ಮೂಲವ್ಯಾಧಿಯೆಂಬ ಮುಜುಗರ!

Moolavyadhi
Published on

ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ ಎಂಬ ಗಾದೆಯ ಮಾತು ಜೀವನದ ಅನೇಕ ಸಂದರ್ಭಗಳಲ್ಲಿ ಬರುವ ತೊಂದರೆಗಳ ಪರಿಹಾರಕ್ಕೆ ಸ್ಪಷ್ಟವಾದ ಮಾರ್ಗದರ್ಶನವನ್ನು ನೀಡುತ್ತದೆ. ಸಮಸ್ಯೆಗಳು ಪ್ರಾರಂಭವಾಗುತ್ತಿದ್ದಂತೆ ಅದನ್ನರಿತು ನಿವಾರಣೆಗೆ ಮುಂದಾದರೆ ಸುಲಭ. ಹಾಗೆಯೇ ಬಿಟ್ಟರೆ ಅದು

ರೆಂಬೆಕೊಂಬೆ ಸೇರಿಕೊಂಡು ಬೃಹದಾಕಾರವಾಗಿ ಬೆಳೆಯುತ್ತದೆ. ಮತ್ತೆ ಅದನ್ನು ಮಣಿಸುವುದು ಬಲು ತ್ರಾಸದಾಯಕವಾಗುತ್ತದೆ. ಬದುಕಿನಲ್ಲಿ ಎದುರಾಗುವ ಎಲ್ಲಾ ಕಾಯಿಲೆಗಳಿಗೂ ಇದು ಅನ್ವಯವಾಗುತ್ತದೆ. ರೋಗ ಬಂದಾಗ ಹಾಗೆಯೇ ಕಡಿಮೆಯಾಗಬಹುದೆಂದೋ, ವೈದ್ಯರಲ್ಲಿಗೆ ಹೋದರೆ ಯಾವುದೋ ದೊಡ್ಡ ರೋಗದ ಹೆಸರನ್ನು ಹೇಳಿಬಿಟ್ಟರೆ ಎಂಬ ಹೆದರಿಕೆಯಿಂದಲೋ, ಚಿಕಿತ್ಸೆ ಆರಂಭ ಮಾಡಿದರೆ ಜೀವನಪೂರ್ತಿ ಔಷಧ ಸೇವಿಸಬೇಕೆಂದೋ, ಅನಗತ್ಯ ಖರ್ಚಿನ ದಾರಿಯನ್ನೇಕೆ ತುಳಿಯಬೇಕೆಂದೋ, ತಾತ್ಸಾರ ಭಾವದಿಂದಲೋ ಅಥವಾ ಏನು ಮಾಡಿದರೆ ಸರಿಯೆಂದು ತೋಚದೆ ಅಜ್ಞಾನದಿಂದಲೋ ಜನರು ರೋಗವನ್ನು ಗುಣಪಡಿಸಿಕೊಳ್ಳಲು ಮುಂದಾಗದೆ ಇರುವುದಿದೆ. ಇನ್ನು ಕೆಲವೊಂದು ಕಾಯಿಲೆಗಳು ದೇಹದಲ್ಲಿ ಕಾಣಿಸಿಕೊಳ್ಳುವ ಸ್ಥಳವನ್ನು ಹೊಂದಿಕೊಂಡು ಅದನ್ನು ವೈದ್ಯರಿಗೆ ತೋರಿಸಿಕೊಳ್ಳಲು ಮುಜುಗರ ಉಂಟಾಗಿ ಚಿಕಿತ್ಸೆಯನ್ನೇ ಪಡೆಯದೆ ಒದ್ದಾಡುವುದಿದೆ. ಅಂತಹವುಗಳ ಸಾಲಿನಲ್ಲಿ ಅತಿಸಾಮಾನ್ಯವಾಗಿ ಕಾಣಿಸಿಕೊಳ್ಳುವ ಕಾಯಿಲೆಯೆಂದರೆ ಮೊಳೆರೋಗ/ಪೈಲ್ಸ್ ಎಂದೇ ಜನಜನಿತವಾಗಿರುವ ಮೂಲವ್ಯಾಧಿ.

