

ನವದೆಹಲಿ: ಹುಬ್ಬಳ್ಳಿ ವಿಮಾನ ನಿಲ್ದಾಣವನ್ನು ಈಗ ಹಸಿರು ವಿಮಾನ ನಿಲ್ದಾಣವನ್ನಾಗಿ ಪರಿವರ್ತಿಸಲಾಗಿದೆ.
ದಿನದಿಂದ ದಿನಕ್ಕೆ ಹೊಸ ಹೊಸ ಸಂಪರ್ಕಗಳನ್ನು ಜೋಡಿಸುತ್ತಿರುವ ಹುಬ್ಬಳ್ಳಿಯ ವಿಮಾನ ನಿಲ್ದಾಣ ಈಗ ರಾಜ್ಯದ ಮೊದಲ ಹಸಿರು ವಿಮಾನ ನಿಲ್ದಾಣವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನಂತೆ 2030ರೊಳಗೆ ಶೇ 50ರಷ್ಟು ಗ್ರೀನ್ ಎನರ್ಜಿಯತ್ತ ದೇಶ ಸಾಗಬೇಕಿದೆ. ಈ ನಿಟ್ಟಿನಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣ ಶೇ.100 ರಷ್ಟು ಅಂದರೆ ಸಂಪೂರ್ಣ ಸೌರಶಕ್ತಿಯ ಮೂಲಕ ಕಾರ್ಯನಿರ್ವಹಿಸಲಿದೆ.
ಸುಮಾರು 8MWp ಸೌರಶಕ್ತಿಯಿಂದ ವಿದ್ಯುತ್ ಶಕ್ತಿ ಉತ್ಪಾದಿಸುವ ಘಟಕದ ಸ್ಥಾಪನೆ ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಆರಂಭವಾಗಿದೆ. ಅದರ ಶೇಖರಣೆ ಹುಬ್ಬಳ್ಳಿಯಲ್ಲಿಯೇ ಆಗಲಿದೆ. ಶೇಖರಿಸಿದ ವಿದ್ಯುತ್ ಶಕ್ತಿಯನ್ನು ಬೆಳಗಾವಿ, ಮೈಸೂರು, ಬಳ್ಳಾರಿ, ಬೆಂಗಳೂರು ಹಾಗೂ ಇತರ ವಿಮಾನ ನಿಲ್ದಾಣಗಳಿಗೆ ಸರಬರಾಜು ಮಾಡಲಾಗುವುದು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.
2030ರ ಒಳಗೆ ದೇಶದ ವಿದ್ಯುತ್ ಶಕ್ತಿಯ ಉತ್ಪಾದನೇ ಕನಿಷ್ಠ 50% ನವೀಕರಿಸಬಹುದಾದ ಇಂಧನಗಳ ಮುಖಾಂತರ ಉತ್ಪಾದನೆ ಮಾಡುವ ಗುರಿ ಹೊಂದಲಾಗಿದೆ. ಆ ನಿಟ್ಟಿನಲ್ಲಿ ಹುಬ್ಬಳ್ಳಿಯ ವಿಮಾನ ನಿಲ್ದಾಣ ಈಗಾಗಲೇ ಸಂಪೂರ್ಣ ಸೌರಶಕ್ತಿಯಿಂದ ಕಾರ್ಯನಿರ್ವಹಿಸುವ ರಾಜ್ಯದ ಪ್ರಥಮ ವಿಮಾನ ನಿಲ್ದಾಣವಾಗಿದೆ.
ಪ್ರಲ್ಹಾದ ಜೋಶಿ ಸಂತಸ:
ಹುಬ್ಬಳ್ಳಿ ವಿಮಾನ ನಿಲ್ದಾಣವನ್ನು ರಾಜ್ಯದ ಮೊದಲ ಹಸಿರು ವಿಮಾನ ನಿಲ್ದಾಣವಾಗಿಸುವ ಅಭಿಲಾಷೆಗೆ ಬೆಂಬಲ ವ್ಯಕ್ತಪಡಿಸಿ ಸಹಕರಿಸಿದ ದೇಶದ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ.