

ಹೋಳಿಯೆಂದರೆ ಬದುಕನ್ನು ಸಂಭ್ರಮಿಸುವ ಮಹಾಪರ್ವ. ಈ ಸಂಭ್ರಮ, ಸಡಗರಗಳು ಸಾಂಸ್ಕೃತಿಕ ಸೊಗಡಿಗೆ ಸಾಕ್ಷಿಯಾಗಿದ್ದು, ಜನಮನವನ್ನು ಬೆಸೆಯುತ್ತಿವೆ. ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಹೋಳಿಯನ್ನು ವಿಭಿನ್ನವಾಗಿ ಆಚರಿಸುವ ಪರಂಪರೆ ಭಾವಸಂಭ್ರಮಕ್ಕೆ ಸಾಕ್ಷಿ. ಅಂಥ ವೈವಿಧ್ಯಮಯ ಆಚರಣೆಯ ಮಾಹಿತಿ ಇಲ್ಲಿದೆ.
ಕೋಲಾಟಕ್ಕೆ ಹೆಜ್ಜೆ ಹಾಕುತ...: ಹೋಳಿ ಹುಣ್ಣಿಮೆ ಪ್ರಯುಕ್ತ ಚಿತ್ರದುರ್ಗ ಜಿಲ್ಲೆಯ ಭರಮಸಾಗರ ಹೋಬಳಿಯ ಸುತ್ತಮುತ್ತಲ ಇಸಾಮುದ್ರ ಲಂಬಾಣಿ ಹಟ್ಟಿ, ಅರಭಗಟ್ಟ, ಪಂಜಯ್ಯನಹಟ್ಟಿ ಲಂಬಾಣಿ ತಾಂಡಾಗಳ ಹಿರಿಯ ಮಹಿಳೆಯರು ಸಾಂಪ್ರದಾಯಕ ಉಡುಪು ಧರಿಸಿ ಮನೆಮನೆ ಸುತ್ತಿ ಹೋಳಿ ಕೋಲಾಟ ಆಡುತ್ತಾರೆ. ನೃತ್ಯಗಾರರು ಸಾಮಾನ್ಯವಾಗಿ ಸಂಕಲ್ಪಬದ್ಧರಾಗಿದ್ದು, ಮಾಂಸಾಹಾರ ಸೇವಿಸದೆ ಬರಿಗಾಲಿನಲ್ಲಿಯೇ ಸುತ್ತಿ ನೃತ್ಯ ಮಾಡುತ್ತಾರೆ ಹಾಗೂ ಮನೆಯವರು ನೀಡುವ ಕಾಣಿಕೆಯನ್ನು ಸ್ವೀಕರಿಸುತ್ತಾರೆ. ಕೋಲಾಟದಲ್ಲಿ ರಾಮಾಯಣ, ಮಹಾಭಾರತ, ಇತರ ಭಕ್ತಿಪ್ರಧಾನ ಹಾಡುಗಳನ್ನು ಹಾಡಿ ಕಲೆಯನ್ನು ಪ್ರದರ್ಶಿಸುತ್ತಾರೆ.
ಜಾನಪದ ಸೊಗಡು: ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ನೆಲೆ ಕಂಡುಕೊಂಡಿರುವ ಬಂಜಾರ ಸಮಾಜ ಹೋಳಿ ಹಬ್ಬಕ್ಕೆ ಜಾನಪದದ ಲೇಪನ ನೀಡಿದೆ. ಹೋಳಿ ಹಬ್ಬದ ದಿನ ಬೆಳಗ್ಗೆಯಿಂದಲೇ ಬಂಜಾರ ಸಮಾಜದ ಮಹಿಳೆಯರು ಚಿಕ್ಕ ಚಿಕ್ಕ ಗುಂಪುಗಳಲ್ಲಿ ಸಾಂಪ್ರದಾಯಿಕ ಉಡುಪುಗಳೊಂದಿಗೆ ಗ್ರಾಮ ಪರ್ಯಟನೆ ಆರಂಭಿಸುತ್ತಾರೆ. ಜನಪದ ನೃತ್ಯ, ಕೋಲಾಟದ ಜತೆಗೆ ಲಂಬಾಣಿ ಭಾಷೆಯ ಲಾವಣಿ ಹಾಡುವ ಮೂಲಕ ಪ್ರತಿ ಮನೆಗೂ ಭೇಟಿ ನೀಡುತ್ತಾರೆ. ಮನೆಗಳ ಹೊರಗೆ, ಸಾರ್ವಜನಿಕ ಸ್ಥಳದಲ್ಲಿ ಜನರ ಗುಂಪು ಇರುವ ಜಾಗಗಳಲ್ಲಿ ಇವರು ಹಾಡು ಮತ್ತು ಜನಪದ ನೃತ್ಯದ ಮೂಲಕ ಜನರನ್ನು ರಂಜಿಸುತ್ತಾರೆ. ಊರ ಹೊರಗೆ ಸಂಜೆ ಕಾಮದಹನ ಮಾಡಲಾಗುತ್ತದೆ.
