ಕರಾವಳಿಯ ಆರ್ಥಿಕ ಶಕ್ತಿ ಮೀನುಗಾರಿಕೆ

ವಿಜಯವಾಣಿ (3)
Published on

ಮಂಗಳೂರು: ಸಿಗಡಿ ಸುಕ್ಕ, ಅಂಜಲ್ ಫ್ರೖೆ, ಮರುವಾಯಿ ಪುಂಡಿ, ಫಿಶ್ ಪುಳಿಮುಂಚಿ... ವೈವಿಧ್ಯಮಯ ಮೀನು ಖಾದ್ಯಗಳು ಯಾರಿಗೆ ಬೇಡ? ಬಹುಶಃ ಶುದ್ಧ ಸಸ್ಯಾಹಾರಿಗಳಲ್ಲದ ಎಲ್ಲರಿಗೆ ಮೀನು ಇಲ್ಲದ ಊಟ ಬರೀ ಸಪ್ಪೆ. ಬಡವರಿಗೆ ಒಂದು ತುಂಡು ಕೆಂಡದಲ್ಲಿ ಹಾಕಿದ ಒಣಗಿದ ಮೀನು ಇಲ್ಲದಿದ್ದರೆ ತುತ್ತು ಅನ್ನ ಗಂಟಲಲ್ಲಿ ಇಳಿಯದು! ಆದ್ದರಿಂದಲೇ ಕರ್ನಾಟಕದಲ್ಲಿ ಕೂಡ ಮೀನುಗಾರಿಕೆ ಇಂದು ಉತ್ತಮ ವಿದೇಶಿ ವಿನಿಮಯ, ಅತ್ಯಧಿಕ ಉದ್ಯೋಗ ಸೃಷ್ಟಿಯ ಕ್ಷೇತ್ರ. ಮಾನವನ ಉತ್ತಮ ಆರೋಗ್ಯಕ್ಕೆ ಅಗತ್ಯ ಪೌಷ್ಟಿಕ ಅಂಶಗಳನ್ನು ಒಳಗೊಂಡಿದೆ ಮೀನು. ಹಾನಿಕರವಲ್ಲದ ಕೊಬ್ಬನ್ನು ಒಳಗೊಂಡಿದೆ ಮತ್ತು ಅನಗತ್ಯ ಕೊಬ್ಬು ಕರಗಿಸುವ ಸಾಮರ್ಥ್ಯ ಹೊಂದಿದೆ. ಮೀನು ಒಂದು ಅತ್ಯುತ್ತಮ ಪೌಷ್ಟಿಕ ಆಹಾರ ಎಂದು ತಜ್ಞ ವೈದ್ಯರಿಂದ ಶಿಫಾರಸು ಮಾಡಲ್ಪಟ್ಟಿದೆ.

ಕಡಲತೀರದ ಸೊಗಸು

ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಮೂರು ಜಿಲ್ಲೆಗಳಲ್ಲಿ 320 ಕಿ.ಮೀ. ವ್ಯಾಪ್ತಿಯ ಕಡಲತೀರವನ್ನು ಕರ್ನಾಟಕ ಹೊಂದಿದ್ದು, ಸಮುದ್ರ ಮೀನುಗಾರಿಕೆ ಜತೆ ಒಳನಾಡು ಮೀನುಗಾರಿಕೆ ಕೂಡ ಜನಪ್ರಿಯಗೊಂಡಿದೆ. ಕಳೆದ ಮೂರು ದಶಕಗಳಿಂದ ಮೀನುಗಾರಿಕೆ ಮತ್ತು ಜಲಕೃಷಿಯು ರಾಜ್ಯದಲ್ಲಿ ಪ್ರವರ್ಧಮಾನದಲ್ಲಿರುವ ಚಟುವಟಿಕೆಯಾಗಿ ಗುರುತಿಸಿಕೊಂಡಿದೆ. ಸಾಗರೋತ್ಪನ್ನಗಳು ಕರಾವಳಿಯ ಆರ್ಥಿಕ ಶಕ್ತಿಯಾಗಿದೆ. ಮೀನುಗಾರಿಕೆಗೆ ಕಡಲಿನಲ್ಲಿ ಬೋಟುಗಳಲ್ಲಿ ತೆರಳುವವರು, ಬಲೆ ತಯಾರಕರು, ಮೀನು ಸಾಗಾಟದಲ್ಲಿ ದುಡಿಯುವವರು, ಮಂಜುಗಡ್ಡೆ ತುಂಬುವವರು, ಮಾರುಕಟ್ಟೆಯಲ್ಲಿ- ವಿವಿಧೆಡೆ ಸಂಚರಿಸಿ ಮೀನು ಮಾರಾಟ ಮಾಡುವವರು, ಬೋಟು ತಯಾರಿಸುವವರು... ಹೀಗೆ ನೂರು ಆಯಾಮಗಳಲ್ಲಿ ಈ ಕ್ಷೇತ್ರದಲ್ಲಿ ಜನರು ದುಡಿಯುತ್ತಿದ್ದಾರೆ. ಇವರು ದುಡಿದ ಹಣ ಜವಳಿ, ಆಭರಣ, ಪೀಠೋಪಕರಣ ಸಹಿತ ಇತರ ವ್ಯಾಪಾರ- ವ್ಯವಹಾರ ಕೇಂದ್ರಗಳು, ಶಿಕ್ಷಣ, ಆರೋಗ್ಯ ಸಹಿತ ಇತರ ಆದ್ಯತಾ ಕ್ಷೇತ್ರಗಳಲ್ಲಿ ವ್ಯಯವಾಗುತ್ತದೆ. ಆದ್ದರಿಂದ ಕರಾವಳಿಯ ಅಭಿವೃದ್ಧಿ ಹಾಗೂ ಮೀನುಗಾರಿಕೆಯನ್ನು ಪ್ರತ್ಯೇಕಿಸುವುದು ಅಸಾಧ್ಯ. ಅಧಿಕೃತ ಮೂಲ ಪ್ರಕಾರ ರಾಜ್ಯದಲ್ಲಿ ಸುಮಾರು 2,33,624 ಮೀನುಗಾರರು ಇದ್ದಾರೆ. ಇವರಲ್ಲಿ 96,853 ಮಂದಿ ಮೀನುಗಾರಿಕೆಯಲ್ಲಿ ತೊಡಗಿದ್ದಾರೆ. ಇವರು ರಾಜ್ಯದ 217 ಗ್ರಾಮಗಳಲ್ಲಿ ವಾಸವಾಗಿದ್ದಾರೆ.

