ಸರ್ಕಾರಕ್ಕೂ ಸೈಟ್ ಸಂಕಷ್ಟ!

vidhanasoudha
Published on

ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು

ಸಮರ್ಪಕ ನಿವೇಶನ ಇಲ್ಲದೆ ಲಕ್ಷಾಂತರ ಮಂದಿ ಸೂರು ನಿರ್ಮಿಸಿಕೊಳ್ಳಲು ಕಷ್ಟಪಡುತ್ತಿರುವ ನಡುವೆಯೇ, ರಾಜ್ಯದಲ್ಲಿ ಸರ್ಕಾರಿ ಆಸ್ಪತ್ರೆ, ಅಂಗನವಾಡಿ, ಹಾಸ್ಟೆಲ್, ಶಾಲೆ ತೆರೆಯಲು ಸೂಕ್ತ ಜಾಗ ಸಿಗದೆ ಸರ್ಕಾರವೂ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿರುವ ಅಂಶ ಬೆಳಕಿಗೆ ಬಂದಿದೆ. ಈ ಸಮಸ್ಯೆ ಪರಿಹಾರಕ್ಕೆ ಖಾಸಗಿ ಜಮೀನು ಖರೀದಿಗೂ ಸರ್ಕಾರ ಚಿಂತನೆ ನಡೆಸಿದ್ದು, ಇದು ಎಷ್ಟು ಸಾಕಾರವಾಗಲಿದೆ ಎಂಬುದನ್ನು ಕಾದುನೋಡಬೇಕಿದೆ.

ಕೆಲವೆಡೆ ಸರ್ಕಾರಿ ಭೂಮಿ, ಮೈದಾನ, ಸಿಎ ನಿವೇಶನ, ಗೋಮಾಳ, ಕೆರೆ ಮತ್ತು ಖರಾಬು ಭೂಮಿಯನ್ನು ಪ್ರಭಾವಿಗಳು, ಭೂಗಳ್ಳರು ಒತ್ತುವರಿ ಮಾಡಿಕೊಂಡಿದ್ದಾರೆ. ಹಲವು ಸಾಮಾಜಿಕ ಕಲ್ಯಾಣ ಯೋಜನೆಗಳಿಗೆ ಜಮೀನು ಸಿಗದೆ ಖಾಸಗಿ ಕಟ್ಟಡದಲ್ಲಿ ಬಾಡಿಗೆ ಪಡೆದು ನಡೆಸಲಾಗುತ್ತಿದೆ. ಇನ್ನು ಕೆಲವು ಯೋಜನೆ ಅನುಷ್ಠಾನ ಮಾಡದೆ ಸರ್ಕಾರ ಸುಮ್ಮನಾಗಿದೆ. ಉದಾಹರಣೆಗೆ ಶಿಶುಗಳಿಗೆ ಶಿಕ್ಷಣದ ಜತೆಗೆ ಆರೈಕೆ ಮತ್ತು ಪೋಷಣೆಗಾಗಿ ಹಳ್ಳಿ ಹಳ್ಳಿಯಲ್ಲಿ ಅಂಗನವಾಡಿ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ಆದರೆ, ಗ್ರಾಮೀಣ ಪ್ರದೇಶದ 1,858 ಅಂಗನವಾಡಿಗಳಿಗೆ ಮತ್ತು ನಗರ ಪ್ರದೇಶದಲ್ಲಿ 5,187 ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಜಾಗವೇ ಇಲ್ಲದಂತಾಗಿದೆ.

ಈ ಪೈಕಿ ಬೆಂಗಳೂರು ನಗರದಲ್ಲಿ 783 ಮತ್ತು ಬೆಳಗಾವಿ ನಗರದಲ್ಲಿ 613 ಅಂಗನವಾಡಿಗಳಿಗೆ ಸ್ವಂತ ಕಟ್ಟಡ ಇಲ್ಲದಿರುವುದು ಸರ್ಕಾರದ ದಾಖಲೆಯಿಂದ ಬೆಳಕಿಗೆ ಬಂದಿದೆ. ಪ್ರತಿಯೊಬ್ಬ ನಾಗರಿಕನಿಗೆ ಸಿಗಬೇಕಾದ ಮೂಲಸೌಕರ್ಯದಲ್ಲಿ ವೈದ್ಯಕೀಯ ಸೇವೆಯೂ ಒಂದಾಗಿದೆ. ಆದರೆ, ರಾಜ್ಯದಲ್ಲಿ 742 ಕಡೆಗಳಲ್ಲಿ ಆಸ್ಪತ್ರೆ ತೆರೆಯಲು ಸರ್ಕಾರಿ ಜಾಗ ಸಿಗುತ್ತಿಲ್ಲ. ಹಾವೇರಿ ಜಿಲ್ಲೆಯಲ್ಲಿ 154 ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 111 ಆಸ್ಪತ್ರೆಗಳಿಗೆ ಸರ್ಕಾರಿ ಭೂಮಿ ಬೇಕಾಗಿದೆ. ಕೆಲ ಕಡೆಗಳಲ್ಲಿ ಬಾಡಿಗೆ ಕಟ್ಟಡದಲ್ಲಿ ತೆರೆದಿದ್ದರೆ ಬಹುತೇಕ ಜಿಲ್ಲೆಗಳಲ್ಲಿ ಆಸ್ಪತ್ರೆ ತೆರೆಯಲು ಜಾಗ ಸಿಗದೆ ಸ್ಥಳೀಯರು ವೈದ್ಯಕೀಯ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ.

