More

    ವಿಶ್ವಕಪ್​ನಲ್ಲಿ ರೋಚಕ ಗೆಲುವು ಸಾಧಿಸಿದ ದಕ್ಷಿಣ ಆಫ್ರಿಕಾ; ನಿರ್ಗಮನ ಬಾಗಲಿನತ್ತ ಪಾಕಿಸ್ತಾನ!

    ಚೆನ್ನೈ: ಪಾಕಿಸ್ತಾನ ತಂಡ ಬೌಲಿಂಗ್​ನಲ್ಲಿ ತಿರುಗೇಟು ನೀಡಲು ಪ್ರಯತ್ನಿಸಿದ ನಡುವೆಯೂ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಸತತ 4ನೇ ಸೋಲು ಅನುಭವಿಸಿದ್ದು, ಸೆಮಿಫೈನಲ್​ ಆಸೆಯನ್ನು ಬಹುತೇಕ ಕೈಚೆಲ್ಲಿದೆ. ಬಿಗಿ ಬೌಲಿಂಗ್​ ದಾಳಿಯ ಬಳಿಕ ಏಡನ್​ ಮಾರ್ಕ್ರಮ್​ (91 ರನ್​, 93 ಎಸೆತ, 7 ಬೌಂಡರಿ, 3 ಸಿಕ್ಸರ್​) ದಿಟ್ಟ ಬ್ಯಾಟಿಂಗ್​ ನಿರ್ವಹಣೆ ಮತ್ತು ಬಾಲಂಗೋಚಿಗಳ ಪರಿಶ್ರಮದಿಂದ ದಕ್ಷಿಣ ಆಫ್ರಿಕಾ ತಂಡ ಪಾಕಿಸ್ತಾನ ವಿರುದ್ಧ 1 ವಿಕೆಟ್​ನಿಂದ ರೋಚಕ ಗೆಲುವು ದಾಖಲಿಸಿದೆ. ಟೂರ್ನಿಯಲ್ಲಿ ಕಂಡ 5ನೇ ಗೆಲುವಿನ ಬಲದಿಂದ ಟೆಂಬಾ ಬವುಮಾ ಪಡೆ ಉಪಾಂತ್ಯಕ್ಕೇರುವ ಅವಕಾಶ ವೃದ್ಧಿಸಿಕೊಂಡಿದೆ.

    ಚಿದಂಬರಂ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಹಾಲಿ ವಿಶ್ವಕಪ್​ನ 5ನೇ ಹಾಗೂ ಕೊನೇ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ಗೆ ಇಳಿದ ಪಾಕಿಸ್ತಾನ ತಂಡ ಮಧ್ಯಮ ಕ್ರಮಾಂಕದ ಉಪಯುಕ್ತ ಆಟದ ನಡುವೆಯೂ ಅಗ್ರ ಮತ್ತು ಕೆಳ ಸರದಿಯ ಕುಸಿತದಿಂದಾಗಿ 46.4 ಓವರ್​ಗಳಲ್ಲಿ 270 ರನ್​ಗಳಿಗೆ ಸರ್ವಪತನ ಕಂಡಿತು. ಪ್ರತಿಯಾಗಿ ದಕ್ಷಿಣ ಆಫ್ರಿಕಾ ದಿಟ್ಟ ಚೇಸಿಂಗ್​ನತ್ತ ಮುನ್ನಡೆದರೂ, ವೇಗಿ ಶಹೀನ್​ ಷಾ ಅಫ್ರಿದಿ (45ಕ್ಕೆ 3) ದಾಳಿಗೆ ಮಧ್ಯಮ ಕ್ರಮಾಂಕ ಕುಸಿಯಿತು. ಆದರೂ ಬಾಲಂಗೋಚಿಗಳಾದ ಕೇಶವ್​ ಮಹಾರಾಜ್​ (7*) ಮತ್ತು ತಜರೇಜ್​ ಶಮ್ಸಿ (4*) ಹೋರಾಟದಿಂದ 47.2 ಓವರ್​ಗಳಲ್ಲಿ 9 ವಿಕೆಟ್​ಗೆ 271 ರನ್​ ಪೇರಿಸಿ ಜಯಿಸಿತು.

