

ಬೆಂಗಳೂರು: ಕರೊನಾ ಸೋಂಕು ಕಾಣಿಸಿಕೊಂಡ ಆರಂಭದಲ್ಲಿ ಚೀನಾದಲ್ಲಿ ಕೈಗೊಳ್ಳಲಾಗುತ್ತಿರುವ ಕ್ರಮಗಳ ಚಿತ್ರಗಳು, ವಿಡಿಯೋಗಳು ಭಾರಿ ಸುದ್ದಿಯಾಗಿದ್ದವು. ಹತ್ತಾರು ಜನರು ಪಿಪಿಇ ಕಿಟ್ಗಳನ್ನು ಧರಿಸಿ ರಸ್ತೆಯುದ್ದಕ್ಕೂ ಒಂದಿಂಚೂ ಬಿಡದಂತೆ ಸೋಂಕು ನಿವಾರಕಗಳನ್ನು ಸಿಂಪಡಿಸುತ್ತಿರುವ, ಅಗ್ನಿಶಾಮಕ ದಳದ ಟ್ಯಾಂಕರ್ಗಳು ಬೆಂಕಿಯ ಮೇಲೆ ನೀರು, ನೊರೆ ಸುರಿದಂತೆ ದೊಡ್ಡ ಟ್ಯಾಂಕರ್ಗಳಲ್ಲಿ ಕ್ರಿಮಿನಾಶಕವನ್ನು ಕಟ್ಟಡಗಳ ಮೇಲೆ, ಗಾಳಿಯಲ್ಲೆಲ್ಲ ಸಿಂಪಡಿಸಲಾಗುತ್ತಿತ್ತು. ಇದು ಕರೊನಾ ವ್ಯಾಪಿಸುವ ಭೀಕರತೆಗೆ ಸಾಕ್ಷಿ ಎನಿಸಿತ್ತು.
ಕರೊನಾ ಚೀನಾದಿಂದ ಬೇರೆ ದೇಶಗಳಿಗೂ ವ್ಯಾಪಿಸಿದಾಗ ಅಲ್ಲಿಯೂ ಇಂಥದ್ದೇ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಬೆಂಗಳೂರು ಕೂಡ ಇದಕ್ಕೆ ಹೊರತಾಗಿರಲಿಲ್ಲ. ಗಲ್ಲಗಲ್ಲಿಗಳಲ್ಲೂ ಅಗ್ನಿಶಾಮಕ ದಳದ ಟ್ಯಾಂಕರ್ ಹಾಗೂ ಪೌರ ಕಾರ್ಮಿಕ ಸಿಬ್ಬಂದಿ ಬಳಸಿ ರಾಸಾಯನಿಕ ಸಿಂಪಡನೆ ಕಾರ್ಯ ಜೋರಾಗಿಯೇ ನಡೆದಿತ್ತು. ಮಾರುಕಟ್ಟೆ, ಆಸ್ಪತ್ರೆಗಳಲ್ಲಿ ಈ ಕಾರ್ಯ ನಿಯಮಿತವಾಗಿತ್ತು.
ಆದರೆ, ಇದೆಲ್ಲ ವ್ಯರ್ಥ್ಯ ಕಸರತ್ತು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿಕೆ ನೀಡಿದೆ. ಸೋಂಕು ನಿವಾರಕ ಸಿಂಪಡಿಸುವುದರಿಂದ ಕರೊನಾ ವೈರಸ್ ಸಾಯುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಕ್ಲೋರಿನ್ ಆತವಾ ಇತರ ವಿಷಕಾರಿ ಕ್ರಿಮಿನಾಶಕ ಸಿಂಪಡನೆ ಮಾನವನ ಆರೋಗ್ಯಕ್ಕೆ ಅಪಾಯಕಾರಿ. ಕಣ್ಣು ಮತ್ತು ಚರ್ಮದ ಉರಿ, ಉಸಿರಾಟ, ಜಠರದಲ್ಲಿ ತೊಂದರೆ ಉಂಟಾಗಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವರದಿ ಹೇಳಿದೆ.
