

ಶಿಕ್ಷಕ ಎಂಬುದು ಬರೀ ವೃತ್ತಿಯಲ್ಲ. ಜ್ಞಾನ ಪಸರಿಸುವ ಕಾರ್ಯ ಸದಾ ನಡೆಯುತ್ತಲೇ ಇರುತ್ತದೆ. ಇದಕ್ಕೆ ವಯಸ್ಸಿನ ಹಂಗಿಲ್ಲ. ಶಿಕ್ಷಕರಾದವರಿಗೆ ವೃತ್ತಿ ಬದುಕಿನ 30-35 ವರ್ಷಗಳ ಕಾಲ ಮಕ್ಕಳೇ ಪ್ರಪಂಚ. ಅವರ ಶೈಕ್ಷಣಿಕ ಉನ್ನತಿಯೇ ಇವರಿಗೆ ಬಹುದೊಡ್ಡ ಪ್ರಶಸ್ತಿ. ಆದರೆ, ನಿವೃತ್ತಿ ಬಳಿಕವೂ ಅಕ್ಷರದ ಹಣತೆಯನ್ನು ಬೆಳಗಿ ಬೆಳಕನ್ನು ಹರಡುತ್ತಿರುವ ಶಿಕ್ಷಕರು ನಮ್ಮ ನಡುವೆಯೇ ಇದ್ದಾರೆ. ಯಾವುದೇ ಅಪೇಕ್ಷೆ ಇಲ್ಲದೆ ಸಮಾಜಸೇವೆಯ ರೂಪದಲ್ಲಿ ಆತ್ಮಸಂತೃಪ್ತಿಗಾಗಿ ಮಾಡುತ್ತಿರುವ ಇವರ ಈ ಮಹೋನ್ನತ ಕಾರ್ಯ ಸಮಾಜದಲ್ಲಿ ಸದ್ದಿಲ್ಲದೆ ಬದಲಾವಣೆ ತರುತ್ತಿದೆ. ಎಷ್ಟೋ ಮಕ್ಕಳ ಬದುಕು ಬದಲಾಗಿದೆ. ಇಂಥ ಸಾರ್ಥಕ ಕಾರ್ಯವನ್ನು ಮಾಡುತ್ತಿರುವ, ಎಲೆಮರೆ ಕಾಯಿಯಂತಿರುವ ಶಿಕ್ಷಣಪ್ರೇಮಿಗಳನ್ನು ಇಲ್ಲಿ ಪರಿಚಯಿಸಲಾಗಿದೆ. ಶಿಕ್ಷಕರ ದಿನಕ್ಕಾಗಿ ಇದು ವಿಜಯವಾಣಿ ವಿಶೇಷ.
ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯವರಾದ ಸುರೇಶ ಐ. ಪಾಟೀಲ್ ಕಳೆದ ಎಂಟು ವರ್ಷಗಳಿಂದ ಹೊಸಪೇಟೆ ನಿವಾಸಿ. ಎರಡು ವರ್ಷದ ಹಿಂದೆಯಷ್ಟೇ ನಿವೃತ್ತರಾಗಿದ್ದಾರೆ. ಆದರೂ ನಿವೃತ್ತಿ ಹೊಂದಿದ ಅನಂತಶಯನಗುಡಿ ಪ್ರಾಥಮಿಕ ಶಾಲೆಗೆ ಪ್ರತಿದಿನ ಬೆಳಗ್ಗೆ ಬಂದು ಮೊದಲಿಗೆ ಮಕ್ಕಳಿಗೆ ಶಿಸ್ತು ಹಾಗೂ ಸ್ವಚ್ಛತೆಯ ಪಾಠ ಹೇಳುತ್ತಾರೆ. ನಂತರ ರಜೆ ಹಾಕಿರುವ ಅಥವಾ ಇತರ ಕೆಲಸದ ನಿಮಿತ್ತ ಬಾರದ ಶಿಕ್ಷಕರ ತರಗತಿಯನ್ನು ನಡೆಸುತ್ತಾರೆ. ಇವರು ನಾಲ್ಕು ವರ್ಷ ಖಾಸಗಿ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ ನಂತರ, 1993ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕುಂಬಗಾಳ ನುಜ್ಜಿ ಪ್ರಾಥಮಿಕ ಶಾಲೆಯಲ್ಲಿ ಸರ್ಕಾರಿ ಶಿಕ್ಷಕರಾಗಿ ವೃತ್ತಿ ಆರಂಭಿಸಿದರು. 2023ರಲ್ಲಿ ನಿವೃತ್ತಿಯಾಗಿದ್ದಾರೆ. ಒಟ್ಟು 30 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಇವರು ನಿವೃತ್ತಿಯ ಮರುದಿನದಿಂದಲೇ ಮಕ್ಕಳಿಗೆ ಆಟ, ಪಾಠ ಸೇರಿದಂತೆ ಇತರ ನೀತಿಪಾಠಗಳನ್ನು ಬೋಧಿಸುವುದನ್ನು ಮುಂದುವರಿಸಿದ್ದಾರೆ.
ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸಬೇಕೆಂಬ ಉದ್ದೇಶದಿಂದ ಶಿಕ್ಷಕ ಪಿ. ಗಾದಿಲಿಂಗಪ್ಪ ಅವರು ನಿವೃತ್ತಿಯ ಬಳಿಕವೂ ರಾಜ್ಯಾದ್ಯಂತ ಪ್ರೇರಣಾ ಚೈತ್ರ ಯಾತ್ರೆಯ ಮೂಲಕ ವಿದ್ಯಾರ್ಥಿಗಳಿಗೆ ಪಾಠ ಹೇಳುತ್ತಿದ್ದಾರೆ. ಅಲ್ಲದೆ, ಮೌಲ್ಯ ಶಿಕ್ಷಣದ ಬಗ್ಗೆ ತಿಳಿವಳಿಕೆ ಮೂಡಿಸಿ ಮಾದರಿ ನಿವೃತ್ತ ಶಿಕ್ಷಕರಾಗಿದ್ದಾರೆ. ಬಳ್ಳಾರಿ ಜಿಲ್ಲೆ ಕುರುಗೋಡು ನಿವಾಸಿ ಪಿ. ಗಾದಿಲಿಂಗಪ್ಪ ಅವರು ಜಿಲ್ಲೆಯ ವಿವಿಧ ಸರ್ಕಾರಿ ಶಾಲೆಗಳಲ್ಲಿ ಸೇವೆ ಸಲ್ಲಿಸಿ, ಮುಖ್ಯ ಶಿಕ್ಷಕರಾಗಿ ಬಡ್ತಿ ಪಡೆದು 2022ರಲ್ಲಿ ನಿವೃತ್ತಿ ಹೊಂದಿದರು. ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡಿರುವ ಇವರು, ಉಸಿರು ಇರುವವರೆಗೆ ಮಕ್ಕಳಿಗೆ ಕಲಿಸುವ ಆಸಕ್ತಿ ಹೊಂದಿದ್ದಾರೆ. ಇದಕ್ಕಾಗಿ, 2023-24ನೇ ಸಾಲಿನಲ್ಲಿ ರಾಜ್ಯದ 31 ಜಿಲ್ಲೆಗಳಲ್ಲಿ ಪ್ರೇರಣಾ ಚೈತ್ರ ಯಾತ್ರೆ ನಡೆಸಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಮುಖ್ಯ ಪರೀಕ್ಷೆಯ ತರಬೇತಿ ನೀಡಿದ್ದಾರೆ. ಕಲ್ಯಾಣ ಕರ್ನಾಟಕದಲ್ಲಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗಾಗಿ ‘ಕಂದೀಲು’ ಎಂಬ ಯಾತ್ರೆಯಡಿ 2024-25ನೇ ಸಾಲಿನಲ್ಲಿ ಬೋಧನೆ ಮಾಡಿದ್ದಾರೆ. ಪ್ರಸ್ತುತ ಸಾಲಿನಲ್ಲಿ ಬೆಳಗಾವಿಯಿಂದ ಬನವಾಸಿವರೆಗೆ ‘ಕಿತ್ತೂರು ಕರ್ನಾಟಕ ಕಿರಣ’ ಎಂಬ ಯಾತ್ರೆಯ ಮೂಲಕ ಮಕ್ಕಳಿಗೆ ಕಲಿಸುತ್ತಿದ್ದಾರೆ.
ಮಕ್ಕಳ ಕಲಿಕೆಗೆ ಮಾತ್ರವಲ್ಲದೆ, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪೋ›ತ್ಸಾಹಿಸಲು ಶ್ರಮಿಸುತ್ತಿದ್ದಾರೆ. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪಾಸಾದ ಅನಾಥ ಮಕ್ಕಳಿಗಾಗಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಮೂಲಕ ಗೌರವಿಸಿ, ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಪ್ರಯತ್ನಿಸುತ್ತಿದ್ದಾರೆ. ಯಾರಿಂದಲೂ ಏನನ್ನೂ ಅಪೇಕ್ಷಿಸದೆ, ಸ್ವಂತ ಹಣದಿಂದ ರಾಜ್ಯಾದ್ಯಂತ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ವಿದ್ಯಾರ್ಥಿಗಳಿಗೆ ಸ್ಪರ್ಧೆ ಎಲ್ಲಿ ಇರುತ್ತದೆಯೋ, ಅಲ್ಲಿ ಉತ್ತಮ ಭವಿಷ್ಯ ಇರುತ್ತದೆ. ಗ್ರಾಮೀಣ ಮಕ್ಕಳು ಸ್ವಾವಲಂಬಿ ಜೀವನ ನಡೆಸಿ ಇತರರಿಗೆ ಮಾದರಿಯಾಗಲಿ ಎಂಬುದೇ ನನ್ನ ಆಶಯ. | ಪಿ. ಗಾದಿಲಿಂಗಪ್ಪ ನಿವೃತ್ತ ಶಿಕ್ಷಕ
