

ಸೊರಬ: ಪ್ರಸ್ತುತ ಭೌತಿಕ ಆಸ್ತಿಗಿಂತ ಬೌದ್ಧಿಕ ಆಸ್ತಿಗೆ ಹೆಚ್ಚು ಬೆಲೆ ಇದೆ. ದೇಶದ ಅಭಿವೃದ್ಧಿ ಶಿಕ್ಷಣದ ಮೂಲಕ ಸಾಧ್ಯ ಎಂಬುದನ್ನು ಮನಗಾಣಬೇಕು. ಈ ಮೂಲಕ ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಮುಂದಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಸೋಮವಾರ ಸಾಂಸ್ಕೃತಿಕ, ಕೀಡಾ, ಎನ್‌ಎಸ್‌ಎಸ್, ಯುವ ರೆಡ್‌ಕ್ರಾಸ್, ರೆಡ್ ರಿಬ್ಬನ್ ಹಾಗೂ ರೇಂಜರ್ಸ್ ಚಟುವಟಿಕೆಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಗುರಿ ಸಾಧನೆಗೆ ನಿರಂತರ ಶ್ರಮ, ಶಿಕ್ಷಕ ಹಾಗೂ ಹಿರಿಯರಲ್ಲಿ ವಿನಯ, ಗೌರವ ಭಾವನೆ ಹೊಂದಬೇಕು. ಕಾಲೇಜಿನ ಸಮಗ್ರ ಅಭಿವೃದ್ಧಿಗೆ ಅವಶ್ಯವಿರುವ ಅನುದಾನ ತರಲಾಗುವುದು. ಖಾಸಗಿ ಶಾಲಾ, ಕಾಲೇಜುಗಳಂತೆ ಗುಣಮಟ್ಟದ ಶಿಕ್ಷಣ, ಮೂಲ ಸೌಕರ್ಯ ಈಡೇರಿಸಲು ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು ಹಾಗೂ ಸಿಬ್ಬಂದಿ ಜತೆ ಚರ್ಚಿಸಲಾಗುವುದು ಎಂದು ತಿಳಿಸಿದರು.
ನಿವೃತ್ತ ಡಿಡಿಪಿಐ ಡಾ. ಹಾ.ಉಮೇಶ್ ಸೊರಬ ಮಾತನಾಡಿ, ಮನುಷ್ಯನ ಬದುಕು ನಿಂತಿರುವುದು ಬದಲಾವಣೆಯ ಮೇಲೆ. ಆದರೆ ಬದಲಾವಣೆ ಎಲ್ಲಿಂದ ಆರಂಭವಾಗುತ್ತದೆ ಎಂಬುದನ್ನು ಗುರುತಿಸಿ ಸರಿ ಮತ್ತು ತಪ್ಪುಗಳನ್ನು ತೀರ್ಮಾನಿಸುವಲ್ಲಿ ವಿಫಲರಾಗಿದ್ದೇವೆ. ನಮ್ಮ ಸಂಸ್ಕೃತಿ, ಸಂಸ್ಕಾರ, ಸಾಂಪ್ರದಾಯಗಳನ್ನು ಅರ್ಥಮಾಡಿಕೊಂಡರೆ ಬದುಕು ಗಟ್ಟಿಯಾಗುತ್ತದೆ ಎಂದು ತಿಳಿಸಿದರು.
ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಬಿಂಬಿಸುವ ವೇದಿಕೆಗಳು ನಮ್ಮನ್ನು ಮನುಷ್ಯರನ್ನಾಗಿ ಮಾಡುತ್ತವೆ. ಭಾಷೆ ಒಂದು ಅರಿವು ಹಾಗೂ ಬದುಕು ಕೂಡ. ಇಂದಿನ ಯುವಪೀಳಿಗೆ ಭಾಷೆಯನ್ನೇ ಮರೆತಿದೆ. ಭಾಷೆಯನ್ನು ನಾಶಪಡಿಸಿದರೆ ಒಂದು ಜನಾಂಗವೇ ನಾಶವಾದಂತೆ ಎಂಬುದನ್ನು ಅರಿಯಬೇಕಿದೆ ಎಂದರು.
ಕಾಲೇಜಿಗೆ ಅಗತ್ಯವಿರುವ ಮೂಲ ಸೌಲಭ್ಯಗಳ ಬಗ್ಗೆ ಪ್ರಾಚಾರ್ಯೆ ಡಾ. ನೇತ್ರಾವತಿ ಅವರು ಸಚಿವರ ಗಮನಕ್ಕೆ ತಂದರು. ಬಗರ್‌ಹುಕುಂ ಸಮಿತಿಯ ಎಂ.ಡಿ.ಶೇಖರ್, ತಾಪಂ ಮಾಜಿ ಅಧ್ಯಕ್ಷ ಎಚ್.ಗಣಪತಿ, ಸಿಪಿಐ ರಾಜಶೇಖರ್, ಪುರಸಭೆ ಅಧ್ಯಕ್ಷ ಪ್ರಭು ಮೇಸ್ತ್ರಿ, ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಜೆ.ಪ್ರಕಾಶ್, ಸದಸ್ಯರಾದ ಹೂವಪ್ಪ ಗೂಳಿ, ಶ್ರೀಕಾಂತ್, ರಾಜೇಶ್, ಸಾಜಿದ್ ಮಹಮದ್, ಪ್ರಾಧ್ಯಾಪಕರಾದ ಡಾ. ಜೋಷಿ, ಯೋಗೀಶ್, ರಾಜಶೇಖರ, ಚರಣರಾಜ್, ಮಂಜುನಾಥ್, ಡಾ. ಮಹೇಶ್ವರಿ ಇತರರಿದ್ದರು.