ಕರೊನಾ ನಿಗ್ರಹಕ್ಕೆ ರಸ್ತೆ ಅಥವಾ ಹೊರಾಂಗಣದಲ್ಲಿ ಸೋಂಕು ನಿವಾರಕ ಸಿಂಪಡನೆ ಅಥವಾ ಧೂಮ ಪ್ರಯೋಗಿಸಿ ಎಂದು ಯಾರೂ ಶಿಫಾರಸು ಮಾಡಿಲ್ಲ. ಗಾಳಿಯಲ್ಲಿರುವ ಧೂಳು ಹಾಗೂ ಕಸ ಈ ಕ್ರಿಮಿನಾಶಕವನ್ನು ನಿರುಪಯುಕ್ತವನ್ನಾಗಿಸುತ್ತವೆ. ಇಷ್ಟಕ್ಕೂ ವೈರಸ್ಅನ್ನು ನಿಗ್ರಹಿಸಲು ಬೇಕಾಗುವ ನಿಗದಿತ ಅವಧಿವರೆಗೆ ಕ್ರಿಮಿನಾಶಕ ಆ ಪ್ರದೇಶವನ್ನು ಆವರಿಸುವುದಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಜತೆಗೆ, ಗಾಳಿಯಲ್ಲಿ ಕ್ರಮಿನಾಶಕ ಸಿಂಪಡಿಸುವುದು ಆರೋಗ್ಯಕ್ಕೂ ಹಾನಿಕಾರಕ ಎಂದು ಹೇಳಿದೆ.
ಮನುಷ್ಯರ ಮೇಲೂ ಪ್ರಯೋಗಿಸುವಂತಿಲ್ಲ: ಇತ್ತೀಚೆಗೆ ಬಿಎಂಟಿಸಿ ಹಾಗೂ ಕೆಲವು ಇಲಾಖೆಗಳು ಸಿಬ್ಬಂದಿ ಹಾಗೂ ಸಾರ್ವಜನಿಕರ ಮೇಲೆ ಸೋಂಕು ನಿವಾರಕದ ಮಳೆಯನ್ನೇ ಸುರಿಸುವ ವಾಹನ ಹಾಗೂ ಸುರಂಗವನ್ನು ಸಿದ್ಧಪಡಿಸಿದ್ದವು. ಆದರೆ, ಕ್ರಿಮಿನಾಶಕವನ್ನು ದೇಹದ ಸಿಂಪಡಿಸುವುದು ಕೂಡ ಅಪಾಯಕಾರಿ. ಅದನ್ನು ದೇಹಕ್ಕೆ ಲೇಪಿಸಲೇ ಬೇಕಾಗಿದ್ದರೆ, ಬಟ್ಟೆ ಅಥವಾ ಇತರ ಟಿಶ್ಯೂ ಬಳಸಿ ಸವರಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.
ಕರೊನಾ ವೈರಸ್ ವಿವಿಧ ಮೇಲ್ಮೈ ಮೇಲೆ ವಿವಿಧ ಕಾಲಾವಧಿಯವರೆಗೆ ಇರುತ್ತದೆ ಎನ್ನುವುದು ಪ್ರಯೋಗಾಲಯದ ಪರಿಸರದಲ್ಲಿ ಕಂಡುಕೊಂಡಿದ್ದಾಗಿದೆ. ವಾಸ್ತವವಾಗಿ ಇದನ್ನು ಅನ್ವಯಿಸುವುದಾದರೆ ಭಾರಿ ಎಚ್ಚರಿಕೆ ವಹಿಸಬೇಕಾಗುತ್ತದೆ ಎಂದು ತಜ್ಞರು ಸೂಚಿಸಿದ್ದಾರೆ.