

ಬಾಳೆಹೊನ್ನೂರು: ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬುಧವಾರ ಸಂಜೆಯಿಂದ ಆರಿದ್ರಾ ಮಳೆ ಹೆಚ್ಚಾಗಿದ್ದು, ಗುರುವಾರ ಮುಂಜಾನೆಯವರೆಗೂ ಸುರಿದಿದೆ. ಗುರುವಾರ ಮಧ್ಯಾಹ್ನದ ಬಳಿಕ ಸಾಧಾರಣ ಪ್ರಮಾಣದಲ್ಲಿ ಸುರಿಯಲಾರಂಬಿಸಿತು.
ಮಳೆಯ ಅಬ್ಬರಕ್ಕೆ ಕಾನ್ಕೆರೆ ರಸ್ತೆ ಹನುಮಾನ್ ಗಲ್ಲಿಯ ಹಮೀದಾ ಬಾನು ಎಂಬುವರ ಮನೆಯ ಕಾಂಪೌಂಡ್ ಕುಸಿದಿದ್ದು ಮನೆಯ ಮೇಲ್ಛಾವಣಿ, ಗೋಡೆಗೂ ಹಾನಿಯಾಗಿದೆ. ಮೇಲ್ಪಾಲ್-ಕೊಪ್ಪ ರಸ್ತೆಯ ಬಸವನಕಟ್ಟೆ ಬಳಿ ಗಾಳಿ, ಮಳೆಗೆ ವಿದ್ಯುತ್ ಕಂಬವೊಂದು ಧರೆಗುರುಳಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಹಲವು ಕಡೆಗಳಲ್ಲಿ ಗಾಳಿ ಮಳೆಗೆ ಸಣ್ಣಪುಟ್ಟ ಮರಗಳು ಉರುಳಿವೆ.
ಬುಧವಾರ ಸಂಜೆಯಿಂದ ಸುರಿದ ಮಳೆಗೆ ಭದ್ರಾನದಿ ಹಾಗೂ ಅದರ ಸುತ್ತಮುತ್ತಲಿನ ಹಳ್ಳಕೊಳ್ಳಗಳಲ್ಲಿ ನೀರಿನ ಹರಿವು ಏರಿಕೆಯಾಗಿದೆ. ಭದ್ರಾನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಧಾರಾಕಾರ ಮಳೆ ಕೃಷಿ ಚಟುವಟಿಕೆಗೆ ಅಡ್ಡಿಯಾಗಿದ್ದು ತಾತ್ಕಾಲಿಕವಾಗಿ ಕೃಷಿಕರು ಕೃಷಿ ಕಾರ್ಯವನ್ನು ಸ್ಥಗಿತಗೊಳಿಸಿದ್ದಾರೆ. ಥಂಡಿ ಗಾಳಿಗೆ ಜನರು ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ.