

ಬೆಂಗಳೂರು: ಸಾಯಿ ಬಾಬಾ ಭಕ್ತರ ವೇಶದಲ್ಲಿ ಭಿಕ್ಷೆ ಕೇಳಿ ಬ್ಯಾಂಕ್ ನೌಕರ ಬಳಿ ಉಂಗುರ ಕಳವು ಮಾಡಿದ್ದ ಆರೋಪಿಯನ್ನು ಕಬ್ಬನ್‌ಪಾರ್ಕ್ ಪೊಲೀಸರು ಬಂಧಿಸಿದ್ದಾರೆ.
ಗುಜರಾಜ್ ಮೂಲದ ಸಾಲತ್ ದಿಲೀಪ್ (27) ಬಂಧಿತ. ತಂದೆ-ತಾಯಿ ಇಲ್ಲದ ಸಾಲತ್ ದಿಲೀಪ್, ಒಂದು ತಿಂಗಳ ಹಿಂದೆ ಬೆಂಗಳೂರಿಗೆ ಬಂದು ಕಂಟೋಲ್ಮೆಂಟ್ ರೈಲು ನಿಲ್ದಾಣದ ುಟ್‌ಪಾತ್‌ನಲ್ಲಿ ಕೆಲ ದಿನಗಳ ಕಾಲ ಮಲಗಿದ್ದ. ಜ.10ರಂದು ಸಾಯಿ ಬಾಬಾ ಭಕ್ತರಂತೆ ವೇಶ ಧರಿಸಿಕೊಂಡು ಭಿಕ್ಷೆ ಕೇಳಿಕೊಂಡು ಚರ್ಚ್ ಸ್ಟ್ರೀಟ್ ರಸ್ತೆಗೆ ಬಂದಿದ್ದಾರೆ. ಅಲ್ಲಿ ಎದುರಿಗೆ ಬಂದ ಬ್ಯಾಂಕ್ ಉದ್ಯೋಗಿ ಕೆ.ಬಿ. ಉಜ್ವಲ್ ಬಳಿ ಭಿಕ್ಷೆ ಕೇಳಿದ್ದಾನೆ. ಚಿಲ್ಲರೆ ಇಲ್ಲವೆಂದು ಹೇಳಿದಾಗ ಆರೋಪಿ ಸಾಲತ್, ನಾಚೂಕಾಗಿ ಮಾತನಾಡಿಸುತ್ತಾ ಕೈಯಲ್ಲಿ ಇರುವ ಉಂಗುರ ಚೆನ್ನಾಗಿ ಇದೆ ಎಂದು ಹೇಳಿದ್ದಾನೆ.
ಅಲ್ಲದೆ, ನೋಡಿ ಕೊಡುವುದಾಗಿ ಕೈಯಿಂದ ಬಿಚ್ಚಿಸಿಕೊಂಡು ತಕ್ಷಣ ಬಾಯಿಗೆ ಹಾಕಿಕೊಂಡು ನುಂಗಿದಂತೆ ನಾಟಕ ಮಾಡಿ ಅಲ್ಲಿಂದ ಪರಾರಿಯಾಗಿದ್ದಾನೆ. 4.5 ಲಕ್ಷ ರೂ. ಮೌಲ್ಯದ 10.5 ಗ್ರಾಂ ಚಿನ್ನದ ಉಂಗುರ ಕದ್ದ ಬಗ್ಗೆ ಉಜ್ವಲ್, ಕಬ್ಬನ್ ಪಾರ್ಕ್ ಠಾಣೆಗೆ ದೂರು ಸಲ್ಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಘಟನೆ ನಡೆದ ಸ್ಥಳದಲ್ಲಿ ಸಿಸಿ ಕ್ಯಾಮರಾ ಪರಿಶೀಲನೆ ನಡೆಸಿದಾಗ ಆರೋಪಿಯ ಮುಖ ಚಹರೆ ಪತ್ತೆಯಾಗಿದೆ. ಇದರ ಆಧಾರದ ಮೇಲೆ ಬಂಧನಕ್ಕೆ ಬಲೆಬೀಸಿದ್ದರು.
ಮತ್ತೊಂದೆಡೆ ಸಿದ್ದಯ್ಯ ಸರ್ಕಲ್ ಬಳಿ ಕದ್ದ ಉಂಗುರ ಮಾರಾಟಕ್ಕೆ ಸಾಲತ್ ದಿಲೀಪ್ ಪ್ರಯತ್ನ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಹೋಗಿ ಆರೋಪಿಯನ್ನು ಬಂಧಿಸಿ ಉಂಗುರ ಪತ್ತೆ ಮಾಡಿದ್ದಾರೆ. ಈ ಹಿಂದೆ ಅಪರಾಧ ಕೃತ್ಯ ಎಸಗಿರುವ ಬಗ್ಗೆ ಮಾಹಿತಿ ಇಲ್ಲವೆಂದು ಪೊಲೀಸರು ತಿಳಿಸಿದ್ದಾರೆ.