More

    ಅನುರಣಿಸಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಜೀವನ ಸಾಧನೆ; ಮನಸೂರೆಗೊಂಡ ಜಯಹೇ ನಾಲ್ವಡಿ ಹಾಡು ಹಬ್ಬ

    ಮೈಸೂರು: ನವ ಮೈಸೂರಿನ ನಿರ್ವತೃ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಅರಮನೆ ಆವರಣದ ದಸರಾ ಸಾಂಸ್ಕೃತಿಕ ಕಾರ್ಯಕ್ರಮದ ಭವ್ಯ ವೇದಿಕೆಯಲ್ಲಿ ಸಂಗೀತ ನಿರ್ದೇಶಕ ‘ನಾದಬ್ರಹ್ಮ’ ಹಂಸಲೇಖ ನೇತೃತ್ವದ ತಂಡ ಗೀತೆಗಳ ಮೂಲಕ ನಮನ ಸಲ್ಲಿಸಿದ ‘ಜಯಹೇ ನಾಲ್ವಡಿ ಹಾಡು ಹಬ್ಬ’ ಮನಸೂರೆಗೊಂಡಿತು.

    ನಂ.1 ಕನ್ನಡ ದಿನಪತ್ರಿಕೆ ‘ವಿಜಯವಾಣಿ’ ಮಾಧ್ಯಮ ಸಹಯೋಗ ನೀಡಿದ್ದ ಈ ಅಪರೂಪದ ಕಾರ್ಯಕ್ರಮದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹುಟ್ಟು, ಬೆಳವಣಿಗೆ ಹಾಗೂ ಸಾಧನೆಯನ್ನು ಹಂಸಲೇಖ ಅವರು ಹಾಡಿನ ಮೂಲಕ ಕಟ್ಟಿಕೊಡಲು ನಡೆಸಿದ ವಿಶೇಷ ಪ್ರಯತ್ನ ಪ್ರತಿಯೊಬ್ಬರ ಹೃದಯವನ್ನು ಗೆದ್ದಿತು. ಹಾಡು ಹಾಗೂ ನೃತ್ಯದ ಮೂಲಕ ನಾಲ್ವಡಿ ಅವರನ್ನು ಜನತೆಯ ಕಣ್ಣ ಮುಂದೆ ತರುವ ವಿಶೇಷ ಪ್ರಯತ್ನವನ್ನು ಹಂಸಲೇಖ ಮಾಡಿದರು. ರಾತ್ರಿ 7.50 ರಿಂದ 9.44ರವರೆಗೆ ನಾಲ್ವಡಿ ಕುರಿತ ವಿಶೇಷ ಕಾರ್ಯಕ್ರಮ ಅರ್ಥಪೂರ್ಣವಾಗಿ ಮೂಡಿಬಂತು.

    ಹಂಸಲೇಖ ಅವರು ಮಿಲಿಟರಿ ಬ್ಯಾಂಡ್​ನೊಂದಿಗೆ ಸಂಯೋಜಿಸಿದ ನಾಡಗೀತೆಯನ್ನು ಗಾಯಕರು ಹಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪೊಲೀಸ್ ವೇಷ ತೊಟ್ಟ ಕಲಾವಿದರು ನಾಡಗೀತೆಗೆ ಅದ್ಭುತವಾಗಿ ಹೆಜ್ಜೆ ಹಾಕಿದರು. ನಂತರ ದಸರಾ ಕುರಿತು ರಚಿಸಿದ ‘ಬೊಂಬೆ ಬೊಂಬೆ ನಾನು ಮೈಸೂರು ದಸರಾ ಬೊಂಬೆ…’ ಹಾಡಿಗೆ ಕಲಾವಿದರು ಬೊಂಬೆಗಳ ವೇಷ ತೊಟ್ಟ ನೃತ್ಯ ಪ್ರದರ್ಶನ ನೀಡಿದರು.

    ರಾಜಮಾತೆ ಕೆಂಪನಂಜಮ್ಮಣಿ ವಾಣಿವಿಲಾಸ ಸನ್ನಿಧಾನ ಅವರು ನಾಲ್ವಡಿ ಕೃಷ್ಣರಾಜ ಒಡೆಯರ್ ಬಾಲಕರಾಗಿದ್ದಾಗ ‘ನಿನ್ನ ಕನಸು?’ ಎಂದು ಪ್ರಶ್ನಿಸುತ್ತಾರೆ. ಆ ಸಂದರ್ಭ ‘ನನ್ನ ಮೊದಲ ಕನಸು ಕನ್ನಡ…’ ಎಂದು ನಾಲ್ವಡಿ ಹೇಳುತ್ತಾರೆ. ಈ ಸನ್ನಿವೇಶಕ್ಕೆ ಪೂರಕವಾಗಿ ಈ ಕನ್ನಡ ಮಣ್ಣನು ಮರಿಬೇಡ ಓ ಅಭಿಮಾನಿ… ಹಾಡಿಗೆ ಕಲಾವಿದರು ನಯನ ಮನೋಹರವಾಗಿ ನೃತ್ಯ ಪ್ರದರ್ಶಿದರು.