ಸುಲಭವಾಗಿ ಪರಿಹರಿಸಿಕೊಳ್ಳಬಹುದಾದ ರೋಗವನ್ನು ಉಲ್ಬಣಾವಸ್ಥೆಗೆ ಬರುವ ತನಕ ಕಾದು ಆಮೇಲೆ ಪರಿತಪಿಸುವ ಬದಲು ಈ ಮೂಲವ್ಯಾಧಿಯ ಕಾರಣ, ಲಕ್ಷಣ ಹಾಗೂ ಚಿಕಿತ್ಸಾ ಸ್ವರೂಪದ ಬಗ್ಗೆ ತಿಳಿದುಕೊಂಡರೆ ಕಾಯಿಲೆಯನ್ನು ಅರ್ಧ ಗೆದ್ದಂತಾಗುತ್ತದೆ. ಗುದದ್ವಾರದಿಂದ ಅನೇಕ ರೋಗಗಳು ಹುಟ್ಟಿಕೊಳ್ಳುತ್ತವೆ. ಅಲ್ಲಿ ಕಂಡುಬರುವ ಮೊಳೆಯಾಗಲಿ, ರಕ್ತಸ್ರಾವವಿರಲಿ, ನೋವು, ಉರಿ, ಕೀವು, ಮಲವಿಸರ್ಜನೆಗೆ ತಡೆ, ಅರ್ಬುದದ ಬೆಳವಣಿಗೆಯಿರಲಿ ಯಾವುದಿದ್ದರೂ ಅವೆಲ್ಲವನ್ನೂ ಜನರು ಮೂಲವ್ಯಾಧಿ ಅಥವಾ ಪೈಲ್ಸ್ ಎಂದೇ ಸಾಮನ್ಯವಾಗಿ ಭಾವಿಸುತ್ತಾರೆ. ತಾವಂದುಕೊಂಡ ಪೈಲ್ಸ್​ನ ಚಿಕಿತ್ಸೆಗೆ ನಾನಾ ವಿಧವಾದ ಮಾಗೋಪಾಯಗಳನ್ನು ತಮ್ಮಷ್ಟಕ್ಕೇ ಅನ್ವೇಷಿಸಿಕೊಂಡು ಮನೆಮದ್ದುಗಳಿಂದ ಹಿಡಿದು ಅಂತರ್ಜಾಲದ ತನಕ ಮೊರೆಹೋಗುತ್ತಾರೆ. ಯಾವುದಕ್ಕೂ ಕಾಯಿಲೆ ಬಗ್ಗದಾಗ ವೈದ್ಯರ ಬಳಿ ಹೋಗುತ್ತಾರೆ. ಆಗ ಅದು ಉಲ್ಬಣಗೊಂಡ ಭಗಂದರ/ ಫಿಸ್ತುಲಾ ಅಥವಾ ಬೇರ್ಯಾವುದೋ ಕಾಯಿಲೆಯೆಂದು ಗೊತ್ತಾಗಿ ಮತ್ತೆ ಬಹುಕಾಲ ನರಳುವಂತಾಗುತ್ತದೆ.

ಮೂಲವ್ಯಾಧಿ ಪ್ರಾಚೀನ ಕಾಲದಿಂದಲೂ ಇರುವ ರೋಗಗಳಲ್ಲೊಂದು. ವಾತಜ, ಪಿತ್ತಜ, ಕಫಜ, ತ್ರಿದೋಷಜ, ಶೋಣಿತಜ ಹಾಗೂ ಸಹಜ ಎಂಬುದಾಗಿ ಆರು ವಿಧಗಳನ್ನು ಸಮಗ್ರವಾಗಿ ವಿವರಿಸಲಾಗಿದೆ. ವೈರಿಯಂತೆ ಶರೀರ ಹಾಗೂ ಮನಸ್ಸನ್ನು ಪೀಡಿಸುವ ಕಾಯಿಲೆಯಾದುದರಿಂದ ಸಂಸ್ಕೃತದಲ್ಲಿ ಅರ್ಶ ಎಂಬ ಹೆಸರು ಬಂದಿದೆ. ಗುದಜ, ದುರ್ನಾಮ್ನ, ಮೂಲವ್ಯಾಧಿಗಳೆಲ್ಲವೂ ಈ ಮೊಳೆರೋಗದ ವಿಭಿನ್ನ ನಾಮಧೇಯಗಳು. ಮೂಲವ್ಯಾಧಿ ಬರಲು ಅನೇಕ ಕಾರಣಗಳಿವೆ. ಒಣ ಆಹಾರ, ಹಳಸಿರುವ ಆಹಾರ, ಸಿಹಿತಿನಿಸುಗಳು, ಎಳ್ಳು, ಹಾಲು, ಮೊಸರು, ಮಜ್ಜಿಗೆ, ಪಾಯಸ, ಪಿಷ್ಟ ಪದಾರ್ಥಗಳು, ಮೀನು, ಹಂದಿ, ಆಡು, ಎಮ್ಮೆಗಳ ಮಾಂಸಾಹಾರ, ಹಳಸಿದ ಮಾಂಸ, ಕೊಬ್ಬು, ಮದ್ಯಪಾನ, ಕಬ್ಬಿನ ಹಾಲು, ಉದ್ದಿನ ಕಟ್ಟು, ಒಣಗಿರುವ ತರಕಾರಿಗಳು, ಎಳ್ಳಿನ ಹಿಂಡಿ, ಹಾಲಿನ ಕೆನೆ, ಮೊಸರಿನ ಕೆನೆ, ತಾವರೆ ದಂಟು, ಅಪಕ್ವ ಮೊಸರು, ವಿನೇಗರ್, ಮೊಳಕೆಕಾಳುಗಳು, ಬೆಳ್ಳುಳ್ಳಿ, ಎಳೆ ಮೂಲಂಗಿ, ಹಸಿ ತರಕಾರಿಗಳು, ಆಲೂಗಡ್ಡೆ, ಬೀಟ್​ರೂಟ್ ಮೊದಲಾದ ಗಡ್ಡೆಗಳು, ಜೀರ್ಣಿಸಲು ಕಷ್ಟಕರವಾದ ಹಣ್ಣುಗಳು, ಉಪ್ಪಿನಕಾಯಿ, ಕಲುಷಿತ ನೀರು ಇವೆಲ್ಲವುಗಳ ಅತಿಯಾದ ನಿತ್ಯಬಳಕೆ ಮೂಲವ್ಯಾಧಿಯ ಮೂಲಕಾರಣಗಳಲ್ಲಿ ಸೇರಿವೆ. ವ್ಯಾಯಾಮ ಮಾಡದಿರುವುದು, ಸುಖಕರವಾದ ಹಾಸಿಗೆ, ಆಸನಗಳು, ಹಗಲುನಿದ್ರೆ, ಅತಿಯಾದ

