ಕುಖ್ಯಾತ ರೌಡಿ ಕುಣಿಗಲ್ ಗಿರಿ ಸೆರೆ

Kunigal Giri
Published on

ಬೆಂಗಳೂರು: ಅರಮನೆ ಮೈದಾನ ಬಳಿ ಕನ್​ಸ್ಟ್ರಕ್ಷನ್ಸ್ ಕ್ಲಬ್​ನಲ್ಲಿ ಜೂಜಾಟದಲ್ಲಿ ತೊಡಗಿದ್ದ ರೌಡಿ ಕುಣಿಗಲ್ ಗಿರಿ ಸಿಸಿಬಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ.

ಮಂಗಳವಾರ (ಮಾ.3) ರಾತ್ರಿ 8 ಗಂಟೆಯಲ್ಲಿ ಕನ್​ಸ್ಟ್ರಕ್ಷನ್ ಕ್ಲಬ್​ನಲ್ಲಿ ಜೂಜಾಡುತ್ತಿರುವ ಮಾಹಿತಿ ಆಧರಿಸಿ ಸಿಸಿಬಿ ಇನ್​ಸ್ಪೆಕ್ಟರ್ ಶ್ರೀಧರ್ ಪೂಜಾರ್ ನೇತೃತ್ವದ ಪೊಲೀಸರ ತಂಡ ದಾಳಿ ನಡೆಸಿತ್ತು. ಈ ವೇಳೆ ಜೂಜಾಟದಲ್ಲಿ ತೊಡಗಿದ್ದ 16 ಮಂದಿಯನ್ನು ಬಂಧಿಸಿದ್ದು, ಅದೇ ಗುಂಪಿನಲ್ಲಿ ಕುಣಿಗಲ್ ರವಿ ಕೂಡ ಇದ್ದ. ಬಂಧಿತ ಜೂಜುಕೋರದಿಂದ 5 ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ ಎಂದು ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

ಗಿರಿ ವಿರುದ್ಧ 120 ಕೇಸ್!: ರೌಡಿಶೀಟರ್ ಕುಣಿಗಲ್ ಗಿರಿ 120 ದರೋಡೆ, ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ತನ್ನ ಸಹಚರರ ಜತೆಗೂಡಿ ಬ್ಯಾಂಕ್, ದೇವಸ್ಥಾನಗಳಲ್ಲಿ ಕನ್ನಗಳವು, ಒಂಟಿಯಾಗಿ ಸಂಚರಿಸುವ ಬೈಕ್ ಸವಾರರನ್ನು ಅಡ್ಡಗಟ್ಟಿ ಸುಲಿಗೆ ಮಾಡಿದ್ದಾನೆ. ಹಾಗಾಗಿ ರಾಬರಿ ಗಿರಿ ಎಂದೇ ಕುಖ್ಯಾತನಾಗಿದ್ದ. ಕಳೆದ ವರ್ಷ ಜೂನ್​ನಲ್ಲಿ ರೆಸಿಡೆನ್ಸಿ ರಸ್ತೆಯ ಬಾರ್​ವೊಂದರಲ್ಲಿ ತನ್ನ ಹುಟ್ಟುಹಬ್ಬದ ಪಾರ್ಟಿ ಆಯೋಜಿಸಿದ್ದ. ಹೊರರಾಜ್ಯದ ಯುವತಿಯರಿಂದ ಅಶ್ಲೀಲ ನೃತ್ಯ ಮಾಡಿಸುತ್ತಿದ್ದ. ಸಿಸಿಬಿ ಪೊಲೀಸರು ಅಲ್ಲಿಗೆ ದಾಳಿ ನಡೆಸಿದಾಗ ಕೈಗೆ ಸಿಗದೆ ಪರಾರಿಯಾಗಿದ್ದ.

ಆನಂತರ ಸಹಚರರ ಜತೆ ಬಾರ್​ವೊಂದರಲ್ಲಿ ಪಾರ್ಟಿ ಮಾಡುತ್ತಿದ್ದಾಗ ಕೋರಮಂಗಲ ಪೊಲೀಸರು ಬಂಧಿಸಿದ್ದರು. ಬಳಿಕ ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದು, ವಿಚಾರಣೆಗೆ ಹಾಜರಾಗಿರಲಿಲ್ಲ. ಅವನ ಸಹಚರರು ಕಾರನ್ನು ಅಡ್ಡಗಟ್ಟಿ ಸುಲಿಗೆಗೆ ಯತ್ನಿಸಿದ್ದರು. ಈ ಹಿನ್ನೆಲೆಯಲ್ಲಿ ಗಿರಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುವುದು ಎಂದು ಸಿಸಿಬಿ ಪೊಲೀಸರು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net