ಆದಾಯ ಪಾರಮ್ಯ; ಕೇಂದ್ರದಿಂದ ತಾರತಮ್ಯ

7
Published on

ವಿಲಾಸ ಮೇಲಗಿರಿ
ಬೆಂಗಳೂರು: ಸರ್ಕಾರಗಳಿಗೆ ದೊಡ್ಡ ಮಟ್ಟದ ಆದಾಯ ತಂದುಕೊಡುವ 2ನೇ ರಾಜ್ಯ ಎಂಬ ಹೆಗ್ಗಳಿಕೆ ಕರ್ನಾಟಕದ್ದು. ಮಹಾರಾಷ್ಟ್ರದ ತರುವಾಯ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಕರ್ನಾಟಕದ ಕೊಡುಗೆ ಗಮನಾರ್ಹ. ಕರ್ನಾಟಕದಿಂದ 2022-23ನೇ ಸಾಲಿನಲ್ಲಿ ಸುಮಾರು 3.50 ಲಕ್ಷ ಕೋಟಿ ರೂ. ವರಮಾನ ಕೇಂದ್ರ ಸರ್ಕಾರಕ್ಕೆ ಸಂದಾಯವಾಗುತ್ತದೆ. ಆದರೆ ಕರ್ನಾಟಕದಿಂದ ಕಂಡಾಬಟ್ಟೆ ಕಾಸು ಕಿತ್ತುಕೊಂಡೂ ನ್ಯಾಯಯುತ ಪಾಲು ಹಂಚಿಕೆಯಲ್ಲಿ ಅನ್ಯಾಯವಾಗುತ್ತಿರುವುದು ಋಜುವಾತಾಗುತ್ತಲೇ ಇದೆ.

ಕೇಂದ್ರದಿಂದ ಬರುವ ಅನುದಾನದಲ್ಲಿ ಅನೇಕ ವರ್ಷಗಳಿಂದಲೂ ನ್ಯಾಯಸಮ್ಮತವಾಗಿ ದೊರೆಯಬೇಕಾದ ಪಾಲು ದೊರೆಯುತ್ತಿಲ್ಲ. ಇಂದಿನ ಸರ್ಕಾರವೂ ಸೇರಿದಂತೆ ಹಿಂದಿನ ಎಲ್ಲ ಸರ್ಕಾರಗಳೂ ದಮ್ಮಯ್ಯ ಎಂದು ಬೇಡಿಕೊಂಡರೂ ಕೇಂದ್ರದ ನಿರ್ಲಕ್ಷ್ಯ ಮುಂದುವರಿದೇ ಇದೆ. ಕಡಿಮೆ ಆದಾಯ ತಂದುಕೊಡುವ ರಾಜ್ಯಗಳಿಗೆ ಹೆಚ್ಚು ಅನುದಾನ ನೀಡುತ್ತ ಬಂದಿರುವುದು ಕನ್ನಡಿಗರ ಅಸಮಾಧಾನಕ್ಕೆ ಪ್ರಮುಖ ಕಾರಣವಾಗಿದೆ.

ಅನೇಕ ಬಾರಿ ಮುಖ್ಯಮಂತ್ರಿ ಆದಿಯಾಗಿ ನಿಯೋಗ, ಉನ್ನತಾಧಿಕಾರಿಗಳ ತಂಡಗಳು ಒತ್ತಡ ಹೇರಿದರೂ ನಿರೀಕ್ಷಿತ ಅನುದಾನ ನೀಡದೇ ಇರುವುದು ಆಕ್ಷೇಪಕ್ಕೆ ಆಸ್ಪದ ಮಾಡಿಕೊಟ್ಟಿದೆ. ಕೇಂದ್ರ ಸರ್ಕಾರದ ತೆರಿಗೆ ಸಂಗ್ರಹ ಮತ್ತು ಆದಾಯ ಗಣನೀಯವಾಗಿ ಏರಿಕೆಯಾಗುತ್ತಿದ್ದರೂ ಅದಕ್ಕೆ ಸಮಾನಾಂತರವಾಗಿ ರಾಜ್ಯಕ್ಕೆ ಹಣ ಹಂಚಿಕೆಯಾಗುತ್ತಿಲ್ಲ. ಪ್ರಕೃತಿ ವಿಕೋಪ, ನೀರಾವರಿ, ರೈಲ್ವೆ ಯೋಜನೆಗಳಿಗೆ ಮಾತ್ರವಲ್ಲ, ಜಿಎಸ್​ಟಿ ಪಾಲು ಹಂಚಿಕೆಯಲ್ಲೂ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ. ಇದರಿಂದ ಅಭಿವೃದ್ಧಿಯಲ್ಲಿ ಅಸಮತೋಲನ ಉಂಟಾಗುತ್ತಿರುವುದೂ ಸುಳ್ಳಲ್ಲ.

