ಗೆಳೆಯನನ್ನೇ ಮುಗಿಸಿದ್ದ ಆರೋಪಿಗಳಿಗೆ ಖಾಯಂ ಆಯ್ತು ಜೀವಾವಧಿ ಶಿಕ್ಷೆ! ಏನಿದು ಪ್ರಕರಣ?

52
Published on

ಬೆಂಗಳೂರು: 12 ವರ್ಷಗಳ ಹಿಂದೆ ನಡೆದಿದ್ದು ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮಹತ್ವದ ಕೋರ್ಟ್ ತೀರ್ಪು ಹೊರಬಿದ್ದಿದೆ. ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳಿಗೆ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.

2011ರಲ್ಲಿ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ಖಾಸಗಿ ಕಾಲೇಜೊಂದರಲ್ಲಿ ವ್ಯಾಸಾಂಗ ಮಾಡುತ್ತಿದ್ದ ಬಿಹಾರ ಮೂಲದ ಇಂಜಿನಿಯರಿಂಗ್ ವಿದ್ಯಾರ್ಥಿ ತುಷಾರ್ ಕುಮಾರ್(21) ಎಂಬಾತನನ್ನು ಅಪಹರಿಸಿ, ಕೊಲೆ ಮಾಡಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ವಾರಿಶ್ ಕುಮಾರ್, ರೋಹಿತ್ ಕುಮಾರ್, ಶಿವಾನಿ ಠಾಕೂರ್ ಹಾಗೂ ಪ್ರೀತಿ ರಾಜ್ ಎಂಬ ನಾಲ್ವರನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ಪ್ರಕರಣದ ಬಗ್ಗೆ ಪರಿಶೀಲಿಸಿದ ವಿಚಾರಣಾ ನ್ಯಾಯಾಲಯ ನಾಲ್ವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.

ಕೊಲೆಯಾದ ತುಷಾರ್ ಮತ್ತು ವಾರಿಶ್ ರಾಜಸ್ಥಾನದಲ್ಲಿ ಆಪ್ತ ಸ್ನೇಹಿತರಾಗಿದ್ದು ಸಹಪಾಠಿಯೂ ಆಗಿದ್ದರು. ತುಷಾರ್ ಶ್ರೀಮಂತ ಕುಟುಂಬದ ಹುಡುಗ. ಹೀಗಾಗಿ ಎಂಜಿನಿಯರಿಂಗ್ ವ್ಯಾಸಾಂಗಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದ. ತುಷಾರ್ ಮನೆಯ ಶ್ರೀಮಂತಿಕೆಯನ್ನು ಅರಿತುಕೊಂಡಿದ್ದ ವಾರಿಶ್, ಗೆಳೆಯನನ್ನೇ ಕೊಲೆ ಮಾಡಿ ಹಣ ಪಡೆಯಲು ಯೋಜನೆ ರೂಪಿಸಿಕೊಂಡಿದ್ದ. ಅದರಂತೆ ವಾರಿಶ್ ಬೆಂಗಳೂರಿಗೆ ಬಂದು ತುಷಾರ್​ನನ್ನು ಕೊಲೆ ಮಾಡಿದ್ದಾನೆ. ನಂತರ ತುಷಾರ್ ತಂದೆಗೆ ಕರೆಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದ.

ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಶಿಕ್ಷೆ ತೀರ್ಪನ್ನು ಪ್ರಶ್ನಿಸಿ ನಾಲ್ವರು ಆರೋಪಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಪ್ರಕರಣದ ಬಗ್ಗೆ ಪರಿಶೀಲಿಸಿದ ಹೈಕೋರ್ಟ್​ ಮತ್ತೆ ಜೀವಾವಧಿ ಶಿಕ್ಷೆಯನ್ನು ಎತ್ತಿಹಿಡಿದೆ. ಇದರೊಂದಿಗೆ ಕೊಲೆ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಖಾಯಂ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net