ಔತಣ ರಾಜಕಾರಣದ ಸಮೀಕರಣ; ದಲಿತ ಸಿಎಂ ಚರ್ಚೆಗೆ ಮರುಜೀವ

Congress
Published on

ಬೆಂಗಳೂರು: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸುತ್ತ ಒಂದಿಷ್ಟು ಬಿರುಸಿನ ಚಟುವಟಿಕೆ ನಡೆದ ಒಂದು ವಾರದ ತರುವಾಯ ಗೃಹ ಸಚಿವ ಜಿ. ಪರಮೇಶ್ವರ ಮನೆಯಲ್ಲಿ ‘ರಾಜಕೀಯ ಭೋಜನಕೂಟ’ ನಡೆದಿದ್ದು, ಅಲ್ಲಿ ನಡೆದ ಚರ್ಚೆಗಳು ರಾಜಕೀಯ ಚಾವಡಿಯಲ್ಲಿ ದಲಿತ ಮುಖ್ಯಮಂತ್ರಿ ಚರ್ಚೆ ಸೇರಿ ಹಲವು ಬಗೆಯ ಕುತೂಹಲ ಹುಟ್ಟುಹಾಕಿವೆ. ಇದೇ ಹೊತ್ತಿನಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಶೀಘ್ರ ಮುಖ್ಯಮಂತ್ರಿಯಾಗುವ ಚರ್ಚೆ ಮುನ್ನೆಲೆಗೆ ಬಂದಿದೆ. ಇದಕ್ಕೆ ಪೂರಕವೆಂಬಂತೆ ಡಿಕೆಶಿ ಆಪ್ತ ಶಾಸಕರಾದ ರವಿಕುಮಾರ್ ಗಣಿಗ ಹಾಗೂ ಕದಲೂರು ಉದಯ್ ಹೇಳಿಕೆ ಸಂಚಲನ ಸೃಷ್ಟಿಸಿದೆ. ಶಾಸಕ ಕದಲೂರು ಉದಯ್, ‘ಡಿ.ಕೆ. ಶಿವಕುಮಾರ್ ಸಿಎಂ ಆಗುವುದರಲ್ಲಿ ಯಾವುದೇ ಅನುಮಾನ ಇಲ್ಲ. ನೂರಕ್ಕೆ ನೂರರಷ್ಟು ಖಚಿತ’ ಎಂದಿದ್ದಾರೆ. ಸರ್ಕಾರ ಆರಂಭವಾದ ಮೊದಲ ದಿನದಿಂದಲೂ ‘ಪವರ್ ಶೇರಿಂಗ್’ ಪ್ರಸ್ತಾಪ ಆಗುತ್ತಲೇ ಇದೆ. ನಾಲ್ಕು ಗೋಡೆ ನಡುವೆ ನಾಲ್ಕು ಪ್ರಮುಖರ ನಡುವೆ ನಡೆದ ಚರ್ಚೆ ಮತ್ತು ನಿರ್ಣಯದ ಗುಟ್ಟು ರಟ್ಟಾಗದಂತೆ ಕಾಪಾಡಿಕೊಂಡಿರುವ ಕಾರಣ ಊಹಾಪೋಹ ನಿಂತಿಲ್ಲ. ಗೃಹ ಸಚಿವ ಪರಮೇಶ್ವರ ನಿವಾಸದಲ್ಲಿ ನಡೆದ ಭೋಜನ ಸಭೆಯೂ ಸಹ ಇಂತಹ ಬೆಳವಣಿಗೆಯ ಒಂದು ಭಾಗವಾಗಿ ಕಂಡುಬರುತ್ತಿದೆ. ವಿಧಾನಸಭೆ ಚುನಾವಣೆಯಲ್ಲಿ ಅಲ್ಪಸಂಖ್ಯಾತರ ಜತೆ ಹಿಂದುಳಿದ,

ದಲಿತ ವರ್ಗ ಕಾಂಗ್ರೆಸ್ ಕೈ ಹಿಡಿದಿತ್ತು. ಈ ಸಮೀಕರಣ ಚದರದಂತೆ ಮುಂದಿನ ಲೋಕಸಭೆ ಚುನಾವಣೆ ವರೆಗೂ ಕಾಪಿಡುವ ಬಯಕೆ ಹೈಕಮಾಂಡ್​ನದ್ದು. ಹೀಗಾಗಿಯೇ ಆಗಾಗ್ಗೆ ಸೃಷ್ಟಿಯಾಗುವ ಅಸಮಾಧಾನಕ್ಕೆ ‘ಸಮನ್ವಯ’ ತೇಪೆ ಹಾಕುವ ಕೆಲಸ ನಡೆದೇ ಇದೆ.