ಹಾವೇರಿಯಲ್ಲಿ ಕುಂಭಮೇಳ ಮರುಸೃಷ್ಟಿ: ಹಾವೇರಿ ನಗರದಲ್ಲಿ ವಿಶಿಷ್ಟವಾಗಿ ಹೋಳಿ ಆಚರಣೆ ಮಾಡಲಾಗುತ್ತಿದ್ದು, ಈ ಬಾರಿ ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆದ ಮಹಾ ಕುಂಭಮೇಳದ ದೃಶ್ಯ ಮರುಸೃಷ್ಟಿ ಮಾಡಲಾಗಿದೆ. ಇಂದು ಸಂಜೆ (ಶುಕ್ರವಾರ) 6.30ರಿಂದ ಸಾರ್ವಜನಿಕ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. 60ಕ್ಕೂ ಹೆಚ್ಚು ಕಲಾವಿದರು ಮಹಾಕುಂಭ ಮೇಳದ ದೃಶ್ಯ ಮರುಸೃಷ್ಟಿಸಿದ್ದಾರೆ. ಮುಳ್ಳಿನ ಮೇಲೆ ಕುಳಿತ ನಾಗಾ ಸಾಧು, ಟ್ರ್ಯಾಕ್ಟರ್ ಬಾಬಾ, ರುದ್ರಾಕ್ಷಿ ಬಾಬಾ, ರೋಲ್ಸ್ ರಾಯ್ ಬಾಬಾ, ಐಐಟಿ ಬಾಬಾ, ಶಿವನ ಮುಂದೆ ತಪಸ್ಸು ಮಾಡುವ, ಹಿಮದಲ್ಲಿ ಕುಳಿತ ಸಾಧುಗಳು, ಮೊನಾಲಿಸಾ ಸೇರಿ ವಿವಿಧ ಮಾದರಿಗಳನ್ನು ಕಲಾವಿದರ ಮೂಲಕ ಮರುಸೃಷ್ಟಿ ಮಾಡಲಾಗಿದೆ.
ಶಿರಸಿಯಲ್ಲಿ ಬೇಡರವೇಷ: ರಾಜ್ಯದ ಬೇರಾವ ಕಡೆಯೂ ಇಲ್ಲದ, ಶಿರಸಿಯ ಕಲೆ ಬೇಡರವೇಷ ಈಗ ಕಳೆ ಕಟ್ಟಿದೆ. ತಡರಾತ್ರಿಯವರೆಗೂ ಓಣಿ ಓಣಿಗಳಲ್ಲಿ ತಮಟೆಯ ಸದ್ದು, ಬೇಡರ ವೇಷಧಾರಿಯ ರೌದ್ರ ನರ್ತನ, ಜನರ ಕೇಕೆ ಸಾಮಾನ್ಯವಾಗಿದೆ. ವಿಜಯನಗರ ಸಾಮ್ರಾಜ್ಯದ ವೇಳೆ ಶಿರಸಿಯಲ್ಲಿ ಕಳ್ಳರ ಹಾವಳಿ ಜೋರಾಗಿತ್ತು. ಅದನ್ನು ತಡೆಯಲು ದೊರೆಗಳು ಮಲ್ಲೇಶಿ ಎಂಬ ಕಾವಲುಗಾರನನ್ನು ನೇಮಿಸಿದ್ದರು. ಶೂರನೂ ಧೀರನೂ ಆದ ಈತ ಕಳ್ಳರ ಹಾವಳಿ ನಿಯಂತ್ರಿಸಲು