ಐಫೆಲ್​ ಟವರ್​ನಲ್ಲಿ ಬಾಂಬ್​ ಇಟ್ಟಿರುವುದಾಗಿ ಬೆದರಿಕೆ: ಪ್ಯಾರಿಸ್​ನಲ್ಲಿ ಆತಂಕ, ಜನರ ಸ್ಥಳಾಂತರ

Eiffel Tower
Published on

ಪ್ಯಾರಿಸ್​: ಬಾಂಬ್​ ಬೆದರಿಕೆ ಹಿನ್ನೆಲೆಯಲ್ಲಿ ಫ್ರಾನ್ಸ್​ ರಾಜಧಾನಿ ಪ್ಯಾರಿಸ್​ನಲ್ಲಿರುವ ಪ್ರಖ್ಯಾತ ಐಫೆಲ್​ ಟವರ್ ಸುತ್ತ ಆತಂಕದ ವಾತಾವರಣ ಮನೆ ಮಾಡಿದ್ದು, ಅಲ್ಲಿ ನೆರೆದಿದ್ದ ಜನರನ್ನು ಸ್ಥಳಾಂತರಿಸಲಾಗಿದೆ.

ಫ್ರಾನ್ಸ್​ ಪೊಲೀಸರು ತೀವ್ರ ಕಟ್ಟೆಚ್ಚರ ವಹಿಸಿದ್ದು, ಐಫೆಲ್​​ ಟವರ್​ ಇರುವ ಪ್ರದೇಶದಲ್ಲಿ ಜನರು ಬರದಂತೆ ತಡೆಯಲು ಬಿಗಿ ಬಂದೋಬಸ್ತ್​ ಏರ್ಪಡಿಸಲಾಗಿದೆ. ಬುಧವಾರ ಅನಾಮಧೇಯ ವ್ಯಕ್ತಿಯೊಬ್ಬ ಕರೆ ಮಾಡಿ ಐಫೆಲ್​ ಟವರ್​ ಬಳಿ ಬಾಂಬ್​ ಇಟ್ಟಿರುವುದಾಗಿ ಬೆದರಿಕೆ ಹಾಕಿದ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ.

ಸ್ಥಳದ ಸುತ್ತ ಅಧಿಕಾರಿಗಳು ಪರಿಶೀಲನೆಯಲ್ಲಿ ತೊಡಗಿದ್ದಾರೆ. ಬಾಂಬ್​ ನಿಷ್ಕ್ರಿಯ ದಳ ಆಗಮಿಸಿದ್ದು, ಶೋಧ ಕಾರ್ಯಾಚಣೆ ನಡೆಸುತ್ತಿದೆ. ಪ್ಯಾರಿಸ್​ ಲ್ಯಾಂಡ್​ ಮಾರ್ಕ್​ಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಮುಚ್ಚಲಾಗಿದ್ದು, ಜನರು ಆಗಮಿಸದಂತೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸಲಾಗಿದೆ.

ಬಾಂಬ್​ ಬೆದರಿಕೆ ಹಿನ್ನೆಲೆ ಮುಂದಿನ ಆದೇಶದವರೆಗೂ ಸದ್ಯ ಐಫೆಲ್​ ಟವರ್​ ವೀಕ್ಷಣೆಯನ್ನು ರದ್ದು ಮಾಡಲಾಗಿದೆ. ಸುತ್ತಲಿನ ಪ್ರದೇಶದಲ್ಲಿ ತೀವ್ರ ಶೋಧ ಕಾರ್ಯ ನಡೆಯುತ್ತಿದೆ. ಕರೆ ಎಲ್ಲಿಂದ ಬಂತು ಎಂಬುದರ ಬಗ್ಗೆ ಪರಿಶೀಲಿಸಲಾಗುತ್ತಿದೆ.

ಬಾಂಬ್​ ಬೆದರಿಕೆ ಇದೇ ಮೊದಲೇನಲ್ಲ. ಈ ಹಿಂದೆಯು ಕರೆಗಳು ಬಂದಿದ್ದು, ಹುಸಿ ಕರೆಗಳಾಗಿವೆ. ಆದರೂ ಸುರಕ್ಷತಾ ದೃಷ್ಟಿಯಿಂದ ಕರೆಯನ್ನು ಗಂಭೀರವಾಗಿ ತೆಗೆದುಕೊಳ್ಳಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net