ಗೋಲ್ಡ್ ರನ್ಯಾ ಜಾಲಕ್ಕೆ ಪ್ರಭಾವಿಗಳದ್ದೇ ಶ್ರೀರಕ್ಷೆ; ಪೊಲೀಸ್, ಕಸ್ಟಮ್ಸ್​ ಅಧಿಕಾರಿಗಳೂ ಭಾಗಿ ಶಂಕೆ

Ranya Tarun
Published on

ಬೆಂಗಳೂರು: ನಟಿ ರನ್ಯಾ ರಾವ್ ಚಿನ್ನ ಕಳ್ಳಸಾಗಣೆ ದಂಧೆಗೆ ಪೊಲೀಸರು, ರಾಜಕಾರಣಿಗಳು, ಕಸ್ಟಮ್್ಸ ಅಧಿಕಾರಿಗಳು ಸೇರಿ ಹಲವರ ಶ್ರೀರಕ್ಷೆ ಇರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಏತನ್ಮಧ್ಯೆ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಮಹಾರಾಷ್ಟ್ರ ಮತ್ತು ಬೆಂಗಳೂರಿನಲ್ಲಿರುವ ರನ್ಯಾ ಹಾಗೂ ಆಕೆಯ ಸ್ನೇಹಿತ ತರುಣ್ ರಾಜ್ ನಿವಾಸ ಸೇರಿ 6 ಕಡೆ ದಾಳಿ ನಡೆಸಿ ಮಹತ್ವದ ದಾಖಲೆ ವಶಪಡಿಸಿಕೊಂಡಿದ್ದಾರೆ.

ರನ್ಯಾ ನಿವಾಸದ ಮೇಲೆ ಇತ್ತೀಚೆಗೆ ಡಿಆರ್​ಐ ಮತ್ತು ಸಿಬಿಐ ಅಧಿಕಾರಿಗಳು ದಾಳಿ ನಡೆಸಿ ನಗದು, ದಾಖಲೆಗಳನ್ನು ಜಪ್ತಿ ಮಾಡಿದ್ದರು. ಇದರ ಬೆನ್ನಲ್ಲೇ ಇ.ಡಿ ಅಧಿಕಾರಿಗಳ ರಂಗಪ್ರವೇಶವಾಗಿದೆ. ಗೋಲ್ಡ್ ಸ್ಮಗ್ಲಿಂಗ್ ಪ್ರಕರಣ ಸಂಬಂಧ ಎನ್​ಫೋರ್ಸ್ ಮೆಂಟ್ ಕೇಸ್ ಇನ್​ಫಾಮೇಷನ್ ರಿಪೋರ್ಟ್ ದಾಖಲಿಸಿಕೊಂಡಿರುವ ಇ.ಡಿ ತಂಡ ರನ್ಯಾ ಅವರ ಲ್ಯಾವೆಲ್ಲೆ ರಸ್ತೆಯಲ್ಲಿರುವ ನಂದವಾಣಿ ಮ್ಯಾನ್ಷನ್ ನಿವಾಸ, ಕೋರಮಂಗಲ, ಜಯನಗರ, ಬಸವನಗುಡಿ ಸೇರಿ 6 ಕಡೆ ದಾಳಿ ನಡೆಸಿದೆ. ಇನ್ನು ರನ್ಯಾ ಮಲತಂದೆ ಡಿಜಿಪಿ ರಾಮಚಂದ್ರ ರಾವ್ ಅವರನ್ನು ಕಡ್ಡಾಯ ರಜೆ ಮೇಲೆ ಕಳುಹಿಸಲಾಗಿದೆ.

ಮಾ.3 ರಂದು ಬೆಂಗಳೂರು ಏರ್​ಫೋರ್ಟ್​ನಲ್ಲಿ ನಟಿ ರನ್ಯಾ ಅವರನ್ನು ಬಂಧಿಸಿ 14.2 ಕೆ.ಜೆ ಚಿನ್ನದ ಗಟ್ಟಿ ಮತ್ತು ಮಾ. 6 ರಂದು ಮುಂಬೈ ವಿಮಾನ ನಿಲ್ದಾಣದಲ್ಲಿ ಇಬ್ಬರು ವಿದೇಶಿ ಪ್ರಜೆಗಳನ್ನು ಬಂಧಿಸಿ 21.28 ಕೆ.ಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ಆರೋಪಿಗಳಿಗೆ ಸೇರಿದ್ದ ಬೆಂಗಳೂರು, ಮುಂಬೈ ನಿವಾಸಗಳ ಮೇಲೆ ದಾಳಿ ನಡೆಸಿ ಕೆಲ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.

ಅಕ್ರಮ ಹಣ ವರ್ಗಾವಣೆ!: ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಆಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಹವಾಲಾ ದಂಧೆ ಮೂಲಕ ಭಾರತದಿಂದ ದುಬೈಗೆ ಹಣ ಹೋಗುತ್ತಿತ್ತು. ಬಳಿಕ ಚಿನ್ನದ ಗಟ್ಟಿ ರೂಪದಲ್ಲಿ ಬೆಂಗಳೂರು ಸೇರಿ ಇತರ ನಗರಗಳಿಗೆ ವಾಪಸ್ ಬರುತ್ತಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಅಕ್ರಮವಾಗಿ ಹಣ ವರ್ಗಾವಣೆ ಯಾಗಿರುವ ಹಿನ್ನೆಲೆಯಲ್ಲಿ ಮನಿ ಲಾಂಡರಿಂಗ್ ತಡೆಗಟ್ಟುವಿಕೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಇಡಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ. ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳಿಗೆ ಸದ್ಯದಲ್ಲಿಯೇ ನೋಟಿಸ್ ನೀಡಿ ವಿಚಾರಣೆ ನಡೆಸಲಿದ್ದಾರೆ. ಮತ್ತೊಂದೆಡೆ ರನ್ಯಾ ಪತಿ ಜತಿನ್ ಹುಕ್ಕೇರಿಗೆ ಸೇರಿದ್ದ ಸ್ಥಳಗಳ ಮೇಲೆ ಡಿಆರ್​ಐ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net