ಯಶಸ್ವಿಯಾದ. ಆದರೆ, ದಿನ ಕಳೆದಂತೆ ಮಲ್ಲೇಶಿಯೂ ಸ್ತ್ರೀಲಂಪಟ, ಸುಲಿಗೆಕೋರನಾಗಿ ಬೆಳೆದ. ಮಲ್ಲೇಶಿಯನ್ನು ಹಿಡಿದುಕೊಟ್ಟವರಿಗೆ ಬಹುಮಾನ ನೀಡುವುದಾಗಿ ಆರಕ್ಷಕರು ಘೊಷಿಸಿದರು. ಮಹಿಳೆಯೊಬ್ಬಳು ಮಲ್ಲೇಶಿಯನ್ನು ತನ್ನ ಮನೆಗೆ ಕರೆಸಿಕೊಂಡು, ಆತನ ಬಂಧನಕ್ಕೆ ಸಹಕರಿಸಿದಳು. ಆರಕ್ಷಕರು ಆತನನ್ನು ಹಗ್ಗದಿಂದ ಬಿಗಿ ಹಿಡಿದು ರಾಜನ ಆಸ್ಥಾನಕ್ಕೆ ತರುವ ವೇಳೆ ಅಲ್ಲಿಯೇ ಇದ್ದ ಆ ಮಹಿಳೆಯನ್ನು ಕಂಡು ರೋಷಾವೇಶದಿಂದ ಕೊಲ್ಲಲು ಆತ ಮುಂದಾದ. ಆರಕ್ಷಕರು ತಪ್ಪಿಸಿದರು. ಇದು ಇಂದಿನ ಬೇಡರ ವೇಷದ ಮೂಲ ಎನ್ನಲಾಗುತ್ತದೆ. ಬೇಡರ ವೇಷಧಾರಿ ಕತ್ತಿ ಬೀಸುತ್ತ ಜನರ ಮಧ್ಯೆ ನುಗ್ಗಿದಷ್ಟೂ ಹಗ್ಗ ಹಿಡಿಯುವವರು ಜಗ್ಗಿ ನಿಯಂತ್ರಣಕ್ಕೆ ಯತ್ನಿಸುತ್ತಾರೆ. ವೇಷಧಾರಿಯ ವೇಷಭೂಷಣ ಸಹ ರೌದ್ರತೆಯನ್ನು ಸಾರುತ್ತದೆ. ಮುಖಕ್ಕೆ ಕೆಂಪು, ಬಿಳಿಯ ಕಲೆಯ ಚಿತ್ತಾರ, ಕೋಡುಗಳನ್ನು ಹೊಂದಿದ ಕಿರೀಟ, ಕಾಲಿಗೆ ಗಜ್ಜೆ, ದೇಹಕ್ಕೆ ಕೆಂಪುವಸ್ತ್ರ, ಕೈಯಲ್ಲಿ ಗುರಾಣಿ, ಕತ್ತಿ, ಕೊರಳಲ್ಲಿ ಹಣದ ಮಾಲೆ ಎಲ್ಲವೂ ಆತನೊಬ್ಬ ‘ದಾರಿತಪ್ಪಿದ ಶೂರ’ ಎಂಬುದನ್ನು ಬಿಂಬಿಸುತ್ತವೆ. ಬೇಡರ ವೇಷದ ಪಾತ್ರಧಾರಿಯ ಎದುರು ಮಹಿಳೆಯ ಪಾತ್ರ ಹಾಕಿದ ವ್ಯಕ್ತಿಯೋರ್ವ ನರ್ತಿಸುವ ಮೂಲಕ ಈ ಕಲೆಯ ಹಿಂದಿನ ಕಥೆಗೆ ಜೀವ ತುಂಬುತ್ತಾನೆ. ಶಿರಸಿಯಲ್ಲಿ 70ಕ್ಕೂ ಅಧಿಕ ತಂಡಗಳು ಈ ವರ್ಷ ಬೇಡರವೇಷ ಪ್ರದರ್ಶನ ನೀಡುತ್ತಿವೆ.
