಕನೇ ಹಂತದ ಮಾರ್ಗಸೂಚಿಯನ್ನು ಮೇ 17ರೊಳಗೆ ಪ್ರಕಟಿಸುವುದಾಗಿಯೂ ಹೇಳಿದ್ದರು.
ಅದರಂತೆ ಕೇಂದ್ರ ಸರ್ಕಾರ ಮೇ 16ರಂದು ಮಾರ್ಗಸೂಚಿ ಪ್ರಕಟಿಸಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಇಂದು ಕೂಡ ಯಾವುದೇ ಆದೇಶ ಹೊರಬೀಳದ ಕಾರಣ ರಾಜ್ಯ ಸರ್ಕಾರ ಈಗಿರುವ ಲಾಕ್ಡೌನ್ ಅವಧಿಯನ್ನು ಇನ್ನೆರಡು ದಿನ ಅಂದರೆ ಮೇ 19ರವರೆಗೆ ಮುಂದುವರಿಸಿದೆ.
ಮೇ 19ರ ವರೆಗೆ ಅಥವಾ ಮುಂದಿನ ಆದೇಶದವರೆಗೆ ಲಾಕ್ಡೌನ್ 3.0 ರಾಜ್ಯದಲ್ಲಿ ಮುಂದುವರಿಯಲಿದ್ದು, ಹಳೇ ಮಾರ್ಗಸೂಚಿಯ ನಿಯಮಗಳೇ ಯಥಾವತ್ತಾಗಿ ಪಾಲನೆಯಾಗಲಿದೆ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ಅವರು ಅಧಿಕೃತ ಆದೇಶ ನೀಡಿದ್ದಾರೆ.
ಲಾಕ್ಡೌನ್ 3.0ರ ಜಾರಿಗೂ ಮೊದಲು ಮೇ 2ರಂದು ಪ್ರಕಟಿಸಲಾದ ಮಾರ್ಗಸೂಚಿಯಲ್ಲಿರುವ ಕೊವಿಡ್-19ರ ನಿಯಂತ್ರಣಾ ನಿಯಮಗಳು ಮೇ 19ರವರೆಗೂ ಮುಂದುವರಿಯಲಿವೆ. ಈ ಬಗ್ಗೆ ರಾಜ್ಯದ ಎಲ್ಲ ಇಲಾಖೆಗಳು, ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳಿಗೆ ತಿಳಿಸಲಾಗಿದೆ ಎಂದಿದ್ದಾರೆ.