ಇನ್ನೊಂದು ಆಯಾಮದಲ್ಲಿ, ಒಂದು ವೇಳೆ ಪವರ್ ಶೇರಿಂಗ್ ನಡೆದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಇಚ್ಛೆಯಿಂದ ಅಧಿಕಾರದಿಂದ ಕೆಳಗಿಳಿದರೆ ಆಗಬಹುದಾದ ನಿರ್ವಾತ ತುಂಬಲು ಪಕ್ಷದೊಳಗೆ ಅನೌಪಚಾರಿಕ ಸಂಘಟನೆ ಆರಂಭವಾಗಿದೆ. ಇದನ್ನು ಸಮಾನ ಮನಸ್ಕರ ಗುಂಪೂ ಎಂದು ಕರೆದುಕೊಳ್ಳಲಾಗುತ್ತಿದೆ. ಅದೇ ಕಾರಣಕ್ಕೆ ಪರಮೇಶ್ವರ ಮನೆಯಲ್ಲಿ ನಡೆದಿರುವ ಭೋಜನಕೂಟಕ್ಕೂ ಮಹತ್ವ ಬಂದಿದೆ.

ಮುಖ್ಯಮಂತ್ರಿ ಸ್ಥಾನದ ಬಲು ಆಕಾಂಕ್ಷೆ ಹೊಂದಿರುವ ಡಿ.ಕೆ ಶಿವಕುಮಾರ್​ಗೆ ಅವಕಾಶ ತಪ್ಪಿಸಲು ಪಕ್ಷದಲ್ಲಿ ಉರುಳಬಹುದಾದ ದಾಳಗಳಲ್ಲಿ ‘ದಲಿತ ಸಿಎಂ’ ಕೂಡ ಒಂದಾಗಿರಲಿದೆ. ಇದರ ಪೂರ್ವ ಪೀಠಿಕೆಯಾಗಿಯೇ ಶಾಸಕರನ್ನು ಒಗ್ಗೂಡಿಸುವ ಕೆಲಸ ಕಾಂಗ್ರೆಸ್​ನಲ್ಲಿ ಸದ್ದಿಲ್ಲದೇ ನಡೆದಿದೆ ಎಂಬ ವದಂತಿಗಳಿವೆ. ಡಿ.ಕೆ ಶಿವಕುಮಾರ್ ಕೈಗೆ ಅಧಿಕಾರದ ಚುಕ್ಕಾಣಿ ಸಿಗದಂತೆ ನೋಡಿಕೊಳ್ಳಲು ಹಿರಿಯರೆಲ್ಲ ಒಗ್ಗಟ್ಟಾಗಿ ಸಾಗುವ ಪ್ರಯತ್ನ ನಡೆದಿದೆ.

ಪರಮೇಶ್ವರ ಅವರ ಮನೆಯಲ್ಲಿ ನಡೆದ ಭೋಜನ ಕೂಟಕ್ಕೆ ತೆರಳಿದವರಲ್ಲಿ ಸಚಿವರಾದ ಮಹದೇವಪ್ಪ, ಸತೀಶ್ ಜಾರಕಿಹೊಳಿ, ನಾಗೇಂದ್ರ, ರಾಜಣ್ಣ ಪ್ರಮುಖರು. ಇವರೆಲ್ಲ ಸಿದ್ದರಾಮಯ್ಯ ಪಾಳಯದಲ್ಲಿ ಗುರುತಿಸಿಕೊಂಡವರು. ಹೀಗಾಗಿಯೇ ಅಹಿಂದ ಲೆಕ್ಕಾಚಾರದ ತಳಹದಿಯ ಮೇಲೆ ಚರ್ಚೆಗಳು ಕೈ ಪಾಳಯದಲ್ಲಿ ನಡೆದಿದೆ.

