

ನವದೆಹಲಿ: ಇಷ್ಟು ದಿನ ಲಾಕ್ಡೌನ್ ಆಯ್ತು, ಈಗ ನಡೀತಿರೋದು ಕಂಟೇನ್ಮೆಂಟ್ ಕಾಲ. ಲಾಕ್ಡೌನ್ ಮಾಡಿರದಿದ್ದರೆ, ಈ ವೇಳೆಗಾಗಲೇ ಭಾರತದಲ್ಲಿ ಸೋಂಕಿತರ ಸಂಖ್ಯೆ ಕೋಟಿ ಮುಟ್ಟುತ್ತಿತ್ತು ಎನ್ನುವುದು ಅಂಕಿ-ಅಂಶ ತಜ್ಞರ ಲೆಕ್ಕಾಚಾರ. ಸದ್ಯ ಭಾರತದಲ್ಲಿ ಕರೊನಾ ಪೀಡಿತರ ಸಂಖ್ಯೆ ಲಕ್ಷ ಸಮೀಪಿಸುತ್ತಿದೆ.
ಮೂರು ಹಂತಗಳ ಲಾಕ್ಡೌನ್ ಬಳಿಕವೂ ಕರೊನಾ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಲಾಕ್ಡೌನ್ ಮತ್ತದರ ನಿರ್ಬಂಧಗಳನ್ನು ಹಂತಹಂತವಾಗಿ ತೆರವುಗೊಳಿಸಿ ಅದರ ಜಾಗದಲ್ಲಿ ಕಂಟೇನ್ಮೆಂಟ್ ಅಸ್ತ್ರ ಪ್ರಯೋಗಿಸಲಾಗುತ್ತಿದೆ. ಇದು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತೆ ಎಂಬ ಬಗ್ಗೆ ತಜ್ಞರಿಗೂ ಖಾತ್ರಿಯಿಲ್ಲ. ಕಾರಣ, ಕರೊನಾ ವೈರಸ್ ಸೋಂಕು ಮಾನವನಿಂದ ಮಾನವನಿಗೆ ಯಶಸ್ವಿಯಾಗಿ ವ್ಯಾಪಿಸುತ್ತಲೇ ಇದೆ. ಕಂಟೇನ್ಮೆಂಟ್ನಿಂದ ಇದನ್ನು ತಡೆಗಟ್ಟಬಹುದಾದರೂ, ಕಂಟೇನ್ಮೆಂಟ್ ನಿರ್ವಹಣಾ ಚಟುವಟಿಕೆಗಳ ಯಶಸ್ಸಿನ ಬಗ್ಗೆ ಖಾತ್ರಿ ನೀಡಲಾಗದು ಎಂದು ಅಂಕಿ-ಅಂಶ ತಜ್ಞರು ಕೇಂದ್ರ ಆರೋಗ್ಯ ಇಲಾಖೆಗೆ ವರದಿಯೊಂದನ್ನು ನೀಡಿದ್ದಾರೆ.
ಇದರನ್ವಯ ಹೆಚ್ಚು ಸೋಂಕಿತರಿರುವ ಅಥವಾ ವ್ಯಾಪಿಸಿರುವ ಪ್ರದೇಶಗಳಿಗಾಗಿ ಕಂಟೇನ್ಮೆಂಟ್ ಯೋಜನೆಯನ್ನು ಕೇಂದ್ರ ರೂಪಿಸಿದೆ. ಕ್ಲಸ್ಟರ್ ಕಂಟೇನ್ಮೆಂಟ್ ವ್ಯವಸ್ಥೆಯಿಂದ ಸೋಂಕಿತರನ್ನು ಆರಂಭದಲ್ಲಿಯೇ ಪತ್ತೆ ಹಚ್ಚಿ ನಿಗದಿತ ಭೌಗೋಳಿಕ ಪ್ರದೇಶದಲ್ಲಿ ಸೋಂಕು ವ್ಯಾಪಿಸುವುದನ್ನು ತಡೆಗಟ್ಟಬಹುದು. ಆ ಮೂಲಕ ಸೋಂಕಿನ ಸರಣಿಯನ್ನು ತುಂಡರಿಸಬಹುದು.
ರಾಷ್ಟ್ರ ಮಟ್ಟದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಮಿತಿ (ಎನ್ಸಿಎಂಸಿ) ಹಾಗೂ ಕಾರ್ಯದರ್ಶಿಗಳ ಸಮಿತಿ ಕಾರ್ಯ ನಿರ್ವಹಿಸಲಿದೆ. ಎನ್ಸಿಎಂಸಿ ರಾಜ್ಯ ಸಮಿತಿಗಳೊಂದಿಗೆ ಸಂಪರ್ಕದಲ್ಲಿರಲಿದೆ. ಸಂಬಂಧಿಸಿದ ರಾಜ್ಯಗಳೊಂದಿಗೆ ವಿಡಿಯೋ ಕಾನ್ಫ್ರೆನ್ಸ್ ಮೂಲಕ ಕೇಂದ್ರ ಸತತ ಸಂಪರ್ಕದಲ್ಲಿರಲಿದೆ.
ಕಂಟೇನ್ಮೆಂಟ್ ಯೋಜನೆ ಪ್ರಕಾರ ಸೋಂಕು ಹೆಚ್ಚಿರುವ ಪ್ರದೇಶದಲ್ಲಿ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗುತ್ತದೆ. ಇಲ್ಲಿರುವ ಜನರು ಬೇರೆಯವರ ಸಂಪರ್ಕದಲ್ಲಿ ಬರುವುದನ್ನು ತಡೆಯಲಾಗುತ್ತದೆ. ವ್ಯಕ್ತಿಗತ ಅಂತರವನ್ನು ಕಾಪಾಡಿಕೊಳ್ಳಲು ತಿಳಿಸಲಾಗುತ್ತದೆ. ನಿರಂತರ ನಿಗಾ, ಶಂಕಿತರ ಪರೀಕ್ಷೆ, ಸೋಂಕಿತರ ಐಸೋಲೇಷನ್, ಸಂಪರ್ಕಕ್ಕೆ ಬಂದಿರುವ ವ್ಯಕ್ತಿಗಳ ಕ್ವಾರಂಟೈನ್ ಹಾಗೂ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯ ಮಾಡಲಾಗುತ್ತದೆ ಎಂದು ಯೋಜನೆಯಲ್ಲಿ ವಿವರಿಸಲಾಗಿದೆ.
ಜಿಲ್ಲಾದ್ಯಂತ ಅಥವಾ ಎರಡು, ಮೂರು ಜಿಲ್ಲೆಗಳಿಗೆ ವ್ಯಾಪಿಸಿದಾಗಲೂ ಕಂಟೇನ್ಮೆಂಟ್ ಸಾಧ್ಯ ಎನ್ನುವುದನ್ನು ಚೀನಾದಲ್ಲಿ ತೆಗೆದುಕೊಂಡ ಕ್ರಮಗಳು ವಿವರಿಸುತ್ತವೆ. ಇದಕ್ಕೆ ಇತರ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಹಾಗೂ ಪರಿಣಾಮಕಾರಿಯಾಗಿ ವ್ಯಕ್ತಿಗತ ಅಂತರ ಕಾಯ್ದುಕೊಳ್ಳುವ ಕ್ರಮಗಳು ಜತೆಗೂಡಬೇಕು ಎಂದು ಉಲ್ಲೇಖಿಸಲಾಗಿದೆ.