ನಿವೃತ್ತಿಯಾದರೆ ಶಾಲೆಗೂ, ತಮಗೂ ಸಂಬಂಧ ಇಲ್ಲವೇ ಇಲ್ಲವೆನ್ನುವಂತೆ ಹಾಗೂ ಕರ್ತವ್ಯ ಮಾಡಿದ್ದು ಸಾಕು ಎನ್ನುವವರೇ ಹೆಚ್ಚು. ಆದರೆ ಮಂಡ್ಯ ತಾಲೂಕು ಉಮ್ಮಡಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಹಿಂದಿ ಭಾಷಾ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದ ಬಿ.ಸಿ.ವಸುಧಾಮಣಿ ವಿಭಿನ್ನ. ಮಕ್ಕಳಿಗೆ ಪಾಠ ಮಾಡುವುದು ಅವರಿಗೆ ಅಚ್ಚುಮೆಚ್ಚು. ಆ ಕಾರಣದಿಂದಲೇ ನಿವೃತ್ತಿಯಾದರೂ ಶಾಲೆಗೆ ಆಗಮಿಸಿ ಮಕ್ಕಳಿಗೆ ಪಾಠ ಮಾಡುತ್ತಾರೆ. ಕಳೆದ ಇಪ್ಪತ್ತಾರು ವರ್ಷ ಉಮ್ಮಡಹಳ್ಳಿ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿರುವ ವಸುಧಾಮಣಿ ಕೆಲ ತಿಂಗಳ ಹಿಂದೆ ನಿವೃತ್ತಿಯಾದರು. ಪ್ರಸ್ತುತ ಮದ್ದೂರು ತಾಲೂಕು ಬಿದರಕೋಟೆ ಗ್ರಾಮದಿಂದ ಬಸ್ನಲ್ಲಿ ಮಂಡ್ಯ ತಾಲೂಕು ಉಮ್ಮಡಹಳ್ಳಿ ಸರ್ಕಾರಿ ಪ್ರೌಢಶಾಲೆಗೆ ಸ್ವಂತ ಖರ್ಚಿನಲ್ಲೇ ಆಗಮಿಸಿ, ಹಿಂದಿ ಭಾಷಾ ವಿಷಯವನ್ನು ಪಾಠ ಮಾಡುತ್ತಿದ್ದಾರೆ.
ಪಾಠವಿಲ್ಲದೆ ಮಕ್ಕಳಿಗೆ ತೊಂದರೆಯಾಗ ಬಾರದು. ಅದರಲ್ಲಿಯೂ ಹತ್ತನೇ ತರಗತಿಯು ವಿದ್ಯಾರ್ಥಿಗಳಿಗೆ ಮಹತ್ತರ ಘಟ್ಟ. ಈ ಹಿನ್ನೆಲೆಯಲ್ಲಿ ಶಿಕ್ಷಕರ ನೇಮಕಾತಿ ಆಗುವವರೆಗೂ ಪಾಠ ಮಾಡುತ್ತೇನೆ. | ಬಿ.ಸಿ.ವಸುಧಾಮಣಿ, ನಿವೃತ್ತ ಹಿಂದಿ ಭಾಷಾ ಶಿಕ್ಷಕಿ
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಸಿದ್ದಕಟ್ಟೆ ಸಮೀಪದ ಕರ್ಪೆಯ ನಾರಾಯಣ ನಾಯಕ್ 2001ರಲ್ಲಿ ಶಿಕ್ಷಕ ವೃತ್ತಿಯಿಂದ ನಿವೃತ್ತರಾದ ಮೇಲೂ ಕ್ರಿಯಾಶೀಲರಾಗಿದ್ದಾರೆ. ವಿದ್ಯಾರ್ಥಿಗಳೆಂದರೆ ನಾರಾಯಣ ನಾಯಕ್ ಅಚ್ಚುಮೆಚ್ಚು. ಶಿಕ್ಷಕರಾಗಿದ್ದ ದಿನಗಳಿಂದಲೇ ವಿದ್ಯಾರ್ಥಿಗಳಿಗೆ ನೆರವಾಗುತ್ತಿದ್ದ ಅವರು, ನಿವೃತ್ತರಾದ ಬಳಿಕ ವಿವಿಧ ಶಾಲೆಗಳಿಗೆ ಹೋಗಿ ಅಲ್ಲಿನ ಮುಖ್ಯಶಿಕ್ಷಕರನ್ನು ಮಾತಾಡಿಸಿ, ಅವರ ಬಳಿ ಬಡ ವಿದ್ಯಾರ್ಥಿಗಳ ದಾಖಲೆ ಪಡೆದು ಅಗತ್ಯವಿರುವ ಸ್ಕಾಲರ್ಷಿಪ್ ದೊರಕಿಸಿಕೊಡಲು ಕಚೇರಿಗಳಿಗೆ ಓಡಾಡುತ್ತಾರೆ. ಹತ್ತಾರು ಬಗೆಯ ಸ್ಕಾಲರ್ಷಿಪ್ನ ಅರ್ಜಿ ಫಾರ್ಮರ್ಗಳನ್ನು ಹಿಡಿದುಕೊಂಡು ತರಗತಿಗಳಿಗೆ ಹೋಗಿ ತುಂಬುವ ಬಗೆ ಹೇಳಿ ದಾಖಲೆಗಳನ್ನು ಜೋಡಿಸಿ ತಲುಪಿಸಬೇಕಾದ ಕಡೆ ತಲುಪಿಸಿ, ಹಳ್ಳಿ ಕೇಂದ್ರಿತ ಬಡವಿದ್ಯಾರ್ಥಿಗಳಿಗೆ ಹೆಚ್ಚು ಸಹಾಯ ಸಿಗುವಂತೆ ಮಾಡುವ 81 ವರ್ಷದ ನಾಯಕ್ ಮಾಸ್ಟರ್, ಈ ಶೈಕ್ಷಣಿಕ ಸೇವೆಗಾಗಿಯೇ ಸಾವಿರಾರು ರೂ.ಗಳನ್ನು ವ್ಯಯಿಸಿದ್ದಾರೆ. ನಿವೃತ್ತಿ ವೇತನದಲ್ಲಿ ಒಂದಂಶ ಇಂತಹ ಶೈಕ್ಷಣಿಕ ಚಟುವಟಿಕೆಗಳಿಗೆ ವಿನಿಯೋಗಿಸುತ್ತಾರೆ. ಹಾಗೆಯೇ ಉನ್ನತ ಶಿಕ್ಷಣ ಬಯಸುವ ಮಕ್ಕಳಿಗೆ ದಾನಿಗಳಿಂದ ಆರ್ಥಿಕ ಸಹಾಯ, ಲ್ಯಾಪ್ಟಾಪ್, ಪುಸ್ತಕ ಇತ್ಯಾದಿಗಳನ್ನು ಸಂಗ್ರಹಿಸಿ ತಲುಪಿಸುತ್ತಾರೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕು ಕೋಣಂದೂರಿನ ಎಚ್.ರಾಮಚಂದ್ರ ಜೋಯ್ಸ್ ವಿದ್ಯಾರ್ಥಿಗಳಿಗೆ ಇವರು ಅಚ್ಚುಮೆಚ್ಚಿನ ಎಚ್ಆರ್ಜೆ. 1964ರಲ್ಲಿ ಕೋಣಂದೂರಿನ ಎನ್ಇಎಸ್ ಪ್ರೌಢಶಾಲೆ ಶಿಕ್ಷಕರಾಗಿ ಬಳಿಕ ಅಲ್ಲಿಯೇ ಕಾಲೇಜಿನ ಉಪನ್ಯಾಸಕರಾಗಿ ಕೆಲಸ ಮಾಡಿ 2001ರಲ್ಲಿ ನಿವೃತ್ತರಾದರು. ಬಳಿಕ ಸುಮಾರು 20 ಕಿಮೀ ದೂರವಿರುವ ಚಿಟ್ಟೆಬೈಲು ಪ್ರಜ್ಞಾಭಾರತಿ ಶಾಲೆಗೆ ಪ್ರತಿನಿತ್ಯ ತೆರಳಿ 10 ವರ್ಷಗಳ ಕಾಲ ಮಕ್ಕಳಿಗೆ ಗಣಿತ ಕಲಿಸಿದ್ದಾರೆ. ಅದಕ್ಕಾಗಿ ಒಂದು ಪೈಸೆಯನ್ನೂ ಪಡೆಯದೆ ನಿಸ್ವಾರ್ಥ ಮನೋಭಾವ ಮೆರೆದಿದ್ದಾರೆ. ಶಿಕ್ಷಕ ವೃತ್ತಿ ಜತೆಗೆ ಸಹಕಾರ ವಲಯದಲ್ಲೂ ಛಾಪು ಒತ್ತಿದ್ದಾರೆ. ಪ್ರಸ್ತುತ 83ರ ಇಳಿವಯಸ್ಸಿನಲ್ಲೂ ಧಾರ್ವಿುಕ, ಸಾಮಾಜಿಕ ಚಟುವಟಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಅಭಯಂ ಸೌಹಾರ್ದ ಸಹಕಾರ ಸಂಘ, ತೀರ್ಥಹಳ್ಳಿ ತಾಲೂಕು ನಿವೃತ್ತ ನೌಕರರ ಸಂಘ, ಕೋಣಂದೂರು ರಾಷ್ಟ್ರೋತ್ಥಾನ ಬಳಗ, ಬನಶಂಕರಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷರಾಗಿ, ಚಿಟ್ಟೆಬೈಲು ಪ್ರಜ್ಞಾಭಾರತಿ ಶಿಕ್ಷಣ ಸಮಿತಿ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.
ಶಾಲಾವಧಿ ನಂತರ ಮಕ್ಕಳು, ಸಾರ್ವಜನಿಕರಲ್ಲಿ ವಿಜ್ಞಾನದ ಜಾಗೃತಿ ಮೂಡಿಸಲು ಆರಂಭಿಸಿದ ದಾವಣಗೆರೆಯ ಎಂ.ಟಿ. ಶರಣಪ್ಪ ‘ಮನೆ ಮನೆ ವಿಜ್ಞಾನ ದಾಸೋಹ’ವನ್ನು ನಿವೃತ್ತಿ ಬದುಕಿನಲ್ಲೂ ಅಳವಡಿಸಿಕೊಂಡು ಬಂದಿರುವುದು ವಿಶೇಷ. ಶಾಲೆ, ಮನೆ, ಬಾಲಮಂದಿರ, ಬಿಆರ್ಸಿ ಕಟ್ಟಡಗಳೇ ಇವರ ದಾಸೋಹ ಕೇಂದ್ರಗಳು! ಕೈಯಲ್ಲೊಂದು ಲ್ಯಾಪ್ಟಾಪ್, ಪ್ರೊಜೆಕ್ಟರ್, ಟೆಲಿಸ್ಕೋಪ್ ಜತೆಗೆ ಸಂಪನ್ಮೂಲ ವ್ಯಕ್ತಿಯನ್ನು ಕರೆದೊಯ್ದುವುದು ಇವರ ವಾಡಿಕೆ. ‘ನಾನೊಬ್ಬ ಸಮಾಜಸೇವಕ, ನನಗೆ ಪೆನ್ಶನ್ ಬರುತ್ತದೆ. ಕಾರ್ಯಕ್ರಮ ಆಯೋಜಕರು ಹೆಚ್ಚು ಮಕ್ಕಳು, ಜನರನ್ನು ಕೂಡಿಟ್ಟರೆ ಅದುವೇ ನನಗೆ ಕೊಡುವ ಫೀಜು. ಅವರಿಂದ ಬೇರೇನನ್ನೂ ನಾನು ಬಯಸುವುದಿಲ್ಲ. ನನ್ನೊಂದಿಗೆ ಕರೆದೊಯ್ಯುವ ಸಂಪನ್ಮೂಲ ವ್ಯಕ್ತಿಗೂ ನಾನೇ ಸಂಭಾವನೆ ನೀಡುತ್ತೇನೆ’ ಎನ್ನುತ್ತಾರೆ ಶರಣಪ್ಪ.
ಗಣಿತ-ವಿಜ್ಞಾನ ಸಹ ಶಿಕ್ಷಕರಾಗಿ, ಮುಖ್ಯ ಶಿಕ್ಷಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಹೇಮದಳ, ದೊಡ್ಡಬಾತಿ, ಹಳೆಕುಂದುವಾಡ, ಶಿರಗಂಬಿ, ಎರೆಚಿಕ್ಕನಹಳ್ಳಿ, ಕಂದನಕೋವಿ ಸರ್ಕಾರಿ ಶಾಲೆಗಳೂ ಸೇರಿ 35 ವರ್ಷಗಳ ವೃತ್ತಿ ಅನುಭವ ಇವರದ್ದು. ತಮ್ಮದೇ 12 ಇಂಚು ವಿನ್ಯಾಸದ ದೊಡ್ಡ ದೂರದರ್ಶಕದಿಂದಲೇ ಆಕಾಶ ಕಾಯಗಳು, ಗ್ರಹಣ ವಿಶೇಷ, ಉಪಗ್ರಹ ಉಡ್ಡಯನ, ಆಗಸದಲ್ಲಿ ಸಂಭವಿಸುವ ವಿಶೇಷಣಗಳನ್ನು ಶಾಲಾ ಮಕ್ಕಳು, ಜನರಿಗೆ ತೋರಿಸಿ, ಸಂವಾದ ನಡೆಸುತ್ತಿದ್ದಾರೆ. ವಿಜ್ಞಾನ ಸಂವಹನಕಾರ ಪ್ರೊ. ಎಂ.ಆರ್. ನಾಗರಾಜ್ ಮಾರ್ಗದರ್ಶನದೊಂದಿಗೆ, ವಿಜ್ಞಾನ ಪರಿಷತ್ತಿನ ಸಹಕಾರದೊಂದಿಗೆ ಅರವತ್ತೇಳರ ಹರೆಯದಲ್ಲೂ ವಿಜ್ಞಾನವನ್ನು ಜನಮಾನಸಕ್ಕೆ ಹತ್ತಿರವಾಗಿಸುತ್ತಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಹುನಗುಂದ ಪಟ್ಟಣದ ಸಂಗಯ್ಯ ಎಂ. ಕಂಬಾಳಿಮಠ ದಣಿವರಿಯದ ಶಿಕ್ಷಕ. ಕಮತಗಿಯ ಹುಚ್ಚೇಶ್ವರ ವಿದ್ಯಾವರ್ಧಕ ಸಂಘದ ಹುಚ್ಚೇಶ್ವರ ಪ್ರೌಢಶಾಲೆಯಲ್ಲಿ 8 ವರ್ಷ ತಾತ್ಕಾಲಿಕ, 22 ವರ್ಷ ಪೂರ್ಣಾವಧಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ಕಳೆದ ವರ್ಷ ನಿವೃತ್ತಿಯಾಗಿದ್ದಾರೆ. ಅವರು ಸದ್ಯ ಯಾವುದೇ ಶುಲ್ಕ ಹಾಗೂ ಸಂಬಳ ನಿರೀಕ್ಷಿಸದೆ ಮಕ್ಕಳಿಗೆ ಉಚಿತವಾಗಿ ಪಾಠ ಮಾಡುತ್ತಿದ್ದಾರೆ. ನೆಮ್ಮದಿಗೋಸ್ಕರ ಪಾಠ ಮಾಡುವ ಎಸ್.