

ಬೆಂಗಳೂರು: ಉದ್ಯೋಗಿಯನ್ನು ಕೆಲಸದಿಂದ ತೆಗೆದುಹಾಕುವುದು ಲೈಂಗಿಕ ದೌರ್ಜನ್ಯ ಆರೋಪದಲ್ಲಿ ದೂರು ದಾಖಲಿಸುವುದಕ್ಕೆ ಆಧಾರವಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಪೋಸ್ಟ್ ಮಾಸ್ಟರ್ಗಳಿಬ್ಬರ ವಿರುದ್ಧ ಡಿ-ಗ್ರೂಪ್ (ತಾತ್ಕಾಲಿಕ) ಉದ್ಯೋಗಿಯಾಗಿದ್ದ ಮಹಿಳೆಯೊಬ್ಬರು ಲೈಂಗಿಕ ಕಿರುಕುಳದ ಆರೋಪದಲ್ಲಿ ದಾಖಲಿಸಿದ್ದ ದೂರನ್ನು ರದ್ದುಪಡಿಸಿದೆ.
ಲೈಂಗಿಕ ದೌರ್ಜನ್ಯ ಪ್ರಕರಣ ರದ್ದುಕೋರಿ ಬಸವನಗುಡಿ ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ಗಳಾದ ರಾಧಾಕೃಷ್ಣ ಹಾಗೂ ಹನುಮಂತಯ್ಯ ಸಲ್ಲಿಸಿದ್ದ ಅರ್ಜಿ ಮಾನ್ಯ ಮಾಡಿರುವ ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ಪೀಠ, ಈ ಆದೇಶ ಮಾಡಿದೆ.
ಸಂತ್ರಸ್ತೆ ಮಾಡಿರುವ ಆರೋಪಗಳನ್ನು ಸಾಬೀತುಪಡಿಸುವ ಯಾವುದೇ ಪೂರಕ ಸಾಕ್ಷ್ಯವಿಲ್ಲ. ಭಾರತೀಯ ದಂಡ ಸಂಹಿತೆ ಸೆಕ್ಷನ್ 354(1) ಅರ್ಜಿದಾರರ ಮೇಲೆ ಮಾಡಲಾದ ಲೈಂಗಿಕ ಶೋಷಣೆ ಆರೋಪಕ್ಕೆ ಅನ್ವಯಿಸುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಅರ್ಜಿದಾರರ ವಿರುದ್ಧ ಪ್ರಕರಣ ಮುಂದುವರಿಸುವುದು ಕಾನೂನು ಪ್ರಕ್ರಿಯೆ ದುರ್ಬಳಕೆಯಾಗಲಿದೆ ಎಂದು ಅಭಿಪ್ರಾಯಪಟ್ಟಿರುವ ಪೀಠ, ಅರ್ಜಿದಾರರ ವಿರುದ್ಧದ ದೂರು ಮತ್ತದಕ್ಕೆ ಸಂಬಂಧಿಸಿದ ವಿಚಾರಣಾ ನ್ಯಾಯಾಲಯದ ವಿಚಾರಣೆ ರದ್ದುಪಡಿಸಿ ಆದೇಶಿಸಿದೆ.
ಕೆಲಸದಿಂದ ತೆಗೆದರೆ ದೂರು ನೀಡಲಾಗದು: ರಾಧಾಕೃಷ್ಣ ಅವರ ಚೇಂಬರ್ಗೆ ಒಬ್ಬಂಟಿಯಾಗಿ ಬಂದು ಮಾತನಾಡುವಂತೆ ವಿನಯ್ ಎಂಬಾತ ದೂರುದಾರೆಗೆ ಸೂಚಿಸಿದ್ದ ಎನ್ನಲಾಗಿದೆ. ಆ ವ್ಯಕ್ತಿಯನ್ನು ವಿಚಾರಣೆಗೆ ಒಳಪಡಿಸಿಲ್ಲ. ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಸಂತ್ರಸ್ತೆ ಮತ್ತು ಆಕೆಯ ತಾಯಿಯ ಪ್ರಮಾಣಿಕೃತ ಹೇಳಿಕೆಯನ್ನು ದಾಖಲಿಸಿಕೊಂಡಿದ್ದು ಬಿಟ್ಟರೆ ಪೊಲೀಸರು ಬೇರ್ಯಾವುದೇ ಸಾಕ್ಷಿಯನ್ನು ಪರೀಕ್ಷಿಸಿಲ್ಲ. ಅರ್ಜಿದಾರರ ಮೇಲಿನ ಆರೋಪಗಳನ್ನು ಸಾಬೀತುಪಡಿಸುವ ಯಾವುದೇ ಪೂರಕ ಸಾಕ್ಷ್ಯಳನ್ನು ಪ್ರಾಸಿಕ್ಯೂಷನ್ ಒದಗಿಸಿಲ್ಲ. ಅಂಚೆ ಕಚೇರಿಯ ಉಸ್ತುವಾರಿ ಅಧಿಕಾರಿಯು ಕೆಲಸದಿಂದ ತೆಗೆದು ಹಾಕಿದರು ಎಂಬುದು ದೂರು ದಾಖಲಿಸಲು ಆಧಾರವಾಗುವುದಿಲ್ಲ ಹಾಗೂ ಅವರನ್ನು ಲೈಂಗಿಕ ದೌರ್ಜನ್ಯದ ಆರೋಪದ ಮೇಲೆ ಕೋರ್ಟ್ಗೆ ಎಳೆದು ತರಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಹೇಳಿದೆ.
ಪ್ರಕರಣವೇನು?