ಐತಿಹ್ಯ ಸಾರುವ ಪರ್ವ: ಕೊಪ್ಪಳ ತಾಲೂಕಿನ ಬಹದ್ದೂರ ಬಂಡಿಯಲ್ಲಿರುವ ಸತ್ಪುರುಷ ‘ಹಾತಿರಾಮ್ ಬಾವಾಜಿ ಕಟ್ಟೆ’ಯ ಬಳಿ ಆಚರಿಸುವ ಹೋಳಿಯು ಲಂಬಾಣಿ ಜನಾಂಗದ ಕುರುಹುಗಳನ್ನು ಮೇಳೈಸುತ್ತದೆ. ಬಂಜಾರರ ಪವಿತ್ರ ತಾಣ ಹಾಗೂ ಮೂಲನೆಲೆಯೂ ಈ ಬಾವಾಜಿ ಕಟ್ಟೆ. ಅಲೆಮಾರಿ ಬದುಕು ನಡೆಸುತ್ತಿದ್ದ ಸಮುದಾಯವು, ವರ್ಷಕ್ಕೊಮ್ಮೆ ಈ ಸ್ಥಳದಲ್ಲಿ ಸೇರಿ ಹೋಳಿ ಉತ್ಸವ ಆಚರಿಸುತ್ತಿತ್ತು. ಈ ಸಂಭ್ರಮವು ವರ್ಷಗಳು ಉರುಳಿದಂತೆ ಆಧುನಿಕವಾಗಿದೆ. ಹಾತಿರಾಮ ಬಾವಾಜಿ ಕಟ್ಟೆ ಮುಂಭಾಗದಲ್ಲಿ ‘ಭೋಗ್’ ಹಚ್ಚಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ರಾತ್ರಿಯಿಡೀ ನಂಗಾರ ನೃತ್ಯ, ತೀಜ್ ನೃತ್ಯ, ವಾಜಾ, ಲೇಂಗಿ ನೃತ್ಯ, ಡಪಡಾ ನೃತ್ಯ ಸೇರಿದಂತೆ ಈಚೆಗಂತೂ ಡಿಜೆ ಸದ್ದಿಗೆ ಹೆಜ್ಜೆ ಹಾಕುತ್ತಾರೆ. ಮರುದಿನ ಪ್ರಾತಃಕಾಲದಲ್ಲೇ ಬಾವಾಜಿ ಕಟ್ಟೆಗೆ ನಮಿಸಿ, ಪರಸ್ಪರ ಬಣ್ಣ ಹಚ್ಚಿಕೊಂಡು ತಮ್ಮೂರಿಗೆ ಮರಳುತ್ತಾರೆ.
ನಗಿಸಿದವರಿಗೆ 6.50 ಲಕ್ಷ ರೂ.!: ಹಾವೇರಿ ಜಿಲ್ಲೆಯ ರಾಣೆಬೆನ್ನೂರ ನಗರದ ದೊಡ್ಡಪೇಟೆಯಲ್ಲಿ ಜೀವಂತ ರತಿ-ಮನ್ಮಥರನ್ನು ಕೂಡ್ರಿಸಲಾಗುತ್ತದೆ. ಅವರನ್ನು ನಗಿಸಿದವರಿಗೆ ಈ ಸಲ ಇಟ್ಟಿರುವ ಬಹುಮಾನದ ಮೊತ್ತ 6.50 ಲಕ್ಷ ರೂ.! 65 ವರ್ಷದಿಂದ ರತಿ-ಮನ್ಮಥರನ್ನು ನಗಿಸಲು ಯಾರಿಂದಲೂ ಸಾಧ್ಯವಾಗಿಲ್ಲ. ಈ ಸಲ 66ನೇ ವರ್ಷದ ಸವಾಲು ಸಾರ್ವಜನಿಕರ ಎದುರು ಇದೆ. ಪ್ರತಿವರ್ಷ ಈ ರತಿ-ಮನ್ಮಥರನ್ನು ನಗಿಸಲು ದಾವಣಗೆರೆ, ಹುಬ್ಬಳ್ಳಿ, ಹಾವೇರಿ ಸೇರಿದಂತೆ ರಾಜ್ಯದ ನಾನಾ ಕಡೆಯವರು ಬಂದು ಅವರೆದುರು ನೂರೆಂಟು ಬಗೆಯ ನಗೆಚಟಾಕಿ ಹಾರಿಸುತ್ತಾರೆ. ಅಲ್ಲಿ ಸೇರಿದ ಜನರೆಲ್ಲ ಹೊಟ್ಟೆ ಹುಣ್ಣಾಗುವಂತೆ ನಕ್ಕರೂ ರತಿ-ಮನ್ಮಥ ವೇಷಧಾರಿಗಳು ಘನ ಗಾಂಭೀರ್ಯದಲ್ಲೇ ಕುಳಿತಿರುತ್ತಾರೆ. ಈ ವರ್ಷದ ಸ್ಪರ್ಧೆ ಇಂದು (ಶುಕ್ರವಾರ) ರಾತ್ರಿ 8ರಿಂದ 12 ಗಂಟೆವರೆಗೆ ನಡೆಯಲಿದೆ. ಪ್ರತಿ ವರ್ಷದಂತೆ ಕಾಮನ ವೇಷದಲ್ಲಿ ಗದಿಗೆಪ್ಪ ರೊಡ್ಡನವರ ಹಾಗೂ ರತಿ ವೇಷದಲ್ಲಿ ಕುಮಾರ ಹಡಪದ ಕುಳಿತುಕೊಳ್ಳಲಿದ್ದಾರೆ.
ಸಂಗ್ರಹಿಸಿದ ಧಾನ್ಯಗಳಲ್ಲೇ ಭೋಜನ: ರಾಯಚೂರು ಜಿಲ್ಲೆಯ ಮುದಗಲ್ ಸೇರಿದಂತೆ ಆಶಿಹಾಳ ತಾಂಡಾ, ಬಯ್ಯಾಪೂರ ತಾಂಡಾ, ಬಗಡಿತಾಂಡಾ, ಜಕ್ಕೇರಮುಡು ತಾಂಡಾ, ಹಡಗಲಿ ತಾಂಡಾ, ಛತ್ತರ ರೋಡ ತಾಂಡಾ, ಮಟ್ಟೂರು ತಾಂಡಾಗಳಲ್ಲಿ ಬಂಜಾರ ಸಮುದಾಯದ ಹಿರಿಯರು, ಮಹಿಳೆಯರು, ಯುವಕ-ಯುವತಿಯರು ಹಾಗೂ ಮಕ್ಕಳು ತಿಂಗಳ ಕಾಲ ಹೋಳಿ ಸಂಭ್ರಮದಲ್ಲಿ ಮಿಂದೇಳುತ್ತಾರೆ. ತಾಂಡಾ ಪಕ್ಕದ ಪಟ್ಟಣಗಳ ಅಂಗಡಿ ಮುಂಗಟ್ಟುಗಳು, ಮನೆಗಳಿಗೆ ತೆರಳಿ ಸಾಂಪ್ರದಾಯಿಕ ಹಾಡುಗಳ ಜತೆ ನೃತ್ಯ ಮಾಡುವ ಪ್ರತೀತಿ ಇದೆ. ಕಲೆಯನ್ನು ಮೆಚ್ಚಿ ಸಾರ್ವಜನಿಕರು ದೇಣಿಗೆ ರೂಪದಲ್ಲಿ ನೀಡುವ ಹಣ, ಧಾನ್ಯಗಳನ್ನು ಕ್ರೋಡೀಕರಿಸಿ ಹಬ್ಬದ ಆಚರಣೆಗೆ ಬಳಸುತ್ತಾರೆ. ಕಾಮದಹನ ದಿನದಂದು ಭರ್ಜರಿ ಭೋಜನ ಸಿದ್ಧಪಡಿಸಿ ಸೇವಿಸುವ ಸಂಪ್ರದಾಯವಿದೆ. ಇದಲ್ಲದೆ ತಾಂಡಾದ ಪ್ರಮುಖರ ಮನೆ ಅಥವಾ ಸೇವಾಲಾಲ್ ದೇಗುಲದ ಆವರಣದಲ್ಲಿ ಹಿರಿಯರು ವಾಜಾ ಗೀತೆಗಳನ್ನು ಹಾಡಿದರೆ, ಯುವಕ-ಯುವತಿಯರು ಲೇಂಗಿ ನೃತ್ಯ ಮಾಡುತ್ತಾರೆ.
