11000 ಕಟ್ಟಡ ಧರಾಶಾಯಿ ಅವಶೇಷಗಳಡಿ ಆಕ್ರಂದನ: ಭೂಕಂಪದಿಂದ ಮೃತಪಟ್ಟವರ ಸಂಖ್ಯೆ 5,100ಕ್ಕೆ ಏರಿಕೆ

Turkey
Published on

ಅದಾನಾ (ಟರ್ಕಿ): ಟರ್ಕಿ ಮತ್ತು ಸಿರಿಯಾದ ಭೂಕಂಪಗ್ರಸ್ತ ಪ್ರದೇಶಗಳಲ್ಲಿ 11 ಸಾವಿರಕ್ಕೂ ಅಧಿಕ ಕಟ್ಟಡಗಳು ಧರಾಶಾಯಿಯಾಗಿವೆ. ಭೀಕರ ಭೂಕಂಪಕ್ಕೆ ಬಲಿಯಾದವರ ಸಂಖ್ಯೆ 5,100ಕ್ಕೂ ಹೆಚ್ಚಾಗಿದೆ. ಕಟ್ಟಡಗಳ ಅವಶೇಷಗಳಡಿ ಇದ್ದಿರಬಹುದಾದ ಜನರ ರಕ್ಷಣೆಗೆ ಹಾಗೂ ಪರಿಹಾರಕ್ಕೆ ಪ್ರತಿಕೂಲ ಹವಾಮಾನದ ನಡುವೆಯೂ ಸಮರೋಪಾದಿಯಲ್ಲಿ ಕಾರ್ಯಾಚರಣೆ ಮುಂದುವರಿದಿದ್ದು, ಸಾವಿನ ಸಂಖ್ಯೆ ಏರುವ ಸಾಧ್ಯತೆಯಿದೆ. ಬಂಧು ಬಳಗ-ಆಪ್ತೇಷ್ಟರನ್ನು ಕಳಕೊಂಡವರು ಮತ್ತು ಕಣ್ಣ ಮುಂದೆಯೇ ಪುಟ್ಟ ಕಂದಮ್ಮಗಳು ಸಾವಿನಮನೆ ಸೇರಿರುವುದನ್ನು ಕಂಡ ಹೆತ್ತವರ ರೋದನ ಕರುಳು ಹಿಂಡುವಂತಿದೆ. ಜತೆಗೆ, ಅವಶೇಷಗಳಡಿಯಲ್ಲಿ ಜನರು ರಕ್ಷಣೆಗೆ ಮೊರೆಯಿಡುತ್ತಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ.

10 ನಗರಗಳಲ್ಲಿ ಹೆಚ್ಚು ಹಾನಿ ಸಂಭವಿಸಿದ್ದು, ಕಾಂಕ್ರೀಟ್ ಮತ್ತು ಕಬ್ಬಿಣದ ಗುಡ್ಡೆಗಳ ನಡುವೆ ಸಿಲುಕಿ ಸಾವು-ಬದುಕಿನೊಂದಿಗೆ ಹೋರಾಡುತ್ತಿರುವವರನ್ನು ರಕ್ಷಿಸಲು ರಕ್ಷಣಾ ಕಾರ್ಯಕರ್ತರು ಮತ್ತು ಸ್ಥಳೀಯರು ಹೆಣಗಾಡುತ್ತಿದ್ದಾರೆ. ಹಲವು ದೇಶಗಳ 24,000ಕ್ಕೂ ಅಧಿಕ ರಕ್ಷಣಾ ಸಿಬ್ಬಂದಿ ಅವರೊಂದಿಗೆ ಕೈ ಜೋಡಿಸಿದ್ದಾರೆ. ಮಂಗಳವಾರ ಕೂಡ 5ರ ತೀವ್ರತೆಯ ಮರುಭೂಕಂಪನ ಸಂಭವಿಸಿದೆ. 1999ರಲ್ಲಿ ವಾಯವ್ಯ ಟರ್ಕಿಯಲ್ಲಿ ಸಂಭವಿಸಿದ ಭೀಕರ ಭೂಕಂಪ ದಲ್ಲಿ ಅಂದಾಜು 18,000 ಜನರು ಮೃತಪಟ್ಟಿದ್ದರು.

3 ತಿಂಗಳು ತುರ್ತು ಪರಿಸ್ಥಿತಿ: ದೇಶದಲ್ಲಿ ಮೂರು ತಿಂಗಳು ತುರ್ತು ಪರಿಸ್ಥಿತಿ ಘೋಷಿಸಿ ಟರ್ಕಿ ಅಧ್ಯಕ್ಷ ರೆಸಿಪ್ ತಯ್ಯಿಪ್ ಎರ್ಡೆ ಗನ್ ಮಂಗಳವಾರ ಆದೇಶ ಹೊರಡಿಸಿದ್ದಾರೆ.

ಮೋದಿ ಭಾವುಕ: ಭೂಕಂಪದಿಂದ ಉಂಟಾಗಿರುವ ಅಪಾರ ಸಂಕಟಕ್ಕೆ ತೀವ್ರ ನೋವು ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, 2001ರಲ್ಲಿ ಗುಜರಾತ್​ನ ಕಛ್​ನಲ್ಲಿ ಸಂಭವಿಸಿದ ಭೂಕಂಪವನ್ನು ನೆನೆದು ಬಿಜೆಪಿ ಸಂಸದೀಯ ಸಭೆಯಲ್ಲಿ ಭಾವುಕರಾದರು.

ಭಾರತದ ಸಹಾಯಹಸ್ತ: ಟರ್ಕಿಗೆ ಪರಿಹಾರ ಸಾಮಗ್ರಿ ಹಾಗೂ ರಕ್ಷಣಾ ತಂಡವನ್ನು ಹೊತ್ತು ಸಾಗಿದ ಭಾರತದ ವಿಮಾನಕ್ಕೆ ಪಾಕ್ ವಾಯು ಮಾರ್ಗ ನಿರಾಕರಿಸಿದೆ. ಬೇರೆ ಮಾರ್ಗದಲ್ಲಿ ಶೋಧ ಹಾಗೂ ಪರಿಹಾರ ಕಾರ್ಯಾಚರಣೆಗೆ 50 ಜನರ ತಂಡ, ಇತರ ಸಾಧನಗಳನ್ನು ಹೊತ್ತ ವಿಮಾನ ಮಂಗಳವಾರ ಟರ್ಕಿ ತಲುಪಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net