    ನಾಲ್ವಡಿ ಅವರ ಅಣೆಕಟ್ಟೆ ನಿರ್ಮಾಣ ಮಾಡುವ ಕನಸು ಕುರಿತು ‘ನೋಡಮ್ಮ ಕಾವೇರಿ ನೀ ಇಲ್ಲಿ ಹುಟ್ಟೋದು ಲೋಕದ ಸಲುವಾಗಿ, ಅಣೆಕಟ್ಟು ಕಟ್ಟಬೇಕು…’ ಗೀತೆ ಹಾಗೂ ಬಂಗಾರವನ್ನು ಮನೆಯಿಂದ ತಂದು ಅಡಮಾನವಿಟ್ಟು ನೀರಲ್ಲಿ ಸುರಿದ… ಎಂಬ ಮತ್ತೊಂದು ಗೀತೆ ನಾಲ್ವಡಿ ಅವರು ಅಣೆಕಟ್ಟೆ ನಿರ್ವಣಕ್ಕೆ ವಹಿಸಿದ ಪರಿಶ್ರಮವನ್ನು ತೆರೆದಿಟ್ಟಿತು.

    nalwadi

    ಪ್ರತಿಮಾದೇವಿಯೊಂದಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ವಿವಾಹವವನ್ನು ನೆನಪಿಸುವ ಗೀತೆ ‘ಎಲೆ ಹೊಂಬಿಸಿಲೆ ಎಲೆ ತಂಬಿರೆಲೆ ಇಂಥ ಜೋಡಿನ ಎಲ್ಲಾದರೂ ಕಂಡಿರಾ…’ ಹಾಡಿಗೆ ನೃತ್ಯ ಸಂಯೋಜನೆ ಮನಮೋಹಕವಾಗಿತ್ತು. ಶಿವನಸಮುದ್ರದಲ್ಲಿ ವಿದ್ಯುತ್ ಉತ್ಪಾದಿಸಬೇಕೆಂಬ ನಾಲ್ವಡಿ ಅವರ ಕನಸು ಸಾಕಾರಗೊಂಡ ಕುರಿತು ರಚಿಸಿದ ‘ಬಂತು ಬಂತು ಕರೆಂಟು ಬಂತು ಕನ್ನಡ ನಾಡಿನಲ್ಲಿ ಸುಂದರ ರಾತ್ರಿಯಲ್ಲಿ…’ ಹಾಡಿಗೆ ಜನರು ಕರತಾಡನದ ಮೂಲಕ ಹರ್ಷ ವ್ಯಕ್ತಪಡಿಸಿದರು.

    ದಸರಾ ವೈಭವವನ್ನು ‘ಕೂರಕ್ ಕುಕ್ಕರಹಳ್ಳಿ ಕೆರೆ ತೇಲಕ್ ಕಾರಂಜಿ ಕೆರೆ ದಸರೆಗೆ… ಮೈಸೂರು ದಸರೆಗೆ…’ ಹಾಡಿನ ಮೂಲಕ ಕಟ್ಟಿಕೊ ಟ್ಟರು. ಶೋಷಿತರು ಸೇರಿದಂತೆ ಪ್ರತಿಯೊಬ್ಬರಿಗೂ ಶಿಕ್ಷಣ ನೀಡಬೇಕು ಎಂಬ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದಿಟ್ಟ ನಿಲುವನ್ನು ‘ ಬಾ ಬಾರೋ ರಣಧೀರ ಬಾ ಬಾರೋ ಪ್ರೀತಿಯ ಸರದಾರ…’ ಹಾಡಿನ ಮೂಲಕ ಕೊಂಡಾಡಲಾಯಿತು. ಸಂವಿಧಾನ ಪೀಠಿಕೆಯ ಹಾಡು ಗಮನ ಸೆಳೆಯಿತು.

    ಹಂಸಲೇಖ ತಂಡದಿಂದ ಹಾಡಿನ ಮೋಡಿ

    ‘ಜಯಹೇ ನಾಲ್ವಡಿ ಹಾಡು ಹಬ್ಬ’ ಮುಕ್ತಾಯದ ನಂತರ ಒಂದು ಗಂಟೆಯ ಕಾಲ ಸಂಗೀತ ನಿರ್ದೇಶಕ ಹಂಸಲೇಖ ತಂಡದಿಂದ ನಡೆದ ಗಾಯನ ಕಾರ್ಯಕ್ರಮ ಮುದ ನೀಡಿತು.