ಭಾವೈಕ್ಯ ಬೆಸೆಯುವ ಹಬ್ಬ: ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ಸೋಗಿಲು ಗ್ರಾಮದ ಆಂಜನೇಯ ದೇವಸ್ಥಾನದ ಬಳಿ ಮಂಟಪ ನಿರ್ವಿುಸಿ ಅದರಲ್ಲಿ ಪಾರ್ವತಿ, ಪರಮೇಶ್ವರ ಹಾಗೂ ಕಾಮನ ಮೂರ್ತಿಗಳನ್ನು ಇಡಲಾಗುತ್ತದೆ. ಅವುಗಳಿಗೆ ಹೊಸ ಬಟ್ಟೆ ತೊಡಿಸಿ ಅಲಂಕಾರ ಮಾಡಲಾಗುತ್ತದೆ. ಮೂರ್ತಿಗಳನ್ನು ಪ್ರತಿಷ್ಠಾಪಿಸಿದ ನಂತರ ಮೂರು ದಿನಗಳ ಕಾಲ ಗ್ರಾಮದ ಪ್ರತಿ ಮನೆಯವರೂ ಅಲ್ಲಿಗೆ ಬಂದು ಹಣ್ಣು, ಕಾಯಿ ಪೂಜೆ ಮಾಡುತ್ತಾರೆ. ಹುಣ್ಣಿಮೆಯ ದಿನದಂದು ಬೆಳಗ್ಗೆ ಕಾಮದಹನ ಮಾಡಲಾಗುತ್ತದೆ. ಮರುದಿನ ಗ್ರಾಮಸ್ಥರು ಓಕಳಿ ಆಡುವ ಮೂಲಕ ರಂಗಿನ ಹಬ್ಬವನ್ನು ಸಂಭ್ರಮಿಸುತ್ತಾರೆ.
ದೇಶದಲ್ಲೇ ಪ್ರಸಿದ್ಧ ಬಾಗಲಕೋಟೆ ಹೋಳಿ: ಬಾಗಲಕೋಟೆ ಹೋಳಿ ಹಬ್ಬದಲ್ಲಿ ತುರಾಯಿ ಹಲಗೆ ಬಾರಿಸುವುದು ಗೌರವದ ಸಂಕೇತವಾಗಿದೆ. ರೇಷ್ಮೆವಸ್ತ್ರ, ತಲೆಗೆ ಪೇಠ ಹಾಕಿಕೊಂಡು ಸನಾದಿ ಮೇಳದ ಜೊತೆ ತುರಾಯಿ ಹಲಗೆ ಬಾರಿಸುತ್ತಾರೆ. ಬಾಗಲಕೋಟೆಯ ಐದು ಬಾಬುದಾರ ಕುಟುಂಬಗಳಲ್ಲಿ ತುರಾಯಿ ಹಲಗೆಗಳು ಇವೆ. ಸರನಾಡಗೌಡ, ಸರದೇಸಾಯಿ, ವೈಜಾಪುರ, ಶೆಟ್ಟರ, ಕುಲಕರ್ಣಿ ಕುಟುಂಬಗಳು ಬಾಬುದಾರರು. ಹಿಂದೆ ಪೇಶ್ವೆಗಳು ಕೊಟ್ಟಿರುವ ಎರಡು ನಿಶಾನೆಗಳು ಹಬ್ಬದ ಆಕರ್ಷಣೆಯಾಗಿವೆ. ಸವಣೂರ ನವಾಬರ ಎದುರು ಯುವಕರು ವಿಶಿಷ್ಟವಾಗಿ ಹಲಗೆ ಬಾರಿಸಿದ್ದರಿಂದ ನವಾಬರು ಬಂಗಾರದ ತುರಾಯಿ, ಬೆಳ್ಳಿ ಗಂಟೆ ಕೊಟ್ಟಿದ್ದನ್ನು ಇಲ್ಲಿನ ಜನರು ಮೆಲುಕು ಹಾಕುತ್ತಾರೆ. ಈ ಬಾರಿ ಮಾ. 14ರಿಂದ 16ರವರೆಗೆ ಬಣ್ಣದೋಕುಳಿ ನಡೆಯಲಿದೆ.
