VIDEO: ನೆಟ್ಟಿಗರನ್ನು ಮಂತ್ರಮುಗ್ಧಗೊಳಿಸಿದ ಲಾಠಿ ಸ್ಕಿಲ್ ಅಜ್ಜಿ!

Ajji Lathi
Published on

ಮುಂಬೈ: ಎಪ್ಪತ್ತೈದು ವರ್ಷ ವಯಸ್ಸಿನ ಒಬ್ಬ ಅಜ್ಜಿ ಪುಣೆಯ ಬೀದಿಯಲ್ಲಿ ‘ಸ್ವಯಂರಕ್ಷಣೆಯ ಕಲೆ’ ಪ್ರದರ್ಶಿಸಿ ಭಿಕ್ಷೆ ಬೇಡುತ್ತಿದ್ದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಸಂಚಲನ ಸೃಷ್ಟಿಸಿದೆ. ವಿಡಿಯೋದ ಕೊನೆಯಲ್ಲಿ ಆಕೆ ತನ್ನ ಹೊಟ್ಟೆಯ ಮೇಲೆ ಕೈಇಟ್ಟುಕೊಂಡು ‘ಇದನ್ನೆಲ್ಲ ಹೊಟ್ಟೆಪಾಡಿಗಾಗಿ ಮಾಡಬೇಕಾಗಿದೆ’ ಅಂತ ಕೈಸನ್ನೆಯ ಮೂಲಕವೇ ಹೇಳುತ್ತಾಳೆ. ಅದನ್ನು ನೋಡಿದ ಒಬ್ಬ ವ್ಯಕ್ತಿ ಅಲ್ಲೇ ಇಟ್ಟಿದ್ದ ತಟ್ಟೆಯೊಳಗೆ ಚಿಲ್ಲರೆ ಕಾಸು ಹಾಕಿ ಹೋಗುತ್ತಾನೆ. ಈ ದೃಶ್ಯ ಬಹಳಷ್ಟು ಜನರ ಹೃದಯವನ್ನೇ ಕಲಕಿದೆ. ಇದನ್ನೂ ಓದಿ: ಈ ಪ್ರತಿಭಾನ್ವಿತೆ ಕೆಲಸಕ್ಕೆ ಅರ್ಜಿ ಹಾಕಿದ್ರೆ ಹೆಸರು ನೋಡೇ ರಿಜೆಕ್ಟ್‌!

ಹಾತಿಂದರ್‌ಸಿಂಗ್ ಎಂಬುವವರು ಟ್ವೀಟರ್‌ನಲ್ಲಿ ಗುರುವಾರ ಈ ವಿಡಿಯೋ ಹಂಚಿಕೊಂಡು, ‘‘75 ವರ್ಷದ ಈ ಮಾತಾಜಿ ಹೊಟ್ಟೆ ಹೊರೆಯುವುದಕ್ಕಾಗಿ ಪುಣೆಯಲ್ಲಿ ತಮ್ಮ ಲಾಠಿ ಸ್ಕಿಲ್ ಪ್ರದರ್ಶಿಸುತ್ತಿದ್ದಾರೆ. ಕರೊನಾ ವೈರಸ್ ಹಾವಳಿ ಮತ್ತು ಲಾಕ್‌ಡೌನ್‌ನಂತಹ ಕಾಲದಲ್ಲೂ ಈ ಅಜ್ಜಿ ಇದನ್ನೆಲ್ಲ ಮಾಡುತ್ತಿದ್ದಾರೆಂದರೆ ಅವರಿಗೆ ಬದುಕಲು ಬೇರೆ ಯಾವುದೇ ಆದಾಯದ ಮೂಲ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ. ಅವರ ಕುರಿತು ಯಾರ ಬಳಿಯಾದರೂ ವಿವರವಾದ ಮಾಹಿತಿ ಇದ್ದರೆ ತಿಳಿಸಿ’’ ಎಂದು ಕೋರಿದ್ದರು.