ಕೇಂದ್ರದ ಅನುದಾನ

ರಾಜ್ಯಕ್ಕೆ ಕೇಂದ್ರ ಪುರಸ್ಕೃತ ಯೋಜನೆಗಳು, ಕೇಂದ್ರದ ಯೋಜನೆಗಳು, ಹಣಕಾಸು ಆಯೋಗದ ಶಿಫಾರಸು ಮೂಲಕ ವರ್ಗಾವಣೆ ರೂಪದಲ್ಲಿ ಕೇಂದ್ರ ಸರ್ಕಾರ ಹಣವನ್ನು ಕೊಡುತ್ತದೆ. ಆದರೆ ಈ ಯಾವ ಅನುದಾನಗಳೂ ಸಮರ್ಪಕ, ಸಮಯಕ್ಕೆ ಸರಿಯಾಗಿ ಬಂದ ದಾಖಲೆಯಿಲ್ಲ. ದಕ್ಷಿಣ ಹಾಗೂ ಉತ್ತರ ರಾಜ್ಯಗಳ ನಡುವೆ ಅನುದಾನ ಹಂಚಿಕೆಯಲ್ಲಿ ಕೇಂದ್ರ ತಾರತಮ್ಯ ನೀತಿ ಅನುಸರಿಸುತ್ತಿದೆ; ದಕ್ಷಿಣದ ರಾಜ್ಯಗಳು ತೆರಿಗೆ ರೂಪದಲ್ಲಿ ಹೆಚ್ಚು ಆದಾಯ ಕೊಟ್ಟರೂ ಅವುಗಳಿಗೆ ಅನುದಾನ ಕಡಿಮೆ ದೊರೆಯುತ್ತಿದೆ ಎಂಬ ಕೂಗೂ ಇದೆ. ಅನುದಾನ ಹಂಚಿಕೆಯಲ್ಲಿ ಕೇಂದ್ರ ಸರ್ಕಾರ ಅನುಸರಿಸುತ್ತಿರುವ ಮಾನದಂಡಗಳೇ ಬದಲಾಗಬೇಕು ಎಂಬ ಒತ್ತಡವೂ ಕೇಳಿ ಬರುತ್ತಿದೆ.

ಕೇಂದ್ರ ಸರ್ಕಾರದ ತೆರಿಗೆ ಸಂಗ್ರಹ ಮತ್ತು ಆದಾಯಕ್ಕೆ ಸಮಾನಾಂತರವಾಗಿ ರಾಜ್ಯಕ್ಕೆ ಹಣ ಹಂಚಿಕೆಯಾಗುತ್ತಿಲ್ಲ. ಪ್ರಕೃತಿ ವಿಕೋಪ, ನೀರಾವರಿ, ರೈಲ್ವೆ ಯೋಜನೆಗಳಿಗೆ ಮಾತ್ರವಲ್ಲ, ಜಿಎಸ್​ಟಿ ಪಾಲು ಹಂಚಿಕೆಯಲ್ಲೂ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ. ಇದರಿಂದ ಅಭಿವೃದ್ಧಿ ಯೋಜನೆಗಳಿಗೆ ತೊಂದರೆಯಾಗಿದೆ.

ಯೋಜನೆಗಳಿಗೂ ಕಡಿತ

ಕೇಂದ್ರ ಪುರಸ್ಕೃತ ಯೋಜನೆಗಳಲ್ಲೂ ಅನುದಾನ ಹಂಚಿಕೆಯಲ್ಲಿ ಕಡಿತವಾಗುತ್ತಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಆರೋಗ್ಯ, ಉನ್ನತ ಶಿಕ್ಷಣ, ತೋಟಗಾರಿಕೆ, ವಸತಿ, ಅಲ್ಪಸಂಖ್ಯಾತರ ಕಲ್ಯಾಣ, ಪ್ರಾಥಮಿಕ ಶಿಕ್ಷಣ ಮತ್ತಿತರ ಇಲಾಖೆಗಳಿಗೂ ನಿರೀಕ್ಷಿತ ಅನುದಾನ ದೊರೆಯುತ್ತಿಲ್ಲ.

