ವಿಶ್ರಾಂತ ಕುಲಪತಿ ಪುತ್ರನ ಪದವಿ ರದ್ದು

High Court Logo
Published on

| ವೆಂಕಟೇಶ ಹೂಗಾರ್ ರಾಯಚೂರು

ಅಕ್ರಮವಾಗಿ ಕೃಷಿ ಕೋಟಾದಡಿ ಬಿಎಸ್ಸಿ ಸೇರಿ ಇತರ ಪದವಿಗಳನ್ನು ಪಡೆದ ವಿಶ್ರಾಂತ ಕುಲಪತಿ ಡಾ.ಬಿ.ವಿ.ಪಾಟೀಲ್ ಪುತ್ರ ವಿನಯ್ ಪಾಟೀಲ್​ರ ಎಲ್ಲ ಪದವಿಗಳನ್ನು ರದ್ದುಪಡಿಸಿ, ಇದಕ್ಕೆ ತಗುಲಿರುವ ವೆಚ್ಚ 10 ಲಕ್ಷ ರೂ. ಅನ್ನು ವಿವಿಗೆ ಭರಿಸುವಂತೆ ಕೃಷಿ ಇಲಾಖೆ ಅಧೀನ ಕಾರ್ಯದರ್ಶಿ ಎಚ್.ಎನ್.ಲಕ್ಷ್ಮಣಗೌಡ ಆದೇಶಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ.

ವಿವಿ ಕುಲಪತಿಗೆ ಮೇ 21ರಂದು ಪತ್ರ ಬರೆದು ಆದೇಶಿಸಿರುವ ಅಧೀನ ಕಾರ್ಯದರ್ಶಿ, ಆರ್​ಟಿಐ ಕಾರ್ಯಕರ್ತ ಟಿ.ಮಾರೆಪ್ಪ ಹೈಕೋರ್ಟ್​ಗೆ ಸಲ್ಲಿಸಿದ ರಿಟ್​ನಲ್ಲಿನ ಆರೋಪ ಸಾಬೀತಾಗಿದೆ. ಡಾ.ಬಿ.ವಿ.ಪಾಟೀಲ್ ಕುಲಪತಿಯಾಗಿದ್ದ ಸಂದರ್ಭ ವಿನಯ್ ಪಾಟೀಲ್ ಕೃಷಿ ಕೋಟಾದಡಿ ಬಿಎಸ್ಸಿ ಕೃಷಿ ಪದವಿಗೆ ಅಕ್ರಮವಾಗಿ ಪ್ರವೇಶ ಪಡೆದಿರುವುದು ಸ್ಪಷ್ಟವಾಗಿದೆ. ಇಲ್ಲಿ ಪಡೆದಿರುವ ಬಿಎಸ್ಸಿ ಪದವಿ, ಎಂಎಸ್ಸಿ ಹಾಗೂ ಪಿಎಚ್.ಡಿ ಎಲ್ಲ ಪ್ರಮಾಣ ಪತ್ರಗಳನ್ನು ತಕ್ಷಣದಿಂದ ರದ್ದುಪಡಿಸುವುದು. ಕೃಷಿ ಆದಾಯ ಪ್ರಮಾಣಪತ್ರ ತಿದ್ದಿದ ಕ್ರಿಮಿನಲ್ ಅಪರಾಧಕ್ಕಾಗಿ ವಿಶ್ರಾಂತ ಕುಲಪತಿ ಡಾ.ಬಿ.ವಿ.ಪಾಟೀಲ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಸೂಚಿಸಿದ್ದಾರೆ.

2020-21ನೇ ಸಾಲಿಗೆ ಕೃಷಿ ಕೋಟಾದಡಿ ಪ್ರವೇಶ ಪಡೆವ ಓರ್ವ ವಿದ್ಯಾರ್ಥಿಯ ಬಿಎಸ್ಸಿ ಪದವಿಗೆ ತಗಲುವ ಸಂಪೂರ್ಣ ವೆಚ್ಚವನ್ನು ವಿನಯ್ ಪಾಟೀಲ್​ನಿಂದ ಭರಿಸುವಂತೆ ಆದೇಶಿಸಿದ್ದಾರೆ. ಹೈಕೋರ್ಟ್ ಆದೇಶದಂತೆ ನಿಯಮಾನುಸಾರ ಕ್ರಮ ಕೈಗೊಂಡು ತಿಂಗಳೊಳಗೆ ದಾಖಲೆಗಳೊಂದಿಗೆ ವರದಿ ಸಲ್ಲಿಸಲು ಸೂಚಿಸಲಾಗಿದೆ. ಅಧೀನ ಕಾರ್ಯದರ್ಶಿಯ ಆದೇಶ ಪರಿಣಾಮ ಕುಲಪತಿ ಡಾ.ಕೆ.ಎನ್.ಕಟ್ಟಿಮನಿ, ಕುಲಸಚಿವರಿಂದ ವಿನಯ್ ಪಾಟೀಲ್​ಗೆೆ ಮೇ 22ರಂದೇ ನೋಟಿಸ್ ಜಾರಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net