ಕಾರ್ಗಿಲ್​ ವಿಜಯೋತ್ಸವಕ್ಕೆ 21 ವರ್ಷ: ಕಳಚಿ ಬೀಳುವಂತಿತ್ತು ಗಾಯಗೊಂಡ ಕಾಲು

Naveen
Published on

‘ಕಾರ್ಗಿಲ್ ರಣಭೂಮಿಯಲ್ಲಿ ಭಾರತ ಪಾಕಿಸ್ತಾನವನ್ನು ಬಗ್ಗುಬಡಿದು ದಿಗ್ವಿಜಯ ಸಾಧಿಸಿದ ಮಹಾದಿನಕ್ಕೆ ಇಂದಿಗೆ ಬರೋಬ್ಬರಿ 21 ವರ್ಷ. ‘ಆಪರೇಷನ್ ವಿಜಯ್’ ಹೆಸರಲ್ಲಿ ಪಾಕಿಸ್ತಾನದ ವಿರುದ್ಧ 1999ರಲ್ಲಿ ಭಾರತೀಯ ಸೇನೆ ಸುಮಾರು 60 ದಿನಗಳ ಕಾರ್ಯಾಚರಣೆ ನಡೆಸಿತ್ತು. ಅದರಲ್ಲಿ ಭಾರತ ವಿಜಯ ಸಾಧಿಸುವುದರೊಂದಿಗೆ ಜುಲೈ 26ರಂದು ಯುದ್ಧ ಕೊನೆಗೊಂಡಿತ್ತು. ಯುದ್ಧದಲ್ಲಿ ಪಾಲ್ಗೊಂಡು ವಿಜಯದುಂದುಭಿ ಮೊಳಗಿಸಿದ ಕರ್ನಾಟಕದ ವೀರಯೋಧರು ತಮ್ಮ ಆ ರಣರೋಚಕ ಅನುಭವಗಳನ್ನು ವಿಜಯವಾಣಿ ಓದುಗರಿಗಾಗಿ ಹಂಚಿಕೊಂಡಿದ್ದಾರೆ.

ಕಳಚಿ ಬೀಳುವಂತಿತ್ತು ಗಾಯಗೊಂಡ ಕಾಲು

1999ರ ಜನವರಿಯಲ್ಲಿ ಸೇನೆ ಸೇರಿದ ನನ್ನನ್ನು ಮೇನಲ್ಲಿ ದ್ರಾಸ್ ಸೆಕ್ಟರ್​ಗೆ ನಿಯೋಜಿಸಲಾಯಿತು. ಜುಲೈನಲ್ಲಿ ಕಾರ್ಗಿಲ್ ಯುದ್ಧ ಆರಂಭವಾಯಿತು. ‘ಯುದ್ಧಕ್ಕೆ ನನ್ನನ್ನೂ ಕಳುಹಿಸಿಕೊಡಿ’ ಎಂದೆ. ‘ನೀವಿನ್ನೂ ಹೊಸಬರು, ತಂಡ ಮುನ್ನಡೆಸುವುದು ಸವಾಲಿನ ಕೆಲಸ’ ಎಂದರು ಕಮಾಂಡಿಂಗ್ ಆಫೀಸರ್ ವೈ.ಕೆ.ಜೋಶಿ. ‘ಇಲ್ಲ, ಸಮರ್ಥವಾಗಿ ನಿಭಾಯಿಸುವೆ’ ಎಂದಾಗ ‘ಗೋ ಅಹೆಡ್’ ಎಂದರು. ಜು.4ರಂದು ಕಾರ್ಯಾಚರಣೆಗೆ ಇಳಿದು ಶತ್ರು ಪಾಳಯದ ಕೆಲ ಬಂಕರ್ ನಾಶಪಡಿಸಿದೆವು. ಅದರಲ್ಲಿ ನನ್ನ ಸಹಾಯಕ ಶಾಮ್ಂಗ್ ಮೃತಪಟ್ಟಿದ್ದ. 5ರಂದು ಇಡೀ ದಿನ ದಾಳಿ- ಪ್ರತಿದಾಳಿ ಮುಂದುವರಿಯಿತು.

6ರಂದು ಶತ್ರು ಪಾಳಯದ ಒಂದು ಬಂಕರ್ ಮಾತ್ರ ಉಳಿದಿತ್ತು. ಆ ಬಂಕರ್​ಗೆ ಮುಂಚೆ ಒಂದು ಬಂಡೆ, ಸಣ್ಣ ಕಾಲುದಾರಿ ಇದ್ದಿದ್ದರಿಂದ ಅದನ್ನು ಹೊಡೆದುರುಳಿಸುವುದು ಕಷ್ಟವಿತ್ತು. ಆವತ್ತು ಮಧ್ಯಾಹ್ನದ ಹೊತ್ತಿಗೆ ಪಾಕ್ ಸೈನಿಕರಿಂದ ಪ್ರತಿದಾಳಿ ತೀವ್ರವಾಯಿತು. ಒಂದು ಬಂಡೆಯ ಹಿಂದೆ ಕುಳಿತಾಗ ಅವರು ಎಸೆದ ಹ್ಯಾಂಡ್ ಗ್ರೆನೇಡ್ ನನ್ನ ಪಕ್ಕದಲ್ಲೇ ಬಿತ್ತು. ಅದನ್ನು ವಾಪಸ್ ವೈರಿಗಳತ್ತ ಎಸೆಯಲೆತ್ನಿಸಿದೆ. ಆಗ ಅದು ಸ್ಪೋಟವಾಗಿ ಅದರ ಚೂರುಗಳೆಲ್ಲ ಕಾಲಿಗೆ ಹೊಕ್ಕು ರಕ್ತಸಿಕ್ತವಾಯಿತು. ಆಂಬುಲೆನ್ಸ್​ನಲ್ಲಿ ಚಿಕಿತ್ಸೆಗೆ ಕರೆ ತರುವಾಗ ಯಾವ ಕ್ಷಣದಲ್ಲಿ ಕಾಲು ಕಳಚಿ ಬೀಳುತ್ತದೋ ಎಂಬ ಸ್ಥಿತಿ. ದೆಹಲಿಯ ಸೇನಾ ಆಸ್ಪತ್ರೆಗೆ ದಾಖಲಿಸಿದರು. ಅಷ್ಟರಲ್ಲಿ ನಮ್ಮ ಸೇನೆ ಪಾಯಿಂಟ್ 4875 ಗೆದ್ದ ವಿಷಯ ತಿಳಿದು ಸಂತಸವಾಯಿತು.

| ಕ್ಯಾಪ್ಟನ್ ನವೀನ್ ನಾಗಪ್ಪ ಹುಬ್ಬಳ್ಳಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net