ತಾಳಿ ಕಟ್ಟುವಷ್ಟರಲ್ಲಿ ಪೊಲೀಸರಿಗೆ ಕರೆ ಮಾಡಿ ಕೈಕೊಟ್ಟ ವಧು: ಚಿಂತಿಸದ ವರನಿಂದ ಒಳ್ಳೆಯ ನಿರ್ಧಾರ!

TL Bridegroom
Published on

ಹೈದರಾಬಾದ್​: ಇನ್ನೇನು ವಧುವಿಗೆ ತಾಳಿ ಕಟ್ಟುವಷ್ಟರಲ್ಲಿ ಪೊಲೀಸರ ಮಧ್ಯ ಪ್ರವೇಶದಿಂದ ನಡೆಯಬೇಕಿದ್ದ ವಿವಾಹವೊಂದು ಗೊಂದಲದ ಗೂಡಾಗಿ ಕೊನೆಗೆ ವರ ಅದೇ ಮಂಟಪದಲ್ಲಿ ಬೇರೆ ಯುವತಿಯನ್ನು ವರಿಸಿದ ಪ್ರಸಂಗ ತೆಲಂಗಾಣದ ಮೆಹಬೂಬಬಾದ್​ ಜಿಲ್ಲೆಯಲ್ಲಿ ನಡೆದಿದೆ.

ಮೆಹಬೂಬಬಾದ್​ನ ಮರಿಪಾದ ಮುನ್ಸಿಪಾಲಿಟಿ ಕೇಂದ್ರದ ಮದುವೆ ಮಂಟಪದಲ್ಲಿ ಗುರುವಾರ ಘಟನೆ ನಡೆದಿದೆ. ಮರಿಪಾದ ಮಂಡಲದ ಗುಂಡೆಪುಡಿ ನಿವಾಸಿ ಯಾಮಿನಿ ಕೃಷ್ಣಮೂರ್ತಿ ಹಾಗೂ ಕುರವಿ ಮಂಡಲದ ಕಂಪೆಲ್ಲಿ ನಿವಾಸಿ ರಾಜೇಶ್​ಗೂ ಹಿರಿಯರು ಮದು ನಿಶ್ಚಯಿಸಿದ್ದರು.

ನಿಶ್ಚಯದಂತೆಯೇ ಮದುವೆ ಮಂಟಪದಲ್ಲಿ ಗುರುವಾರ ವಿವಾಹ ಕಾರ್ಯಕ್ರಮ ಜರುಗುತ್ತಿತ್ತು. ಬಂಧುಬಳಗ, ಅತಿಥಿಗಳೆಲ್ಲರೂ ಭಾಗಿಯಾಗಿದ್ದರು. ಮಂಟಪದಲ್ಲಿ ವಧು-ವರ ಕುಳಿತಿರುವಾಗ, ಪುರೋಹಿತರು ಪೂಜೆ ಪುನಸ್ಕಾರಗಳನ್ನು ನಡೆಸಿ ಇನ್ನೇನು ತಾಳಿ ಕಟ್ಟುವಷ್ಟರಲ್ಲಿ ಎದ್ದು ನಿಂತ ವಧು ನನಗೆ ಮದುವೆ ಇಷ್ಟವಿಲ್ಲ ಎಂದಿದ್ದಾಳೆ. ಬಳಿಕ ಪೊಲೀಸ್​ ಸಹಾಯವಾಣಿ 100ಕ್ಕೆ ಕರೆ ಮಾಡಿ ತನ್ನ ವೃತ್ತಾಂತವನ್ನೆಲ್ಲ ವಿವರಿಸಿದ್ದಾಳೆ.

ವಧುವಿನ ಮಾತು ಕೇಳಿ ಮದುವೆ ಮಂಟಪಕ್ಕೆ ಓಡಿ ಬಂದ ಪೊಲೀಸರು ಆಕೆಯನ್ನು ಅಲ್ಲಿಂದ ಪೊಲೀಸ್​ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಕಂಪೆಲ್ಲಿ ಯುವಕನನ್ನು ಪ್ರೀತಿಸುತ್ತಿದ್ದು, ಆತನನ್ನೇ ಮದುವೆ ಆಗಲು ಬಯಸಿದ್ದೇನೆ. ಈ ವಿಚಾರ ಮನೆಯವರಿಗೆ ತಿಳಿದಿದ್ದರಿಂದ ನನಗೂ ಹೇಳದೆ ಬಲವಂತವಾಗಿ ಮದುವೆ ಮಾಡಲು ಮುಂದಾದರು ಎಂದು ಆರೋಪಿಸಿದ್ದಾಳೆ.

ಇತ್ತ ವಧುವಿನ ದಿಢೀರ್​ ನಿರ್ಧಾರದಿಂದ ಒಂದು ಕ್ಷಣ ಶಾಕ್​ ಆದ ವರ ಹೆಚ್ಚು ತೆಲೆಕೆಡಿಸಿಕೊಳ್ಳದೆ ತನ್ನ ಸಂಬಂಧಿಕರಲ್ಲೇ ಓರ್ವ ಯುವತಿಯನ್ನು ಅದೇ ಮಂಟಪದಲ್ಲಿ ಮದುವೆಯಾಗಿದ್ದಾನೆ. ವಿವಾಹಕ್ಕೆ ಬಂದಿದ್ದ ಅತಿಥಿಗಳು ನವವಧು-ವರರಿಗೆ ಆಶೀರ್ವದಿಸಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net