

ಇದೇ 26ರಂದು ಅಧಿಕಾರಾವಧಿಯ ಒಂದು ವರ್ಷ ಪೂರೈಸಲಿರುವ ರಾಜ್ಯ ಬಿಜೆಪಿ ಸರ್ಕಾರ ಹೊಸ ಕೈಗಾರಿಕಾ ನೀತಿಯನ್ನು ಪ್ರಕಟಿಸುವುದರೊಂದಿಗೆ, ಆರ್ಥಿಕತೆಯ ಚೇತರಿಕೆಗೆ ಮಹತ್ವದ ಹೆಜ್ಜೆ ಇರಿಸಿದೆ. ಕರೊನಾ ಸಂಕಷ್ಟದಿಂದಾಗಿ ಆರ್ಥಿಕತೆ ಕುಸಿದಿದ್ದು, ಕೈಗಾರಿಕಾ ವಲಯ ಭಾರಿ ನಷ್ಟ ಎದುರಿಸುತ್ತಿದೆ. ಉದ್ಯೋಗನಷ್ಟದ ಪ್ರಮಾಣ ಹೆಚ್ಚುತ್ತಿದೆ. ಪರಿಸ್ಥಿತಿ ಇಷ್ಟೊಂದು ಸವಾಲಿನಿಂದ ಕೂಡಿರುವಾಗ ಕರ್ನಾಟಕದಲ್ಲಿ ಉದ್ಯಮಸ್ನೇಹಿ ಮತ್ತು ಹೂಡಿಕೆಗೆ ಪೂರಕ ವಾತಾವರಣ ಸೃಷ್ಟಿಸಲು ಸಶಕ್ತ ಕೈಗಾರಿಕಾ ನೀತಿಯ ಅಗತ್ಯವಿತ್ತು. ಈಗಿನ ಸ್ಪರ್ಧಾತ್ಮಕ ವಾತಾವರಣ, ಉದ್ಯಮಗಳಿಗೆ ಅವಶ್ಯವಾಗಿ ಬೇಕಾಗಿರುವ ಪ್ರೋತ್ಸಾಹಕರ ನೀತಿ ಇದೆಲ್ಲವನ್ನೂ ಪರಿಗಣಿಸಿಯೇ, ಹೊಸ ಕೈಗಾರಿಕಾ ನೀತಿ ರೂಪಿಸಲಾಗಿದ್ದು, ಗುರುವಾರ ಅದಕ್ಕೆ ಸಂಪುಟದ ಅನುಮೋದನೆ ದೊರೆತಿದೆ. ಬೆಂಗಳೂರಿಗೆ ಮಾತ್ರ ಕೈಗಾರಿಕೆಗಳು ಸೀಮಿತವಾಗಿದ್ದು, ಎರಡನೇ ಮತ್ತು ಮೂರನೇ ಹಂತದ ನಗರಗಳಿಗೂ ಕೈಗಾರಿಕೆಗಳು ವಿಸ್ತರಣೆಯಾಗಬೇಕು ಎಂಬ ಬಹುಕಾಲದ ಬೇಡಿಕೆಗೆ ಸರ್ಕಾರ ಈ ಬಾರಿ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಅದು ಅನುಷ್ಠಾನದ ರೂಪದಲ್ಲಿ ಬರಬೇಕಿದೆ.
ರಾಜ್ಯದಲ್ಲಿ -ಠಿ; 5 ಲಕ್ಷ ಕೋಟಿ ಬಂಡವಾಳ ಹೂಡಿಕೆ ಆಕರ್ಷಿಸುವುದು, 20 ಲಕ್ಷ ಉದ್ಯೋಗಾವಕಾಶಗಳನ್ನು ಕಲ್ಪಿಸುವ ಹಾಗೂ ಹಿಂದುಳಿದ ಜಿಲ್ಲೆಗಳಲ್ಲಿ ಕೈಗಾರಿಕೆಗಳ ಅಭಿವೃದ್ಧಿಗೆ ಅನುವು ಮಾಡಿಕೊಡುವ ಉದ್ದೇಶವನ್ನು ನೂತನ ನೀತಿ ಹೊಂದಿರುವುದು ಗಮನಾರ್ಹ. ಕನ್ನಡಿಗರಿಗೆ ಉದ್ಯೋಗ ದೊರಕಿಸಲು ಆದ್ಯತೆ ನೀಡಲಾಗಿದ್ದು, ಎಲ್ಲ ರೀತಿಯ ಹುದ್ದೆಗಳಲ್ಲಿ ಶೇಕಡ 70 ಮತ್ತು ಡಿ ಗ್ರೂಪ್ ಹುದ್ದೆಗಳಲ್ಲಿ ಶೇ.100 ಕನ್ನಡಿಗರಿಗೇ ಆದ್ಯತೆ ನೀಡಬೇಕು ಎಂಬ ಅಂಶ ಸ್ವಾಗತಾರ್ಹ. ರಫ್ತಿನಲ್ಲಿ ಕರ್ನಾಟಕ ನಾಲ್ಕನೇ ಸ್ಥಾನದಲ್ಲಿದ್ದು, ಅದನ್ನು ಮೂರನೇ ಸ್ಥಾನಕ್ಕೆ ಕೊಂಡೊಯ್ಯುವುದು, ಕೈಗಾರಿಕಾ ವಾರ್ಷಿಕ ಬೆಳವಣಿಗೆ ದರವನ್ನು ಶೇಕಡ 10ರಷ್ಟು ಕಾಯ್ದುಕೊಂಡು ಹೋಗಲು ನಿರ್ಧರಿಸಲಾಗಿದೆ. ಇತರ ಪ್ರೋತ್ಸಾಹಕರ ನೀತಿಗಳನ್ನೂ ಘೋಷಿಸಿರುವುದರಿಂದ ಹೂಡಿಕೆದಾರರನ್ನು ಸೆಳೆಯಲು ಅನುಕೂಲವಾಗಲಿದೆ. ತಂತ್ರಜ್ಞಾನ ಮತ್ತು ಆವಿಷ್ಕಾರಕ್ಕೂ ಒತ್ತು ನೀಡಿರುವುದು ಉತ್ತಮ ಬೆಳವಣಿಗೆ.
ಕೈಗಾರಿಕಾ ಅಭಿವೃದ್ಧಿಯಲ್ಲಿ ಹಿಂದುಳಿದ ಜಿಲ್ಲೆಗಳಲ್ಲಿ ಬಂಡವಾಳ ಆಕರ್ಷಿಸಲು ಹೆಚ್ಚಿನ ರಿಯಾಯಿತಿಗಳನ್ನು ಒದಗಿಸುತ್ತಿರುವುದರಿಂದ, ರಾಜ್ಯದಲ್ಲಿ ಸಮತೋಲಿತ ಕೈಗಾರಿಕಾಭಿವೃದ್ಧಿಗೆ ನೆರವಾಗಲಿದೆ. ಲಘು, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಿಗೆ ವಿದ್ಯುತ್ ತೆರಿಗೆ ವಿನಾಯಿತಿ ಘೋಷಿಸಲಾಗಿದ್ದು, ಖಾಸಗಿ ಕೈಗಾರಿಕಾ ಪಾರ್ಕ್ಗಳನ್ನು ಅಭಿವೃದ್ಧಿಪಡಿಸಲು ರಿಯಾಯಿತಿ ಹಾಗೂ ಪೋ›ತ್ಸಾಹ ನೀಡುವ ಅಂಶವೂ ಹೊಸ ನೀತಿಯಲ್ಲಿದೆ. ಈಗಿನ ಪ್ರಧಾನಿ ನರೇಂದ್ರ ಮೋದಿ ಹಿಂದೆ ಗುಜರಾತ್ ಮುಖ್ಯಮಂತ್ರಿ ಆಗಿದ್ದಾಗ, ಆ ರಾಜ್ಯವನ್ನು ‘ಹೂಡಿಕೆಸ್ನೇಹಿ’ಯಾಗಿಸಿ ಹಲವು ಬೃಹತ್ ಕಂಪನಿಗಳು ಬರುವಂತೆ ಮಾಡಿದ್ದರು. ಕರ್ನಾಟಕವೂ ನೈಸರ್ಗಿಕ ಸಂಪನ್ಮೂಲ, ಮಾನವ ಸಂಪನ್ಮೂಲ, ಉತ್ತಮ ಕೌಶಲ ಮತ್ತು ತಂತ್ರಜ್ಞಾನದ ಬಲವನ್ನು ಹೊಂದಿದ್ದು, ಇದನ್ನು ರಚನಾತ್ಮಕವಾಗಿ ಬಳಸಿಕೊಂಡಲ್ಲಿ ಖಂಡಿತವಾಗಿಯೂ ಕೈಗಾರಿಕಾಭಿವೃದ್ಧಿಯಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಬಹುದು. ಈಗಿನ ಹೊಸ ಕೈಗಾರಿಕಾ ನೀತಿ ಆರ್ಥಿಕ ಚಟುವಟಿಕೆ ಹೆಚ್ಚಿಸುವ ಮತ್ತು ಉದ್ಯೋಗಾವಕಾಶ ಸೃಷ್ಟಿಸುವ ನಿಟ್ಟಿನಲ್ಲಿ ಪರಿಣಾಮಕಾರಿಯಾಗಲಿ. ಲೋಪಗಳು ಇಲ್ಲದಂತೆ ಸಮರ್ಪಕವಾಗಿ ಜಾರಿಯಾಗಲಿ.