ಎಂ.ಕಂಬಾಳಿಮಠ ಅವರು ಈ ಮೂಲಕ ಸಮಾಜಕ್ಕೆ ಮಾದರಿ ಶಿಕ್ಷಕರಾಗಿದ್ದಾರೆ. ಬಸವಣ್ಣನವರ ವಿಚಾರಗಳಿಂದ ಪ್ರೇರೇಪಿತಾಗಿರುವ ಅವರು ಬಡ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಕಂಬಾಳಿಮಠ ಅವರ ಪತ್ನಿ ಲೀಲಮ್ಮ ಎಸ್ವಿಎಂ ಸಂಸ್ಥೆಯಲ್ಲಿ ಪ್ರಭಾರ ಮುಖ್ಯಶಿಕ್ಷಕಿಯಾಗಿದ್ದಾರೆ. ದಂಪತಿಗೆ ಇಬ್ಬರು ಮಕ್ಕಳಿದ್ದು, ಮೆಡಿಕಲ್ ಅಧ್ಯಯನ ಮಾಡುತ್ತಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಮಾಳೇನಹಳ್ಳಿಯ ಬಿ. ಬಸಪ್ಪ ಮಕ್ಕಳ ಶೈಕ್ಷಣಿಕ ಬೆಳವಣಿಗೆಗಾಗಿ ಕಳೆದ 9 ವರ್ಷದಿಂದಲೂ ನಿವೃತ್ತಿ ನಂತರವೂ ಉಚಿತ ಬೋಧನೆಯಲ್ಲಿ ನಿರತರಾಗಿದ್ದಾರೆ. ಚೈತನ್ಯ ಇರುವವರೆಗೂ ಶಿಕ್ಷಕನಾಗಿಯೇ ಇರಬೇಕೆಂಬ ಮಹದಾಸೆ ಅವರದ್ದಾಗಿದೆ. 70 ವರ್ಷವಾದರೂ ಶಿಕ್ಷಣ ಪ್ರೇಮದ ಹುಮ್ಮಸ್ಸು ಕ್ಷೀಣಿಸಿಲ್ಲ. 1977ರ ಜುಲೈ 4ರಂದು ಹೂವಿನಹಡಗಲಿ ತಾಲೂಕಿನ ಮಾನ್ಯರಮಸಲವಾಡ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಸಹಾಯಕ ಶಿಕ್ಷಕರಾಗಿ ವೃತ್ತಿ ಆರಂಭಿಸಿದರು. 5, 6 ಮತ್ತು 7ನೇ ತರಗತಿ ವಿದ್ಯಾರ್ಥಿಗಳಿಗೆ ಗಣಿತ, ವಿಜ್ಞಾನ, ಕನ್ನಡವನ್ನು ಅಚ್ಚುಕಟ್ಟಾಗಿ ಕಲಿಸಿದ್ದಾರೆ. ಅಲ್ಲಿ 6 ವರ್ಷ ಸೇವೆಯ ನಂತರ ಅರಬಘಟ್ಟದಲ್ಲಿ 14 ವರ್ಷ, ಗುಂಡೇರಿಯಲ್ಲಿ 5 ವರ್ಷ ವೃತ್ತಿ ನಿರ್ವಹಿಸಿದ್ದಾರೆ. 2002ರಲ್ಲಿ ಮಾಳೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ವರ್ಗಾವಣೆಗೊಂಡು 2008ರವರೆಗೂ ಸೇರಿ ಒಟ್ಟು 6 ವರ್ಷ ಕರ್ತವ್ಯ ನಿರ್ವಹಿಸಿದ್ದಾರೆ. ಇದೇ ಶಾಲೆಯಲ್ಲಿ ಓದಿ, ಅಲ್ಲಿಯೇ ಕೆಲಸ ಮಾಡಿದ ತೃಪ್ತಿ ಅವರಿಗಿದೆ. ಮುಖ್ಯ ಶಿಕ್ಷಕರಾಗಿ ಕಾಮಸಮುದ್ರ ಗ್ರಾಮದಲ್ಲಿ 10 ವರ್ಷ 6 ತಿಂಗಳ ಸೇವೆಯ ಬಳಿಕ 2016ರ ಡಿಸೆಂಬರ್ನಲ್ಲಿ ನಿವೃತ್ತರಾಗಿದ್ದು, ಬಳಿಕ ಬೋಧಿಸುವ ಕಾಯಕ ಮುಂದುವರಿಸಿದ್ದಾರೆ. ನಿತ್ಯ ಬೆಳಗ್ಗೆ ಮಾಳೇನಹಳ್ಳಿ ಶಾಲೆ ಆರಂಭವಾಗುವ ಸಮಯಕ್ಕೆ ತೆರಳಿ, ಮಧ್ಯಾಹ್ನದ ಬಿಸಿಯೂಟದವರೆಗೂ ವಿದ್ಯಾದಾನ ಮಾಡುತ್ತಿದ್ದಾರೆ.
