ಕಾರ್ಗಿಲ್​ ವಿಜಯೋತ್ಸವಕ್ಕೆ 21 ವರ್ಷ: ನೋವು ಮರೆಸಿದ ‘ಕಾರ್ಗಿಲ್’ ಗೆಲುವು

Kargil 2
Published on

‘ಕಾರ್ಗಿಲ್ ರಣಭೂಮಿಯಲ್ಲಿ ಭಾರತ ಪಾಕಿಸ್ತಾನವನ್ನು ಬಗ್ಗುಬಡಿದು ದಿಗ್ವಿಜಯ ಸಾಧಿಸಿದ ಮಹಾದಿನಕ್ಕೆ ಇಂದಿಗೆ ಬರೋಬ್ಬರಿ 21 ವರ್ಷ. ‘ಆಪರೇಷನ್ ವಿಜಯ್’ ಹೆಸರಲ್ಲಿ ಪಾಕಿಸ್ತಾನದ ವಿರುದ್ಧ 1999ರಲ್ಲಿ ಭಾರತೀಯ ಸೇನೆ ಸುಮಾರು 60 ದಿನಗಳ ಕಾರ್ಯಾಚರಣೆ ನಡೆಸಿತ್ತು. ಅದರಲ್ಲಿ ಭಾರತ ವಿಜಯ ಸಾಧಿಸುವುದರೊಂದಿಗೆ ಜುಲೈ 26ರಂದು ಯುದ್ಧ ಕೊನೆಗೊಂಡಿತ್ತು. ಯುದ್ಧದಲ್ಲಿ ಪಾಲ್ಗೊಂಡು ವಿಜಯದುಂದುಭಿ ಮೊಳಗಿಸಿದ ಕರ್ನಾಟಕದ ವೀರಯೋಧರು ತಮ್ಮ ಆ ರಣರೋಚಕ ಅನುಭವಗಳನ್ನು ವಿಜಯವಾಣಿ ಓದುಗರಿಗಾಗಿ ಹಂಚಿಕೊಂಡಿದ್ದಾರೆ.

‘ಊರಿಗೆ 36 ದಿನ ರಜೆಯಲ್ಲಿ ಬಂದು 7 ದಿನ ಕಳೆಯುತ್ತಿದ್ದಾಗಲೇ, ‘ತಕ್ಷಣ ಶ್ರೀನಗರಕ್ಕೆ ಬಂದು ಕರ್ತವ್ಯಕ್ಕೆ ಹಾಜರಾಗುವುದು’ ಎಂದು ಸೇನೆಯ ಟೆಲಿಗ್ರಾಂ ಬಂದಿತ್ತು. ಅಲ್ಲಿಗೆ ತಲುಪುವ ತನಕವೂ ಕಾರ್ಗಿಲ್ ಕದನದ ಸುಳಿವೂ ಇರಲಿಲ್ಲ’ ಹೀಗೆ 20 ವರ್ಷಗಳ ಹಿಂದಿನ ಕಾರ್ಗಿಲ್ ಯುದ್ಧ ನೆನಪಿಸಿಕೊಂಡವರು ನಿವೃತ್ತ ಯೋಧ, ಪ್ರಸಕ್ತ ಬ್ಯಾಂಕ್ ಉದ್ಯೋಗಿ ಮಂಗಳೂರಿನ ಕುಂಪಲ ನಿವಾಸಿ ಪ್ರವೀಣ್ ಶೆಟ್ಟಿ.

