

ನವದೆಹಲಿ: ಪಾಕಿಸ್ತಾನ ಪರ ಘೊಷಣೆ ಕೂಗಿದ ಆರೋಪದ ಮೇಲೆ ಬಂಧನದಲ್ಲಿರುವ ವ್ಯಕ್ತಿಯೊಬ್ಬನಿಗೆ ಮಧ್ಯಪ್ರದೇಶ ಹೈಕೋರ್ಟ್ ಮಂಗಳವಾರ ಜಾಮೀನು ಮಂಜೂರು ಮಾಡಿದೆ. ಆದರೆ ವಿಶೇಷ ಷರತ್ತು ವಿಧಿಸಿರುವ ಹೈಕೋರ್ಟ್, ಆತ ಪೊಲೀಸ್ ಠಾಣೆಯಲ್ಲಿ ರಾಷ್ಟ್ರಧ್ವಜಕ್ಕೆ 21 ಬಾರಿ ವಂದನೆ ಸಲ್ಲಿಸಬೇಕು ಮತ್ತು ವಿಚಾರಣೆ ಅಂತ್ಯವಾಗುವ ತನಕ ತಿಂಗಳಿಗೆ ಎರಡು ಬಾರಿ ಭಾರತ್ ಮಾತಾ ಕಿ ಜೈ ಘೊಷಣೆ ಕೂಗಬೇಕು ಎಂದು ತಿಳಿಸಿದೆ.
ನ್ಯಾಯಮೂರ್ತಿ ದಿನೇಶ್ ಕುಮಾರ್ ಪಾಲಿವಾಲ್ ಅವರು ಆರೋಪಿ ಫೈಝುಲ್ಗೆ ಜಾಮೀನು ಮಂಜೂರು ಮಾಡಿದ್ದು, ಪ್ರಕರಣವು ಇತ್ಯರ್ಥವಾಗುವವರೆಗೆ ಪ್ರತಿ ತಿಂಗಳ ಮೊದಲ ಮತ್ತು ನಾಲ್ಕನೇ ಮಂಗಳವಾರದಂದು ಭೋಪಾಲ್ನ ಮಿಸ್ರೋಡ್ ಪೊಲೀಸ್ ಠಾಣೆಗೆ ಹಾಜರಾಗಬೇಕು ಎಂದು ಷರತ್ತು ವಿಧಿಸಿದ್ದಾರೆ. ನಿಲ್ದಾಣದಲ್ಲಿ ಪ್ರದರ್ಶಿಸಲಾದ ತ್ರಿವರ್ಣ ಧ್ವಜದ ಮುಂದೆ ನಿಂತು ಭಾರತ್ ಮಾತಾ ಕಿ ಜೈ ಎಂದು ಘೊಷಣೆ ಮಾಡುತ್ತಾ 21 ಬಾರಿ ಸೆಲ್ಯೂಟ್ ಮಾಡಬೇಕು ಎಂದೂ ತಿಳಿಸಲಾಗಿದೆ. ಫೈಜಲ್ಗೆ ತನ್ನ ಜವಾಬ್ದಾರಿಯ ಪ್ರಜ್ಞೆಯನ್ನು ಮತ್ತು ಅವನಿಗೆ ತನ್ನ ದೇಶದ ಬಗ್ಗೆ ಹೆಮ್ಮೆ ಮೂಡಬೇಕು ಎಂಬ ಉದ್ದೇಶದಿಂದ ಹೀಗೆ ಆದೇಶ ಮಾಡಿದ್ದೇವೆ ಎಂದು ನ್ಯಾಯಾಧೀಶರು ವಿವರಿಸಿದ್ದಾರೆ. ಪಾಕಿಸ್ತಾನ್ ಜಿಂದಾಬಾದ್, ಹಿಂದೂಸ್ತಾನ್ ಮುರ್ದಾಬಾದ್ ಎಂಬ ಘೊಷಣೆ ಕೂಗುವ ಮೂಲಕ, ಫೈಜಲ್ ವಿವಿಧ ಗುಂಪುಗಳ ನಡುವೆ ದ್ವೇಷ ಉತ್ತೇಜಿಸಲು ಪ್ರಯತ್ನಿಸಿದ್ದ ಮತ್ತು ಈ ಕೃತ್ಯವು ಸಾಮರಸ್ಯ ಕೆಡಿಸುತ್ತದೆ ಎಂದು ಸರ್ಕಾರಿ ವಕೀಲರು ವಾದಿಸಿದ್ದರು.
