

ಬೆಂಗಳೂರು: ಆಸ್ಕರ್ ವಿಜೇತ ಚಿತ್ರ 'ದಿ ಎಲಿಫೆಂಟ್ ವಿಸ್ಪರರ್ಸ್' 95ನೇ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಎಲ್ಲರ ಗಮನ ಸೆಳೆದಿತ್ತು. ಈ ಚಿತ್ರವನ್ನು ಕಾರ್ತಿಕಿ ಗೊನ್ಸಾಲ್ವಿಸ್ ನಿರ್ದೇಶಿಸಿದ್ದು, ಸಿಖ್ಯ ಎಂಟರ್ಟೈನ್ಮೆಂಟ್ ನಿರ್ಮಿಸಿದೆ. ಬೊಮ್ಮನ್ ಮತ್ತು ಬೆಳ್ಳಿ ದಂಪತಿಗಳು ಆನೆಗಳನ್ನು ನೋಡಿಕೊಳ್ಳುವ ದಂಪತಿಗಳಾಗಿ ಉತ್ತಮ ಮನ್ನಣೆ ಪಡೆದರು.
ಭಾರತೀಯ ಚಿತ್ರರಂಗದಲ್ಲಿ ಇತಿಹಾಸ ಸೃಷ್ಟಿಸಿದ 'ದಿ ಎಲಿಫೆಂಟ್ ವಿಸ್ಪರರ್ಸ್' ಎಂಬ ಸಾಕ್ಷ್ಯಚಿತ್ರವು ಆಸ್ಕರ್ ಪ್ರಶಸ್ತಿ ಗೆದ್ದಿದ್ದಕ್ಕಾಗಿ ಅನೇಕರಿಂದ ಪ್ರಶಂಸಿಸಲ್ಪಟ್ಟಿದೆ. ಆನೆ ಮತ್ತು ಮನುಷ್ಯನ ನಡುವಿನ ಸಂಬಂಧವನ್ನು ಈ ಸಿನಿಮಾದಲ್ಲಿ ಸುಂದರವಾಗಿ ತೋರಿಸಲಾಗಿದೆ. ಬೊಮ್ಮನ್ ಮತ್ತು ಬೆಳ್ಳಿ ಆನೆಯ ಆರೈಕೆ ಮಾಡಿದ ರೀತಿ ಎಲ್ಲರ ಮನ ತಟ್ಟಿತು. ಆದರೆ ಈಗ ಅದೇ ದಂಪತಿ ದೂರು ದಾಖಲಿಸಿದ್ದಾರೆ. ಹೌದು, ಬೊಮ್ಮನ್ ಮತ್ತು ಬೆಳ್ಳಿ ಚಿತ್ರದ ನಿರ್ಮಾಪಕರಿಗೆ ನೋಟಿಸ್ ಕಳುಹಿಸಿ 2 ಕೋಟಿ ಪರಿಹಾರ ನೀಡುವಂತೆ ಒತ್ತಾಯಿಸುತ್ತಿದ್ದಾರೆ.
ಇತ್ತೀಚೆಗೆ ಸಂದರ್ಶನವೊಂದರಲ್ಲಿ, ಬೊಮ್ಮನ್ ಮತ್ತು ಬೆಳ್ಳಿ ಕೆಲವು ವಿವರಗಳನ್ನು ಬಹಿರಂಗಪಡಿಸಿದರು. ಸಾಕ್ಷ್ಯಚಿತ್ರದ ಚಿತ್ರೀಕರಣದ ವೇಳೆ ಮನೆ ನಿರ್ಮಿಸಿಕೊಡುವುದಾಗಿ, ವಾಹನ ನೀಡುವುದಾಗಿ, ಆರ್ಥಿಕ ನೆರವು ನೀಡುವುದಾಗಿ ನಿರ್ಮಾಪಕರು ಭರವಸೆ ನೀಡಿದ್ದರು. ಆದರೆ ಈಡೇರಿಸಿಲ್ಲ, ಇದೀಗ 2 ಕೋಟಿ ರೂಪಾಯಿ ಕೊಡುವಂತೆ ಲೀಗಲ್ ನೋಟಿಸ್ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ ಬೊಮ್ಮನ್.
ಅಷ್ಟೇ ಅಲ್ಲ, ನಿರ್ಮಾಪಕರು ಕರೆ ಸ್ವೀಕರಿಸುತ್ತಿಲ್ಲ. ಅದಕ್ಕಾಗಿಯೇ ನೋಟಿಸ್‌ಗಳನ್ನು ಕಳುಹಿಸಲಾಗಿದೆ ಎಂದು ಬೊಮ್ಮನ್ ಸ್ಪಷ್ಟಪಡಿಸಿದ್ದಾರೆ.
ಸಾಕ್ಷ್ಯಚಿತ್ರವು ಅನಾಥ ಆನೆಯನ್ನು ಸಾಕಿದ ಬೆಳ್ಳಿಯ ನಿಜ ಜೀವನದ ಕಥೆಯನ್ನು ಆಧರಿಸಿದೆ.