

ತಮಿಳುನಾಡು: ಕಾಲಿವುಡ್ನ ಸೂಪರ್ಸ್ಟಾರ್, ತಲೈವಾ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ತಲೈವರ್ 170 ಚಿತ್ರದ ಅಧಿಕೃತ ಟೈಟಲ್ ಇಂದು ಅವರ 73ನೇ ಜನ್ಮದಿನದಂದು ಅನಾವರಣಗೊಳ್ಳಲಿದ್ದು, ಯಾವ ಸಮಯಕ್ಕೆ ಬಿಡುಗಡೆಯಾಗಲಿದೆ ಎಂಬುದರ ಮಾಹಿತಿಯನ್ನು ಚಿತ್ರದ ನಿರ್ಮಾಪಕರು ಈಗಾಗಲೇ ಘೋಷಣೆ ಮಾಡಿದ್ದಾರೆ. ನಿಗದಿತ ಸಮಯ ಹೀಗಿದೆ.
ತಲೈವರ್ 170 ಚಿತ್ರದ ತಯಾರಕರು ಇಂದು ರಜನಿಕಾಂತ್ ಅವರ 73ನೇ ಹುಟ್ಟುಹಬ್ಬದಂದೇ ಸಿನಿಮಾದ ಅಧಿಕೃತ ಟೈಟಲ್ ಲಾಂಚ್ ಮಾಡಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಈ ಸಂದರ್ಭವನ್ನು ಆಚರಿಸಲು ರಜನಿ ಫ್ಯಾನ್ಸ್ ತೀವ್ರ ಕಾತರದಿಂದ ಕಾಯುತ್ತಿದ್ದು, ಸಂಜೆ 5 ಗಂಟೆಗೆ ಹುಟ್ಟುಹಬ್ಬದ ವಿಶೇಷ ಟೀಸರ್ ಜತೆಗೆ ಚಿತ್ರದ ಅಧಿಕೃತ ಶೀರ್ಷಿಕೆ ಅನಾವರಣಗೊಳ್ಳಲಿದೆ.
ಸದ್ಯ ಈ ಸಂಗತಿ ತಲೈವಾ ಅಭಿಮಾನಿಗಳಲ್ಲಿ ಭಾರೀ ಸಂತಸ ಉಂಟುಮಾಡಿದ್ದು, ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬ ಮತ್ತು ಚಿತ್ರದ ವಿಶೇಷ ಟೀಸರ್ ನೋಡುವ ಡಬಲ್ ಧಮಾಕ ಪಡೆದಿದ್ದಾರೆ. ತಲೈವರ್ 170 ನಿರ್ದೇಶಕರಾದ ಟಿಜೆ ಜ್ಞಾನವೇಲ್ ಸಿನಿಮಾದ ಭಾಗಶಃ ಚಿತ್ರೀಕರಣವನ್ನು ತಿರುವನಂತಪುರಂ, ತಿರುನಲ್ವೇಲಿ ಮತ್ತು ಮುಂಬೈ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಮಾಡಿದ್ದಾರೆ ಎನ್ನಲಾಗಿದೆ.
ಇನ್ನು ಅಧಿಕೃತವಾಗಿ ಹೆಸರಿಡದ ತಲೈವರ್ 170 ಚಿತ್ರದಲ್ಲಿ ಅಮಿತಾಬ್ ಬಚ್ಚನ್, ರಾಣಾ ದಗ್ಗುಬಾಟಿ, ಫಹದ್ ಫಾಸಿಲ್, ರಿತಿಕಾ ಸಿಂಗ್, ಮಂಜು ವಾರಿಯರ್, ದುಸರ ವಿಜಯನ್ ಮುಂತಾದವರ ತಾರಾಗಣವಿದೆ,(ಏಜೆನ್ಸೀಸ್).