ಈ ಒಂದು ಕಾರಣಕ್ಕೆ ನಾನು...; ಟೀಮ್​ ಇಂಡಿಯಾ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸದಿರಲು ಕಾರಣ ತಿಳಿಸಿದ ಆಶಿಶ್ ನೆಹ್ರಾ

Ashish Nehra
Published on

ನವದೆಹಲಿ: 09ನೇ ಆವೃತ್ತಿಯ ಟಿ20 ವಿಶ್ವಕಪ್​ ಆರಂಭವಾಗುವುದಕ್ಕೂ ಮುನ್ನ ಟೀಮ್​ ಇಂಡಿಯಾದ ಮುಂದಿನ ಕೋಚ್​ ಯಾರೆಂಬ ಪ್ರಶ್ನೆಗೆ ಚುಟುಕು ವಿಶ್ವಸಮರ ಮುಗಿದ ಬಳಿಕ ಬಿಸಿಸಿಐ ಉತ್ತರ ನೀಡಿತ್ತು. ರಾಹುಲ್​ ದ್ರಾವಿಡ್​ ಅವರ ಸ್ಥಾನಕ್ಕೆ ಟೀಮ್​ ಇಂಡಿಯಾದ ಮಾಜಿ ಆರಂಭಿಕ ಆಟಗಾರ ಗೌತಮ್​ ಗಂಭೀರ್​ರನ್ನು ನೇಮಿಸುವ ಮೂಲಕ ಬಿಸಿಸಿಐ ಗೊಂದಲಗಳಿಗೆ ತೆರೆ ಎಳೆದಿತ್ತು. ಗೌತಮ್​ ಗಂಭೀರ್​ ನೇಮಕಕ್ಕೂ ಮುನ್ನ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಹಲವು ಮಾಜಿ ಆಟಗಾರರ ಹೆಸರು ಕೇಳಿ ಬಂದಿತ್ತು. ಇದರಲ್ಲಿ ಪ್ರಮುಖವಾಗಿ ಆಶಿಶ್​ ನೆಹ್ರಾ ಹೆಸರು ಕೂಡ ಕೇಳಿ ಬಂದಿತ್ತು.

ಪದಾರ್ಪಣೆ ಆವೃತ್ತಿಯಲ್ಲೇ ತಂಡವನ್ನು ಚಾಂಪಿಯನ್ಸ್​ ಮಾಡಿದ ಕೀರ್ತಿ ಗುಜರಾತ್​ ಟೈಟಾನ್ಸ್​ ಮುಖ್ಯ ಕೋಚ್​ ಆಶಿಶ್​ ನೆಹ್ರಾ ಅವರಿಗೆ ಸಲ್ಲುತ್ತದೆ. ಆಶಿಶ್​ ಮಾರ್ಗದರ್ಶನದಲ್ಲಿ ತಂಡ ಒಮ್ಮೆ ಚಾಂಪಿಯನ್​ ಪಟ್ಟ ಅಲಂಕರಿಸಿದ್ದು, ಇನ್ನೊಮ್ಮೆ ರನ್ನರ್​ಅಪ್​ ಆಗಿದೆ. ಈ ವಿಚಾರವನ್ನು ಮುಂದಿಟ್ಟುಕೊಂಡು ನೆಹ್ರಾ ಟೀಮ್​ ಇಂಡಿಯಾದ ಕೋಚ್​ ಹುದ್ದೆಗೆ ಅರ್ಜಿ ಸಲ್ಲಿಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಕೋಚ್​ ಹುದ್ದೆಗೆ ಆಶಿಶ್​ ಅರ್ಜಿ ಸಲ್ಲಿಸಲು ನಿರಾಕರಿಸುವ ಮೂಲಕ ಸುದ್ದಿಯಾಗಿದ್ದರು. ಇದೀಗ ಈ ಕುರಿತು ಮಾತನಾಡಿರುವ ಆಶಿಶ್​ ತಾವು ಅರ್ಜಿ ಸಲ್ಲಿಸದೆ ಇರುವ ಕುರಿತು ಕಾರಣವನ್ನು ನೀಡಿದ್ದಾರೆ.

Ashish Nehra

ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿದ ನೆಹ್ರಾ, ನಾನು ಇನ್ನೂ ಕೋಚ್ ಹುದ್ದೆ ಬಗ್ಗೆ ಯೋಚಿಸಿಲ್ಲ. ನನ್ನ ಮಕ್ಕಳು ಇನ್ನೂ ಚಿಕ್ಕವರು. ಹಾಗೆ ನೋಡಿದರೆ ಗೌತಮ್​ ಮಕ್ಕಳು ಕೂಡ ಚಿಕ್ಕವರು. ಅದಾಗ್ಯೂ ಪ್ರತಿಯೊಬ್ಬರೂ ತಮ್ಮದೇ ಆದ ಆಲೋಚನೆಗಳನ್ನು ಹೊಂದಿದ್ದಾರೆ. ಸದ್ಯ ನಾನು ತಂಡದೊಂದಿಗೆ ದೀರ್ಘ ಪ್ರಯಾಣ ಮಾಡುವ ಮನಸ್ಥಿತಿಯಲಿಲ್ಲ ಎಂದು ಆಶಿಶ್​ ನೆಹ್ರಾ ಕೋಚ್​ ಹುದ್ದೆಗೆ ಅರ್ಜಿ ಸಲ್ಲಿಸದಿರುವ ಕುರಿತು ಕಾರಣವನ್ನು ತಿಳಿಸಿದ್ದಾರೆ.

ಇನ್ನು ಆಶಿಶ್​ ನೆಹ್ರಾ ಅವರ  ಕೋಚಿಂಗ್ ವೃತ್ತಿಜೀವನದ ಬಗ್ಗೆ ಹೇಳುವುದಾದರೆ, ನೆಹ್ರಾ ಐಪಿಎಲ್​ನ ಅತ್ಯಂತ ಯಶಸ್ವಿ ಕೋಚ್​ಗಳಲ್ಲಿ ಒಬ್ಬರಾಗಿದ್ದು, ಇವರ ಮಾರ್ಗದರ್ಶನದಲ್ಲಿ ಗುಜರಾತ್​ ಟೈಟಾನ್ಸ್​ ತಂಡವು ಒಮ್ಮೆ ಚಾಂಪಿಯನ್ಸ್​ ಇನ್ನೊಮ್ಮೆ ರನ್ನರ್​ಅಪ್​ ಆಗಿದೆ. ಇದಲ್ಲದೆ 18ನೇ ಆವೃತ್ತಿ ಐಪಿಎಲ್​ ಆರಂಭಕ್ಕೂ ಮುನ್ನ ಅವರು ಗುಜರಾತ್​ ಟೈಟಾನ್ಸ್​ ತಂಡವನ್ನು ತೊರೆಯಲಿದ್ದಾರೆ ಎಂದು ಹೇಳಲಾಗಿದ್ದು, ಇವರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಫ್ರಾಂಚೈಸಿಗಳು ಮುಗಿಬಿದ್ದಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net