ಕಾರ್ಗಿಲ್​ ವಿಜಯೋತ್ಸವಕ್ಕೆ 21 ವರ್ಷ: ಈಗಲೂ ಇಮ್ಮಡಿಸುತ್ತದೆ ಉತ್ಸಾಹ

Kargil 3
Published on

‘ಕಾರ್ಗಿಲ್ ರಣಭೂಮಿಯಲ್ಲಿ ಭಾರತ ಪಾಕಿಸ್ತಾನವನ್ನು ಬಗ್ಗುಬಡಿದು ದಿಗ್ವಿಜಯ ಸಾಧಿಸಿದ ಮಹಾದಿನಕ್ಕೆ ಇಂದಿಗೆ ಬರೋಬ್ಬರಿ 21 ವರ್ಷ. ‘ಆಪರೇಷನ್ ವಿಜಯ್’ ಹೆಸರಲ್ಲಿ ಪಾಕಿಸ್ತಾನದ ವಿರುದ್ಧ 1999ರಲ್ಲಿ ಭಾರತೀಯ ಸೇನೆ ಸುಮಾರು 60 ದಿನಗಳ ಕಾರ್ಯಾಚರಣೆ ನಡೆಸಿತ್ತು. ಅದರಲ್ಲಿ ಭಾರತ ವಿಜಯ ಸಾಧಿಸುವುದರೊಂದಿಗೆ ಜುಲೈ 26ರಂದು ಯುದ್ಧ ಕೊನೆಗೊಂಡಿತ್ತು. ಯುದ್ಧದಲ್ಲಿ ಪಾಲ್ಗೊಂಡು ವಿಜಯದುಂದುಭಿ ಮೊಳಗಿಸಿದ ಕರ್ನಾಟಕದ ವೀರಯೋಧರು ತಮ್ಮ ಆ ರಣರೋಚಕ ಅನುಭವಗಳನ್ನು ವಿಜಯವಾಣಿ ಓದುಗರಿಗಾಗಿ ಹಂಚಿಕೊಂಡಿದ್ದಾರೆ.

ಮದ್ರಾಸ್ ರೆಜಿಮೆಂಟ್​ನ 19ನೇ ಬೆಟಾಲಿಯನ್ ಸಿಪಾಯಿಯಾಗಿ ನನ್ನನ್ನು ಸೇನಾಧಿಕಾರಿಗಳು ಪೂಂಚ್ ಸೆಕ್ಟರ್​ಗೆ ಪೋಸ್ಟಿಂಗ್ ಮಾಡಿ ಕೆಲ ತಿಂಗಳಷ್ಟೇ ಆಗಿತ್ತು. ಎಲ್​ಒಸಿ ಬಳಿ ನಮ್ಮ ಬೆಟಾಲಿಯನ್ ಕಾರ್ಯನಿರ್ವಹಿಸುತ್ತಿತ್ತು. ಅದೊಂದು ದಿನ ತಡರಾತ್ರಿ ಪೂಂಚ್ ಸೆಕ್ಟರ್​ನ ಎಲ್​ಒಸಿಯಿಂದ ನಮ್ಮ ಬೆಟಾಲಿಯನ್​ನ ನಾಲ್ವರು ಸೈನಿಕರು ರಜೆ ಮೇಲೆ ತೆರಳುವವರಿದ್ದರು. ಆ ನಾಲ್ವರು ಎಲ್​ಒಸಿಯಿಂದ ಬಂಕರ್​ಗೆ ಹೊರಟರು. ನಾವು ಸುಮಾರು 20 ಸಿಪಾಯಿಗಳು ಒಟ್ಟಿಗೆ ಬಂಕರ್​ನತ್ತ ಸಣ್ಣ ಬ್ಯಾಟರಿಯೊಂದಿಗೆ ಹೆಜ್ಜೆ ಹಾಕಿದೆವು.

ಅದು ಹೇಗೋ ಉಗ್ರರಿಗೆ ಸುಳಿವು ಸಿಕ್ಕಿತ್ತು. ಐದಡಿ ದೂರದ ಏನೂ ಕಾಣದ ಆ ಜಾಗದಲ್ಲಿ ನಮ್ಮ ಮೇಲೆ ಉಗ್ರರಿಂದ ಗುಂಡಿನ ದಾಳಿ ಆರಂಭವಾಯಿತು. ನಾವು ಅಂದಾಜಿನ ಮೇಲೆ ಗುಂಡು ಹಾರಿಸಿದೆವು. ಆದರೆ ಈ ಕಾಳಗದಲ್ಲಿ ನಮ್ಮ ಇಬ್ಬರು ಸೈನಿಕರನ್ನು ಸಾಯಿಸಿದ್ದ ಉಗ್ರರು ಅವರ ತಲೆ ಕತ್ತರಿಸಿದ್ದರು. ಆ ಪೈಕಿ ಕೊಡಗಿನ ಸೆಬಾಸ್ಟಿಯನ್ ಎಂಬುವರ ರುಂಡ ಕೊಂಡೊಯ್ದಿದ್ದರು. ಗಾಢ ಕತ್ತಲಿದ್ದ ಕಾರಣ ನಾವು ಅಸಹಾಯಕ ಸ್ಥಿತಿಯಲ್ಲಿದ್ದೆವು, ನಮ್ಮ ಪ್ರಾಣ ಉಳಿಸಿಕೊಳ್ಳುವುದೇ ಕಷ್ಟವಾಗಿತ್ತು. ಅದೊಂದು ಘಟನೆ ಇಂದಿಗೂ ನನ್ನ ಸೇನಾ ಜೀವನದ ಕಹಿ ಘಟನೆಯಾಗಿ ಉಳಿದಿದೆ. ಆದರೆ ನಾನೂ ಆಪರೇಷನ್ ವಿಜಯ್ನ ಭಾಗವಾಗಿದ್ದೆ ಎಂಬ ಹೆಮ್ಮೆ ಈಗಲೂ ನನ್ನ ಉತ್ಸಾಹ ಇಮ್ಮಡಿಸುತ್ತದೆ.

| ಎನ್.ಡಿ. ಕಿಶೋರ್ ಕುಮಾರ್ ನಿವೃತ್ತ ಸೈನಿಕ, ಭೈರಾಪುರ, ಸಾಗರ ತಾಲೂಕು ಶಿವಮೊಗ್ಗ ಜಿಲ್ಲೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net