ಕೈ ಹಿಡಿಯಲು ಸಿದ್ಧವಾದ ದಳದ ಪಕಳೆಗಳು: ಜಾತ್ಯತೀತ ಜನತಾದಳ ಬಿಜೆಪಿ ಸಖ್ಯಕ್ಕೆ ಆಸಕ್ತಿ ವಹಿಸುತ್ತಿರುವಂತೆ ಕಾಂಗ್ರೆಸ್ ಆಪರೇಷನ್ ಹಸ್ತಕ್ಕೆ ಮಣೆ ಹಾಕಿದೆ. ಜೆಡಿಎಸ್​ನಲ್ಲಿ ಶಾಸಕರಾಗಿ ಕಳೆದ ಚುನಾವಣೆಯಲ್ಲಿ ಸೋತವರು ಈಗ ಕಾಂಗ್ರೆಸ್ ಅಪ್ಪಲು ಮುಂದಾಗಿದ್ದು, ಈ ಸಂಬಂಧ ಸಿಎಂ ಸಿದ್ದರಾಮಯ್ಯ ಜತೆ ರಹಸ್ಯ ಚರ್ಚೆ ನಡೆಸಿದ್ದಾರೆ. ಇವರಲ್ಲಿ ಗೌರಿ ಶಂಕರ್ ಹಾಗೂ ದಾಸರಹಳ್ಳಿ ಮಂಜುನಾಥ್ ಪ್ರಮುಖರು. ಬಿಜೆಪಿ ಶಾಸಕ ಎಸ್.ಟಿ ಸೋಮಶೇಖರ್ ಜತೆ ತೆರಳಿ ಸಿಎಂ ಭೇಟಿ ಮಾಡಿರುವ ಜೆಡಿಎಸ್ ಮಾಜಿ ಶಾಸಕರು, ತಮ್ಮ ಪಕ್ಷದ ಚಟುವಟಿಕೆಗಳಿಂದ ಸಾಕಷ್ಟು ದೂರವೇ ಉಳಿದಿದ್ದಾರೆಂಬುದೂ ಸಹ ವಿಶೇಷ ಸಂಗತಿ.

ಆಪರೇಷನ್ ಗಾಸಿಪ್ ಸಕ್ಸಸ್!

ಲೋಕಸಭೆ ಚುನಾವಣೆ ಬಳಿಕ ಸರ್ಕಾರ ಪತನವಾಗಲಿದೆ ಎಂಬ ಬಿಜೆಪಿ, ಜೆಡಿಎಸ್ ನಾಯಕರ ಹೇಳಿಕೆಯಿಂದ ಉಂಟಾಗಬಹುದಾದ ಗೊಂದಲ ತಪ್ಪಿಸಲು ಕಾಂಗ್ರೆಸ್ ಕಡೆಯಿಂದ ಉರುಳಿದ ‘ಆಪರೇಷನ್’ ಅಸ್ತ್ರ ಸಾಕಷ್ಟು ಕೆಲಸ ಮಾಡಿದಂತೆ ಕಾಣಿಸಿದೆ. ಬಿಜೆಪಿ ನಾಯಕರು ತಮ್ಮ ಪಕ್ಷದ ಐವರು ಶಾಸಕರನ್ನು ಸಂರ್ಪಸಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ ಶಿವಕುಮಾರ್ ಪ್ರತಿನಿತ್ಯ ಹೇಳಿಕೊಂಡು ಬರುವ ಮೂಲಕ ಎದುರಾಳಿಗಳ ದಾಳವನ್ನು ಪುಡಿಗಟ್ಟಿದ್ದಾರೆ. ಡಿಕೆಶಿ ಜತೆ ಅವರ ಆಪ್ತ ಶಾಸಕರೂ ಇದೇ ವಿಚಾರ ಹೇಳಿಕೊಂಡು ಬಂದಿದ್ದರು. ಡಿ.ಕೆ ಶಿವಕುಮಾರ್ ಮಾತನಾಡಿ, ಸರ್ಕಾರ ಬೀಳಿಸಲು ಬಿಜೆಪಿ ರೂಪಿಸುತ್ತಿರುವ ಷಡ್ಯಂತ್ರ ಫಲಿಸುವುದಿಲ್ಲ. ಷಡ್ಯಂತ್ರದ ಹಿಂದೆ ದೊಡ್ಡ ನಾಯಕರು ಇದ್ದಾರೆ. ಇದರಿಂದ ಏನೂ ಆಗುವುದಿಲ್ಲ’ ಎಂದರು.

ನಾವು ಹುಷಾರಾಗಿರಬೇಕು ಅಷ್ಟೇ. ಅಪರೇಷನ್ ಕಮಲ ಆಗುತ್ತಿರುವುದು ನಿಜ. ಕೆಲವು ಶಾಸಕರಿಗೆ ಆಫರ್ ಇರಬಹುದು. ದುಡ್ಡು ಇರಬಹುದು, ಮತ್ತೊಂದು ಇರಬಹುದು ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ಶಾಸಕ ಗಣಿಗ ರವಿ ಇದೇ ವಿಚಾರದಲ್ಲಿ ಪುನಃ ಪ್ರತಿಕ್ರಿಯೆ ನೀಡಿ, ಹಳೇ ಮೈಸೂರು ಭಾಗದ ಒಬ್ಬ ಎಂಎಲ್​ಸಿ, ಬೆಳಗಾವಿಯ ಮಾಜಿ ಸಚಿವ ಹಾಗೂ ಯಡಿಯೂರಪ್ಪ ಆಪ್ತ ಸಂತೋಷ್ ಬೆಂಗಳೂರು ಗೋಲ್ಡ್ ಫಿಂಚ್ ಹೋಟೆಲ್​ನಲ್ಲಿ ನಮ್ಮ ಶಾಸಕರನ್ನು ಭೇಟಿ ಮಾಡಿದ್ದಾರೆ. ಆದ್ದರಿಂದ ಎಲ್ಲಿ, ಏನು ಮಾತಾಡಿದ್ದಾರೆಂಬ ಸಾಕ್ಷ್ಯನ್ನು ಶೀಘ್ರದಲ್ಲಿ ಬಿಡುತ್ತೇವೆ ಎಂದರು.

ಶಾಸಕರಿಗೆ ವಾರ್ನಿಂಗ್

ಶಾಸಕರು ಯಾರೊಬ್ಬರೂ ಪಕ್ಷದ ಆಂತರಿಕ ವಿಚಾರ, ಸರ್ಕಾರ ಹಾಗೂ ಅಧಿಕಾರದ ಬಗ್ಗೆ ಮಾಧ್ಯಮಗಳ ಮುಂದೆ ಅನಗತ್ಯ ಹೇಳಿಕೆ ನೀಡಬಾರದು. ತಪ್ಪಿದರೆ ಅವರಿಗೆ ನೋಟಿಸ್ ನೀಡಬೇಕಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.

ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ವಿವಿಧ ತಂತ್ರಗಳನ್ನು ಹೆಣೆದಿದ್ದು, ಕಾಂಗ್ರೆಸ್ ಶಾಸಕರಿಗೆ 50 ಕೋಟಿ ರೂ. ಆಫರ್ ನೀಡುತ್ತಿದ್ದಾರೆಂದು ಮಂಡ್ಯ ಶಾಸಕ ರವಿ ಗಾಣಿಗ ಹೇಳಿರುವ ವಿಚಾರ ನನಗೆ ಗೊತ್ತಿಲ್ಲ. ಅವರನ್ನೇ ಕೇಳಬೇಕು. ಗೃಹ ಸಚಿವ ಜಿ. ಪರಮೇಶ್ವರ ಊಟಕ್ಕೆ ಕರೆದಿದ್ದರು. ನಾನು ಮತ್ತು ಸಚಿವರಾದ ಮಹದೇವಪ್ಪ ಹಾಗೂ ಸತೀಶ್ ಜಾರಕಿಹೊಳಿ ಹೋಗಿದ್ದೆವು. ನಾವು ರಾಜಕೀಯ ಚರ್ಚೆ ಮಾಡಿಲ್ಲ.

| ಸಿದ್ದರಾಮಯ್ಯ ಮುಖ್ಯಮಂತ್ರಿ

ಅಸಮಾಧಾನ ತಣಿಸಲು ಗೃಹ ಸಚಿವ ಪರಮೇಶ್ವರ್ ಅವರಿಗೆ ಮುಂದಿನ ಸಿಎಂ ನೀವೇ ಎಂದು ಸಿದ್ದರಾಮಯ್ಯ ಭರವಸೆ ನೀಡಿರುವ ಸಾಧ್ಯತೆಗಳಿವೆ. ಅಂತರ್ಯುದ್ಧ ಶಮನಕ್ಕೆ ಮಂತ್ರಿಗಳ ಮನೆಗೆ ಸಿಎಂ ಸುತ್ತಾಡುತ್ತಿದ್ದಾರೆ. ಅಧಿಕಾರಕ್ಕೆ ಬಂದ 5 ತಿಂಗಳಲ್ಲೇ ಸಿಎಂಗೆ ಇಂತಹ ಸ್ಥಿತಿ ಬರಬಾರದಿತ್ತು.

