

ಥಾಣೆ: ಕೋವಿಡ್ 19 ಸೋಂಕು ಹರಡದಂತೆ ಲಾಕ್‍ಡೌನ್ ಚಾಲ್ತಿಯಲ್ಲಿರುವ ಕಾರಣ ಅವಶ್ಯ ಸೇವೆ ಒದಗಿಸುವವರಿಗೆ ಇ-ಪಾಸ್ ವಿತರಿಸುವ ವ್ಯವಸ್ಥೆ ದೇಶದ ಇತರೆ ಭಾಗಗಳಲ್ಲಿ ಇರುವಂತೆಯೇ ಇಲ್ಲೂ ಶುರುಮಾಡಲಾಗಿತ್ತು. ಬೇರೆ ಕಡೆಗಳಲ್ಲಿ ಒಂದು ಇ-ಪಾಸ್ ತೆಗೆದುಕೊಂಡು ಕಲರ್ ಝೆರಾಕ್ಸ್ ಮಾಡಿ ವಂಚಿಸುವ ಕೆಲಸ ನಡೆಯುತ್ತಿದ್ದರೆ, ಇಲ್ಲೊಂದು ಗ್ಯಾಂಗ್ ಇ-ಪಾಸ್‍ಗೋಸ್ಕರ ಜಿಲ್ಲಾಧಿಕಾರಿಯ ವೆಬ್‍ಸೈಟ್ ಪಾಸ್‍ವರ್ಡ್ ಹ್ಯಾಕ್ ಮಾಡಿತ್ತು!
ಅಂತರ್ ಜಿಲ್ಲೆ ಮತ್ತು ಅಂತಾರಾಜ್ಯ ಪ್ರಯಾಣಕ್ಕೆ ಇ-ಪಾಸ್ ಅವಶ್ಯಕತೆ ಇದೆ. ಇದನ್ನು ಮನಗಂಡ ನಾಲ್ವರ ತಂಡ ಈ ಕೃತ್ಯವೆಸಗಿದೆ. ಕೆಲವೇ ಗಂಟೆಗಳಲ್ಲಿ 600 ಪಾಸ್‍ಗಳನ್ನು ವಿತರಿಸಿದೆ. ಈ ಗ್ಯಾಂಗ್ ಕಳೆದ ಎರಡು ತಿಂಗಳಿಂದ ಕಾರ್ಯಾಚರಿಸುತ್ತಿದ್ದು, ವೆಬ್‍ಸೈಟ್ ಪಾಸ್‍ವರ್ಡ್ ಹ್ಯಾಕ್ ಮಾಡಿದ ಕೆಲವೇ ಗಂಟೆಗಳ ಅವಧಿಯಲ್ಲಿ ಪೊಲೀಸರ ಬಲೆಗೆ ಬಿದ್ದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದಕ್ಕೂ ಮೊದಲು ಮುಂಬೈ ಪೊಲೀಸರ ಪಾಸ್ ಅನ್ನು ನಕಲಿಸಿ ಫೋಟೋ ಶಾಪ್ ಮೂಲಕ ಅಂತಹ ಪಾಸ್‍ಗಳನ್ನು ತಯಾರಿಸಿ ವಿತರಿಸುತ್ತಿತ್ತು ಈ ಗ್ಯಾಂಗ್. ಹಣ ಪಾವತಿಸಿದರೆ ಇ-ಪಾಸ್ ಸಿಗುತ್ತಿದೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಇದನ್ನು ಆಧರಿಸಿ ಗ್ರಾಹಕರ ಸೋಗಿನಲ್ಲಿ ಈ ಗ್ಯಾಂಗನ್ನು ಸಂಪರ್ಕಿಸಿದ ಪೊಲೀಸರು 2,000 ರೂಪಾಯಿ ಪಾವತಿಸಿ ಪಾಸ್ ನೀಡುವಂತೆ ಕೇಳಿದ್ದಾರೆ. ಆರೋಪಿ ಪಾಸ್ ತಂದುಕೊಡುವಾಗ ರೆಡ್ ಹ್ಯಾಂಡ್ ಆಗಿ ಬಂಧಿಸಲಾಗಿದೆ. ಬಂಧಿತ ಆರೋಪಿಯನ್ನು ಮೊಹಮ್ಮದ್ ಶೇಖ್ ಅಸ್ಲಾಂ ಎಂದು ಗುರುತಿಸಲಾಗಿದೆ.
ಆತ ನೀಡಿದ ಮಾಹಿತಿ ಆಧರಿಸಿ ಈ ದಂಧೆಯಲ್ಲಿ ತೊಡಗಿದ್ದ ಸಮೀರ್ ಶೇಖ್, ನೂರ್ ಗನಿ ಶೇಖ್ ಮತ್ತು ವಿನಯ್ ಪಾರ್ಥೆ ಎಂಬುವವರನ್ನು ಬಂಧಿಸಲಾಗಿದೆ. ಇವರನ್ನು ವಶಕ್ಕೆ ತೆಗೆದುಕೊಂಡಿರುವ ಪೊಲೀಸರು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದು, ದಂಧೆಯ ಇನ್ನಷ್ಟು ವಿಚಾರಗಳು ಬಹಿರಂಗವಾಗುವ ನಿರೀಕ್ಷೆ ಇದೆ. (ಏಜೆನ್ಸೀಸ್)