ಭೂಮಿ ಖರೀದಿಗೆ ಆರ್ಥಿಕ ಸವಾಲು

ನಗರ, ಪಟ್ಟಣ ಮತ್ತು ತಾಲೂಕು ಕೇಂದ್ರಗಳಲ್ಲಿ ಆಸ್ಪತ್ರೆ, ಶಾಲೆ, ಹಾಸ್ಟೆಲ್ ತೆರೆಯಬೇಕು. ಆಗ ಮಾತ್ರ ಹೆಚ್ಚಿನ ಜನರಿಗೆ ಅನುಕೂಲವಾಗಲಿದೆ. ಇಂತಹ ಪ್ರದೇಶದಲ್ಲಿ ಖಾಸಗಿ ಸೈಟ್ ಅಥವಾ ಜಮೀನು ಖರೀದಿಗೆ ಲಕ್ಷಾಂತರ ರೂಪಾಯಿ ಬೇಕು. ಅಷ್ಟೊಂದು ಹಣವನ್ನು ಪಡೆಯುವುದು ಇಲಾಖೆಗಳಿಗೆ ಸವಾಲಿನ ಕೆಲಸ ಎಂದು ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವಿವಿಧ ಇಲಾಖೆಗಳಿಗೆ ಬೇಕಾಗಿರುವ ನಿವೇಶನಗಳ ಮಾಹಿತಿ

------------------------------------------

ಯೋಜನೆಗಳು                             ಸೈಟ್‌ಗಳ ಸಂಖ್ಯೆ

---------------------------------------------

ಗ್ರಾಮೀಣ ಪ್ರದೇಶದ ಅಂಗನವಾಡಿ   1,858

ನಗರ ಪ್ರದೇಶದ ಅಂಗನವಾಡಿ        5,187

ಸರ್ಕಾರಿ ಕಾಲೇಜು                         14

ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್ 50

ಪರಿಶಿಷ್ಟ ವರ್ಗಗಳ ಕಲ್ಯಾಣ ಹಾಸ್ಟೆಲ್ 10

ಹಿಂದುಳಿದ ವರ್ಗಗಳ ಕಲ್ಯಾಣ ಹಾಸ್ಟೆಲ್ 127

ವಸತಿ ಶಾಲೆ ( 5ರಿಂದ 10 ಎಕರೆ)       10

ಮೌಲನಾ ಆಜಾದ್ ಮಾದರಿ ಶಾಲೆ     34

ವಸತಿ ನಿಲಯ (20 ಗುಂಟೆ)              39

ಸರ್ಕಾರಿ ಆಸ್ಪತ್ರೆಗಳು                      742

ಕೌಶಲಾಭಿವೃದ್ಧಿ ಇಲಾಖೆಗಿಲ್ಲ ಭೂಮಿ

ಕೌಶಲಾಭಿವೃದ್ಧಿ ಇಲಾಖೆಯಿಂದ ಯುವಕರಿಗೆ ಉದ್ಯೋಗ ತರಬೇತಿ ನೀಡುವ ನಿಟ್ಟಿನಲ್ಲಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು ತೆರೆಯಬೇಕಿದೆ. ಆದರೆ, ಭೂಮಿ ಸಿಗದೆ ತೊಂದರೆ ಉಂಟಾಗಿದೆ. ಮಂಡ್ಯ ಜಿಲ್ಲೆಯಲ್ಲಿ 2 ರಿಂದ 3 ಎಕರೆ, ಬೆಳಗಾವಿಯಲ್ಲಿ 4 ರಿಂದ 6 ಎಕರೆ, ಬಾಗಲಕೋಟೆಯಲ್ಲಿ 2 ರಿಂದ 3 ಎಕರೆ, ಹಾವೇರಿಯಲ್ಲಿ 3 ರಿಂದ 5 ಎಕರೆ, ಧಾರವಾಡದಲ್ಲಿ 3 ರಿಂದ 4 ಎಕರೆ, ಗದಗ ಜಿಲ್ಲೆಯಲ್ಲಿ 4 ರಿಂದ 6 ಎಕರೆ ಮತ್ತು ವಿಜಯಪುರ, ಕಲುಬುರಗಿ, ರಾಯಚೂರು ಜಿಲ್ಲೆಯಲ್ಲಿ ತಲಾ 2 ರಿಂದ 3 ಎಕರೆ ಜಮೀನು ಬೇಕೆಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಆದರೆ, ಸರ್ಕಾರಿ ಜಾಗ ಸಿಗದೆ ಯೋಜನೆ ಅನುಷ್ಠಾನಕ್ಕೆ ಅಡ್ಡಿ ಉಂಟಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net