

ಅಡಿಲೇಡ್: ಟೀಮ್ ಇಂಡಿಯಾದ ಮಾಜಿ ಕೋಚ್ ಹಾಗೂ ಆಸ್ಟ್ರೆಲಿಯಾ ತಂಡದ ಮಾಜಿ ನಾಯಕ ಗ್ರೇಗ್ ಚಾಪೆಲ್ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ನಿಧಿ ಸಂಗ್ರಹದ ಮೂಲಕ ಅವರಿಗೆ ನೆರವಾಗಲು ಗೆಳೆಯರು ಆನ್ಲೈನ್ ಅಭಿಯಾನ ಆರಂಭಿಸಿದ್ದಾರೆ.
75 ವರ್ಷದ ಚಾಪೆಲ್ 2005ರಿಂದ 2007ರ ಅವಧಿಯಲ್ಲಿ ಭಾರತ ತಂಡದ ಮುಕ್ಯ ಕೋಚ್ ಆಗಿದ್ದರು. ಆಸೀಸ್ ಪರ 87 ಟೆಸ್ಟ್ಗಳಲ್ಲಿ 24 ಶತಕಗಳ ಸಹಿತ 7,110 ರನ್ ಮತ್ತು 74 ಏಕದಿನ ಪಂದ್ಯಗಳಲ್ಲಿ 3 ಶತಕಗಳ ಸಹಿತ 2,331 ರನ್ ಬಾರಿಸಿದ್ದಾರೆ. ಆದರೆ, ವರ್ಣರಂಜಿತ ಕ್ರಿಕೆಟ್ ಜೀವನಕ್ಕೆ ತಕ್ಕಂತೆ ಅವರು ಸದ್ಯ ಆರ್ಥಿಕ ನೆಮ್ಮದಿಯ ಜೀವನವನ್ನು ಸಾಗಿಸುತ್ತಿಲ್ಲ ಎನ್ನಲಾಗಿದೆ.
'ನಾನು ಬಡವನೆಂದು ಅಳುತ್ತಿಲ್ಲ. ಆದರೆ ಈಗಿನ ಕ್ರಿಕೆಟಿಗರು ಅನುಭವಿಸುತ್ತಿರುವ ಶ್ರೀಮಂತ ಜೀವನ ನನ್ನದಲ್ಲ. ಅಂಥ ಐಷಾರಾಮಿ ಸೌಕರ್ಯಗಳು ನನಗಿಲ್ಲ' ಎಂದು ಚಾಪೆಲ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಅಲ್ಲದೆ ತನ್ನ ಕಾಲದ ಕ್ರಿಕೆಟಿಗರ ಪೈಕಿ ತಾನೊಬ್ಬನೇ ಅಲ್ಲ, ಇನ್ನೂ ಅನೇಕರು ಇದೇ ರೀತಿಯ ಆರ್ಥಿಕ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ ಎಂದಿದ್ದಾರೆ.
"ಗೋಫಂಡ್ಮೀ' ಪೇಜ್ ಮೂಲಕ ಚಾಪೆಲ್ಗಾಗಿ ಗೆಳೆಯರು ನಿಧಿ ಸಂಗ್ರಹಿಸುತ್ತಿದ್ದು, ಇದಕ್ಕೆ ಅವರ ಸಹೋದರರು ಹಾಗೂ ಮಾಜಿ ಕ್ರಿಕೆಟಿಗರಾದ ಇಯಾನ್ ಮತ್ತು ಟ್ರೆವರ್ ಚಾಪೆಲ್ ಕೂಡ ಕೈಜೋಡಿಸಿದ್ದಾರೆ. ಈ ನಿಧಿಯನ್ನು ಸ್ವೀಕರಿಸಲು ಗ್ರೇಗ್ ಒಲ್ಲದ ಮನಸ್ಸಿನಿಂದಲೇ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.