ವಿದ್ಯಾರ್ಥಿನಿ ಜತೆ ಅಸಭ್ಯವಾಗಿ ವರ್ತಿಸಿದ ಆರೋಪಿ ಸೆರೆ

Arrest Kaidhi
Published on

ಬೆಂಗಳೂರು: ರಾತ್ರಿ ವೇಳೆ ನಡೆದು ಹೋಗುತ್ತಿದ್ದ ನರ್ಸಿಂಗ್ ವಿದ್ಯಾರ್ಥಿನಿಯನ್ನು ತಬ್ಬಿಕೊಂಡು ಅಸಭ್ಯವಾಗಿ ವರ್ತಿಸಿದ ಆರೋಪಿಯನ್ನು ಸೋಲದೇವನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕಲಬುರಗಿ ಮೂಲದ ಬಸವರಾಜು(೨೯) ಬಂಧಿತ. ಆರೋಪಿ ಜುಲೈ ೩೦ರಂದು ಸಪ್ತಗಿರಿ ಕಾಲೇಜು ಸಮೀಪದಲ್ಲಿ ನಡೆದು ಹೋಗುತ್ತಿದ್ದ ಉತ್ತರ ಭಾರತ ಮೂಲದ ಯುವತಿಗೆ ಕಿರುಕುಳ ನೀಡಿದ್ದ. ಈ ಸಂಬಂಧ ಸಂತ್ರಸ್ತೆ ನೀಡಿದ್ದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಲಬುರಗಿ ಮೂಲದ ಬಸವರಾಜು, ಕೆಲ ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದು, ಚಿಕ್ಕಬಾಣಾವಾರದ ಮಾರುತಿನಗರದಲ್ಲಿ ವಾಸವಾಗಿದ್ದ. ಸಮೀಪದ ಮೆಡಿಕಲ್ ಸ್ಪೋರ್‌ನಲ್ಲಿ ಕೆಲಸ ಮಾಡಿಕೊಂಡಿದ್ದ. ಕಳೆದ ಜು.೩೦ ರಂದು ರಾತ್ರಿ ೯ ಗಂಟೆಯಲ್ಲಿ ಸಪ್ತಗಿರಿ ಕಾಲೇಜು ಮುಂಭಾಗದ ಪಾದಚಾರಿ ಮಾರ್ಗದಲ್ಲಿ ನೆರೆ ರಾಜ್ಯದ ನರ್ಸಿಂಗ್ ವಿದ್ಯಾರ್ಥಿನಿಯೊಬ್ಬರು ನಡೆದುಕೊಂಡು ಹೋಗುತ್ತಿದ್ದರು. ಅದೇ ವೇಳೆ ಆರೋಪಿ ಕೆಲಸ ಮುಗಿಸಿಕೊಂಡು ಮನೆಗೆ ಹೋಗುವಾಗ ಆಕೆಯನ್ನು ಕಂಡು ಬೈಕ್ ನಿಲ್ಲಿಸಿ, ಏಕಾಏಕಿ ಆಕೆಯನ್ನು ತಬ್ಬಿಕೊಂಡಿದ್ದಾನೆ. ಬಳಿಕ ಅಸಭ್ಯವಾಗಿ ವರ್ತಿಸಿದ್ದಾನೆ. ವಿದ್ಯಾರ್ಥಿನಿ ಪ್ರತಿರೋಧ ವ್ಯಕ್ತಪಡಿಸಿದಾಗ ಬೈಕ್ ಹತ್ತಿ ಪರಾರಿಯಾಗಿದ್ದ ಎಂದು ಪೊಲೀಸರು ಹೇಳಿದರು. ಈ ಕುರಿತು ವಿದ್ಯಾರ್ಥಿನಿ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ಸಮೀಪದ ಸಿಸಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಿದಾಗ ಆರೋಪಿಯ ಸುಳಿವು ಸಿಕ್ಕಿದ್ದು, ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net