ಅವಧಿ ಮೀರಿದ ಆಹಾರ ಪದಾರ್ಥ ಬಳಕೆ ಆರೋಪ; ಹೋಟೆಲ್​ ಮೇಲೆ ರೇಡ್​ ಆದ ಬಳಿಕ ಬಿಸಿನೆಸ್​ ಡಬಲ್​ ಆಗಿದೆ ಎಂದ ಖ್ಯಾತ ನಟ

Sundeep Kishan
Published on

ಹೈದರಾಬಾದ್: ಅವಧಿ ಮೀರಿದ  ಆಹಾರ ಪದಾರ್ಥಗಳನ್ನು ಬಳಸಲಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ  ತೆಲಂಗಾಣ ಆಹಾರ ಸುರಕ್ಷತಾ ಇಲಾಖೆಯು ರಾಜ್ಯ ರಾಜಧಾನಿ ಹೈದರಾಬಾದ್​ನಲ್ಲಿರುವ ಪ್ರತಿಷ್ಠಿತ ಹೋಟೆಲ್​ಗಳ ಮೇಲೆ ದಾಳಿ ನಡೆಸುತ್ತಿದ್ದು, ಆಹಾರ ಗುಣಮಟ್ಟ, ಪದಾರ್ಥಗಳ ಬಳಕೆ ಸೇರಿದಂತೆ ಹೋಟೆಲ್​ನವರು ಕೈಗೊಂಡಿರುವ ಕ್ರಮಗಳನ್ನು ಪರಿಶೀಲಿಸುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಕೆಲ ದಿನಗಳ ಹಿಂದೆ ತೆಲುಗು ನಟ ಸಂದೀಪ್​ ಕಿಶನ್​ ಮಾಲೀಕತ್ವದ ವಿವಾಹ ಭೋಜನಂಬು ರೆಸ್ಟೋರೆಂಟ್​ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ನಿಯಮಗಳನ್ನು ಪಾಲಿಸದೆ ಇರುವುದನ್ನು ಕಂಡು ಅನೇಕ ಆಹಾರ ಪದಾರ್ಥಗಳನ್ನು ವಶಕ್ಕೆ ಪಡೆದು ಲ್ಯಾಬ್​ಗೆ ಕಳುಹಿಸಿದ್ದರು.

ಸುಮಾರು ಏಳು ಶಾಖೆ​ಗಳನ್ನು ಹೊಂದಿರುವ ಹೋಟೆಲ್​ ಮೇಲೆ ದಾಳಿ ಮಾಡಿರುವ ಸುದ್ದಿ ವ್ಯಾಪಕ ಚರ್ಚೆಗೀಡಾಗಿತ್ತು. ದಾಳಿ ವೇಳೆ ಡೇಟ್ ಬಾರ್​ ಆದ ಅಕ್ಕಿ ಮೂಟೆ ಹಾಗೂ 500 ಗ್ರಾಮ್ ತೆಂಗಿನ ತುರಿಗೆ ಬಣ್ಣ ಹಾಕಲಾಗಿತ್ತು. ಇದನ್ನು ವಶಪಡಿಸಿಕೊಂಡ ಅಧಿಕಾರಿಗಳು ಪರೀಕ್ಷಿಸಲು ಲ್ಯಾಬ್​ಗೆ ಕಳುಹಿಸಿದ್ದರು.

Sundeep Kishan

ತಮ್ಮ ಹೋಟೆಲ್​ ಮೇಲೆ ದಾಳಿಯಾಗಿರುವ ಕುರಿತು ಪ್ರತಿಕ್ರಿಯಿಸಿರುವ ನಟ ಸಂದೀಪ್​, ಇದು ಸಾಮಾನ್ಯ ತಪಾಸಣೆಯಾಗಿದ್ದು, ಇದಕ್ಕೆ ಮಹತ್ವ ಕೊಡುವ ಅಗತ್ಯವಿಲ್ಲ. ನಾನು ನಡೆಸುತ್ತಿರುವ ರೆಸ್ಟೋರೆಂಟ್​ ಏಳು ಶಾಖೆಗಳನ್ನು ಹೊಂದಿದ್ದು, ಮೋಸ ಮಾಡಿ ವ್ಯಾಪಾರ ಮಾಡುವ ಅಗತ್ಯ ನನಗಿಲ್ಲ. ವಿವಾಹ ಭೋಜನಂಬು ರೆಸ್ಟೋರೆಂಟ್​​ನ ಏಳು ಶಾಖೆ​ಗಳಿಂದ ನಾವು ನಿತ್ಯ 50 ಫುಡ್ ಪ್ಯಾಕೆಟ್​ಗಳನ್ನು ದಾನ ಮಾಡುತ್ತೇವೆ. ಅಂದರೆ ದಿನಕ್ಕೆ 350 ಫುಡ್ ಪ್ಯಾಕೆಟ್​ಗಳನ್ನು ಉಚಿತವಾಗಿ ನೀಡುತ್ತಿದ್ದೇವೆ. ಒಂದು ಪ್ಯಾಕೆಟ್​ನ ಬೆಲೆ 50 ರೂಪಾಯಿ. ಅಂದರೆ ಪ್ರತಿ ತಿಂಗಳು ನಾಲ್ಕು ಲಕ್ಷ ರೂಪಾಯಿಗೂ ಹೆಚ್ಚು ಆಹಾರವನ್ನು ಉಚಿತವಾಗಿ ನೀಡುತ್ತಿದ್ದೇವೆ.

ಹೀಗಿರುವಾಗ ಕೆಲವೇ ಕೆಲವು ಆಹಾ ರ ಪದಾರ್ಥಗಳನ್ನು ಶೇಖರಿಸಿಡುವುದರಿಂದ ನಮಗೇನು ಆಗಬೇಕಿಲ್ಲ. ಎಷ್ಟೇ ದಾನ ಧರ್ಮ ಮಾಡಿದರೂ ರೆಸ್ಟೋರೆಂಟ್ ಸ್ವಚ್ಛವಾಗಿ ಇರಲೇಬೇಕು. ನಮ್ಮ ರೆಸ್ಟೋರೆಂಟ್ ಸ್ವಚ್ಛವಾಗಿಲ್ಲ ಎಂಬ ವಿಚಾರವನ್ನು ಅವರು ಹೇಳಿಲ್ಲ. ಈ ದಾಳಿ ನಡೆದ ಬಳಿಕ ರೆಸ್ಟೋರೆಂಟ್​ಗೆ ಹೆಚ್ಚಿನ ಜನ ಭೇಟಿ ನೀಡುತ್ತಿದ್ದು, ಮುಂಚೆಗಿಂತ ಈಗ ಬಿಸಿನೆಸ್​ ಚೆನ್ನಾಗಿ ಆಗುತ್ತಿದೆ. ನಾವು ನೀಡುವ ಗುಣಮಟ್ಟದ ಆಹಾರದ ಮೇಲೆ ಜನರಿಗೆ ನಂಬಿಕೆಯಿದ್ದು, ಹೋಟೆಲ್​ಗೆ ಹೆಚ್ಚಿನವರು ಭೇಟಿ ನೀಡುತ್ತಿದ್ದಾರೆ ಎಂದು ನಟ ಸಂದೀಪ್​ ಕಿಶನ್​ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net