ಹಾಸನ: ತಾಲೂಕಿನ ದೊಡ್ಡ ಕೊಂಡಗೋಳ ಗ್ರಾಮದಲ್ಲಿ ಗುರುವಾರ 25 ಲಕ್ಷ ರೂ. ವೆಚ್ಚದ ಗ್ರಾಮ ಸ್ವರಾಜ್ ಭವನ ಹಾಗೂ ಡಿಜಿಟಲ್ ಗ್ರಂಥಾಲಯವನ್ನು ಶಾಸಕ ಎಚ್.ಪಿ.ಸ್ವರೂಪ್ ಪ್ರಕಾಶ್ ಉದ್ಘಾಟಿಸಿದರು.
ಮನುಷ್ಯನ ಜೀವನದಲ್ಲಿ ಅತಿ ಅಮೂಲ್ಯ ಅಗತ್ಯಗಳ ಪೈಕಿ ಶಿಕ್ಷಣವೂ ಮುಖ್ಯ. ಮಕ್ಕಳಿಗೆ ಬಾಲ್ಯದಿಂದಲೇ ಗುಣಮಟ್ಟದ ಶಿಕ್ಷಣ ಕೊಡಿಸುವ ನಿಟ್ಟಿನಲ್ಲಿ ಪಾಲಕರು ಮುಂದಾಗಬೇಕು. ಇದೇ ಕಾರಣಕ್ಕೆ ಶಾಲೆಗಳ ಹಂತದಲ್ಲಿಯೂ ಡಿಜಿಟಲ್ ಗ್ರಂಥಾಲಯಗಳನ್ನು ಅಳವಡಿಸಿ ಆ ಮೂಲಕ ಮಕ್ಕಳಿಗೆ ಜ್ಞಾನ ಹೆಚ್ಚಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದು ಹೇಳಿದರು.
ಗ್ರಾಮಸ್ವರಾಜ್ ಭವನ ನಿರ್ಮಾಣಕ್ಕೂ ಹಲವು ವರ್ಷಗಳಿಂದ ಗ್ರಾಮಸ್ಥರು ಬೇಡಿಕೆ ಇಟ್ಟಿದ್ದರು. ಹಂತ ಹಂತವಾಗಿ ಕಾಮಗಾರಿ ಮುಗಿಸಿ ಗ್ರಾಮಸ್ಥರಿಗೆ ಅನುಕೂಲ ಕಲ್ಪಿಸಲಾಗಿದೆ. ಈ ಹಿಂದೆ ಇದರ ಸುತ್ತಲಿನ ಜಾಗ ಒತ್ತುವರಿಯಾಗಿದ್ದಾಗಲೂ ಗ್ರಾಮಸ್ಥರು ಹೋರಾಟ ಮಾಡಿ ಅದನ್ನು ಉಳಿಸಿಕೊಂಡು ಇದೀಗ ಎಲ್ಲರಿಗೂ ಅನುಕೂಲ ಆಗುವ ನಿಟ್ಟಿನಲ್ಲಿ ಭವನ ನಿರ್ಮಾಣ ಮಾಡಲಾಗಿದೆ. ಜನರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಪ್ರಗತಿ ಪಥದತ್ತ ಸಾಗುತ್ತಿರುವ ದೇಶದಲ್ಲಿ ಎಲ್ಲ ವಿಭಾಗಗಳು ಡಿಜಿಟಲೀಕರಣವಾಗುತ್ತಿವೆ. ಇದೇ ರೀತಿ ಗ್ರಂಥಾಲಯಗಳೂ ಡಿಜಿಟಲ್ ಗ್ರಂಥಾಲಯಗಳಾಗಿ ಪರಿವರ್ತನೆಯಾಗುತ್ತಿರುವುದು ಒಳ್ಳೆಯ ಬೆಳವಣಿಗೆ. ಇದರಿಂದ ಈ ಹಿಂದೆ ಆಗುತ್ತಿದ್ದ ಹಲವು ಸಮಸ್ಯೆಗಳಿಗೆ ಕಡಿವಾಣ ಹಾಕಲಾಗುತ್ತಿದೆ. ಅಗತ್ಯವಿರುವ ಎಲ್ಲ ಪುಸ್ತಕಗಳನ್ನು ಪಡೆಯಬಹುದು. ಎಲ್ಲರೂ ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಕರೆ ನೀಡಿದರು. ವಿಶ್ವ ಒಕ್ಕಲಿಗರ ಮಠದ ಪೀಠಾಧಿಪತಿ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ, ಗ್ರಾಮದ ಪ್ರಮುಖರು ಇದ್ದರು.