ವಿದ್ಯೆ ಕಲಿಸುವ ಗುರು ಮಾತ್ರ ಕೊನೆಯ ಉಸಿರು ಇರುವವರೆಗೂ ಶಿಕ್ಷಕನಾಗಿಯೇ ಉಳಿಯಲು ಸಾಧ್ಯ. ವೃತ್ತಿಯ ಬಗ್ಗೆ ಗೌರವ, ಹೆಮ್ಮೆ ಇದೆ. ಪ್ರಸ್ತುತ ಪಠ್ಯಕ್ರಮಗಳಲ್ಲಿ ಸಾಕಷ್ಟು ನವೀಕರಣವಾಗಿದೆ. ದೇಶದ ಬೆನ್ನೆಲುಬಾಗಿರುವ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನಾನು ಮನೆಯಲ್ಲಿ ಓದಿಕೊಂಡೇ ಪಾಠ ಮಾಡಲು ಶಾಲೆಗೆ ತೆರಳುತ್ತೇನೆ. | ಬಿ. ಬಸಪ್ಪ ನಿವೃತ್ತ ಶಿಕ್ಷಕ
ಕನ್ನಡ ನುಡಿಬಳಗ ಎಂಬ ಯೂಟ್ಯೂಬ್ ಆರಂಭಿಸಿ ನಿರಂತರವಾಗಿ ಬೋಧನೆ ಮಾಡುತ್ತಿದ್ದಾರೆ. ಕನ್ನಡ ಮಾಧ್ಯಮದ ವಿದ್ಯಾರ್ಥಿಗಳನ್ನು ಐಎಎಸ್, ಕೆಎಎಸ್, ನೆಟ್, ಕೆ- ಸೆಟ್ ಮೊದಲಾದ ಪರೀಕ್ಷಾರ್ಥಿಗಳಿಗೆ ಕನ್ನಡ ಸಾಹಿತ್ಯ, ವ್ಯಾಕರಣ, ಕಾವ್ಯಮೀಮಾಂಸೆ, ಛಂದಸ್ಸು ಮೊದಲಾದ ವಿಷಯಗಳಿಗೆ ಸಂಬಂಧಿಸಿದ ತರಗತಿಗಳನ್ನು ಉಚಿತವಾಗಿ ನಡೆಸುತ್ತಿದ್ದಾರೆ. ಉಪಯುಕ್ತ ಮಾದರಿ ಪ್ರಶ್ನೆಪತ್ರಿಕೆ ತಯಾರಿಸಿ ‘ಕನ್ನಡವೇ ನಿತ್ಯ’ ಎಂಬ ಮಾಲಿಕೆಯಲ್ಲಿ ಸಾವಿರಾರು ಕನ್ನಡ ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ಮಾಡುತ್ತಿದ್ದಾರೆ. ಅಲ್ಲದೆ, ಹಳಗನ್ನಡ ತಜ್ಞರಾದ ಇವರು ಹಳಗನ್ನಡ ಕಾವ್ಯಗಳನ್ನು ಓದುವುದು ಹೇಗೆ ಎಂದು ವಿವರಿಸುತ್ತಿದ್ದಾರೆ.
ಶಬ್ದಮಣಿದರ್ಪಣ ಬೋಧನೆ: ಶಬ್ದಮಣಿದರ್ಪಣವನ್ನು ಆನ್ಲೈನ್ನಲ್ಲಿ ಪರಿಣಾಮಕಾರಿಯಾಗಿ ಬೋಧಿಸುತ್ತಿರುವುದು ಮೆಚ್ಚುಗೆಗೆ ಪಾತ್ರವಾಗಿದೆ. ಹಿಂದಿನ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆ ವಿಶ್ಲೇಷಣೆ ಮಾಡುತ್ತ ಉತ್ತರಗಳನ್ನು, ಕಾವ್ಯ, ನಿಘಂಟುಗಳ ಅಧಾರ ಸಹಿತ ವಿವರಿಸುವುದು ಇವರ ಬೋಧನಾ ವೈಶಿಷ್ಟ್ಯ. ‘ಕನ್ನಡ ನುಡಿಬಳಗ’ ಎಂಬ ಐದು ವಾಟ್ಸ್ ಆಪ್ ಗ್ರೂಪ್ಗಳ ಮೂಲಕ ವಿದ್ಯಾರ್ಥಿಗಳನ್ನು ತಲುಪುತ್ತಿದ್ದಾರೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಸಹಾಯಕವಾಗಲಿ ಎಂಬ ಸದಾಶಯದೊಂದಿಗೆ ಸೇವಾಮನೋಭಾವದಿಂದ ಸಾಹಿತ್ಯ ಬೋಧನೆ ಮಾಡಲಾಗುತ್ತಿದೆ. ವೃತ್ತಿ, ಪ್ರವೃತ್ತಿಗಳೆರಡೂ ಕನ್ನಡ ಸಾಹಿತ್ಯ ಬೋಧನೆಯೇ ಆಗಿದೆ. ಕನ್ನಡ ಸ್ಪರ್ಧಾತ್ಮಕ ವಿದ್ಯಾರ್ಥಿಗಳಿಗಾಗಿಯೇ ‘ಹೊಸಗನ್ನಡ ಕವಿ ಚರಿತೆ’ ಎಂಬ ಬೃಹತ್ ಪರಾಮರ್ಶನ ಗ್ರಂಥವನ್ನು ಬರೆದು ಪ್ರಕಟಿಸಿದ್ದಾರೆ. ಸಾವಿರಾರು ವಿದ್ಯಾರ್ಥಿಗಳು ಈ ಕೃತಿಯ ಸಹಾಯ ಪಡೆದಿದ್ದಾರೆ. ಇವರ ಉಚಿತ ತರಗತಿಯ ಸದುಪಯೋಗ ಪಡೆಯಬಯಸುವವರು ’ಕನ್ನಡ ನುಡಿಬಳಗ’ ಸೇರಿ ಯಶಸ್ಸು ಪಡೆಯಬಹುದಾಗಿದೆ.