ಲೈಂಗಿಕ ಕ್ರಿಯೆ, ಅತಿಶೀತಲ ನೀರಿನ ಸ್ಪರ್ಶ, ಬಟ್ಟೆ, ಹುಲ್ಲು, ಕಠಿಣವಸ್ತುಗಳಿಂದ ಘರ್ಷಣೆ, ಸಮನಾಗಿಲ್ಲದ ಆಸನ, ಭಂಗಿ ಹಾಗೂ ದೀರ್ಘಕಾಲ ಕುಳಿತುಕೊಳ್ಳುವುದು, ಅಪಾನವಾಯು, ಮಲ ಹಾಗೂ ಮೂತ್ರಗಳ ವೇಗವಿದ್ದಾಗ ಅವುಗಳನ್ನು ತಡೆಯುವುದು, ಗರ್ಭಪಾತ, ಗರ್ಭದಿಂದಾಗುವ ಒತ್ತಡ, ಕಷ್ಟಕರವಾದ ಹೆರಿಗೆ, ಗುದದ್ವಾರದ ಹರಿಯುವಿಕೆ, ಪ್ರಾಕೃತವಲ್ಲದ ಗುದದ್ವಾರದ ಚಿಕಿತ್ಸೆಗಳು ಅರ್ಶ ರೋಗದ ಉದ್ಭವಕ್ಕೆ ಕಾರಣವಾಗುತ್ತವೆ. ಅತಿಯಾದ ಜಿಡ್ಡಿನ ಪದಾರ್ಥ ಸೇವನೆ, ಸಿಹಿ, ಶೀತಲ, ಮೈಉರಿ ಉಂಟುಮಾಡುವ, ಅಜೀರ್ಣ ಉಂಟು ಮಾಡುವ, ದೇಹಕ್ಕೆ ಒಗ್ಗದ ಅಹಿತ ಆಹಾರ, ಕಷ್ಟದಿಂದ ಜೀರ್ಣವಾಗುವ ಆಹಾರ, ಆಯುರ್ವೆದ ವಿವರಿಸಿದ ವಿರುದ್ಧಾಹಾರಗಳು ಮೂಲವ್ಯಾಧಿಯ ಹಾದಿಯನ್ನು ಹಿಡಿಸುತ್ತವೆ. ಇವುಗಳಿಂದ ಅಪಾನವಾತವು ದೂಷಿತವಾಗಿ ಮಲ ಪೃವೃತ್ತಿಯಾಗುವ ಗುದದ್ವಾರದ ಭಾಗದ ಮಾಂಸಖಂಡಗಳಲ್ಲಿ ವಿಕೃತಿ ಉಂಟುಮಾಡಿ ಮೂಲವ್ಯಾಧಿಯ ಮೂಲವಾಗಿ ಪರಿಣಮಿಸುತ್ತವೆ.

(ಪ್ರತಿಕ್ರಿಯಿಸಿ: vvsudina@gmail.com)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net