

ಬೆಂಗಳೂರು: ಟೀಕೆ ಮಾಡುವುದರಿಂದ ನನಗೆ ಬೇಸರವಿಲ್ಲ. ನಾವು ತಪ್ಪು ಮಾಡಿದ್ದರೇ ಸರಿ ಮಾಡಿಕೊಳ್ಳೋಣ, ಅವರು ತಪ್ಪು ಮಾಡಿದ್ದರೆ ಅವರು ಸರಿ ಮಾಡಿಕೊಳ್ಳಲಿ. ಸಿನಿಮಾ ಇಲ್ಲದೇ ಬದುಕುವ ಶಕ್ತಿ ನನಗಿದೆ. ಅವರು ಬೆಳೆಯಬೇಕು ಎಂದರೆ ಸರ್ಕಾರ ಹಾಗೂ ಜನ ಬೇಕು ಎಂದು ಡಿಸಿಎಂ DK ಶಿವಕುಮಾರ್ ಹೇಳಿದರು.
ವಿಧಾನಸೌಧದ ಆವರಣದಲ್ಲಿ ಸುದ್ದಿಗಾರರ ಜತೆ ಮಂಗಳವಾರ ಪ್ರತಿಕ್ರಿಯೆ ನೀಡಿದರು. ಚಿತ್ರರಂಗದವರಿಗೆ ಆಹ್ವಾನವನ್ನೇ ಮಾಡಿಲ್ಲ ಎನ್ನುವ ನಾಗಭರಣ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಆಹ್ವಾನ ಮಾಡದೇ ಇರಬಹುದು. ಈ ಬಗ್ಗೆ ನಮ್ಮ ಇಲಾಖೆಯ ತಪ್ಪಿದೆಯೋ ಯಾರ ತಪ್ಪಿದೆ ಗೊತ್ತಿಲ್ಲ. ಆದರೆ ಈ ಕಾರ್ಯಕ್ರಮ ಅವರದ್ದು. ನನಗೆ ಗೊತ್ತು ಟೀಕೆ ಮಾಡುತ್ತಾರೆ ಎಂದು. ಆದರೆ ಎಚ್ಚರಿಕೆ ಕೊಡಬೇಕಲ್ಲವೇ? ಎಂದರು.
ನಟ್ಟು- ಬೋಲ್ಟ್ ವಿಚಾರವಾಗಿ ವಿಪಕ್ಷಗಳು ಟೀಕೆ ಮಾಡುತ್ತಿವೆ ಎಂದು ಕೇಳಿದಾಗ, “ಟೀಕೆ ಮಾಡಲಿ ಎಂದು ನಾನು ಹೇಳಿಕೆ ನೀಡಿದ್ದು. ನಾನು ಅವರಿಗೆಲ್ಲಾ ಎಷ್ಟು ಸಹಾಯ ಮಾಡಿದ್ದೇನೆ ಎನ್ನುವುದು ನನಗೆ ಗೊತ್ತಿದೆ. ಸಹಾಯ ತೆಗೆದುಕೊಂಡವರಿಗೆ ಗೊತ್ತಿದೆ. ನಾನು ಅವರಿಗೆ ರಾಜ್ಯದ ಹಿತಕ್ಕಾಗಿ ಹೇಳಿದ್ದೇನೆ. ನೆಲ, ಜಲ, ಭಾಷೆ ಉಳಿಯಬೇಕು. ಅಂತರಾಷ್ಟ್ರೀಯ ಚಲನಚಿತ್ರ ಉತ್ಸವ ಯಾರಿಗಾಗಿ ಮಾಡಿರುವುದು. ಚಿತ್ರರಂಗ ಬೆಳೆಯಲಿ ಎಂದು. ಅವರ ಕ್ಷೇತ್ರದ ಬಗ್ಗೆ ಅವರೇ ಪ್ರಚಾರ ಮಾಡಿಕೊಳ್ಳದೇ ಇದ್ದರೆ ನಾವು ಬೆಳಗ್ಗೆ ಸಂಜೆ ಪ್ರಚಾರ ಮಾಡಿಕೊಳ್ಳಲು ಆಗುತ್ತದೆಯೇ?” ಎಂದು ತಿರುಗೇಟು ನೀಡಿದರು.
ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಭೇಟಿ ಮಾಡಿದ ವಿಚಾರ ಕೇಳಿದಾಗ, "ನಾನು ಖರ್ಗೆ ಅವರನ್ನು ಭೇಟಿ ಮಾಡದೇ ಬಿಜೆಪಿ ಕಚೇರಿಗೆ ಭೇಟಿ ನೀಡಲೇ?. ಅವರು ರಾಷ್ಟ್ರದ ಅಧ್ಯಕ್ಷರು, ನಾನು ರಾಜ್ಯದ ಅಧ್ಯಕ್ಷ. ಅವರು ನಮ್ಮ ರಾಜ್ಯಕ್ಕೆ ಬಂದಾಗ ಹೋಗಿ ಭೇಟಿ ಮಾಡಿ ಗೌರವ ನೀಡುವುದು ನಮ್ಮ ಕೆಲಸ. ಪಕ್ಷದ ವಿಚಾರಗಳು, ನೂತನ ಕಾಂಗ್ರೆಸ್ ಕಚೇರಿಗೆ ಗುದ್ದಲಿ ಪೂಜೆ ಮಾಡುತ್ತಿದ್ದು, ಈ ತಿಂಗಳಿನಲ್ಲಿಯೇ ದಿನಾಂಕ ನೀಡಿ ಎಂದು ಮನವಿ ಮಾಡಲು ಹೋಗಿದ್ದೆ” ಎಂದರು.