

ದೇವದುರ್ಗ: ಅರಕೇರಾ ಹೊಸ ತಾಲೂಕು ರಚನೆ ವಿರೋಧಿಸಿ ಹಾಗೂ ಅಖಂಡ ದೇವದುರ್ಗ ತಾಲೂಕು ಉಳಿವಿಗಾಗಿ ಹೋರಾಟ ನಡೆಸಿದವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಕೋವಿಡ್-19 ನಿಯಮ ಉಲ್ಲಂಘನೆ ಆರೋಪದಡಿ ಮಂಗಳವಾರ ಪ್ರಕರಣ ದಾಖಲಾಗಿದೆ.
ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಜೆಡಿಎಸ್ ನಾಯಕಿ ಕರೇಮ್ಮ ಗೋಪಾಲಕೃಷ್ಣ, ತಾಪಂ ಸದಸ್ಯ ಗೋವಿಂದರಾಜ್, ಹನುಮಂತ ಕಾಕರಗಲ್, ಶಿವಪ್ಪ ಪಲಕನಮರಡಿ, ಕೊತ್ತದೊಡ್ಡಿ ಗ್ರಾಮದ ಹನುಮಂತ್ರಾಯ, ಯಂಕೋಬ ಭೀಮಯ್ಯ, ಯಂಕೋಬ ಹನುಮಯ್ಯ, ಯಾಸೀನ್ ಪಕೀರಸಾಬ್ ಸೇರಿ ಇತರ 200ಕ್ಕೂ ಹೆಚ್ಚು ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ. 21ರಂದು ಅರಕೇರಾ ತಾಲೂಕು ರಚನೆ ವಿರೋಧಿಸಿ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಎಪಿಎಂಸಿ ಮಾರ್ಗವಾಗಿ ಮಿನಿವಿಧಾನಸೌಧದವರೆಗೆ ಅಕ್ರಮಕೂಟ ರಚಿಸಿಕೊಂಡು ರ್ಯಾಲಿ ನಡೆಸಲಾಗಿದೆ. ಎಪಿಎಂಸಿ ಮುಖ್ಯರಸ್ತೆ ಮೇಲೆ ಕುಳಿತು ಸಂಚಾರ ನಿಯಮ ಉಲ್ಲಂಘಿಸಲಾಗಿದೆ. ಕೋವಿಡ್-19 ಹರಡುವ ಸಮಯದಲ್ಲಿ ದೈಹಿಕ ಅಂತರ ಕಾಯ್ದುಕೊಳ್ಳದೆ, ಮುಖಕ್ಕೆ ಮಾಸ್ಕ್ ಧರಿಸದೆ ನಿಯಮ ಉಲ್ಲಂಘನೆ ಮಾಡಲಾಗಿದೆ ಎಂದು ಪಿಎಸ್ಐ ಕೆ.ರಂಗಯ್ಯ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.