ರಾಷ್ಟ್ರಗೀತೆ ವೇಳೆ ಎದ್ದು ನಿಲ್ಲದ ಶಾಸಕನ ವಿರುದ್ಧ ತನಿಖೆ: ರಾಷ್ಟ್ರಗೀತೆ ಮೊಳಗುತ್ತಿದ್ದಾಗ ಎದ್ದು ನಿಂತು ಗೌರವ ಸೂಚಿಸದ ಹಿನ್ನೆಲೆಯಲ್ಲಿ ನ್ಯಾಷನಲ್ ಕಾನ್ಪರೆನ್ಸ್ ಶಾಸಕ, ಸೊನವಾರಿ ಹಿಲಲ್ನ ಅಕ್ಬರ್ ಲೋನೆ ವಿರುದ್ಧ ತನಿಖೆ ನಡೆಸುವಂತೆ ಜಮ್ಮು ಮತ್ತು ಕಾಶ್ಮೀರದ ಆಡಳಿತ ಸೂಚನೆ ನೀಡಿದೆ. ಜಮ್ಮು-ಕಾಶ್ಮೀರದ ನೂತನ ಮುಖ್ಯಮಂತ್ರಿ ಆಗಿ ಒಮರ್ ಅಬ್ದುಲ್ಲಾ ಬುಧವಾರ ಶೇರ್ ಇ ಕಾಶ್ಮೀರ್ ಇಂಟರ್ನ್ಯಾಷನಲ್ ಕನ್ವೆನ್ಷನ್ ಸೆಂಟರ್ನಲ್ಲಿ ಪ್ರಮಾಣವಚನ ಸ್ವೀಕರಿಸಿದ ಸಂದರ್ಭದಲ್ಲಿ ಕೆಲವರು ರಾಷ್ಟ್ರಗೀತೆಗೆ ಎದ್ದು ನಿಂತು ಗೌರವ ಸೂಚಿಸಿರಲಿಲ್ಲ. ಆ ಪೈಕಿ ಶಾಸಕ ಲೋನೆ ಕೂಡ ಒಬ್ಬರಾಗಿದ್ದಾರೆ. ರಾಷ್ಟ್ರಗೀತೆಗೆ ಗೌರವ ನೀಡದ ಈ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮರಾದಲ್ಲೂ ಸೆರೆಯಾಗಿವೆ. ವೈದ್ಯಕೀಯ ಪರಿಸ್ಥಿತಿ ಹಿನ್ನೆಲೆಯಲ್ಲಿ ಎದ್ದು ನಿಂತು ಗೌರವ ಸೂಚಿಸಲು ಆಗಿರಲಿಲ್ಲ ಎಂದು ಲೋನೆ ಈ ಕುರಿತು ಸಮಾಜಾಯಿಷಿ ನೀಡಿದ್ದಾರೆ.
ರಾಜ್ಯ ಸ್ಥಾನಮಾನ ಅರ್ಜಿ ವಿಚಾರಣೆಗೆ ಒಪ್ಪಿಗೆ: ಜಮ್ಮು ಮತ್ತು ಕಾಶ್ಮೀರಕ್ಕೆ ಕಾಲಮಿತಿಯೊಳಗೆ ರಾಜ್ಯದ ಸ್ಥಾನಮಾನವನ್ನು ಮರುಸ್ಥಾಪಿಸಬೇಕು ಎಂದು ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವುದಾಗಿ ಸುಪ್ರೀಂಕೋರ್ಟ್ ಹೇಳಿದೆ. ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್, ತುರ್ತು ವಿಚಾರಣೆಗೆ ಆದ್ಯತೆ ನೀಡುವಂತೆ ಸಿಜೆಐ ಡಿವೈ ಚಂದ್ರಚೂಡ್ ನೇತೃತ್ವದ ನ್ಯಾಯಪೀಠಕ್ಕೆ ವಿನಂತಿಸಿಕೊಂಡರು. 2023ರಲ್ಲಿ ಸಂವಿಧಾನದ ವಿಧಿ 370ಕ್ಕೆ ಸಂಬಂಧಿಸಿ ತೀರ್ಪು ನೀಡಿದ್ದ ಸುಪ್ರೀಂಕೋರ್ಟ್, ಚುನಾವಣೆ ನಡೆಸುವ ಜತೆಗೆ ರಾಜ್ಯದ ಸ್ಥಾನಮಾನ ವಿಚಾರದ ಬಗ್ಗೆಯೂ ಕೇಂದ್ರ ಸರ್ಕಾರ ಪರಿಗಣಿಸಬೇಕು ಎಂದು ತಿಳಿಸಿತ್ತು.