ಈ ಟ್ವೀಟ್‌ಗೆ ಕೆಲವೇ ಗಂಟೆಗಳಲ್ಲಿ ಭಾರಿ ಪ್ರತಿಕ್ರಿಯೆ ವ್ಯಕ್ತವಾಯಿತು. ಕೆಲವರು ಅಜ್ಜಿಗಾಗಿ ಕ್ರೌಡ್ ಫಂಡಿಂಗ್ ಮಾಡುವ ಸಲಹೆ ನೀಡಿದರೆ, ಇನ್ನು ಕೆಲವರು ಆಕೆ ನಿಂತಿದ್ದ ಸ್ಥಳವನ್ನು ಪತ್ತೆ ಹಚ್ಚಿದರು. ಅದರ ಸಮೀಪದ ಅಪಾರ್ಟ್‌ಮೆಂಟ್‌ಗಳಲ್ಲಿರುವ ತಮ್ಮ ಸ್ನೇಹಿತರಿಗೆ ಕರೆ ಮಾಡಿ ಅಜ್ಜಿಯ ವಿವರ ಸಂಗ್ರಹಿಸುವಂತೆ ಮನವಿ ಮಾಡಿದರು. ಸ್ಥಳೀಯ ಶಿವಸೇನಾ ಮಹಿಳಾ ವಿಭಾಗದ ಕಾರ್ಯಕರ್ತೆಯರು ಕೂಡಲೇ ಅಲ್ಲಿಗೆ ಧಾವಿಸಿದರು. ಮತ್ತೊಬ್ಬರು ಅಜ್ಜಿಯ ಫೋನ್ ನಂಬರ್ ಪಡೆದು ಎಲ್ಲರಿಗೂ ಷೇರ್ ಮಾಡಿದರು. ಪರಿಣಾಮವಾಗಿ ಅಜ್ಜಿಗೆ ಈಗ ಸಹಾಯದ ಮಹಾಪೂರವೇ ಹರಿದುಬರತೊಡಗಿದೆ. ಇದನ್ನೂ ಓದಿ: ಟಿವಿ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವ ದಂಪತಿಗಳಲ್ಲಿ ಕೊಹ್ಲಿ-ಅನುಷ್ಕಾ ನಂ. 1

ಅಜ್ಜಿಗೆ ಸಮೀಪದ ಅಪಾರ್ಟ್‌ಮೆಂಟ್‌ನಲ್ಲೇ ಉಳಿದುಕೊಳ್ಳಲು ವ್ಯವಸ್ಥೆ ಮಾಡುವ ಭರವಸೆಯೂ ಕೆಲವರಿಂದ ಬಂದಿದೆ. ಜತೆಗೆ, ಬಾಲಕಿಯರಿಗೆ ಅಜ್ಜಿಯಿಂದ ಸ್ವರಕ್ಷಣೆಯ ತರಬೇತಿ ಕೊಡಿಸುವ, ಆ ಮೂಲಕ ಅಜ್ಜಿಯ ಬದುಕಿಗೂ ದಾರಿ ಮಾಡಿಕೊಡುವ ಬಗ್ಗೆಯೂ ಹಲವರು ಪ್ರಯತ್ನಿಸುತ್ತಿದ್ದಾರೆ. ‘‘ಅಜ್ಜಿ ತನ್ನ ಹೊಟ್ಟೆ ಮೇಲೆ ಕೈಇಟ್ಟುಕೊಂಡು ಬೇಡುವ ದೃಶ್ಯ ನನ್ನ ಹೃದಯವನ್ನು ಚೂರುಚೂರು ಮಾಡಿತು’’ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ಇಂತಹ ಸಂಕಷ್ಟದಲ್ಲೂ ಅಜ್ಜಿ ಮಾಸ್ಕ್ ಹಾಕಿಕೊಂಡು ಲಾಠಿ ಸ್ಕಿಲ್ ಪ್ರದರ್ಶಿಸುತ್ತಿರುವುದು ಕೂಡ ಮೆಚ್ಚುಗೆಗೆ ಕಾರಣವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net