    ಮಾರ್ಕ್ರಮ್​ ದಿಟ್ಟ ಹೋರಾಟ: ಕ್ವಿಂಟನ್​ ಡಿಕಾಕ್​ (24) ಹರಿಣಗಳ ಚೇಸಿಂಗ್​ಗೆ ಬಿರುಸಿನ ಆರಂಭ ಒದಗಿಸಿ ನಿರ್ಗಮಿಸಿದರೆ, ನಾಯಕ ಟೆಂಬಾ ಬವುಮಾ (28) ಮತ್ತು ರಸೀ ವಾನ್​ ಡರ್​ ಡುಸೆನ್​ (21) ಉಪಯುಕ್ತ ಕೊಡುಗೆ ನೀಡಿದರು. ಬಳಿಕ ಏಡನ್​ ಮಾರ್ಕ್ರಮ್​ ಹರಿಣಗಳಿಗೆ ಆಸರೆಯಾಗಿ ನಿಂತರು. ಮಧ್ಯಮ ಕ್ರಮಾಂಕದಲ್ಲಿ ಹೆನ್ರಿಕ್​ ಕ್ಲಾಸೆನ್​ (12) ಬೇಗನೆ ಔಟಾದರೆ, ಡೇವಿಡ್​ ಮಿಲ್ಲರ್​ (29) ಜತೆಗೂಡಿ 5ನೇ ವಿಕೆಟ್​ಗೆ 69 ಎಸೆತಗಳಲ್ಲಿ 70 ರನ್​ ಸೇರಿಸುವ ಮೂಲಕ ಮಾರ್ಕ್ರಮ್​ ಚೇಸಿಂಗ್​ಗೆ ಬಲ ತುಂಬಿದರು. ಆದರೆ ಗೆಲುವಿನಿಂದ 21 ರನ್​ ದೂರವಿದ್ದಾಗ ಔಟಾದ ಮಾರ್ಕ್ರಮ್​ ಶತಕವಂಚಿತರಾಗಿದ್ದಲ್ಲದೆ, ನಂತರದಲ್ಲಿ ಗೆಲುವಿನ ದಡ ಸೇರಲು ಹರಿಣಗಳು ಪರದಾಡುವಂತಾಯಿತು. ಗೆರಾಲ್ಡ್​ ಕೋಟ್​ಜೀ (10) ಮತ್ತು ಲುಂಗಿ ಎನ್​ಗಿಡಿ (4) ಔಟಾದಾಗ ಆಫ್ರಿಕಾ ಇನ್ನಷ್ಟು ಒತ್ತಡಕ್ಕೆ ಸಿಲುಕಿತು. ಆಗ ಮುರಿಯದ ಕೊನೇ ವಿಕೆಟ್​ಗೆ 11 ರನ್​ ಜತೆಯಾಟವಾಡಿದ ಕೇಶವ್​ ಮಹಾರಾಜ್​&ತಬರೇಜ್​ ಶಮ್ಸಿ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾದರು.

    ಪಾಕಿಸ್ತಾನ: 46.4 ಓವರ್​ಗಳಲ್ಲಿ 270 (ಶಫೀಕ್​ 9, ಇಮಾಮ್​ 12, ಬಾಬರ್​ 50, ರಿಜ್ವಾನ್​ 31, ಇಫ್ತಿಕಾರ್​ 21, ಶಕೀಲ್​ 52, ಶಾದಾಬ್​ 43, ನವಾಜ್​ 24, ಶಮ್ಸಿ 60ಕ್ಕೆ 4, ಕೋಟ್​ಜೀ 42ಕ್ಕೆ 2, ಜಾನ್ಸೆನ್​ 43ಕ್ಕೆ 3). ದಕ್ಷಿಣ ಆಫ್ರಿಕಾ: 47.2 ಓವರ್​ಗಳಲ್ಲಿ 9 ವಿಕೆಟ್​ಗೆ 271 (ಡಿಕಾಕ್​ 24, ಬವುಮಾ 21, ಮಾರ್ಕ್ರಮ್​ 91, ಕ್ಲಾಸೆನ್​ 12, ಮಿಲ್ಲರ್​ 29, ಜಾನ್ಸೆನ್​ 20, ಕೋಟ್​ಜೀ 10, ಅಫ್ರಿದಿ 45ಕ್ಕೆ 3, ವಾಸಿಂ 50ಕ್ಕೆ 2, ಉಸಾಮ ಮಿರ್​ 45ಕ್ಕೆ 2, ರೌಫ್​ 62ಕ್ಕೆ 2).

    ಟೀಮ್​ ಇಂಡಿಯಾ ಮಾಜಿ ಕೋಚ್​ ಗ್ರೇಗ್​ ಚಾಪೆಲ್​ಗೆ ಆರ್ಥಿಕ ಸಂಕಷ್ಟ! ಸಹಾಯಕ್ಕೆ ಮುಂದಾದರು ಸ್ನೇಹಿತರು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts