

ಬೆಂಗಳೂರು: ಏಕದಿನ ವಿಶ್ವಕಪ್ನಲ್ಲಿ ಆರಂಭಿಕ 2 ಪಂದ್ಯಗಳನ್ನು ಗೆದ್ದು ಬೀಗಿದ್ದ ಪಾಕಿಸ್ತಾನ ತಂಡ ಆತಿಥೇಯ ಹಾಗೂ ಸಾಂಪ್ರದಾಯಿಕ ಎದುರಾಳಿ ಭಾರತ ತಂಡದ ಎದುರು ಹೀನಾಯವಾಗಿ ಸೋಲು ಕಂಡ ಬಳಿಕ ಗೆಲುವಿನ ಮುಖ ನೋಡಿಲ್ಲ. ಸತತ 4 ಸೋಲುಗಳೊಂದಿಗೆ ಪಾಕಿಸ್ತಾನ ಈಗ ಅಂಕಪಟ್ಟಿಯಲ್ಲಿ 6ನೇ ಸ್ಥಾನಕ್ಕೆ ಕುಸಿದಿದೆ. ಇದರಿಂದ ಪಾಕಿಸ್ತಾನ ಸೆಮಿಫೈನಲ್ ರೇಸ್ನಿಂದ ಬಹುತೇಕ ಹೊರಬಿದ್ದಂತಿದ್ದರೂ, ಕೆಲ ಲೆಕ್ಕಾಚಾರಗಳ ಪ್ರಕಾರ ಅದಕ್ಕೆ ಈಗಲೂ ನಾಕೌಟ್ ಹಂತಕ್ಕೇರುವ ಅವಕಾಶ ಜೀವಂತವಿದೆ! ಆ ಲೆಕ್ಕಾಚಾರದ ವಿವರಕ್ಕಾಗಿ ಈ ಸುದ್ದಿಯನ್ನು ಪೂರ್ತಿ ಓದಿ...
ಪಾಕಿಸ್ತಾನ ಇದುವರೆಗೆ ಆಡಿರುವ 6 ಪಂದ್ಯಗಳಲ್ಲಿ 2ರಲ್ಲಷ್ಟೇ ಗೆದ್ದು, 4ರಲ್ಲಿ ಸೋತಿದ್ದು, 4 ಅಂಕ ಕಲೆಹಾಕಿದೆ. ಇನ್ನು ಪಾಕಿಸ್ತಾನಕ್ಕೆ ಗರಿಷ್ಠವೆಂದರೆ 5 ಪಂದ್ಯ ಗೆದ್ದು, ಒಟ್ಟು 10 ಅಂಕ ಕಲೆಹಾಕಲು ಅವಕಾಶವಿದೆ. ದಕ್ಷಿಣ ಆಫ್ರಿಕಾ ಮತ್ತು ಭಾರತ ಈಗಾಗಲೆ ತಲಾ 5 ಪಂದ್ಯ ಗೆದ್ದಿದ್ದು, ಇನ್ನೊಂದು ಪಂದ್ಯ ಗೆದ್ದರೆ ಬಹುತೇಕ ಸೆಮೀಸ್ ಪ್ರವೇಶಿಸಲಿವೆ. ಇನ್ನು ನ್ಯೂಜಿಲೆಂಡ್-ಆಸ್ಟ್ರೆಲಿಯಾ ತಂಡಗಳು ತಲಾ 4ರಲ್ಲಿ ಗೆದ್ದಿದ್ದು, ಇವೆರಡೂ ತಂಡಗಳಿಗೆ ಇನ್ನೂ 3 ಪಂದ್ಯಗಳು ಬಾಕಿ ಇವೆ. ಈ ಪೈಕಿ ಒಂದು ತಂಡವಾದರೂ, ಕನಿಷ್ಠ 2ರಲ್ಲಿ ಸೋತರೆ ಗರಿಷ್ಠ 10 ಅಂಕಗಳನ್ನಷ್ಟೇ ಕಲೆ ಹಾಕಲಿವೆ. ಮತ್ತೊಂದೆಡೆ ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ತಂಡಗಳಿಗೆ ಇನ್ನೂ 4 ಪಂದ್ಯಗಳು ಬಾಕಿ ಇದ್ದು, ಇವೆಲ್ಲವನ್ನೂ ಗೆದ್ದರೆ ಒಟ್ಟು 6 ಪಂದ್ಯ ಗೆದ್ದಂತಾಗುತ್ತದೆ. ಹೀಗಾಗಿ ಇವೆರಡು ತಂಡಗಳೂ ಟೂರ್ನಿಯಲ್ಲಿ ಇನ್ನೊಂದು ಸೋಲು ಕಾಣಬೇಕು. ಇನ್ನು ನೆದರ್ಲೆಂಡ್, ಇಂಗ್ಲೆಂಡ್ ತಂಡಗಳಿಗೆ ಗರಿಷ್ಠ 5 ಪಂದ್ಯಗಳನ್ನು ಗೆಲ್ಲಲಷ್ಟೇ ಅವಕಾಶವಿದೆ. ಹೀಗಾಗಿ 3ಕ್ಕಿಂತ ಹೆಚ್ಚಿನ ತಂಡಗಳು 6 ಪಂದ್ಯಗಳನ್ನು ಗೆಲ್ಲದಿರುವ ಸಂದರ್ಭ ಸೃಷ್ಟಿಯಾದರೆ, ಪಾಕಿಸ್ತಾನ ರನ್ರೇಟ್ನಲ್ಲಿ ಮೇಲುಗೈ ಸಾಧಿಸಿ ಉಪಾಂತ್ಯಕ್ಕೇರಲು ಅವಕಾಶವಿದೆ.
ಆದರೆ ಸದ್ಯ ಪಾಕಿಸ್ತಾನದ ರನ್ರೇಟ್ ನ್ಯೂಜಿಲೆಂಡ್, ಆಸ್ಟ್ರೆಲಿಯಾ, ಶ್ರೀಲಂಕಾ ತಂಡಗಳಿಗಿಂತ ಕಳಪೆಯಾಗಿದೆ. ಹೀಗಾಗಿ ಉಳಿದ 3 ಪಂದ್ಯಗಳಲ್ಲಿ ಗೆಲ್ಲುವ ಜತೆಗೆ ರನ್ರೇಟ್ನಲ್ಲಿ ಭಾರಿ ಸುಧಾರಣೆ ಕಾಣಬೇಕಾದ ಸವಾಲು ಬಾಬರ್ ಅಜಮ್ ಬಳಗದ ಮುಂದಿದೆ. ಆದರೆ 3ರಲ್ಲಿ ಒಂದು ಪಂದ್ಯ ಸೋತರೂ, ಪಾಕ್ ಅಧಿಕೃತವಾಗಿ ವಿಶ್ವಕಪ್ ಗೆಲುವಿನ ಕನಸು ಕೈಚೆಲ್ಲಬೇಕಾಗುತ್ತದೆ.
ಪಾಕಿಸ್ತಾನ ತನ್ನ ಉಳಿದ ಮೂರು ಪಂದ್ಯಗಳಲ್ಲಿ ಬಾಂಗ್ಲಾದೇಶ (ಅಕ್ಟೋಬರ್ 31, ಕೋಲ್ಕತ), ಹಾಲಿ ರನ್ನರ್ಅಪ್ ನ್ಯೂಜಿಲೆಂಡ್ (ನವೆಂಬರ್ 4, ಬೆಂಗಳೂರು) ಮತ್ತು ಹಾಲಿ ಚಾಂಪಿಯನ್ ಇಂಗ್ಲೆಂಡ್ (ನವೆಂಬರ್ 11, ಕೋಲ್ಕತ) ತಂಡಗಳನ್ನು ಎದುರಿಸಲಿದೆ. ಈ ಮೂರರಲ್ಲೂ ಪಾಕ್ ತನಗೆ ಬೇಕಾದ ಫಲಿತಾಂಶ ಪಡೆದುಕೊಂಡರೆ ಮತ್ತು ಇತರ ಫಲಿತಾಂಶಗಳೂ ಅದರ ಪರವಾಗಿ ಬಂದರೆ ಸೆಮಿಫೈನಲ್ ಪ್ರವೇಶಿಸಲಿದೆ. ಹೀಗಾಗಿ ಪಾಕಿಸ್ತಾನ ತಂಡದ ನಿರ್ದೇಶಕ ಮಿಕಿ ಆರ್ಥರ್, ದಕ್ಷಿಣ ಆಫ್ರಿಕಾ ವಿರುದ್ಧದ ರೋಚಕ ಸೋಲಿನ ಬಳಿಕವೂ, ಸೆಮಿಫೈನಲ್ಗೇರುವ ಆಶಾವಾದ ಇನ್ನೂ ಇದೆ ಎಂದಿದ್ದರು.
ಪಾಕಿಸ್ತಾನ ತಂಡ ಒಂದು ವೇಳೆ ನಾಲ್ಕನೇ ಸ್ಥಾನಿಯಾಗಿ ಉಪಾಂತ್ಯಕ್ಕೇರಿದರೆ ಮತ್ತು ಆತಿಥೇಯ ಭಾರತ ತಂಡ ಲೀಗ್ ಹಂತದ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದರೆ, ಆಗ ಸೆಮಿಫೈನಲ್ನಲ್ಲಿ ಭಾರತ-ಪಾಕಿಸ್ತಾನ ತಂಡಗಳೇ ಮುಖಾಮುಖಿ ಆಗಲಿವೆ ಮತ್ತು ಈ ಹೈ-ವೋಲ್ಟೇಜ್ ಪಂದ್ಯ ಕೋಲ್ಕತದಲ್ಲಿ ನವೆಂಬರ್ 16ರಂದು ನಡೆಯಲಿದೆ.