ತಪ್ಪನ್ನು ತಿದ್ದುವ ಕಲೆ

Ayodhya Sriram
Published on

| ಕೃಷ್ಣರಾಜ ಕುತ್ಪಾಡಿ

krishnaraja kuthpadi
ದೊಡ್ಡವರ ನಡೆ ಇರುವುದೇ ನಮ್ಮ ಬದುಕಿನ ತಿದ್ದುವಿಕೆಗಾಗಿ. ಅವರ ಪ್ರತಿ ಹೆಜ್ಜೆಯೂ ಅನುಸರಣೀಯ. ಹಾಗೆಯೇ ರಾಮನ ಬದುಕಿನ ಒಂದೊಂದು ಚಿತ್ರಣವು ಒಂದೊಂದು ರೀತಿಯ ನಮ್ಮ ಹುಳುಕನ್ನು ಎತ್ತಿ ತೋರಿಸುತ್ತದೆ. ಮನುಷ್ಯ ಬೇರೆಲ್ಲ ಪ್ರಾಣಿಗಳಿಗಿಂತ ಬೇರೆಯಾಗಿ ನಿಲ್ಲುವುದೇ ಮಾತಿನ ಕಾರಣಕ್ಕಾಗಿ. ಅದನ್ನು ಎಷ್ಟು ಜಾಗ್ರತೆಯಿಂದ ಬಳಸುವೆವೋ ಅಷ್ಟು ವಿಶೇಷ ಫಲಗಳನ್ನು ಹೊಂದಬಹುದು.

ಸಕ್ತುಮಿವ ತಿತಉನಾ ಪುನಂತೋ ಯತ್ರ ಧೀರಾ ಮನಸಾ ವಾಚಮಕ್ರತ|

ಅತ್ರ ಸಖಾಯಃ ಸಖ್ಯಾನಿ ಜಾನತೇ ಭದ್ರೖೆಷಾಂ ಲಕ್ಷ್ಮೀರ್ನಿಹಿತಾಧಿ ವಾಚಿ||

ಹಿಟ್ಟನ್ನು ಜರಡಿಯಲ್ಲಿ ಹಿಡಿದು ಶುದ್ಧೀಕರಿಸುವಂತೆ ನಮ್ಮ ಮಾತಿರಬೇಕು. ಸಜ್ಜನರು ವಿವೇಚಿಸಿ ಆಡಿದ ಮಾತುಗಳಿಂದ ಒಳ್ಳೆಯ ಗೆಳೆಯರನ್ನು ಹೊಂದುತ್ತಾರೆ. ರಾಮನ ಮಾತಿನ ವಿಶೇಷತೆಯನ್ನು ರಾಮಾಯಣವು ಉಲ್ಲೇಖಿಸಿದ್ದು ಹೀಗೆ- ‘ರಾಮೋ ದ್ವಿರ್ನಾಭಿಭಾಷತೇ’. ರಾಮ ತಾನಾಡಿದ ಮಾತಿಗೆ ತಿದ್ದುಪಡಿ ಮಾಡುತ್ತಿರಲಿಲ್ಲ. ಅಂದರೆ ತಿದ್ದುಪಡಿಯಾಗುವಂಥ ಮಾತನ್ನು ಆಡುತ್ತಿರಲಿಲ್ಲ. ವಿವೇಚಿಸಿ, ಅಳೆದು, ತೂಗಿ ಆಡುವ ಮಾತು ಬಾಳುತ್ತದೆ. ಬೆಲೆಯನ್ನು ಪಡೆಯುತ್ತದೆ. ರಾಮನ ಆದೇಶವನ್ನು ಜನ ಅಚ್ಚುಕಟ್ಟಾಗಿ ‘ಚ, ತು’ ತಪ್ಪದಂತೆ ಪಾಲಿಸುತ್ತಿದ್ದರು. ಹೀಗೂ ರಾಮನ ಪ್ರಭಾವವನ್ನು ಈ ಮಾತಿನಿಂದ ಗುರುತಿಸಬಹುದು. ಹೇಳಿದುದನ್ನೇ ಮತ್ತೊಮ್ಮೆ ರಾಮನಿಗೆ ಹೇಳಲು ಪ್ರಜೆಗಳಾಗಲಿ, ಸೇವಕರಾಗಲಿ ಅವಕಾಶ ನೀಡುತ್ತಿರಲಿಲ್ಲ. ರಾಮನ ಮೇಲೆ ಅಂತಹ ನಂಬಿಕೆ ಇತ್ತು.

