

ಹರೀಶ್ ಬೇಲೂರು ಬೆಂಗಳೂರು
ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಪಡಿತರ ಪಡೆಯದ ಬಿಪಿಎಲ್ ಕಾರ್ಡ್ ರದ್ದತಿಗೆ ರಾಜ್ಯ ಸರ್ಕಾರ ತೆಗೆದುಕೊಂಡಿರುವ ಕ್ರಮದಿಂದ ಸರ್ಕಾರಿ ಸೌಲಭ್ಯದಿಂದಲೂ ವಂಚಿತಗೊಳ್ಳುವ ಆತಂಕ ಲಕ್ಷಾಂತರ ಕುಟುಂಬಗಳಿಗೆ ಎದುರಾಗಿದೆ.
ರಾಜ್ಯದಲ್ಲಿ 1,16,95,029 ಬಿಪಿಎಲ್, 24,17,131 ಎಪಿಎಲ್, 10,88,421 ಅಂತ್ಯೋದಯ ಸೇರಿ ಒಟ್ಟು 1,52,00,581 ರೇಷನ್ ಕಾರ್ಡ್ಗಳಿವೆ. ಒಟ್ಟು ಬಿಪಿಎಲ್ ಕಾರ್ಡ್ಗಳ ಪೈಕಿ 3.26 ಲಕ್ಷ ಕಾರ್ಡ್
ಗಳು 6 ತಿಂಗಳಿಂದ ರೇಷನ್ ಪಡೆಯುತ್ತಿಲ್ಲ ಎಂದು ಆಹಾರ ಇಲಾಖೆ ಹೇಳಿದ್ದು, ಅಂಥ ಕಾರ್ಡ್ಗಳ ರದ್ದತಿಗೆ ಸರ್ಕಾರ ಇಲಾಖೆಗೆ ಸೂಚನೆ ಕೊಟ್ಟಿದೆ. ಹೀಗಾಗಿ, ರೇಷನ್ ಪಡೆಯದ ಕಾರ್ಡ್ದಾರರಿಗೆ ಯಾವುದೇ ನೋಟಿಸ್ ನೀಡದೆ ಏಕಾಏಕಿ ಕಾರ್ಡ್ಗಳನ್ನು ರದ್ದು ಮಾಡಲು ಇಲಾಖೆ ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದು, ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ.
ಹೃದಯ ಸಮಸ್ಯೆ, ಕ್ಯಾನ್ಸರ್ ಸೇರಿ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು, ಪಿಂಚಣಿ ಹಾಗೂ ಆರ್ಟಿಇ ಅಡಿ ಶಿಕ್ಷಣ ಸೇರಿ ಇತರ ಸರ್ಕಾರಿ ಸೌಕರ್ಯ ಪಡೆದುಕೊಳ್ಳುವ ನಿಟ್ಟಿನಲ್ಲಿ ಲಕ್ಷಾಂತರ ಮಂದಿ ಬಿಪಿಎಲ್ ಕಾರ್ಡ್ ಮಾಡಿಸಿಕೊಂಡಿರುತ್ತಾರೆ. ಅದರಂತೆ, ಬಿಪಿಎಲ್ ಮೂಲಕ ವಿವಿಧ ಸರ್ಕಾರಿ ಸೌಲಭ್ಯವನ್ನು ಪಡೆಯುತ್ತಿದ್ದಾರೆ. ಒಂದಿಲ್ಲೊಂದು ಕಾರಣದಿಂದ ಕೆಲವರು ಪಡಿತರ ಪಡೆಯುತ್ತಿಲ್ಲ. ಇದರಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಪ್ರತಿ ತಿಂಗಳು 50 ಲಕ್ಷ ರೂ.ನಂತೆ ವರ್ಷಕ್ಕೆ 60 ಕೋಟಿ ರೂ. ಉಳಿತಾಯವಾಗುತ್ತದೆ. ಹೀಗಿದ್ದರೂ, ಪಡಿತರ ಪಡೆಯದವರಿಗೆ ನೋಟಿಸ್ ನೀಡದೆ ಏಕಾಏಕಿ ಕಾರ್ಡ್ ರದ್ದತಿ ಸರಿಯಲ್ಲ ಎಂಬ ಅಭಿಪ್ರಾಯವೂ ಕೇಳಿಬಂದಿದೆ.