ವಿಶಿಷ್ಟ ಸಂಪ್ರದಾಯ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕುಡುಬಿ ಜನಾಂಗದವರ ಹೋಳಿ ಆಚರಣೆ ಆಕರ್ಷಣೀಯವಾಗಿದೆ. ಉಡುಪಿ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಕಂಡುಬರುವ ಕುಡುಬಿ ಸಮುದಾಯದವರ ಹೋಳಿ ಸೋಮವಾರ ಆರಂಭಗೊಂಡಿದ್ದು, ಶುಕ್ರವಾರದ ತನಕ ನಡೆಯಲಿದೆ. ಉಡುಪಿ ಜಿಲ್ಲೆಯಲ್ಲಿ 46 ಕುಡುಬಿ ಹೋಳಿ ಕೂಡುಕಟ್ಟುಗಳಿದ್ದು, ಈ ಬಾರಿ 38 ಕೂಡುಕಟ್ಟುಗಳಿಂದ 3,112 ಮಂದಿ ಹೋಳಿ ಆಚರಣೆಯಲ್ಲಿ ಭಾಗವಹಿಸಿದ್ದಾರೆ. ಕೊಕ್ಕರ್ಣೆ ಸಮೀಪದ ಒಳಬೈಲು ಕೂಡುಕಟ್ಟಿನಲ್ಲಿ ಸುಮಾರು 252ಕ್ಕೂ ಮಿಕ್ಕಿ ವೇಷಧಾರಿಗಳು ಭಾಗವಹಿಸಿದ್ದು, ಪರಿಸರದ ಅತಿ ದೊಡ್ಡ ಹೋಳಿ ಪಂಗಡ ಎಂಬ ಖ್ಯಾತಿಗೆ ಪಾತ್ರವಾಗಿದೆ. ಮರಾಠಿ ಜನಾಂಗದಲ್ಲಿ 20ರಿಂದ 30 ಮನೆಗಳ ಗುಂಪುಗಳಿಗೆ ಕೂಡುಕಟ್ಟು ಎನ್ನುತ್ತಾರೆ. ಈ ಕೂಡುಕಟ್ಟಿನಲ್ಲಿ ವಂಶಪಾರಂಪರ್ಯವಾಗಿ ನಿಯಮದಂತೆ ನಡೆದುಕೊಂಡು ಬಂದಿರುವ ಗುರಿಕಾರರು ಹಬ್ಬದ ಆಚರಣೆಗೆ ವಿಶಿಷ್ಟ ಮೆರಗು ತುಂಬಿದ್ದಾರೆ.
ಹಂಪಿಯಲ್ಲಿ ರಂಗಿನಾಟ: ದೇಶ-ವಿದೇಶಿಗರ ಅಚ್ಚುಮೆಚ್ಚಿನ ಪ್ರವಾಸಿತಾಣ ವಿಜಯನಗರ ಜಿಲ್ಲೆಯ ಹಂಪಿಯಲ್ಲಿ ಸಾಮಾನ್ಯವಾಗಿ ನವೆಂಬರ್ನಿಂದ ಮಾರ್ಚ್ವರೆಗೆ ವಿದೇಶಿ ಪ್ರವಾಸಿಗರ ಸಂಖ್ಯೆ ಹೆಚ್ಚಿರುತ್ತದೆ. ಬಹುತೇಕರು ಹೋಳಿ ಆಚರಣೆಗೆಂದೇ ಉಳಿದಿರುತ್ತಾರೆ. ಹೋಳಿ ಮುಗಿದ ಬಳಿಕ ಗೋವಾ, ಗೋಕರ್ಣ ಇತರ ಪ್ರವಾಸಿತಾಣಗಳಿಗೆ ತೆರಳುತ್ತಾರೆ. ವಿದೇಶಿಯರು ಹೋಳಿ ವೈಭವದಲ್ಲಿ ಸಂಭ್ರಮದಿಂದ ಪಾಲ್ಗೊಳ್ಳುತ್ತಾರೆ.