| ಗೋವಿಂದ ಕಾರಜೋಳ ಮಾಜಿ ಸಚಿವ

 ಸದ್ಯ ಸಿಎಂ ಹುದ್ದೆ ಖಾಲಿ ಇಲ್ಲ. ಊಟಕ್ಕೆ ಹೋಗಿದ್ದೆವು, ವಿಶೇಷ ಏನಿಲ್ಲ. ಪರಮೇಶ್ವರ್ ಅವರನ್ನು ಸಿಎಂ ಮಾಡಲ್ಲ, ಅದನ್ನು ಹೇಳಿದವರಿಗೆ ಬುದ್ಧಿ ಇಲ್ಲ. ಸಿದ್ದರಾಮಯ್ಯ ಅವರೇ ಐದು ವರ್ಷ ಸಿಎಂ ಆಗಿರುತ್ತಾರೆ.

| ಮಹದೇವಪ್ಪ ಸಮಾಜ ಕಲ್ಯಾಣ ಸಚಿವ

ನಾನು, ಸತೀಶ್ ಜಾರಕಿಹೊಳಿ ಸಿಎಂರನ್ನು ಭೇಟಿ ಮಾಡಿದ್ದೆವು. ಆದರೆ ಯಾವುದೇ ರಾಜಕೀಯ ವಿಚಾರ ರ್ಚಚಿಸಲು ಹೋಗಿರಲಿಲ್ಲ. ನಮ್ಮ ಪಕ್ಷದಿಂದ ಯಾರೂ ಬಿಜೆಪಿ ಕಡೆ ಹೋಗುವುದಿಲ್ಲ.

| ನಾಗೇಂದ್ರ ಕ್ರೀಡಾ ಸಚಿವ

ತುಂಬಾ ದಿನಗಳಾಗಿತ್ತು ಊಟಕ್ಕೆ ಬನ್ನಿ ಅಂತಾ ಗೃಹ ಸಚಿವರು ಹೇಳಿದ್ದರು. ಯಾವುದೇ ರಾಜಕೀಯ ವಿಚಾರ ರ್ಚಚಿಸಿಲ್ಲ. ದಲಿತ ಸಮುದಾಯಕ್ಕೆ ಸಿಎಂ ಅವಕಾಶ ಸಿಗುವುದು ಗೊತ್ತಿಲ್ಲ.

| ಸತೀಶ್ ಜಾರಕಿಹೊಳಿ, ಲೋಕೋಪಯೋಪಯೋಗಿ ಸಚಿವ

ಡಿಕೆಶಿ ಸಿಎಂ ಆಗಬೇಕೆಂದು ರವಿ ಗಣಿಗ ಹೇಳುತ್ತಾರೆ. ಸಿಎಂ ಆಗಿ ಸಿದ್ದರಾಮಯ್ಯ ಅವರೇ ಐದು ವರ್ಷ ಇರಬೇಕು ಎಂದು ನಾನು ಹೇಳುತ್ತೇನೆ. ಅಧಿಕಾರ ಹಂಚಿಕೆ ಹೈಕಮಾಂಡ್​ಗೆ ಬಿಟ್ಟ ವಿಚಾರ.

| ಕೆ.ಎನ್. ರಾಜಣ್ಣ ಸಹಕಾರ ಸಚಿವ

ಡಿನ್ನರ್ ಪಾಲಿಟಿಕ್ಸ್ ವಿಚಾರದ ಬಗ್ಗೆ ನನಗೆ ಗೊತ್ತಿಲ್ಲ. ನಮ್ಮಲ್ಲಿ ಮುಖ್ಯಮಂತ್ರಿ ಆಗಲು ಅರ್ಹತೆ ಇರುವವರು 50 ಜನರಿದ್ದಾರೆ. ಸಮಯ ಬಂದಾಗ ಹೈಕಮಾಂಡ್ ತೀರ್ಮಾನ ಮಾಡಲಿದೆ.

| ಎನ್.ಚಲುವರಾಯಸ್ವಾಮಿ, ಕೃಷಿ ಸಚಿವ

ನಾನು ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರುವಾಗ, ಮಂತ್ರಿ ಮಾಡುವುದಾಗಿ ಸಿದ್ರಾಮಣ್ಣ, ಡಿ.ಕೆ.ಶಿವಕುಮಾರ್, ಸುರ್ಜೆವಾಲಾ ಮೂವರೂ ಭರವಸೆ ನೀಡಿದ್ದರು. ಇಂದಲ್ಲ, ನಾಳೆ ಅವರು ನೀಡಿದ ಭರವಸೆ ಈಡೇರಬಹುದು.

| ಶಿವಲಿಂಗೇಗೌಡ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net