ಶ್ರೀಲಂಕಾದ ಈಳಂ ತಮಿಳರ ಪರ ಧ್ವನಿ ಎತ್ತಿದ ದಳಪತಿ ವಿಜಯ್, ಪರೋಕ್ಷವಾಗಿ ಎಲ್​ಟಿಟಿಇ ನಾಯಕನ ಹೊಗಳಿಕೆ, ಪೋಸ್ಟರ್| Thalapathy Vijay

Untitled design (63)
Published on

Thalapathy Vijay: ತಮಿಳುನಾಡಿನಲ್ಲಿ ತಮಿಳಿಗ ವೆಟ್ರಿ ಕಳಗಂ ಪಕ್ಷ ಕಟ್ಟಿ ರಾಜಕಾರಣ ಶುರು ಮಾಡಿರುವ ತಮಿಳು ಸೂಪರ್ ಸ್ಟಾರ್ ವಿಜಯ್, ಶನಿವಾರ(ಸೆ. 20) ವಿವಾದಾತ್ಮಕ ವಿಷಯವಾಗಿರುವ ಶ್ರೀಲಂಕಾದ ಈಳಂ ತಮಿಳರ ಪರ ಧ್ವನಿ ಎತ್ತಿದ್ದು, ಪರೋಕ್ಷವಾಗಿ ಎಲ್​ಟಿಟಿಇ ಮುಖ್ಯಸ್ಥ ವೇಲುಪಿಳ್ಳೈ ಪ್ರಭಾಕರನ್ ಅವರನ್ನು ಹೊಗಳಿ ಅಚ್ಚರಿ ಮೂಡಿಸಿದ್ದಾರೆ.

ರಾಜ್ಯ ಪ್ರವಾಸ ಕೈಗೊಂಡಿರುವ ವಿಜಯ್ ನಾಗಪಟ್ಟಣಂನಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ನಾಗಪಟ್ಟಣಂ ಮೀನುಗಾರರ ಸಮಸ್ಯೆ ಬಗ್ಗೆ ಮಾತನಾಡುವಾಗ ಶ್ರೀಲಂಕಾದ ತಮಿಳರ ಸಮಸ್ಯೆಯನ್ನು ಪ್ರಸ್ತಾಪಿಸಿದ್ದಾರೆ. ಈಳಂ ತಮಿಳರ ಕನಸುಗಳು ಮತ್ತು ಜೀವನಗಳು, ನಮ್ಮ ಮೀನುಗಾರರ ಜೀವನದಷ್ಟೇ ಮುಖ್ಯ ಎಂದು ಹೇಳಿದ್ದಾರೆ.

ನಾವು ನಮ್ಮ ಮೀನುಗಾರರ ಬಗ್ಗೆ ಮಾತನಾಡುವಾಗ, ಈಳಂ ತಮಿಳರ ಬಗ್ಗೆಯೂ ಮಾತನಾಡಬೇಕು, ಅದು ಮುಖ್ಯ. ಅವರ ಕನಸುಗಳು ಮತ್ತು ಜೀವನವು ನಮ್ಮ ಮೀನುಗಾರರ ಜೀವನದಷ್ಟೇ ಮುಖ್ಯವಾಗಿದೆ ಎಂದಿದ್ದಾರೆ. ಮುಂದುವರೆದ ವೇಲುಪಿಳ್ಳೈ ಪ್ರಭಾಕರನ್ ಹೆಸರನ್ನು ಉಲ್ಲೇಖಿಸದೇ, ನಮ್ಮ ಹೊಕ್ಕುಳಬಳ್ಳಿಯ ಬಂಧುಗಳಾದ ಈಳಂ ತಮಿಳರು, ಅವರು ಶ್ರೀಲಂಕಾದಲ್ಲಿರಲಿ ಅಥವಾ ಪ್ರಪಂಚದ ಬೇರೆಡೆಯೇ ಇರಲಿ, ಅವರಿಗೆ ತಾಯಿಯ ವಾತ್ಸಲ್ಯ ತೋರಿಸಿದ ನಾಯಕನನ್ನು ಕಳೆದುಕೊಂಡ ನಂತರ ಬಳಲುತ್ತಿದ್ದಾರೆ. ಅವರ ಪರ ಧ್ವನಿ ಎತ್ತುವುದು ನಮ್ಮ ಕರ್ತವ್ಯ ಎಂದು ಹೇಳಿದ್ದಾರೆ.

