

ಬೆಂಗಳೂರು: ಕನಕಪುರದಲ್ಲಿ ನಡೆದ ಕನಕಾಂಬರಿ ಮಹಿಳಾ ಒಕ್ಕೂಟದ ಮಹಿಳಾ ಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivkumar), "ಹೆಣ್ಣು ಪ್ರಗತಿ ಹೊಂದಿದರೆ ಒಂದು ಕುಟುಂಬ ಪ್ರಗತಿ ಹೊಂದಿದಂತೆ. ರಾಜ್ಯ, ಹಳ್ಳಿ ಪ್ರಗತಿಯಾದಂತೆ. ಆದ ಕಾರಣಕ್ಕೆ ನಮ್ಮ ಗ್ಯಾರಂಟಿ ಯೋಜನೆಗಳು ಮಹಿಳೆಯರ ಅಭಿವೃದ್ಧಿಗೆ ಪೂರಕವಾಗಿರುವಂತೆ ರೂಪಿಸಲಾಗಿದೆ. ಮಹಾರಾಷ್ಟ್ರದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಮೈತ್ರಿ ಸರ್ಕಾರ ನಮ್ಮ ಗೃಹಲಕ್ಷ್ಮೀ ಯೋಜನೆಯನ್ನೇ ನಕಲು ಮಾಡಿ 'ಮಾಝಿ ಲಡಕಿ ಬಹಿನ್ ಯೋಜನಾ' ಎಂದು ಹೆಸರಿಟ್ಟು, 1,500 ರೂಪಾಯಿಯನ್ನು ಕೊಟ್ಟಿದ್ದಾರೆ. ನಮ್ಮದ್ದನ್ನು ನಕಲುಗೊಳಿಸಿ ಮಾಡಿದ್ದಕ್ಕೆ ಅಲ್ಲಿ ಅವರಿಗೆ ಗೆಲುವು ಸಿಕ್ಕಿದೆ ಎಂದು ಕಮಲದ ವಿರುದ್ಧ ಕಿಡಿಕಾರಿದರು.
"ನಾವು ರಾಜ್ಯದ ಜನತೆಗೆ ಮಹಾಲಕ್ಷ್ಮಿ ಎನ್ನುವ ಹೆಸರಿಟ್ಟು 3,000 ಸಾವಿರ ರೂ. ಕೊಡುವುದಾಗಿ ಭರವಸೆ ನೀಡಿದ್ದೆವು. ಆದರೆ, ಅಲ್ಲಿನ ಬಿಜೆಪಿ ಮೈತ್ರಿ ಸರ್ಕಾರ ಚುನಾವಣೆಗೆ ಆರು ತಿಂಗಳು ಮುಂಚಿತವಾಗಿ ಹಣ ನೀಡಿದ ಪರಿಣಾಮ ನಮಗಿಂತ ಅವರಿಗೆ ಹೆಚ್ಚು ಮತಗಳು ಬಂದವು. ಸಾಮಾನ್ಯ ಮಹಿಳೆಯರು ಮುಂದೆ ಬರಬೇಕು. ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ನೀಡಲಾಗಿದೆ. ಆದರೆ, ಮುಖಂಡರುಗಳು ತಮ್ಮ ಹೆಂಡತಿ, ತಂಗಿ, ಅಕ್ಕ ಅಥವಾ ಸಂಬಂಧಿಕರನ್ನು ನಿಲ್ಲಿಸುತ್ತಿದ್ದಾರೆ. ಸಾಮಾನ್ಯ ಮಹಿಳೆಯರು ಅಧಿಕಾರದ ಗದ್ದುಗೆ ಏರಲು ಮುಂದಕ್ಕೆ ಬರಬೇಕು" ಎಂದರು.
"ಸಂಸತ್ತಿನಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡುವ ಮಸೂದೆಗೆ ಒಪ್ಪಿಗೆ ದೊರೆತಿದೆ. ಮುಂದಿನ ವಿಧಾನಸಭಾ ಚುನಾವಣೆ ಹೊತ್ತಿಗೆ ಶೇಕಡ 33ರಷ್ಟು ಮೀಸಲಾತಿಯನ್ನು ಮಹಿಳೆಯರಿಗೆ ನೀಡಬೇಕಾಗಬಹುದು. ಅದಕ್ಕಾಗಿ ಸಾಮಾನ್ಯ ಮಹಿಳೆಯರು ಈಗಿನಿಂದಲೇ ತಮ್ಮಲ್ಲಿರುವ ನಾಯಕತ್ವ ಗುಣವನ್ನು ಬೆಳೆಸಿಕೊಳ್ಳಿ" ಎಂದರು.
"ಎಸ್ಎಂ. ಕೃಷ್ಣ ಅವರ ಸಂಪುಟದಲ್ಲಿ ನಾನು ಸಹಕಾರ ಸಚಿವನಾಗಿದ್ದೆ. ಆಗ ಈ ಸ್ತ್ರೀ ಶಕ್ತಿ ಸಂಘಗಳಿಗೆ ಮುನ್ನುಡಿ ಬರೆದಿದ್ದೆ ನಾವು. ಸಹಕಾರ ಇಲಾಖೆಯ ಅಡಿಯಲ್ಲಿ ಬರುವ ಡಿಸಿಸಿ ಬ್ಯಾಂಕ್ ನೇತೃತ್ವದಲ್ಲಿ ಸ್ವಸಹಾಯ ಗುಂಪುಗಳಿದ್ದವು, ಇವುಗಳನ್ನೇ ಸ್ತ್ರೀಶಕ್ತಿ ಸಂಘಗಳೆಂದು ಪರಿವರ್ತಿಸಿ, ಸಚಿವರಾಗಿದ್ದ ಮೋಟಮ್ಮ ಅವರಿಗೆ ನೇತೃತ್ವ ನೀಡಲಾಯಿತು" ಎಂದು ಹೇಳಿದರು.
"ಯಾವುದೇ ಕಾರಣಕ್ಕೂ ತಮ್ಮ ಪಾಲಿನ ಭೂಮಿ ಮಾರಾಟ ಮಾಡದಂತೆ ಮನೆಯ ಪುರುಷರಿಗೆ ಮಹಿಳೆಯರು ಬುದ್ಧಿ ಮಾತು ಹೇಳಬೇಕು. ಏಕೆಂದರೆ, ಭೂಮಿಯ ಬೆಲೆ ಹೆಚ್ಚಾಗಿದೆ. ನಾನು ಮೊದಲ ಬಾರಿಗೆ ಇಲ್ಲಿ ಚುನಾವಣೆಗೆ ನಿಂತಾಗ, ಒಂದು ಎಕರೆಗೆ ಎರಡರಿಂದ ಮೂರು ಲಕ್ಷ ಮಾತ್ರ ಇತ್ತು. ಈಗ 50 ಲಕ್ಷ ರೂ. ಬೆಲೆಬಾಳುತ್ತದೆ. ಇದನ್ನು ರಾಮನಗರ ಜಿಲ್ಲೆ ಎಂದು ಕರೆಯಬಹುದು ಆದರೆ ಮೂಲತಃ ನಾವೆಲ್ಲರೂ ಬೆಂಗಳೂರು ಜಿಲ್ಲೆಗೆ ಸೇರಿದವರು. ಕನಕಪುರ ಎಷ್ಟರಮಟ್ಟಿಗೆ ಅಭಿವೃದ್ಧಿ ಆಗುತ್ತಿದೆ ಎಂಬುದನ್ನು ನಾನು ಬಹಿರಂಗವಾಗಿ ಹೇಳುವುದಿಲ್ಲ. ಭೂಮಿ ಕಳೆದುಕೊಂಡರೆ ನಿಮ್ಮ ಜೇಬಿಗೆ ದುಡ್ಡನ್ನು ನಾನು ಹಾಕಲಾಗುವುದಿಲ್ಲ. ಜಮೀನು ಮಾರಿದರೆ ಒಳ್ಳೆಯ ಬೆಲೆ ಬರುತ್ತದೆ ಎಂದು ಆಮಿಷಕ್ಕೆ ಒಳಗಾಗಬೇಡಿ. ಯಾವುದೇ ಕಾರಣಕ್ಕೂ ಒಂದು ಕುಂಟೆ ಜಮೀನನ್ನು ಕಳೆದುಕೊಳ್ಳಬೇಡಿ" ಎಂದು ಹೇಳಿದರು.
"ನನಗೆ ಯುವಕರು ಹಾಗೂ ಮಹಿಳೆಯರ ಮೇಲೆ ನಂಬಿಕೆ ಹೆಚ್ಚು. ಪಕ್ಷ ಅಧಿಕಾರಕ್ಕೆ ಬಂದರೆ ಇವರಿಗೆ ಸಹಾಯ ಮಾಡಬೇಕು ಎಂಬುದು ನನ್ನ ಅಭಿಲಾಷೆಯಾಗಿತ್ತು. ನಾನು ರಾಜ್ಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾದಾಗ ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಐದು ಗ್ಯಾರಂಟಿಗಳ ಬಗ್ಗೆ ಭರವಸೆ ನೀಡಲಾಯಿತು. ಅದೇ ರೀತಿ ಅಧಿಕಾರಕ್ಕೆ ಬಂದ ತಕ್ಷಣ ಎಲ್ಲಾ ಭರವಸೆಗಳನ್ನು ಈಡೇರಿಸಿದ್ದೇವೆ" ಎಂದು ನುಡಿದರು.