ಕಣ್ಣೆದುರೇ ಉರುಳಿದರು: ತೊಲೊಲಿಂಗ್​ನಲ್ಲಿ ಪ್ರಥಮ ದಾಳಿಗೆ ನಮ್ಮ ಸೆಕೆಂಡ್ ರಜ್​ಪುತ್ ರೈಫಲ್ ತಂಡ ಸಾಥ್ ನೀಡಿತು. ಮುಂದೆ ಕಾಲ್ನಡಿಗೆಯಲ್ಲಿ ಸಾಗುವ ಇನ್ಪೆಂಟ್ರಿ ದಳ, ಅದರ ಹಿಂದೆ ಗನ್ ದಾಳಿ ನಡೆಸುವ ನಮ್ಮ ಆರ್ಟರಿ ರೆಜಿಮೆಂಟ್. ಶತ್ರುಗಳಿರುವ ಸ್ಥಳ ಅಂದಾಜಿಸಿ ಗನ್ ದಾಳಿ ನಡೆಸುವುದು, ಗನ್ ಸಿಡಿಯುವ ಸಂದರ್ಭದ ಸುಮಾರು 10 ಸೆಕೆಂಡುಗಳ ಶೂನ್ಯ ಸಮಯದಲ್ಲಿ ಎದುರಿನ ಹೊಂಡಗಳಲ್ಲಿ ಅವಿತುಕೊಳ್ಳುವುದು ಸಾಗಿತ್ತು. ರಾತ್ರಿ ಸುಮಾರು 9 ಗಂಟೆಗೆ ಶತ್ರುಗಳಿಂದ ಕೇವಲ 500 ಮೀ. ದೂರದಲ್ಲಿ ಇರುವಾಗ ಅನಾಹುತ ಸಂಭವಿಸಿತು. ರಾತ್ರಿಯಲ್ಲೂ ಹಗಲಿನಂತೆ ಚಿತ್ರಣ ಒದಗಿಸಬಲ್ಲ ಬೈನಾಕುಲರ್​ನಲ್ಲಿ ಗಮನಿಸುತ್ತ ಎದುರಿಗಿದ್ದ ಒಬ್ಬ ಅಧಿಕಾರಿ ಇದ್ದಕ್ಕಿದ್ದಂತೆ ಕುಸಿದರು. ಅವರ ಹಣೆಗೆ ನೇರ ಫೈರಿಂಗ್ ಆಗಿತ್ತು. ಕೆಲವೇ ಕ್ಷಣಗಳಲ್ಲಿ ತೆವಳುತ್ತ ಸಾಗುತ್ತಿದ್ದ ಇನ್ನೊಬ್ಬ ಫೀಲ್ಡ್ ಮೇಜರ್ ಶತ್ರುಗಳ ಗುಂಡಿಗೆ ಬಲಿಯಾದರು.ಸ್ವಲ್ಪ ಹಿರಿಯರಾಗಿದ್ದ ಅವರು ಆಯಾಸ ಮರೆಸಲು ದೇಹ ಭೂಮಿಯಿಂದ ಸ್ವಲ್ಪ ಮೇಲೆತ್ತಿದ್ದೇ ತಪ್ಪಾಯಿತು.

ಶತ್ರುಗಳ ಬಂಕರ್​ಗೆ ನುಗ್ಗಿದ ಧೀರ: ಶತ್ರುಗಳ ಬಂಕರ್​ಒಳಗಿನಿಂದ ನಮ್ಮೆಡೆಗೆ ನಿರಂತರ ಗುಂಡು ಹಾರುತ್ತಿದ್ದರೂ ಹರಿಯಾಣದ ಪ್ರವೀಣ್ ಕುಮಾರ್ ಸಿಂಗ್ ಏಕಾಂಗಿಯಾಗಿ ಬಂಕರ್ ಪ್ರವೇಶಿಸಿದ್ದರು. ಇತರ ಸೈನಿಕರು ಬಂಕರ್​ಗೆ ನುಗ್ಗುವಷ್ಟರಲ್ಲಿ 18 ಗುಂಡುಗಳು ಪ್ರವೀಣ್ ದೇಹ ಪ್ರವೇಶಿಸಿದ್ದವು. ಒಬ್ಬ ಎದುರಾಳಿ ರೈಫಲ್​ನ ಬಯೊನೆಟ್(ಚೂರಿ) ಅವರ ದೇಹಕ್ಕೇ ನುಗ್ಗಿಸಿದ್ದ. ಈ ಕಾರ್ಯಾಚರಣೆಯಲ್ಲಿ 49 ಶತ್ರುಗಳನ್ನು ನಾಶ ಮಾಡಿದೆವು. ನಮ್ಮ ತಂಡದಲ್ಲಿದ್ದ ಇಬ್ಬರು ಅಧಿಕಾರಿ, ಒಬ್ಬ ಜೂನಿಯರ್ ಕಮಾಂಡಿಂಗ್ ಆಫೀಸರ್ ಹಾಗೂ ಜವಾನರು ಅಲ್ಲಿ ಹುತಾತ್ಮರಾದರು. ದ್ವಿತೀಯ ರಜಪೂತ ಕಂಪನಿಯ ಒಂದು ತಂಡ ನಿರ್ದಿಷ್ಟ ಕೆಲಸ ಮುಗಿಸಿ ರಾತ್ರಿ ದೆಹಲಿಗೆ ತೆರಳಲು ಸಜ್ಜಾಗಿ ಮಂದ್ರಾಸ್​ನ ಬಂಕರ್​ನಲ್ಲಿ ವಿಶ್ರಾಂತಿಯಲ್ಲಿತ್ತು. ಆ ಬಂಕರ್ ಮೇಲೆ ಪಾಕಿಸ್ತಾನದ 5.5 ಮೋರ್ಟಾರ್ ಸೆಲ್, ಏರ್ ಬ್ಲಾಸ್ಟ್ ಬಿದ್ದು ಮೂವರು ಸ್ಥಳದಲ್ಲೇ ಹುತಾತ್ಮರಾದರು. ಅಲ್ಲಿಂದ ಬರೀ 150 ಮೀ. ದೂರದಲ್ಲಿ ನಾವಿದ್ದೆವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net