    ಜಗವೇ ಒಂದು ರಣರಂಗ ಧೈರ್ಯ ಇರಲಿ ನಿನ್ನ ಸಂಗ…, ಚೆಲುವೆ ಒಂದು ಕೇಳ್ತೀನಿ ಇಲ್ಲ ಅಂದೆ ಕೊಡ್ತೀಯಾ…, ಓ ಮೇಘವೇ ಮೇಘವೇ ಹೋಗಿ ಬಾ ಈ ಓಲೆಯ ಅವಳಿಗೆ ನೀಡಿ ಬಾ…, ಪ್ರೀತಿ ಮಾಡಬಾರದು ಮಾಡಿದರೆ ಜಗಕೆ ಹೆದರಬಾರದು…, ನಿಮ್ ಕಡಿ ಸಾಂಬಾರ್ ಅಂದ್ರೆ ನಮ್ ಕಡಿ ತಿಳಿಯೋದಿಲ್ಲ, ನಮ್ ಕಡಿ ಡಾಂಬರ್ ಅಂದ್ರೆ ನಿಮ್ ಕಡಿ ತಿಳಿಯೋದಿಲ್ಲ… ಸೇರಿದಂತೆ ವಿವಿಧ ಹಾಡುಗಳನ್ನು ಹಾಡಿ ರಂಜಿಸಿದರು.

    ವಿಷ್ಣುವರ್ಧನ್ ಹಾಗೂ ವಿನಯಾ ಪ್ರಕಾಶ್ ಅಭಿನಯದ ‘ಸಾಮ್ರಾಟ್’ ಚಿತ್ರದ ನಿಮ್ ಕಡಿ ಸಾಂಬಾರ್ ಅಂದ್ರೆ ನಮ್ ಕಡಿ ತಿಳಿಯೋದಿಲ್ಲ ಹಾಡನ್ನು ಮಾಲ್ಗುಡಿ ಶುಭಾ ಹಾಡಿದ್ದರು. ಅವರು ಇದೇ ಪ್ರಥಮ ಬಾರಿಗೆ ವೇದಿಕೆ ಕಾರ್ಯಕ್ರಮವೊಂದರಲ್ಲಿ ಈ ಹಾಡನ್ನು ಮೈಸೂರು ದಸರಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹಾಡಿದ್ದು ವಿಶೇಷವಾಗಿತ್ತು. ಅಲ್ಲದೆ, ಕಾರ್ಯಕ್ರಮದಲ್ಲಿ ವಿನಯಾ ಪ್ರಕಾಶ್ ಈ ಹಾಡಿನ ಒಂದೆರಡು ಸಾಲನ್ನು ಹಾಡುವ ಮೂಲಕ ರಂಜಿಸಿದರು. ನಟಿ ವಿನಯಾ ಪ್ರಕಾಶ್ ನಿರೂಪಣೆಯ ಮೂಲಕ ಜನರ ಮನಗೆದ್ದರು. ಗಾಯಕರಾದ ದಾಮೋದರ್, ಮಾಲ್ಗುಡಿ ಶುಭಾ, ಹೇಮಂತ್, ಲತಾ ಹಂಸಲೇಖ, ಪೃಥ್ವಿ ಭಟ್, ದರ್ಶನ್ ಹಾಗೂ ಸುಪ್ರಿಯಾ ಹಾಡಿನ ಮೂಲಕ ಮೋಡಿ ಮಾಡಿದರು.

    ಹಲವಾರು ರಾಜಮಹಾರಾಜರ ಜೀವನ ಚರಿತ್ರೆ ವೆಬ್ ಸೀರೀಸ್​ನಲ್ಲಿ ಬಂದಿದೆ. ಅದೇ ರೀತಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ವೆಬ್ ಸೀರೀಸ್ ನಿರ್ವಣಗೊಳ್ಳಬೇಕಾಗಿದೆ. ಕನಿಷ್ಠ 20 ಕಂತುಗಳಲ್ಲಿ ಈ ವೆಬ್ ಸೀರೀಸ್ ಹೊರ ತರಬಹುದು. ಈ ನಿಟ್ಟಿನಲ್ಲಿ ಯಾರಾದರೂ ಪ್ರಯತ್ನ ನಡೆಸಬೇಕು. ಆ ಮೂಲಕ ನಾಲ್ವಡಿ ಅವರು ನಾಡಿಗೆ ನೀಡಿರುವ ಕೊಡುಗೆಯನ್ನು ಜಗತ್ತಿಗೆ ತಿಳಿಸುವ ಕಾರ್ಯ ಆಗಬೇಕು.

    | ಹಂಸಲೇಖ, ಸಂಗೀತ ನಿರ್ದೇಶಕ

    ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸಾಧನೆಯನ್ನು ಸಂಗೀತ ನಿರ್ದೇಶಕ ಹಂಸಲೇಖ ತೆರೆದಿಟ್ಟಿದ್ದಾರೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ರಾಜಾಡಳಿತದಲ್ಲಿಯೇ ಪ್ರಜಾಪ್ರಭುತ್ವದ ಮಾದರಿಯ ಆಡಳಿತ ನೀಡಿದವರು. ಸಂವಿಧಾನ ಬರುವ ಮೊದಲೇ ಅವರು ಜನರ ಬದುಕು ಹಸನುಗೊಳಿಸಿದರು. ಅವರು ಎಲ್ಲರನ್ನೂ ಒಳಗೊಂಡ ಆಡಳಿತ ನೀಡಿದ ಅಪರೂಪದ ಮಹಾರಾಜ.

    | ಡಾ.ಎಚ್.ಸಿ. ಮಹದೇವಪ್ಪ, ಜಿಲ್ಲಾ ಉಸ್ತುವಾರಿ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts