

ನವದೆಹಲಿ: ಮಕ್ಕಳು ಸಂತೋಷ ಹಂಚುವವರು ಎನ್ನುತ್ತಾರೆ. ಆದರೆ ಇಲ್ಲೊಂದು ಮಗು ನಿಜಕ್ಕೂ ದೈವ ಸ್ವರೂಪ ತಾಳಿ ಅನೇಕ ಜನರಿಗೆ ಹೊಸ ನೀಡಿರುವ ಘಟನೆ ನಡೆದಿದೆ. 20 ವರ್ಷದ ಧನಿಷ್ಠ ಇದೀಗ ದೇಶದ ಅತ್ಯಂತ ಕಿರಿಯ ವಯಸ್ಸಿನ ಬಹುಅಂಗಾಂಗ ದಾನಿಯಾಗಿ ಹೆಸರಾಗಿದ್ದಾರೆ.
ರಾಷ್ಟ್ರ ರಾಜಧಾನಿ ದೆಹಲಿಯ ಆಶಿಶ್ ಕುಮಾರ್ ಮತ್ತು ಬಬಿತಾ ಅವರ 20 ತಿಂಗಳ ಮಗಳು ಧನಿಷ್ಠ ಜನವರಿ 8ರಂದು ಮನೆಯ ಬಾಲ್ಕನಿಯಲ್ಲಿ ಆಟ ಆಡುವಾಗ ಕಾಲು ತಪ್ಪಿ ಮೊದಲನೇ ಮಹಡಿಯಿಂದ ಕೆಳಕ್ಕೆ ಬಿದ್ದಿದ್ದಾಳೆ. ಆಕೆಯನ್ನು ತಕ್ಷಣವೇ ಸರ್ ಗಂಗಾರಾಂ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೂಕ್ತ ಚಿಕಿತ್ಸೆ ನೀಡಲಾಗುತ್ತಿದ್ದಾರೂ ಅದು ಫಲಕಾರಿಯಾಗದೆ ಧನಿಷ್ಠಳ ಮಿದುಳು ಜನವರಿ 11ರಂದು ಕೆಲಸ ನಿಲ್ಲಿಸಿದೆ. ಮಿದುಳಿನ ಹೊರೆತಾಗಿ ಬೇರೆಲ್ಲ ಅಂಗಗಳು ಚೆನ್ನಾಗಿದ್ದವು. ಆದರೆ ಮಿದುಳು ಸತ್ತ ನಂತರ ವ್ಯಕ್ತಿ ಹೆಚ್ಚೆಂದರೆ ಎರಡು ಮೂರು ದಿನಗಳ ಕಾಲ ಬದುಕಬಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಆ ಹಿನ್ನೆಲೆಯಲ್ಲಿ ಆಶಿಶ್ ದಂಪತಿ ಒಂದು ಗಟ್ಟಿ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.
ಧನಿಷ್ಠಳ ಅಂಗಾಂಗಳನ್ನು ದಾನ ಮಾಡುವುದಾಗಿ ಆಶಿಶ್ ದಂಪತಿ ನಿರ್ಧರಿಸಿದ್ದಾರೆ. ಅದರಂತೆ ಆಕೆಯ ಎರಡು ಕಣ್ಣುಗಳು, ಹೃದಯ, ಎರಡು ಕಿಡ್ನಿ ಮತ್ತು ಕರುಳನ್ನು ದಾನ ಮಾಡಲಾಗಿದೆ. ತಾನು ಕೊನೆಯುಸಿರೆಳೆಯುವುದಕ್ಕೆ ಮುನ್ನ ಮಗು ಐದು ಜನರಿಗೆ ಹೊಸ ಜೀವನವನ್ನು ಕೊಟ್ಟು ಪ್ರಾಣ ಬಿಟ್ಟಿದೆ.
ಪ್ರೀತಿಯಿಂದ ಸಾಕಿದ್ದ ಮಗಳನ್ನು ಆ ಪರಿಸ್ಥಿತಿಯಲ್ಲಿ ನೋಡುವುದು ಕಷ್ಟವಾಗಿತ್ತು. ಆದರೆ ಅದೆಷ್ಟೋ ರೋಗಿಗಳು ಅಂಗಾಂಗಳಿಗಾಗಿ ಪರದಾಡುತ್ತಿದ್ದುದ್ದನ್ನು ನಾನು ಆಸ್ಪತ್ರೆಯಲ್ಲಿ ನೋಡಿದೆ. ನನ್ನ ಮಗಳು ಬದುಕುವುದಿಲ್ಲ ಎಂದು ತಿಳಿದ ಮೇಲೆ ಆಕೆಯಿಂದ ಇನ್ನೊಂದಿಷ್ಟು ಜೀವಗಳಾದರೂ ಸಂತೋಷ ಪಡಲಿ ಎಂದು ಅಂಗಾಂಗ ದಾನ ಮಾಡುವ ನಿರ್ಧಾರ ತೆಗೆದುಕೊಂಡೆ ಎಂದು ಆಶಿಶ್ ತಿಳಿಸಿದ್ದಾರೆ. (ಏಜೆನ್ಸೀಸ್)