ಕಳ್ಳತನದಿಂದ ಬಂದ ಹಣದಿಂದ ಮೋಜು, ಮಸ್ತಿ ಮಾಡುತ್ತಿದ್ದವರು ಅಂದರ್!

Crime
Published on

ಬೆಂಗಳೂರು: ಜೀವನದಲ್ಲಿ ಎಲ್ಲರಿಗೂ ಮೋಜು, ಮಸ್ತಿ ಮಾಡಬೇಕೆಂಬ ಆಸೆ ಇದ್ದೇ ಇರುತ್ತದೆ. ಹಾಗಂತ ಇನ್ನೊಬ್ಬರ ಸೊತ್ತು ಬಳಸಿಕೊಂಡು ಮೋಜಿನಲ್ಲಿ ತೊಡಗಿಸಿಕೊಳ್ಳಬಾರದು. ಆದರೆ ಇಲ್ಲಿಬ್ಬರು ಯುವಕರು ಮೋಜು, ಮಸ್ತಿ ಮಾಡಲೆಂದು ಕಳ್ಳತನದ ದಾರಿ ಹಿಡಿದಿದ್ದರು. ಇದೀಗ ಇವರಿಬ್ಬರು ಪೊಲೀಸರು ಅತಿಥಿಯಾಗಿದ್ದಾರೆ.

ವಿದ್ಯಾರಣ್ಯಪುರದ ರಂಜಿತ್ (27) ಮತ್ತು ಅಜಿತ್ (25) ಎಂಬ ಇಬ್ಬರು ಯುವಕರು ಮೋಜಿನ ಜೀವನ ನಡೆಸಲು ದ್ವಿಚಕ್ರ ವಾಹನ, ಮೊಬೈಲ್, ಲ್ಯಾಪ್‌ಟಾಪ್ ಹಾಗೂ ಮನೆಗಳವು ಮಾಡುತ್ತಿದ್ದರು. ಇದೀಗ ಇಬ್ಬರನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳು ತಮ್ಮ ಚಟ ಹಾಗೂ ಮೋಜು ಮಾಡಲು ಹಣ ಹೊಂದಿಸಲು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ಮನೆ ಎದುರು, ಪಾರ್ಕಿಂಗ್ ಸ್ಥಳಗಳಲ್ಲಿ ನಿಲುಗಡೆ ಮಾಡಿದ ದ್ವಿಚಕ್ರ ವಾಹನಗಳನ್ನು ಕದಿಯುವುದು, ಬಸ್ ನಿಲ್ದಾಣ, ಬಸ್‌ಗಳಲ್ಲಿ ಪ್ರಯಾಣಿಕರ ಲ್ಯಾಪ್‌ಟಾಪ್, ಮೊಬೈಲ್ ಕದಿಯುವುದು, ಬೀಗ ಹಾಕಿದ ಮನೆಗಳನ್ನು ಗುರುತಿಸಿ ಬೀಗ ಮುರಿದು ಕಳ್ಳತನ ಮಾಡುತ್ತಿದ್ದರು. ನಂತರ ಕದ್ದ ವಸ್ತುಗಳನ್ನು ಪರಿಚಿತರ ಮೂಲಕ ವಿಲೇವಾರಿ ಮಾಡಿಸಿ ಬಂದ ಹಣವನ್ನು ಹಂಚಿಕೊಂಡು ಮೋಜಿನ ಜೀವನ ನಡೆಸುತ್ತಿದ್ದರು.

ಇತ್ತೀಚೆಗೆ ವಿದ್ಯಾರಣ್ಯಪುರದ ಅಬ್ದುಲ್ ಖಾದರ್ ಎಂಬುವವರ ಮನೆಯಲ್ಲಿ ಹಾಡಹಗಲೇ ಒಂದು ಮೊಬೈಲ್, ಲ್ಯಾಪ್‌ಟಾಪ್ ಕಳ್ಳತನವಾಗಿತ್ತು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳ ವಿರುದ್ಧ ಈ ಹಿಂದೆ ಪೀಣ್ಯ, ಯಶವಂತಪಯರ, ಜಾಲಹಳ್ಳಿ, ಸುಬ್ರಮಣ್ಯನಗರ, ಬಿಡದಿ ಪೊಲೀಸ್ ಠಾಣೆಗಳಲ್ಲಿ ಮನೆಗಳವು, ರಾಬರಿ, ಎಸ್‌ಡಿಪಿಎಸ್ ಪ್ರಕರಣಗಳು ದಾಖಲಾಗಿವೆ. ಕೆಲ ಪ್ರಕರಣಗಳಲ್ಲಿ ಜೈಲು ಸೇರಿದ್ದ ಆರೋಪಿಗಳು ಜಾಮೀನು ಪಡೆದು ಹೊರಬಂದ ಬಳಿಕವೂ ಮತ್ತೆ ತಮ್ಮ ಹಳೇ ಚಾಳಿ ಮುಂದುವರಿಸಿದ್ದರು. ಆರೋಪಿಗಳ ಬಂಧನದಿಂದ ವಿದ್ಯಾರಣ್ಯಪುರ, ಕೊಡಿಗೇಹಳ್ಳಿ, ಯಶವಂತಪುರ, ನಂದಿನಿ ಲೇಔಟ್, ಸಂಜಯನಗರ ಠಾಣೆಯಲ್ಲಿ ದಾಖಲಾಗಿದ್ದ ಮನೆಗಳವು, ಮೊಬೈಲ್ ಕಳವು, ದ್ವಿಚಕ್ರ ವಾಹನ ಕಳವು ಸೇರಿ ಒಟ್ಟು 7 ಪ್ರಕರಣಗಳು ಪತ್ತೆಯಾಗಿವೆ.

ಸದ್ಯ ಆರೋಪಿಗಳಿಂದ ಐದು ದ್ವಿಚಕ್ರ ವಾಹನ, ಮೂರು ಲ್ಯಾಪ್‌ಟಾಪ್, ವಿವಿಧ ಕಂಪನಿಗಳ ಒಂಬತ್ತು ಮೊಬೈಲ್ ಫೋನ್ ಹಾಗೂ ಒಂದು ಚಿನ್ನದ ಸರ ಸೇರಿದಂತೆ ಒಟ್ಟು 6.87 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net