ಮುರಲಿ ಕಡೆಕಾರ್ ಪ್ರೌಢಶಾಲಾ ವಿದ್ಯಾರ್ಥಿನಿ ನಯನಾ ಕುಟುಂಬಕ್ಕೆ ಪಲಿಮಾರು ಶ್ರೀಗಳ ಉಪಸ್ಥಿತಿಯಲ್ಲಿ ಮನೆ ಹಸ್ತಾಂತರಿಸಿದ ಸಂದರ್ಭ. ಶಿಕ್ಷಕ ಕೇವಲ ತರಗತಿಗೆ ಸೀಮಿತವಾಗದೆ ಸಮಾಜಮುಖಿಯಾದರೆ ಏನೆಲ್ಲ ಬದಲಾವಣೆಗಳಿಗೆ ಸಾಕ್ಷಿಯಾಗಬಹುದು ಎಂಬುದಕ್ಕೆ ಉಡುಪಿ ಜಿಲ್ಲೆ ನಿಟ್ಟೂರು ಪ್ರೌಢಶಾಲೆ ನಿವೃತ್ತ ಮುಖ್ಯಶಿಕ್ಷಕ ಮುರಲಿ ಕಡೆಕಾರ್ ಉದಾಹರಣೆ. ಶಿಕ್ಷಣ ಯಾವಾಗಲೂ ಪುಸ್ತಕದ ಜ್ಞಾನ ಮಾತ್ರವಲ್ಲ. ಪ್ರಾಯೋಗಿಕ ಜ್ಞಾನವೂ ಶಿಕ್ಷಣ ಎಂಬುದನ್ನು ಮನಗಂಡ ಮುರಲಿ ಕಡೆಕಾರ್, 2013ರಿಂದ ಪ್ರೌಢಶಾಲೆಯ ವಿದ್ಯಾರ್ಥಿಗಳು ಭತ್ತ ನಾಟಿ ಮತ್ತು ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಳ್ಳುವಂತೆ ಮಾಡಿದ್ದಾರೆ. 2020ರಲ್ಲಿ ನಿಟ್ಟೂರು ಅನುದಾನಿತ ಪ್ರೌಢಶಾಲೆ ಸುವರ್ಣ ಮಹೋತ್ಸವ ಸಂಭ್ರಮ ಕಾಲದಲ್ಲಿ ಮುರಲಿ ಕಡೆಕಾರ್ ನೇತೃತ್ವದಲ್ಲಿ ನಿಟ್ಟೂರು, ಕರಂಬಳ್ಳಿ, ಕಕ್ಕುಂಜೆ, ಪುತ್ತೂರು, ಪೆರಂಪಳ್ಳಿ ವ್ಯಾಪ್ತಿಯ 60 ಎಕರೆ ಹಡಿಲು ಗದ್ದೆಗಳಲ್ಲಿ ಭತ್ತ ಕೃಷಿ ನಡೆಸಲಾಗಿದೆ. ಇದರಿಂದ ಪ್ರೇರಣೆ ಪಡೆದ ಅಂದಿನ ಶಾಸಕ ರಘುಪತಿ ಭಟ್ ಹಡಿಲು ಗದ್ದೆಗಳ ಪುನಶ್ಚೇತನ ಅಭಿಯಾನವನ್ನು ವಿಧಾನಸಭಾ ವ್ಯಾಪ್ತಿಗೆ ವಿಸ್ತರಿಸಿದರು. ಜತೆಗೆ ವಿದ್ಯಾಪೋಷಕ್ ಯೋಜನೆ ಮೂಲಕ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ 1.25 ಕೋಟಿ ರೂ. ಮಿಕ್ಕಿ ವಿದ್ಯಾರ್ಥಿವೇತನ ವಿತರಿಸಲಾಗುತ್ತಿದೆ.
ನಿವೃತ್ತಿ ಅಂಚಿನಲ್ಲಿರುವ ಪ್ರತಿಯೊಬ್ಬರೂ ಮುಂದಿನ ಭವಿಷ್ಯದ ಹಣಕಾಸಿನ ಭದ್ರತೆ ಬಗ್ಗೆಯೇ ಯೋಚಿಸುತ್ತಾರೆ. ಆದರೆ ಶಿಕ್ಷಕ ವೃತ್ತಿಯಿಂದ ಸೇವಾ ನಿವೃತ್ತಿ ಪಡೆಯುವ ದಿನವೇ ತನ್ನದೇ ಶಾಲೆಯ ಬಡ ವಿದ್ಯಾರ್ಥಿನಿಯೊಬ್ಬಳಿಗೆ ಮನೆ ನಿರ್ವಿುಸಿ ಕೊಡುವ ನಿರ್ಧಾರ ಮಾಡಿ ಮುರಲಿ ಮಾದರಿಯಾಗಿದ್ದಾರೆ. ಕಕ್ಕುಂಜೆ ವಾರ್ಡ್ ನಿವಾಸಿ ತೀರಾ ಬಡಕುಟುಂಬದ, ನಿಟ್ಟೂರು ಪ್ರೌಢಶಾಲಾ ವಿದ್ಯಾರ್ಥಿನಿ ನಯನಾ ಕುಟುಂಬಕ್ಕೆ ಸೂರು ನಿರ್ವಿುಸಿ ಆಸರೆ ಕಲ್ಪಿಸಿದ್ದಾರೆ.