ಮೀನುಗಾರರು ಮತ್ತು ಶ್ರೀಲಂಕಾ ತಮಿಳರ ಸಮಸ್ಯೆಗಳ ಕುರಿತು ಡಿಎಂಕೆಯನ್ನು ತರಾಟೆಗೆ ತೆಗೆದುಕೊಂಡ ಅವರು, ತಮಿಳುನಾಡು ಮೀನುಗಾರರ ಮೇಲೆ ದಾಳಿ ನಡೆದ ಬಗ್ಗೆ ಮುಖ್ಯಮಂತ್ರಿ ಸ್ಟಾಲಿನ್ ಪ್ರಧಾನಿಗೆ ಪತ್ರ ಬರೆದರು, ಆದರೆ ನಂತರ ಮೌನವಾಗಿದ್ದರು. ಮೀನುಗಾರರ ಸಮಸ್ಯೆಗಳ ಬಗ್ಗೆ ಪತ್ರ ಬರೆದು ಮೌನವಾಗಿರಲು ನಾವು ಡಿಎಂಕೆ ಅಲ್ಲ. ಮೀನುಗಾರರ ಸಮಸ್ಯೆಗೆ ಮತ್ತು ಶ್ರೀಲಂಕಾದ ತಮಿಳರ ಸಮಸ್ಯೆಗೆ ಶಾಶ್ವತ ಪರಿಹಾರ ಖಚಿತಪಡಿಸಿಕೊಳ್ಳುವುದು ನಮ್ಮ ಕಾರ್ಯಸೂಚಿಯಾಗಿದೆ ಎಂದಿದ್ದಾರೆ.

ವಿಜಯ್ ಶ್ರೀಲಂಕಾದ ತಮಿಳರಿಗೆ ಬೆಂಬಲ ನೀಡುತ್ತಿರುವುದು ಇದೇ ಮೊದಲಲ್ಲ. ಸಕ್ರಿಯ ರಾಜಕೀಯಕ್ಕೆ ಸೇರುವ ಮೊದಲು, 2008 ರಲ್ಲಿ ಶ್ರೀಲಂಕಾದಲ್ಲಿ ಸಮುದಾಯದ ಸದಸ್ಯರ ಹತ್ಯೆಯನ್ನು ಪ್ರತಿಭಟಿಸಿ ವಿಜಯ್ ಚೆನ್ನೈನಲ್ಲಿ ಉಪವಾಸ ಸತ್ಯಾಗ್ರಹ ನಡೆಸಿದರು. ವಿಜಯ್ ಪತ್ನಿ ಸಂಗೀತಾ ಸಹ ಶ್ರೀಲಂಕಾ ಮೂಲದ ದಂಪತಿಗಳಿಗೆ ಜನಸಿದ ಮಗಳಾಗಿದ್ದಾರೆ.

ಭಾರತ ಸರ್ಕಾರವು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ, 1967 ರ ನಿಬಂಧನೆಗಳ ಅಡಿಯಲ್ಲಿ, ಲಿಬರೇಶನ್ ಟೈಗರ್ಸ್ ಆಫ್ ತಮಿಳು ಈಳಂ (LTTE) ಅನ್ನು 'ಕಾನೂನುಬಾಹಿರ ಸಂಘಟನೆ' ಎಂದು ನಿಷೇಧಿಸಿದೆ. 2009ರವರೆಗೆ ಅಂತರ್ಯುದ್ದರಲ್ಲಿ ಸೋಲುವವರೆಗೂ ಎಲ್​ಟಿಟಿಇ ಶ್ರೀಲಂಕಾದ ಉತ್ತರ ಮತ್ತು ಪೂರ್ವ ಪ್ರಾಂತ್ಯಗಳಲ್ಲಿ ಆಳ್ವಿಕೆ ನಡೆಸಿತು. ಕೊನೆಯದಾಗಿ ಅದೇ ವರ್ಷ ಶ್ರೀಲಂಕಾ ಸೇನೆ ಅದರ ಮುಖ್ಯಸ್ಥ ಪ್ರಭಾಕರನ್ ಅನ್ನು ಕೊಂದು ಹಾಕಿತು. ಅಂತರ್ಯುದ್ದದ ಸಮಯದಲ್ಲಿ ಶ್ರೀಲಂಕಾದ ಹಲವಾರು ತಮಿಳರು ಭಾರತದಲ್ಲಿ ಆಶ್ರಯ ಪಡೆದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net