ಧನಭಾಗ್ಯದಿಂದಲೂ ವಂಚಿತ: ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್, ಐದು ಗ್ಯಾರಂಟಿಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆಯಡಿ ಕಾರ್ಡ್ದಾರರಿಗೆ 10 ಕೆಜಿ ಅಕ್ಕಿ ವಿತರಿಸುವುದಾಗಿ ಘೋಷಿಸಿತ್ತು. ಆದರೆ, ಸಮರ್ಪಕವಾಗಿ ಅಕ್ಕಿ ಸಿಗದ ಕಾರಣ ಅಕ್ಕಿ ಬದಲಿಗೆ ಹಣ ನೀಡುವ ವ್ಯವಸ್ಥೆಯನ್ನು ಜು.10ರಿಂದ ಜಾರಿಗೆ ತಂದಿದ್ದು, ಈ ಸೌಲಭ್ಯ ಪಡೆಯಲು ಕಾರ್ಡ್ ಹೊಂದಿರುವ ಕುಟುಂಬಗಳು ಮೂರು ತಿಂಗಳಲ್ಲಿ ಒಂದು ತಿಂಗಳಾದರೂ ನ್ಯಾಯಬೆಲೆ ಅಂಗಡಿಗಳಲ್ಲಿ ರೇಷನ್ ಪಡೆಯಬೇಕು. ಇಲ್ಲದಿದ್ದರೆ, ಹಣ ಸಿಗುವುದಿಲ್ಲ. ರೇಷನ್ ಪಡೆಯದ ಅಂದಾಜು 8 ಲಕ್ಷ ಬಿಪಿಎಲ್ ಕಾರ್ಡ್ ಕುಟುಂಬಗಳು ನೇರ ನಗದು ವ್ಯವಸ್ಥೆಯಿಂದ ವಂಚಿತವಾಗಿವೆ.
ಕಮಿಷನ್ ಕೂಡ ಖೋತಾ: ಆಹಾರ ಭದ್ರತೆ ಕಾಯ್ದೆಯಡಿ (ಎನ್ಎಫ್ಎಸ್ಎ) ಕೇಂದ್ರ ಸರ್ಕಾರ, ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ರಾಜ್ಯದ ಬಿಪಿಎಲ್ ಫಲಾನುಭವಿಗಳಿಗೆ, ಅಂತ್ಯೋದಯ ಕಾರ್ಡ್ ದಾರರಿಗೆ ಉಚಿತವಾಗಿ ಅಕ್ಕಿ ನೀಡುತ್ತಿದೆ. ಇದರಿಂದ ನ್ಯಾಯಬೆಲೆ ಅಂಗಡಿಗಳ ವರ್ತಕರಿಗೆ ಕ್ವಿಂಟಲ್ಗೆ 100 ರೂ. ಕಮಿಷನ್ ಸಿಗುತ್ತಿದೆ. ಎಷ್ಟು ಆದರೆ, ರಾಜ್ಯ ಸರ್ಕಾರ ಅಕ್ಕಿ ಬದಲು ಹಣ ನೀಡುತ್ತಿದ್ದು, ವರ್ತಕರಿಗೆ ಸಿಗಬೇಕಿದ್ದ ಕಮಿಷನ್ ಸಿಗದಂತಾಗಿದೆ. ಪಡಿತರ ಪಡೆಯದ ಕಾರ್ಡ್ಗಳನ್ನು ರದ್ದುಪಡಿಸಿದರೆ ನ್ಯಾಯಬೆಲೆ ಅಂಗಡಿಗಳು ಹೊಂದಿರುವ ಕಾರ್ಡ್ಗಳ ಸಂಖ್ಯೆಯೂ ಕಡಿಮೆಯಾಗುತ್ತದೆ. ಜತೆಗೆ, ಕಮಿಷನ್ ಹಣವೂ ಖೋತಾವಾಗುತ್ತದೆ.
ಯಾವುದೇ ಕಾರಣಕ್ಕೂ ಪಡಿತರ ಪಡೆಯದ ಬಿಪಿಎಲ್ ಕಾರ್ಡ್ ರದ್ದುಪಡಿಸಬಾರದು. ಮೊದಲು ನೋಟಿಸ್ ಕೊಟ್ಟು ಒಂದೆರಡು ತಿಂಗಳು ಕಾಲಾವಕಾಶ ನೀಡಬೇಕು. ಆಗಲೂ ರೇಷನ್ ಪಡೆಯದಿದ್ದರೆ ಕಾರ್ಡ್ ರದ್ದುಪಡಿಸಲಿ. ಏಕಾಏಕಿ ಕಾರ್ಡ್ಗಳ ರದ್ದತಿ ತೀರ್ವನದಿಂದ ಲಕ್ಷಾಂತರ ಕುಟುಂಬಗಳಿಗೆ ಅನ್ಯಾಯವಾಗುತ್ತದೆ. ಜತೆಗೆ ನ್ಯಾಯಬೆಲೆ ಅಂಗಡಿಗಳು ಹೊಂದಿರುವ ಕಾರ್ಡ್ಗಳ ಸಂಖ್ಯೆಯೂ ಕುಸಿತವಾಗಲಿದೆ.
| ಟಿ.ಕೃಷ್ಣಪ್ಪ ರಾಜ್ಯ ಸರ್ಕಾರಿ ಪಡಿತರ ವಿತರಕ ಸಂಘದ ಅಧ್ಯಕ್ಷ