ಬಸವನಗುಡಿ ಪೊಲೀಸ್ ಠಾಣೆಗೆ 2018ರ ಮೇ 16ರಂದು ದೂರು ನೀಡಿದ್ದ ಮಹಿಳೆ, ತನ್ನ ತಾಯಿ ಬಸವನಗುಡಿ ಅಂಚೆ ಕಚೇರಿಯಲ್ಲಿ ಗುತ್ತಿಗೆ ಉದ್ಯೋಗಿಯಾಗಿದ್ದರು. ಅವರು ಅನಾರೋಗ್ಯಕ್ಕೆ ಗುರಿಯಾದಾಗ ನಾನು ಅಂಚೆ ಕಚೇರಿಗೆ ಹೋಗಿ ಕೆಲಸ ಮಾಡುತ್ತಿದ್ದೆ. ರಾಧಾಕೃಷ್ಣ ಕಳೆದ 10 ವರ್ಷಗಳಿಂದ ಪೋಸ್ಟ್ ಮಾಸ್ಟರ್ ಆಗಿದ್ದರು. ಆ ನಂತರ ಹನುಮಂತಯ್ಯ ಪೋಸ್ಟ್ ಮಾಸ್ಟರ್ ಆದರು. ನಾನು ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ ಎಂದು ಕೆಲಸದಿಂದ ತೆಗೆದು ಹಾಕುವುದಾಗಿ ಹನುಮಂತಯ್ಯ ಬೆದರಿಕೆ ಹಾಕುತ್ತಿದ್ದರು ಎಂದು ದೂರಿದ್ದರು. ಕ್ಷಮೆ ಕೇಳಿದ ಹೊರತಾಗಿಯೂ ಕೆಲಸದಿಂದ ತೆಗೆದುಹಾಕುವುದಾಗಿ ಬೆದರಿಕೆ ಹಾಕುವುದನ್ನು ಮುಂದುವರಿಸುತ್ತಿದ್ದರು. ಇದರಿಂದ, ಬೇಸರಗೊಂಡು ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದೆ. ಕಚೇರಿ ಸಿಬ್ಬಂದಿ ವಾಪಸ್ ಕರೆತಂದಿದ್ದರು. ನಂತರ ಹನುಮಂತಯ್ಯ ನನ್ನ ಬಳಿ ಲೈಂಗಿಕ ಆಸೆ ವ್ಯಕ್ತಪಡಿಸಿದ್ದು, ಅದನ್ನು ತಿರಸ್ಕರಿಸಿದೆ.
ಒಂದು ದಿನ ರಾಧಾಕೃಷ್ಣ ತಮ್ಮ ಕಾರಿನಲ್ಲಿ 8ನೇ ಮೈಲಿಯ ಬಳಿಯ ಉದ್ಯಾನಕ್ಕೆ ಕರೆದೊಯ್ದು, ಲೈಂಗಿಕ ಕ್ರಿಯೆ ನಡೆಸಲು ಯತ್ನಿಸಿದರು. ಆ ಸಂದರ್ಭದಲ್ಲಿ ಒಬ್ಬರು ಬಂದು ರಾಧಾಕೃಷ್ಣ ಅವರನ್ನು ಹಿಡಿದರು. ಅಲ್ಲಿಂದ ನಾನು ಹೊರಟು ಬಂದೆ ಎಂದು ದೂರಿನಲ್ಲಿ ಆರೋಪಿಸಿದ್ದರು. ತನಿಖೆ ನಡೆಸಿದ್ದ ಪೊಲೀಸರು, ರಾಧಾಕೃಷ್ಣ ಮತ್ತು ಹನುಮಂತಯ್ಯ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. 37ನೇ ಎಸಿಎಂಎಂ ಕೋರ್ಟ್ನಲ್ಲಿ ಪ್ರಕರಣ ವಿಚಾರಣಾ ಹಂತದಲ್ಲಿತ್ತು.
ತನಿಖೆಯನ್ನೇ ನಡೆಸಿಲ್ಲ
ದೂರು ಮತ್ತು ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿದರೆ, ರಾಧಾಕೃಷ್ಣ ಅವರು ಕಾರಿನಲ್ಲಿ ದೂರುದಾರೆಯನ್ನು 8ನೇ ಮೈಲಿಯ ಪಾರ್ಕ್ಗೆ ಕರೆದುಕೊಂಡು ಹೋಗಿ ಲೈಂಗಿಕ ಕ್ರಿಯೆ ನಡೆಸಲು ಯತ್ನಿಸಿದರು. ಕೆಲ ವ್ಯಕ್ತಿಗಳು ಆತನನ್ನು ಹಿಡಿದಿದ್ದರು ಎಂಬುದಾಗಿ ಆರೋಪಿಸಲಾಗಿದೆ. ಆದರೆ, ಪೊಲೀಸರು 8ನೇ ಮೈಲಿಯ ಪಾರ್ಕ್ಗೆ ತೆರಳಿ, ಆ ಪಾರ್ಕ್ ಅಲ್ಲಿದೆಯೇ ಅಥವಾ ಇಲ್ಲವೇ, ಅಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆಯೇ, ಅದರ ದೃಶ್ಯಗಳನ್ನು ಪರಿಶೀಲಿಸಿ, ವಾಸ್ತವದಲ್ಲಿ ರಾಧಾಕೃಷ್ಣ ಮತ್ತು ದೂರುದಾರೆ ಪಾರ್ಕ್ಗೆ ಭೇಟಿ ನೀಡಿದ್ದರೇ ಎಂಬ ಬಗ್ಗೆ ತನಿಖೆಯನ್ನೇ ನಡೆಸಿಲ್ಲ ಎಂದು ನ್ಯಾಯಪೀಠ ತೀರ್ಪಿನಲ್ಲಿ ಅಭಿಪ್ರಾಯಪಟ್ಟಿದೆ.