ಇನ್ನೊಂದು ಬಗೆಯಲ್ಲೂ ಈ ಮಾತು ತೆರೆದುಕೊಳ್ಳುತ್ತದೆ. ಇದು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಲೇಬೇಕಾದ ಗುಣ. ನಮಗಾದ ಒಳಿತಿನ ಸಂಗತಿಯನ್ನು ನಾವು ಬೇಗ ಮರೆತುಬಿಡುವೆವು. ಆದರೆ ತಪ್ಪನ್ನು ಮತ್ತೆಮತ್ತೆ ಹೇಳಿ, ಚುಚ್ಚಿ ನೋಯಿಸುವ ಗುಣ ನಮ್ಮಲ್ಲಿರುತ್ತದೆ. ರಾಮ ತಪ್ಪಿತಸ್ಥನನ್ನು ಒಮ್ಮೆ ಮಾತ್ರ ತಿದ್ದುತ್ತಿದ್ದ. ಮತ್ತೆಂದೂ ಆ ವ್ಯಕ್ತಿಯ ತಪ್ಪನ್ನು ಎರಡನೇ ಬಾರಿ ನೆನೆಸಿಕೊಳ್ಳುತ್ತಿರಲಿಲ್ಲ. ಸೀತೆಯ ಬಯಕೆಯನ್ನು ಈಡೇರಿಸಲು ಬಂಗಾರದ ಜಿಂಕೆಯನ್ನು ರಾಮ ಬೆನ್ನಟ್ಟಿ ಬಂದಿದ್ದ. ಲಕ್ಷ್ಮಣನನ್ನು ಕಾವಲಾಗಿ ಇರಿಸಿದ್ದ. ‘ಹಾ ಲಕ್ಷ್ಮಣ! ಹಾ ಸೀತೆ!’ ಎಂಬ ರಾಮನ ಧ್ವನಿಯುಳ್ಳ ಮಾಯಾವಿಯ ಮಾತು ಕೇಳಿ ಸೀತೆಯು ಕಂಗಾಲಾದಳು. ಒಬ್ಬಳನ್ನೆ ಬಿಟ್ಟು ಹೋಗಲೊಲ್ಲದ ಲಕ್ಷ್ಮಣನನ್ನು ಜರೆದಳು. ರಾಮನ ರಕ್ಷಣೆಗಾಗಿ ಕಳುಹಿಸಿದಳು. ಅವಳ ಒತ್ತಾಯಕ್ಕೆ ಲಕ್ಷ್ಮಣ ಅಣ್ಣನನ್ನು ಹುಡುಕಿಕೊಂಡು ಬಂದನು. ರಾಮ ಸೀತೆಯನ್ನು ಬಿಟ್ಟು ಬಂದುದಕ್ಕಾಗಿ ತಮ್ಮನನ್ನು ಚೆನ್ನಾಗಿ ಜರೆದನು.

ಅಹೋ ಲಕ್ಷ್ಮಣ ಗರ್ಹ್ಯಂ ತೇ ಕೃತಂ ಯತ್ತ್ವಂ ವಿಹಾಯ ತಾಂ |

ಸೀತಾಮಿಹಾಗತಃ ಸೌಮ್ಯ ಕಚ್ಚಿತ್ ಸ್ವಸ್ತಿ ಭವೇದಿಹ ||

‘ಅಯ್ಯೋ ಲಕ್ಷ್ಮಣ! ಸೀತೆಯನ್ನು ಬಿಟ್ಟು ಬಂದು, ನಿಂದ್ಯವಾದ ಕೆಲಸ ಮಾಡಿದೆಯಲ್ಲ. ಸೌಮ್ಯ! ಇನ್ನೆಂತು ನಮಗೆ ಮಂಗಳವಾದೀತು..’ ‘ಅಜಾಗ್ರತೆ ಒಂದು ಕ್ಷಣದ ಮಾತು. ಒಂದು ಕ್ಷಣದ ಹೊತ್ತು. ಆದರೆ ಅದರ ಪರಿಣಾಮ ದೀರ್ಘ.’ ಹೀಗೆ ರಾಮ ಲಕ್ಷ್ಮಣನನ್ನು ತಪ್ಪು ನಡೆದಾಗಲೇ ಎತ್ತಿ ತೋರಿಸಿದ. ಹೀಗಳೆದ ಕೂಡ. ಆದರೆ ಅರಣ್ಯಕಾಂಡ ಮುಗಿದು ಮುಂದೆ ಕಿಷ್ಕಿಂಧ, ಸುಂದರ, ಯುದ್ಧ ಯಾವ ಕಾಂಡದ ಕಥಾಭಾಗದಲ್ಲಿಯೂ ಈ ತಪ್ಪನ್ನು ರಾಮ ಮತ್ತೊಮ್ಮೆ ನೆನೆಯುವುದಿಲ್ಲ. ‘ನಿನ್ನಿಂದ ಎಷ್ಟೆಲ್ಲ ಕಷ್ಟ ಅನುಭವಿಸುವಂತಾಯಿತು ನೋಡು’ ಎಂದು ಲಕ್ಷ್ಮಣನನ್ನು ನಿಂದಿಸಲಿಲ್ಲ. ತಪ್ಪನ್ನು ತಿದ್ದುವ ಕಲೆಗಳಲ್ಲಿ ಈ ಗುಣವೂ ಒಂದು.

(ಲೇಖಕರು ಸಂಸ್ಕೃತ ಉಪನ್ಯಾಸಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net