  • ಕೃಷಿ ಇಲಾಖೆಗೆ 613.24 ಕೋಟಿ ರೂ. ಹಂಚಿಕೆಯಾದರೆ, ಜನವರಿ ಅಂತ್ಯಕ್ಕೆ 285.79 ಕೋಟಿ ರೂ. ಬಿಡುಗಡೆಯಾಗಿದ್ದು, ಶೇ.28.74 ರಷ್ಟು ಖರ್ಚಾಗಿದೆ.
  • ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಪ್ ಇಲಾಖೆಗೆ 300 ಕೋಟಿ ರೂ. ಹಂಚಿಕೆಯಾಗಿದ್ದು, ಜನವರಿ ಅಂತ್ಯಕ್ಕೆ ಬರೀ 75 ಕೋಟಿ ರೂ. ಬಿಡುಗಡೆಯಾಗಿದೆ.
  • ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಗೆ 1470.09 ಕೋಟಿ ರೂ. ಹಂಚಿಕೆಯಾದರೆ, 1040.33 ಕೋಟಿ ರೂ. ಬಿಡುಗಡೆಯಾಗಿದೆ.
  • ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ 9217.40 ಕೋಟಿ ರೂ. ಹಂಚಿಕೆಯಾದರೆ, 3061.07 ಕೋಟಿ ಬಿಡುಗಡೆಯಾಗಿದೆ.
  • ಸಮಾಜ ಕಲ್ಯಾಣ ಇಲಾಖೆಗೆ 597.26 ಕೋಟಿ ರೂ.ಗೆ 115.37 ಕೋಟಿ ರೂ. ಬಿಡುಗಡೆಯಾಗಿದೆ.
  • ನಗರಾಭಿವೃದ್ಧಿ ಇಲಾಖೆಗೆ 1710.55 ಕೋಟಿ ರೂ. ಪೈಕಿ 692.12 ಕೋಟಿ ರೂ. ಬಿಡುಗಡೆಯಾಗಿದೆ.
  • ತೋಟಗಾರಿಕೆ ಇಲಾಖೆಗೆ 524.55 ಕೋಟಿ ರೂ.ಗೆ 230.65 ಕೋಟಿ ರೂ. ಬಿಡುಗಡೆಯಾಗಿದೆ.
  • ಉನ್ನತ ಶಿಕ್ಷಣ ಇಲಾಖೆಗೆ 59.22 ಕೋಟಿ ರೂ. ಹಂಚಿಕೆಯಾದರೆ ಜನವರಿ ಅಂತ್ಯಕ್ಕೆ ಸ್ವಲ್ಪವೂ ಎಷ್ಟೂ ಬಿಡುಗಡೆಯಾಗಿಲ್ಲ.
  • ಆರೋಗ್ಯ ಇಲಾಖೆಗೆ 2169 ಕೋಟಿ ರೂ. ಪೈಕಿ 688 ಕೋಟಿ ರೂ. ಬಿಡುಗಡೆಯಾಗಿದೆ.
  • ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ 1905.98 ರೂ. ಗಳಲ್ಲಿ 1356.53 ಕೋಟಿ ರೂ. ಬಿಡುಗಡೆಯಾಗಿದೆ.
ರಾಜ್ಯದ ಪ್ರತಿನಿಧಿಗಳು

ಕೇಂದ್ರ ಸರ್ಕಾರದಲ್ಲಿ ಪ್ರಲ್ಹಾದ್ ಜೋಶಿ ಗಣಿ, ಕಲ್ಲಿದ್ದಲು, ಸಂಸದೀಯ ವ್ಯವಹಾರ, ಶೋಭಾ ಕರಂದ್ಲಾಜೆ ಕೃಷಿ ಮತ್ತು ರೈತ ಕಲ್ಯಾಣ, ಎ.ನಾರಾಯಣಸ್ವಾಮಿ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ, ಭಗವಂತ ಖೂಬಾ ನವೀಕರಿಸಬಹುದಾದ ಇಂಧನ, ರಾಸಾಯನಿಕ ಹಾಗೂ ರಸಗೊಬ್ಬರ ಮತ್ತು ರಾಜೀವ್ ಚಂದ್ರಶೇಖರ್(ರಾಜ್ಯದಿಂದ ಆಯ್ಕೆಯಾದ ರಾಜ್ಯಸಭೆ ಸದಸ್ಯ) ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾಗಿದ್ದಾರೆ. ರಾಜ್ಯದ 28 ಲೋಕಸಭೆ ಕ್ಷೇತ್ರಗಳ ಪೈಕಿ 25 ಕ್ಷೇತ್ರಗಳು ಬಿಜೆಪಿ ಪಾಲಾಗಿವೆ. ಆದರೂ ಕೇಂದ್ರದಿಂದ ನ್ಯಾಯಸಮ್ಮತವಾಗಿ ಬರಬೇಕಾದ ಅನುದಾನ ಬರುತ್ತಿಲ್ಲ.

ಕೃಶವಾದ ಯೋಜನೆಗಳು

2022-23ನೇ ಸಾಲಿಗೆ ಕೇಂದ್ರದಿಂದ ರಾಜ್ಯಕ್ಕೆ 21,435.85 ಕೋಟಿ ರೂ. ಅನುದಾನ ಹಂಚಿಕೆಯಾಗಿದೆ. ಆದರೆ ಜನವರಿ ಅಂತ್ಯದ ವೇಳೆಗೆ 9704.29 ಕೋಟಿ ರೂ. ಬಿಡುಗಡೆಯಾಗಿದೆ. ಹಾಗಾಗಿ ಅನೇಕ ಯೋಜನೆಗಳು ನಿರೀಕ್ಷಿತ ಪ್ರಗತಿ ಸಾಧಿಸಲು ಸಾಧ್ಯವಾಗದೇ ಕೃಶವಾಗುತ್ತಿವೆ. ಪ್ರಮುಖ ಯೋಜನೆಗಳು ಕುಂಟುತ್ತ ಸಾಗುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net