ವಿದೇಶಗಳಿಗೆ ರಫ್ತು...

ಕರಾವಳಿಯಲ್ಲಿ ಮೀನುಗಾರಿಕೆಯು ಪ್ರಾಚೀನ ಚಟುವಟಿಕೆಗಳಲ್ಲಿ ಒಂದಾಗಿದೆ. ಎಪ್ಪತ್ತರ ಮಧ್ಯಭಾಗದ ತನಕ ಮೀನುಗಾರರು ಸಾಂಪ್ರದಾಯಿಕ ಮೀನುಗಾರಿಕೆಯನ್ನು ಮಾತ್ರ ನಡೆಸುತ್ತಿದ್ದರು. ಹಿಡಿದ ಮೀನುಗಳ ಒಂದು ದೊಡ್ಡ ಪಾಲನ್ನು ಕಡಲ ತೀರ ಪ್ರದೇಶದಲ್ಲೇ ಮಾರಾಟ ಮಾಡಬೇಕಿತ್ತು. ಆದರೆ, ನಂತರದ ವರ್ಷಗಳಲ್ಲಿ ಯಾಂತ್ರೀಕೃತ ದೋಣಿಗಳು ಚಾಲ್ತಿಗೆ ಬಂದವು. ಶೀತಲೀಕರಣ ಗೃಹಗಳ ಮೂಲಕ ಮೀನನ್ನು ಘನೀಕರಿಸುವ, ಹೆಚ್ಚು ಅವಧಿ ಜೋಪಾನವಾಗಿಡುವ ವ್ಯವಸ್ಥೆಯಾದವು. ಇಂದು ಮಂಗಳೂರಿನ ಬೊಂಡಾಸು, ಸಿಗಡಿ ಮೀನುಗಳು ಅಮೆರಿಕ, ಯುರೋಪ್, ಜಪಾನ್, ಕುವೈತ್ ಸಹಿತ ಹಲವು ರಾಷ್ಟ್ರಗಳನ್ನು ತಲುಪುತ್ತಿವೆ. ಮಂಗಳೂರಿನಿಂದ 86.05 ಕಿ.ಮೀ. ದೂರದಲ್ಲಿರುವ ದಕ್ಷಿಣ ಕನ್ನಡದ ಸುಳ್ಯಕ್ಕಿಂತ ಮೊದಲು 3,357 ಕಿ.ಮೀ. ದೂರದ ಕುವೈತ್​ಗೆ ತಲುಪುತ್ತದೆ.

ಕರಾವಳಿಯಲ್ಲಿ ಮತ್ಸ್ಯ ಸಂಪತ್ತು ಕ್ಷೀಣಿಸುತ್ತಿದೆ ಎನ್ನುವುದಕ್ಕಿಂತಲೂ, ಬೋಟುಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿವೆ; ಮತ್ಸ್ಯ ಬೇಡಿಕೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ ಎನ್ನುವುದು ಹೆಚ್ಚು ಸೂಕ್ತ. ಕರ್ನಾಟಕ ಕರಾವಳಿಯಲ್ಲಿ ಲೈಟ್ ಫಿಶಿಂಗ್, ಬುಲ್ ಟ್ರಾಲಿಂಗ್, ಚೌರಿ ಫಿಶಿಂಗ್ ಮುಂತಾದ ಅವೈಜ್ಞಾನಿಕ ವಿಧಾನ ಮೂಲಕ ಮೀನುಗಾರಿಕೆ ಹೆಚ್ಚುತ್ತಿರುವುದು ಕಂಡುಬರುತ್ತಿದೆ. ಹತ್ತಿರದ ಕೇರಳ, ತಮಿಳುನಾಡು ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಅವೈಜ್ಞಾನಿಕ ಮೀನುಗಾರಿಕೆ ತಡೆಯಲು ಅಗತ್ಯ ಕಾನೂನಿನ ಬಲ, ಮೂಲಸೌಕರ್ಯಗಳ ಕೊರತೆ ಕಂಡುಬರುತ್ತಿದೆ. ಕರ್ನಾಟಕ ಸಮುದ್ರ ಮೀನುಗಾರಿಕೆ ನಿಯಂತ್ರಣ ಕಾಯ್ದೆ 1986 ಜಾರಿಯಾಗದೆ ಸರ್ಕಾರದ ಹಂತದಲ್ಲೇ ಬಾಕಿ ಇದೆ. ಇದರಿಂದ ಮೀನುಗಾರಿಕೆ ಕ್ಷೇತ್ರದಲ್ಲಿ ಕಾನೂನು ವಿರೋಧಿ ಚಟುವಟಿಕೆ ನಿಯಂತ್ರಣಕ್ಕೆ ಅಡ್ಡಿಯಾಗಿದೆ ಎನ್ನುತ್ತಾರೆ ತಜ್ಞರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net